Darshan Thoogudeepa: ಪತ್ನಿ ವಿಜಯಲಕ್ಷ್ಮಿ ಜೊತೆ ರಾಣಾ ಮದುವೆಗೆ ಬಂದ ದರ್ಶನ್ ತೂಗುದೀಪ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ಬಳಿಕ ದರ್ಶನ್ ತೂಗುದೀಪ ಶನಿವಾರ ಮೊದಲ ಬಾರಿಗೆ ವಿಡಿಯೋ ಹಂಚಿಕೊಂಡಿದ್ದರು. ಅಭಿಮಾನಿಗಳ ಕ್ಷಮೆ ಕೇಳಿದ್ದ ಅವರು, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ ಎಂದಿದ್ದರು. ಶೀಘ್ರದಲ್ಲೇ ಅಭಿಮಾನಿಗಳಿಗೆ ಸಿಗುತ್ತೇನೆ, ಬೆನ್ನು ನೋವಿನ ಕಾರಣ ಹೆಚ್ಚು ಹೊತ್ತು ನಿಲ್ಲಲು ಆಗಲ್ಲ, ಅದಕ್ಕಾಗಿ ಈ ಬಾರಿ ಹುಟ್ಟು ಹಬ್ಬ ಇರಲ್ಲ ಎಂದು ಹೇಳಿದ್ದರು. ಕಷ್ಟದ ಸಮಯದಲ್ಲಿ ಬೆಂಬಲಿಸಿದ ಎಲ್ಲ ಅಭಿಮಾನಿಗಳಿಗೂ ಧನ್ಯವಾದ ಹೇಳಿದರು.
ಕುಟುಂಬದ ಜೊತೆ ಫಾರ್ಮ್ ಹೌಸ್‌ನಲ್ಲಿ ಕಾಲ ಕಳೆಯುತ್ತಿರುವ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿಲ್ಲ. ಆದರೆ ಶನಿವಾರ ಅವರು ಆಪ್ತ ಸ್ನೇಹಿತಿ ರಕ್ಷಿತಾ ತಮ್ಮ ರಾಣಾ ಮದುವೆಗೆ ಆಗಮಿಸಿದ್ದರು. ಪತ್ನಿ ವಿಜಲಕ್ಷ್ಮಿ ಜೊತೆಗೆ ಮದುವೆಗೆ ಬಂದ ದರ್ಶನ್ ಕಂಡು ಅಭಿಮಾನಿಗಳು ಸಖತ್ ಖುಷಿಯಾಗಿದ್ದರು.

ಬೆನ್ನು ನೋವಿದ್ದರೂ ನೆಚ್ಚಿನ ಸ್ನೇಹಿತೆಯ ಮದುವೆಗೆ ಆಗಮಿಸಿದ ಅವರು ಎಲ್ಲರನ್ನೂ ಆತ್ಮೀಯವಾಗಿ ಮಾತನಾಡಿಸಿದರು. ಹಲವು ತಿಂಗಳ ಬಳಿಕ ದರ್ಶನ್ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿರುವುದು ಅಭಿಮಾನಿಗಳಿಗೆ ಸಂತಸ ತಂದಿದೆ.
ಶಸ್ತ್ರ ಚಿಕಿತ್ಸೆ ಆಗಬೇಕು ಎಂದ ದರ್ಶನ್
ಶನಿವಾರ ಹಂಚಿಕೊಂಡಿರುವ ವಿಡಿಯೋದಲ್ಲಿ ಅವರು ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಕೂಡ ಮಾತನಾಡಿದ್ದಾರೆ. ಬೆನ್ನು ನೋವು ಇರುವುದು ಎಲ್ಲರಿಗೂ ಗೊತ್ತೇ ಇದೆ. ಒಂದು ಇಂಜೆಕ್ಷನ್ ತೆಗೆದುಕೊಂಡಾಗ 15 ರಿಂದ 20 ದಿನ ಆರಾಮಾಗಿ ಇರುತ್ತೇನೆ, ಆದರೆ ಪವರ್ ಕಡಿಮೆಯಾಗುತ್ತಿದ್ದಂತೆ ಮತ್ತೆ ನೋವು ಶುರುವಾಗುತ್ತದೆ. ಆಪರೇಷನ್ ಅಂತು ಮಾಡಿಸಲೇಬೇಕು ಎಂದರು.
ಈಗ ನಾನು ಒಪ್ಪಿಕೊಂಡಿರೋ ಕೆಲಸಗಳನ್ನು ಮಾಡಬೇಕಿದೆ, ನಿರ್ಮಾಪಕರಿಗೆ ನಾನು ಧನ್ಯವಾದ ಹೇಳ್ತೀನಿ, ಅವರು ನನಗಾಗಿ ಇಷ್ಟು ವರ್ಷ ಕಾದಿದ್ದಾರೆ. ನಾನು ಅವರಿಗೆ ಅನ್ಯಾಯ ಮಾಡಬಾರದು ಎಂದು ಎಷ್ಟು ದಿನ ಆಗುತ್ತೇ ಅಷ್ಟು ದಿನ ಆಪರೇಷನ್ ಮುಂದಕ್ಕೆ ಹಾಕಲು ನೋಡುತ್ತೇನೆ ಎಂದಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಡೆವಿಲ್ ಸಿನಿಮಾ ಶೂಟಿಂಗ್ ಶುರುವಾಗುವ ಸೂಚನೆ ಕೊಟ್ಟಿದ್ದಾರೆ.
ಪ್ರೇಮ್ ಜೊತೆ ಸಿನಿಮಾ ಕೈಬಿಟ್ಟಿರುವ ವದಂತಿಗಳ ಬಗ್ಗೆ ಕೂಡ ಮಾತನಾಡಿದ ಅವರು, ಊಹಾಪೋಹಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ನಾನು ಪ್ರೇಮ್ ಜೊತೆ ಸಿನಿಮಾ ಮಾಡುತ್ತೇನೆ, ಅದು ರಕ್ಷಿತಾ ಕನಸು, ಅದು ಆಗೇ ಆಗುತ್ತದೆ. ಪ್ರೇಮ್ ನನ್ನ ಗುರುಗಳು ಅವರ ಜೊತೆ ಕೆಲಸ ಮಾಡಲು ನಾನೂ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ.












Click it and Unblock the Notifications