Darshan Thoogudeepa: ಬುಕ್ ಮೈ ಶೋನಲ್ಲಿ ದರ್ಶನ್ ಫಿಲ್ಮ್‌ಗೆ ಭಾರೀ ಡಿಮ್ಯಾಂಡ್
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ತೂಗುದೀಪ ಅಭಿನಯದ 'ನಮ್ಮ ಪ್ರೀತಿಯ ರಾಮು' ಸಿನಿಮಾವನ್ನು ರೀರಿಲೀಸ್ ಮಾಡಲಾಗುತ್ತಿದೆ. ಫೆಬ್ರವರಿ 14ಕ್ಕೆ ಸಿನಿಮಾ ರಿಲೀಸ್ ಮಾಡಲು ತಯಾರಿ ನಡೆದಿದೆ. ಈಗಾಗಲೇ ಸಿನಿಮಾ 100 ಥಿಯೇಟರ್‌ಗಳಲ್ಲಿ ಪ್ರದರ್ಶನ ಕಾಣಲು ಸಿದ್ಧವಾಗಿದ್ದು, ಇನ್ನೂ 30 ಥಿಯೇಟರ್ ಸೇರ್ಪಡೆ ಆಗುವ ನಿರೀಕ್ಷೆ ಇದೆ. ಫ್ಯಾಮಿಲಿ ಓರೆಂಟೆಡ್ ಸಿನಿಮಾ ಆಗಿರುವುದರಿಂದ ಹಳ್ಳಿಗಳಿಂದಲೂ ಕರೆ ಬರುತ್ತಿದ್ದು ಹೈದ್ರಾಬಾದ್‌ನಲ್ಲೂ ಸಿನಿಮಾ ಪ್ರದರ್ಶನವಾಗಲಿದೆ. ಅಲ್ಲದೆ ಬುಕ್ ಮೈ ಶೋನಲ್ಲಿಯೂ ದರ್ಶನ್ ಫಿಲ್ಮ್‌ಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ಹೌದು.. ಫೆಬ್ರವರಿ 16 ದರ್ಶನ್ ಹುಟ್ಟುಹಬ್ಬ. ಆದರೆ ಈ ಬಾರಿ ದರ್ಶನ್ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅನಾರೋಗ್ಯದ ಕಾರಣ ತಾವು ಜನ್ಮದಿನವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳುವ ವಿಡಿಯೋವನ್ನು ಈಗಾಗಲೇ ಅವರು ಹಂಚಿಕೊಂಡಿದ್ದಾರೆ. ಇದರಿಂದಾಗಿ ದರ್ಶನ್ ಫ್ಯಾನ್ಸ್ ಸಿಕ್ಕಾಪಟ್ಟೆ ಬೇಸರಗೊಂಡಿದ್ದರು. ಆದರೀಗ ದರ್ಶನ್ ಅಭಿನಯದ 'ನಮ್ಮ ಪ್ರೀತಿಯ ರಾಮು' ಸಿನಿಮಾ ರೀರಿಲೀಸ್ ಆಗುವ ವಿಚಾರ ತಿಳಿದು ಫ್ಯಾನ್ಸ್ ಭಾರೀ ಖುಷಿ ಆಗಿದ್ದಾರೆ.

ಡಿ-ಬಾಸ್ ಅಭಿಮಾನಿಗಳು ಹುಟ್ಟುಹಬ್ಬಕ್ಕೆ ದರ್ಶನ್ ಭೇಟಿ ಮಾಡಲು ಆಗದೇ ಇದ್ದರೂ ಕೂಡ ಸಿನಿಮಾ ನೋಡಿಯಾದರೂ ಸಂತೋಷ ಪಡೋಣ ಎಂದು ನಿರ್ಧಾರಿಸಿದ್ದಾರೆ. ಹೀಗಾಗಿ ಬುಕ್ ಮೈ ಶೋನಲ್ಲಿ ದರ್ಶನ್ ಸಿನಿಮಾಕ್ಕೆ ಭಾರೀ ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ವಿತರಕರು ಕೂಡ ಸಾಕಷ್ಟು ಸಂತೋಷಗೊಂಡಿದ್ದಾರೆ. ಬೆಂಗಳೂರಿನ ಬಹುತೇಕ ಥಿಯೇಟರ್‌ಗಳಲ್ಲಿ ಸಿನಿಮಾ ರೀರಿಲೀಸ್ ಮಾಡಲಾಗುತ್ತಿದೆ. ಹೈದ್ರಾಬಾದ್‌ನ ಮೂರು ಥಿಯೇಟರ್‌ಗಳಲ್ಲಿ ಸಿನಿಮಾ ತೆರೆ ಕಾಣಲಿದೆ.
