The Devil: 'ಡೆವಿಲ್' ಅಡ್ವಾನ್ಸ್ ಬುಕಿಂಗ್‌ನಲ್ಲೂ ದರ್ಶನ್ ಹವಾ, ಟಿಕೆಟ್ ಬೆಲೆ ಎಲ್ಲೆಲ್ಲಿ ಎಷ್ಟಿದೆ?
ನಟ ದರ್ಶನ್ ತೂಗುದೀಪ ಅಭಿನಯದ ಬಹುನಿರೀಕ್ಷಿತ "ಡೆವಿಲ್" (The Devil) ಸಿನಿಮಾ ಡಿಸೆಂಬರ್ 11ರಂದು ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಸದ್ಯ ದರ್ಶನ್ ಅವರು ಜೈಲಿನಲ್ಲಿರುವುದರಿಂದ ಅವರ ಸಿನಿಮಾ ಹೊರಗೆ ರಿಲೀಸ್ ಆಗುತ್ತಿರುವುದು ಡಿಬಾಸ್ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ. ಆದರೂ ಹಲವು ವರ್ಷಗಳ ಬಳಿಕ ದರ್ಶನ್ ಅವರ ಸಿನಿಮಾ ನೋಡಲು ಜನ ಕಾತರದಿಂದ ಕಾದಿದ್ದರು. ಈ ಸಿನಿಮಾ ಕಳೆದ ಎರಡು ವರ್ಷಗಳಿಂದ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿರುವುದು ಮಾತ್ರವಲ್ಲದೆ, ಇದೀಗ ಅಡ್ವಾನ್ಸ್ ಬುಕಿಂಗ್‌ನಲ್ಲೂ ಹವಾ ಸೃಷ್ಟಿಸುತ್ತಿದೆ. ಸಿನಿಮಾ ರಿಲೀಸ್‌ಗೆ ಇನ್ನು ಒಂದೇ ದಿನ ಬಾಕಿ ಇದ್ದು, ಈವರೆಗಿನ ಅಡ್ವಾನ್ಸ್ ಬುಕಿಂಗ್ ವಿವರ ಹೀಗಿದೆ..
ದರ್ಶನ್ ಅವರು ಜೈಲಿನಿಂದ ಜಾಮೀನು ಸಿಕ್ಕ ನಂತರ ಅರ್ಧಕ್ಕೆ ನಿಂತಿದ್ದ ಡೆವಿಲ್ ಸಿನಿಮಾ ಶೂಟಿಂಗ್ ಮುಗಿಸಿಕೊಟ್ಟಿದ್ದರು. ಅಲ್ಲದೆ ತಮ್ಮ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗುವುದನ್ನು ನೋಡುವ ಉತ್ಸಾಹದಲ್ಲಿದ್ದರು. ಆದರೆ ಸುಪ್ರೀಂಕೋರ್ಟ್‌ನಲ್ಲಿ ದರ್ಶನ್ ಅವರ ಜಾಮೀನು ರದ್ದಾಯಿತು. ಹೀಗಾಗಿ ಸಿನಿಮಾ ರಿಲೀಸ್ ಹೊತ್ತಲ್ಲೇ ಅವರು ಮತ್ತೆ ಜೈಲಿಗೆ ವಾಪಸ್ ಆಗಬೇಕಾಯಿತು. ಇನ್ನು ಡೆವಿಲ್ ಸಿನಿಮಾದ ಎಲ್ಲ ಕೆಲಸಗಳು ಪೂರ್ಣಗೊಂಡಿದ್ದರಿಂದ ಅಭಿಮಾನಿಗಳಿಗಾಗಿ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡು, ರಿಲೀಸ್ ದಿನಾಂಕ ಘೋಷಿಸಿತು.

ಸದ್ಯ ಎಲ್ಲೆಡೆ ಡೆವಿಲ್ ಸಿನಿಮಾ ಕ್ರೇಜ್ ಹೆಚ್ಚಾಗಿದ್ದು, ಟಿಕೆಟ್ ಬುಕಿಂಗ್‌ನಲ್ಲೂ ಹೆಚ್ಚು ಗಮನ ಸೆಳೆದಿದೆ. ಬುಕ್‌ಮೈಶೋ ಗಮನಿಸಿದರೆ ಡಿಬಾಸ್ ಅಭಿಮಾನಿಗಳಿಂದ್ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ಕಂಡುಬರುತ್ತಿದೆ. ಇಲ್ಲಿಯವರೆಗೆ ಟಿಕೆಟ್‌ಗಳ ಕಾಯ್ದಿರಿಸುವಿಕೆ ಕರ್ನಾಟಕದಲ್ಲಿ ಮಾತ್ರ ಪ್ರಾರಂಭವಾಗಿದೆ.
