Darshan Thoogudeepa: ಡಿ-ಬಾಸ್ 5 ವರ್ಷದ ಮಗುಗೆ ಪ್ರತಿ ತಿಂಗಳು ರಕ್ತ ಕೊಟ್ಟಿದಾರೆ- ಅಭಿಮಾನಿ
ಸ್ಯಾಂಡಲ್‌ವುಡ್ ನಟ ದರ್ಶನ್ ತೂಗುದೀಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಈ ಬಾರಿ ಅವರು ತುಂಬಾ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಹೀಗಾಗಿ ಅವರ ಅಭಿಮಾನಿಗಳಿಗೂ ಮನೆ ಬಳಿ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ. ಅನಾರೋಗ್ಯದ ಕಾರಣ ಅವರು ಇಂದು ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ. ಈ ದಿನ ಅಭಿಮಾನಿಯೊಬ್ಬರು ದರ್ಶನ್ ಬಗ್ಗೆ ಗೊತ್ತಿಲ್ಲದ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಹಾಗಾದರೆ ದರ್ಶನ್ ಅಭಿಮಾನಿ ಹೇಳಿದ ಆ ಕುತೂಹಲಕಾರಿ ವಿಚಾರ ಏನು? ಎಂದು ತಿಳಿಯೋಣ.
ದರ್ಶನ್ ಇಂದು 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುವ ಮೂಲಕ ಅವರಿಗೆ ಶುಭ ಕೋರಿದ್ದಾರೆ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಅಂದರೂ ಕೂಡ ದರ್ಶನ್ ಮನೆ ಮುಂದೆ ಅಭಿಮಾನಿಗಳು ಜಮಾಯಿಸಿದ್ದು ಕಂಡು ಬಂದಿದೆ. ಹಾಗಾದರೆ ಬಳ್ಳಾರಿಯಿಂದ ಬಂದ ಉಮಾ ಹೇಳಿದ್ದೇನೆ?

ಬಳ್ಳಾರಿಯಿಂದ ಬಂದ ಉಮಾ ಅವರು ಮಾತನಾಡಿ, 'ಡಿ ಬಾಸ್ ಅಂದರೆ ನನಗೆ ತುಂಬಾ ಇಷ್ಟ. ಸರ್ ಹೇಳಿದ್ದರು ಈ ಬಾರಿ ಸಿಗಲ್ಲ ಬರಬೇಡಿ ಎಂದು. ಮುಂದಿನ ವರ್ಷ ನಾನು ಸಿಗುತ್ತೇನೆ ಎಂದು ಹೇಳಿದ್ದರು. ಆದರೂ ನಾನು ಇಲ್ಲಿಗೆ ಬಂದೆ. ಯಾಕೆ ಅನ್ನೋದನ್ನು ನಾನು ಕವನದ ಮೂಲಕ ಹೇಳುತ್ತೇನೆ- ಭಕ್ತಿ ದೇವರಿಗಾಗಿ, ಉಸಿರು ಹೆತ್ತವರಿಗಾಗಿ, ಸ್ನೇಹ ಸ್ನೇಹಿತರಿಗಾಗಿ, ಪ್ರೀತಿ ಪ್ರೀತಿಸೋರಿಗಾಗಿ ಆದರೆ ಅಭಿಮಾನ ಯಾವತ್ತಿದ್ದರೂ ನಮ್ಮ ಡಿ-ಬಾಸ್‌ಗಾಗಿ' ಎಂದು ಖುಷಿಯಿಂದ ಹೇಳಿಕೊಂಡಿದ್ದಾರೆ. ಇದು ನಿಜಕ್ಕೂ ದರ್ಶನ್ ಮೇಲಿನ ಪ್ರೀತಿಯನ್ನು ತೋರಿಸುತ್ತದೆ.
5ವರ್ಷದ ಮಗುಗೆ ಪ್ರತಿ ತಿಂಗಳು ರಕ್ತ ನೀಡಿದ ಡಿ-ಬಾಸ್?