'ನಮ್ಮ ಪ್ರೀತಿಯ ರಾಮು' ಸಿನಿಮಾ ಸಿಕ್ರೇಟ್
'ನಮ್ಮ ಪ್ರೀತಿಯ ರಾಮು' ಸಿನಿಮಾ ಮಾಡಲು ಕನ್ನಡದ ಬಹುತೇಕ ಸ್ಟಾರ್ ನಟರಿಗೆ ಇಷ್ಟವಿರಲಿಲ್ಲ. ಈ ಸಿನಿಮಾ ಪ್ರಸ್ತಾಪ ಬಂದಾಗ ಕೆಲ ನಟರು ಸಿನಿಮಾ ಮಾಡುವುದಾಗಿ ಹೇಳಿ ನಂತರ ಮಾಡಲು ಆಗಲ್ಲ ಎಂದು ಹಣ ವಾಪಸ್ ಕೊಡುತ್ತಿದ್ದರಂತೆ. ಆಗ ಸಿನಿಮಾ ತಂಡ ದರ್ಶನ್ ಬಳಿ ಹೋದಾಗ ದರ್ಶನ್ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದರು.
ಯಾಕೆಂದರೆ ಈ ಸಿನಿಮಾ ಮಾಡುವುದು ಅಷ್ಟೊಂದು ಸುಲಭವಿರಲಿಲ್ಲ. ಕಣ್ಣಿನ ಬಿಳಿ ಗುಡ್ಡೆ ಮಾತ್ರ ಕ್ಯಾಮರಾ ಮುಂದೆ ಕಾಣಿಸುವುದು ಸ್ವಲ್ಪ ಕಷ್ಟವೇ. ಆದರೂ ಕೂಡ ದರ್ಶನ್ ಈ ಸಿನಿಮಾಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಜೊತೆಗೆ ಸಿನಿಮಾದಲ್ಲಿ ಅದ್ಭುತವಾಗಿ ನಟನೆ ಮಾಡಿದರು. ರಾಮು ಪಾತ್ರದಲ್ಲಿ ಅಭಿಮಾನಿಗಳ ಮನ ಗೆದ್ದರು. ಈ ಸಿನಿಮಾ 2003ರಲ್ಲಿ ತೆರೆ ಕಂಡಿದೆ. ಅಂದರೆ ಈಗ ಈ ಸಿನಿಮಾಕ್ಕೆ 22 ವರ್ಷ. ಆದರೀಗ ಜನ ಈ ಸಿನಿಮಾವನ್ನು ಯಾವ ರೀತಿ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ದರ್ಶನ್ ಒಪ್ಪಿಕೊಂಡ ಸಿನಿಮಾಗಳ ಕಥೆ ಏನು?
ಪ್ರಸ್ತುತ ದರ್ಶನ್ ಟೈಮ್ ಸರಿಯಾಗಿ ಇಲ್ಲ. ಒಂದು ಕಡೆ ಅವರಿಗೆ ಆರೋಗ್ಯ ಸಮಸ್ಯೆ. ಮತ್ತೊಂದು ಕಡೆ ರೇಣುಕಾಸ್ವಾಮಿ ಕೊಲೆ ಪ್ರಕರಣ. ಈ ಎರೆಡರ ಮಧ್ಯೆ ಸಿಲುಕಿದ ದರ್ಶನ್ ಸಿಕ್ಕಾಪಟ್ಟೆ ನೋವು ಅನುಭವಿಸುತ್ತಿದ್ದಾರೆ. ಈಗಾಗಲೇ ಅವರು ಒಪ್ಪಿಕೊಂಡ ಸಿನಿಮಾಗಳನ್ನು ಪೂರ್ಣಗೊಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಿನಿಮಾಗಳೆಲ್ಲವೂ ಅರ್ಧಕ್ಕೆ ನಿಂತುಕೊಂಡಿವೆ. ಈ ಸಿನಿಮಾಗಳು ರಿಲೀಸ್ ಆಗಬೇಕು ಅಂದರೆ, ದರ್ಶನ್ ಮೊದಲಿನಂತೆ ಅಭಿಮಾನಿಗಳೊಂದಿಗೆ ಬೆರೆಯಬೇಕು ಅಂದರೆ ಅವರ ಆರೋಗ್ಯ ಮೊದಲು ಸರಿಯಾಗಬೇಕಿದೆ. ನಂತರ ಅವರ ಮೇಲಿರುವ ಆರೋಪದ ಸತ್ಯಾಸತ್ಯದ ಬಗ್ಗೆ ತಿಳಿಯಬೇಕಿದೆ.
ಒಟ್ಟಿನಲ್ಲಿ ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ದರ್ಶನ್ ನೋಡುವ ಅವಕಾಶ ಸಿಗದೇ ಇದ್ದರೂ ಕೂಡ ಅವರ 'ನಮ್ಮ ಪ್ರೀತಿಯ ರಾಮು' ಸಿನಿಮಾವನ್ನು ದೊಡ್ಡ ಪರದೆಯ ಮೇಲೆ ನೋಡುವ ಅವಕಾಶ ಸಿಕ್ಕಿದೆ. ಜನ ಯಾವ ರೀತಿ ಈ ಸಿನಿಮಾ ಸ್ವೀಕರಿಸುತ್ತಾರೆ ಕಾದು ನೋಡಬೇಕಿದೆ.












Click it and Unblock the Notifications