ಬುಕ್‌ಮೈಶೋ ನೋಡಿದರೆ ಬೆಂಗಳೂರಿನಲ್ಲಿ ಮೊದಲ ದಿನ ಸುಮಾರು 250 ಪ್ರದರ್ಶನಗಳನ್ನು ಪಟ್ಟಿ ಮಾಡಿದೆ. ಸಿಂಗಲ್ ಸ್ಕ್ರೀನ್‌ಗಳು ಮಾತ್ರ ಬುಕಿಂಗ್ ಪ್ರಾರಂಭಿಸಿದ್ದು, ಮಲ್ಟಿಪ್ಲೆಕ್ಸ್‌ಗಳು ಇನ್ನೂ ಬುಕಿಂಗ್ ಶುರು ಮಾಡಿಲ್ಲ. ಸಿನಿಮಾ ತಯಾರಕರು ಬಿಡುಗಡೆಯ ದಿನದಂದೇ ಬೆಳಿಗ್ಗೆ ವಿಶೇಷ ಪ್ರದರ್ಶನಗಳನ್ನು ಮಾಡಿದ್ದಾರೆ. ಟಿಕೆಟ್ ದರ ಕೂಡ ತುಸು ದುಬಾರಿಯಾಗಿವೆ. ಸಿಂಗಲ್ ಸ್ಕ್ರೀನ್‌ಗಳಲ್ಲಿ ಗುರುವಾರ ಬೆಳಿಗ್ಗೆ ಮೊದಲ ವಿಶೇಷ ಪ್ರದರ್ಶನಗಳ ಟಿಕೆಟ್‌ಗಳ ಬೆಲೆಯನ್ನು 500 ರೂಪಾಯಿವರೆಗೆ ನಿಗದಿಪಡಿಸಿವೆ. ಕೆಲವೆಡೆ 400 ರೂಪಾಯಿ, 600 ರೂಪಾಯಿ ಇರುವುದು ತಿಳಿದುಬಂದಿದೆ. ಕೆಲವೆಡೆ 900 ರೂಪಾಯಿವೆರೆಗೆ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ಇನ್ನು ಸಾಮಾನ್ಯ ಪ್ರದರ್ಶನಗಳ ಬೆಲೆ ಪ್ರತಿ ಟಿಕೆಟ್‌ಗೆ ಸುಮಾರು 200-250 ರೂಪಾಯಿ ಇದೆ.
ಬೆಳಿಗ್ಗೆ 150ಕ್ಕೂ ಹೆಚ್ಚು ಪ್ರದರ್ಶನಗಳು
ಮುಂಗಡ ಟಿಕೆಟ್ ಬುಕಿಂಗ್ ಶುರುವಾದ ಬೆನ್ನಲ್ಲೇ ಲಕ್ಷಾಂತರ ಟಿಕೆಟ್ ಸೋಲ್ಡ್ ಔಟ್ ಆಗಿರುವ ಮಾಹಿತಿ ಇದೆ. ಹೀಗಾಗಿ ಸಿನಿಮಾ ರಿಲೀಸ್‌ಗೂ ಮುನ್ನವೇ ಭರ್ಜರಿ ಕಲೆಕ್ಷನ್ ಕೂಡ ಆಗಿದ್ದು, ಮೊದಲ ದಿನದ ಟಿಕೆಟ್ ಬುಕಿಂಗ್ನಿಂದಲೇ ಸುಮಾರು 4 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಡೆವಿಲ್ ಸಿನಿಮಾಗಾಗಿ ಕರ್ನಾಟಕದ ಶೇ 90ರಷ್ಟು ಸ್ಕ್ರೀನ್‌ಗಳನ್ನು ನಿಗದಿಪಡಿಸಲಾಗಿದೆ. ಸುಮಾರು 150ಕ್ಕೂ ಹೆಚ್ಚು ಪ್ರದರ್ಶನಗಳು ಗುರುವಾರ ಬೆಳಿಗ್ಗೆ 6:30ಕ್ಕೆ ಇದೆ. ಹೀಗಾಗಿ ಡಿಬಾಸ್ ಅಭಿಮಾನಿಗಳು ಹಬ್ಬ ಮಾಡಲು ರೆಡಿಯಾಗಿದ್ದಾರೆ.












Click it and Unblock the Notifications