Darshan Thoogudeepa: ಆಪರೇಷನ್‌ಗೆ ದರ್ಶನ್ ಹಿಂದೇಟು: ಸಿನಿಮಾ ಜರ್ನಿಯದ್ದೇ ಚಿಂತೆ ?!
ರೇಣುಕಾಸ್ವಾಮಿ ಕೊಲೆ ಕೇಸ್‌ನ ವಿಚಾರಣಾಧೀನ ಕೈದಿ ಹಾಗೂ ನಟ ದರ್ಶನ್ ಅವರು ಇದೀಗ ಹೊಸ ಸಂಕಷ್ಟವೊಂದರಲ್ಲಿ ಸಿಲುಕಿದ್ದಾರೆ. ದರ್ಶನ್‌ಗೆ ಬೆನ್ನು ನೋವು ಸಮಸ್ಯೆ ತೀವ್ರವಾಗಿದ್ದು, ಅವರಿಗೆ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎನ್ನುವುದು ತೀವ್ರವಾಗಿ ಚರ್ಚೆಯಾಗುತ್ತಿದೆ. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿದರೂ ಸಮಸ್ಯೆ, ಮಾಡಿಸಿಕೊಳ್ಳದೆ ಇದ್ದರೂ ಸಮಸ್ಯೆ ಎನ್ನುವ ಪರಿಸ್ಥಿತಿಯಲ್ಲಿ ಇದ್ದಾರೆ ಎನ್ನಲಾಗಿದೆ. ಅವರಿಗೆ ಆಪರೇಷನ್ ಬಗ್ಗೆ ಗೊಂದಲ ಇದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ದರ್ಶನ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಳ್ಳಾರಿ ಜೈಲಿನಿಂದ ಹೊರಗೆ ಬಂದಿದ್ದಾರೆ. ಆದರೆ, ಅವರು ಆಪರೇಷನ್ ಮಾಡಿಸಿಕೊಳ್ಳಲೇಬೇಕು ಎನ್ನಲಾಗಿತ್ತು.
ನಟ ದರ್ಶನ್ ಅವರಿಗೆ ಇತ್ತೀಚಿನ ದಿನಗಳಲ್ಲಿ ಬೆನ್ನು ನೋವು ಸಮಸ್ಯೆ ತೀವ್ರವಾಗಿತ್ತು. ಅದೇ ಕಾರಣಕ್ಕೆ ಅವರಿಗೆ ಚಿಕಿತ್ಸೆ ಪಡೆದುಕೊಳ್ಳುವ ಉದ್ದೇಶದಿಂದ ಮಧ್ಯಂತರ ಜಾಮೀನು ನೀಡಲಾಗಿತ್ತು. ದರ್ಶನ್ ಬೆನ್ನು ನೋವು ಚಿಕಿತ್ಸೆಗೆ ಆಪರೇಷನ್ ಮಾಡಲೇಬೇಕು ಎಂದು ಹೇಳಲಾಗಿತ್ತು. ಆದರೆ, ಜೈಲಿನಿಂದ ಬಿಡುಗಡೆಯಾಗಿ (ಮಧ್ಯಂತರ ಜಾಮೀನಿನ ಮೇಲೆ) ಮೂರು ವಾರ ಸಮೀಪಿಸುತ್ತಿದ್ದರೂ, ಇಲ್ಲಿಯವರೆಗೆ ಆಪರೇಷನ್ ಆಗಿಲ್ಲ. ಇದಕ್ಕೆ ಕಾರಣ ಏನು ಎನ್ನುವುದು ಇಲ್ಲಿಯವರೆಗೆ ಸ್ಪಷ್ಟವಾಗಿಲ್ಲ.