ಅಲ್ಲದೆ ಅಭಿಮಾನಿಯೊಬ್ಬ ದರ್ಶನ್ ಬಗ್ಗೆ ಯಾರಿಗೂ ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಂಡಿದ್ದು ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. '15 ವರ್ಷದ ಹಿಂದೆ ದರ್ಶನ್ ಅವರಿಗೆ ಇಷ್ಟೊಂದು ಹೆಸರು ಇರಲಿಲ್ಲ. ಸಿನಿಮಾ ಹೆಸರು ಹೇಳಿ ನಟನನ್ನು ಗುರುತಿಸುತ್ತಿದ್ದರು. ಆಗ ಒಮ್ಮೆ ದರ್ಶನ್ ಬಂದಿದ್ದರು. ಆಗ ನಾನು ಸಿಕ್ಕಾಪಟ್ಟೆ ಕುಡಿದಿದ್ದೆ. ಆಗ ದರ್ಶನ್ ನೀನು ಅಡ್ಡ ಬಂದ್ರೆ ನಾನು ಗುದ್ದಿಕೊಂಡು ಹೋಗುತ್ತೇನೆ. ಜೀವ ಉಳಿಸೋರು ಯಾರು ಇರ್ತಾರೆ? ಇಷ್ಟೊಂದು ಕುಡಿಬೇಡ ಎಂದು ಬುದ್ಧಿ ಹೇಳಿದ್ದರು. ಅವರ ಮಾತಿನಿಂದ ನಾನು 10 ವರ್ಷ ಕುಡಿಯೋದನ್ನು ಬಿಟ್ಟಿದೆ' ಎಂದಿದ್ದಾರೆ.
ಮುಂದುವರೆದು ಮಾತನಾಡಿದ ಅಭಿಮಾನಿ, 'ಅರಸೀಕೆರೆ ಬಾಣಾವರದಲ್ಲಿ ವೆಂಕಟೇಶ್ವರ ಟಾಕೀಸ್‌ನ ಓನರ್ ಮೂಲಕ ದರ್ಶನ್ ಅವರನ್ನು ಸಂಪರ್ಕಿಸಿ ಒಂದು ಮಗುಗೆ ಪ್ರತೀ ತಿಂಗಳು ರಕ್ತಬೇಕಾಗಿದೆ ಎಂದು ಹೇಳಲಾಗಿತ್ತು. ಆಗ ದರ್ಶನ್ ಪ್ರತೀ ತಿಂಗಳು ಆ ಮಗುಗೆ 5 ವರ್ಷ ರಕ್ತ ನೀಡಿ ಜೀವ ಉಳಿಸಿದ್ದಾರೆ' ಎಂದು ಫ್ಯಾನ್ ಹೇಳಿಕೊಂಡಿದ್ದಾರೆ. ಆದರೆ ಇದು ಎಷ್ಟು ಸತ್ಯ ಅನ್ನೋದರ ಬಗ್ಗೆ ತಿಳಿದಿಲ್ಲ.
ದರ್ಶನ್ ತೂಗುದೀಪ ಅವರು ಮೈಸೂರಿನಲ್ಲಿ ರಿಲ್ಯಾಕ್ಸ್ ಮೂಡ್‌ನಲ್ಲಿ ಇದ್ದಾರೆ. ಮೈಸೂರಿನಲ್ಲೇ ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಹುಟ್ಟುಹಬ್ಬವನ್ನು ತಮ್ಮ ಕುಟುಂಬಸ್ಥರೊಂದಿಗೆ ಆಚರಿಸುತ್ತಿದ್ದಾರೆ. ಆದರೂ ಸಹ ಕೆಲ ಅಭಿಮಾನಿಗಳು ದರ್ಶನ್ ಮನೆ ಮುಂದೆ ಬಂದು ಅವರ ಮನೆ ಮುಂದೆ ಪೂಜೆ ಮಾಡಿ ದರ್ಶನ್ ಅವರಿಗೆ ಶುಭ ಕೋರಿದ್ದಾರೆ.
ದರ್ಶನ್ ಮನವಿ ಮಾಡಿದರೂ ಕೂಡ ಅವರ ಅಭಿಮಾನಿಗಳು ಬೆಂಗಳೂರಿನಲ್ಲಿರುವ ಅವರ ಮನೆ ಮುಂದೆ ಬಂದು ಕಾಯುತ್ತಿರುವ ದೃಶ್ಯಗಳು ಕಂಡು ಬಂದಿವೆ. ದರ್ಶನ್ ಸಿಗದೇ ಹೋದರೂ ಕೂಡ ಅವರ ಮನೆ ನೋಡಿ ಖುಷಿ ಆಯ್ತು ಎಂದು ಫ್ಯಾನ್ಸ್ ಹೇಳಿಕೊಂಡಿದ್ದಾರೆ.












Click it and Unblock the Notifications