ಸಿನಿಮಾ ಜರ್ನಿ ಪ್ರಶ್ನೆ: ನಟ ದರ್ಶನ್ ಅವರು ಆಪರೇಷನ್‌ಗೆ ಹಿಂದೇಟು ಹಾಕುತ್ತಿರುವುದಕ್ಕೆ ಮುಖ್ಯ ಕಾರಣ ಅವರು ಸಿನಿಮಾ ಕೆರಿಯರ್ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ದರ್ಶನ್ ಅವರು ಆಪರೇಷನ್‌ಗೆ ಒಳಗಾದರೆ, ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಸ್ಟಂಟ್ ಮಾಡುವುದಕ್ಕೆ ಅಥವಾ ಫೈಟಿಂಗ್ ಸೀನ್‌ಗಳನ್ನು ಮಾಡುವಾಗ ಸಮಸ್ಯೆ ಆಗುವ ಸಾಧ್ಯತೆ ಇದೆ ಎಂದು ಅವರು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ದರ್ಶನ್ ಅವರನ್ನು ನಂಬಿ ಈಗಾಗಲೇ ಹಲವು ನಿರ್ಮಾಪಕರು ಕೋಟ್ಯಾಂತರ ರೂಪಾಯಿ ಬಂಡವಾಳ ಹೂಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲೂ ದರ್ಶನ್ ಅವರೊಂದಿಗೆ ಸಿನಿಮಾಗಳನ್ನು ಮಾಡಲು ಕಾಯುತ್ತಿದ್ದಾರೆ. ಆದರೆ, ಆಪರೇಷನ್ ಆದರೆ ಮುಂದಿನ ದಿನಗಳಲ್ಲಿ ಸಿನಿಮಾ ಜರ್ನಿಗೆ ಹೊಡೆತವಾಗಲಿದೆಯೇ ಎನ್ನುವ ಆತಂಕ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಅವರು ಆಪರೇಷನ್ ಬೇಡ ಎಂದು ವೈದ್ಯರ ಬಳಿ ಮನವಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.
ದರ್ಶನ್ ಅವರಿಗೆ ಈಗ ಆಪರೇಷನ್ ಮಾಡಿದರೂ ಅವರು ಸುಧಾರಿಸಿಕೊಳ್ಳಲು ಇನ್ನಷ್ಟು ದಿನ ವಿಶ್ರಾಂತಿ ಪಡೆಯಲು ಸಮಯಬೇಕಾಗುತ್ತದೆ. ಆದರೆ, ಆಪರೇಷನ್ ಮಾಡುವುದು ವಿಳಂಬವಾದಷ್ಟು ಮಧ್ಯಂತರ ಜಾಮೀನಿನ ಅವಧಿ ಮುಗಿಯಲಿದೆ. ಇದರಿಂದ ಅವರು ಮತ್ತೆ ಹೈಕೋರ್ಟ್‌ನಲ್ಲಿ ಮಧ್ಯಂತ ಜಾಮೀನಿನ ಅವಧಿ ವಿಸ್ತರಿಸಲು ಮನವಿ ಮಾಡಬೇಕಾಗಬಹುದು ಎಂದೂ ಹೇಳಲಾಗುತ್ತಿದೆ.
ನಿರ್ಣಾಯಕ ದಿನ
ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪಿ ಹಾಗೂ ನಟ ದರ್ಶನ್‌ಗೆ ಇಂದು ಎರಡು ಕಾರಣಗಳಿಗೆ ನಿರ್ಣಾಯಕ ದಿನವಾಗಿದೆ. ದರ್ಶನ್ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಆರು ವಾರಗಳ ಕಾಲ ಮಧ್ಯಂತರ ಜಾಮೀನು ಕೊಡಲಾಗಿದೆ. ಅದರಲ್ಲಿ ಈಗಾಗಲೇ ಅರ್ಧ ಅವಧಿ ಮುಕ್ತಾಯವಾಗಿದೆ. ಇದೀಗ ದರ್ಶನ್ ಮಧ್ಯಂತರ ಜಾಮೀನು ಅವಧಿ ಮುಗಿಯುವ ಮುನ್ನವೇ ಸಂಕಷ್ಟ ಎದುರಾಗಿದೆ. ಒಂದು ಕಡೆ ರಾಜ್ಯ ಪೊಲೀಸ್ ಇಲಾಖೆ ಮಧ್ಯಂತರ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರೆ, ಮತ್ತೊಂದು ಕಡೆ ಆಪರೇಷನ್ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ.












Click it and Unblock the Notifications