Darshan Thoogudeepa: ದರ್ಶನ್‌ಗೆ ಹನುಮಾನ್ ಚಾಲೀಸ್ ಪುಸ್ತಕ ಕೊಟ್ಟು ಹೋದ ಅಪರಿಚಿತ ವ್ಯಕ್ತಿ
ದರ್ಶನ್ ಜೈಲಿಗೆ ಹೋದಾಗಿನಿಂದಲೂ ಅವರ ಅಭಿಮಾನಿಗಳು ತೀವ್ರ ನೋವನ್ನು ಅನುಭವಿಸಿದ್ದಾರೆ. ತಮ್ಮ ನೆಚ್ಚಿನ ನಟನ ಜೀವನದಲ್ಲಿ ಹೀಗಾಯಿತಲ್ಲಾ ಅಂತ ಮರುಕ ವ್ಯಕ್ತಪಡಿಸಿದ್ದಾರೆ. ದರ್ಶನ್ ಎಲ್ಲಾ ಸಂಕಷ್ಟಗಳಿಂದ ಪಾರಾಗಿ ಜೈಲಿನಿಂದ ಬೇಗ ಹೊರಬರಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡುತ್ತಿದ್ದಾರೆ. ಈ ನಡುವೆ ಬಳ್ಳಾರಿ ಜೈಲಿನಲ್ಲಿರುವ ದಾಸನಿಗೆ ಅಪರಿಚಿತರಿಂದ ಹನುಮಾನ್ ಚಾಲೀಸ್ ಪುಸ್ತಕ ಕಳುಹಿಸಲಾಗಿದೆ.
ಬಳ್ಳಾರಿ ಜೈಲಿನಲ್ಲಿರುವ ದರ್ಶನ್‌ಗೆ ಹನುಮಾನ್ ಚಾಲೀಸ್ ಪುಸ್ತಕವನ್ನು ಅಪರಿಚಿತ ವ್ಯಕ್ತಿಯೊಬ್ಬ ಕೊಟ್ಟು ಹೋದ ಘಟನೆ ನಡೆದಿದೆ. ಇದನ್ನು ಓದಿ ಎಲ್ಲವೂ ಒಳ್ಳೆಯದಾಗುತ್ತದೆ. ಹನುಮಾನ್ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ಈ ಪುಸ್ತಕದೊಂದಿಗೆ ಬರೆಯಲಾಗಿದೆ. ಇದನ್ನು ಪರಿಶೀಲಿಸಿ ಜೈಲಾಧಿಕಾರಿಗಳು ದರ್ಶನ್‌ಗೆ ಪುಸ್ತಕ ನೀಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ಪುಸ್ತಕ ಯಾರಿಂದ ಬಂದಿದೆ ಎಂದು ಖಚಿತವಾಗಿಲ್ಲ. ಆದರೆ ಪುಸ್ತಕವನ್ನು ಯಾರೋ ಅಪರಿಚಿತರು ಜೈಲಿಗೆ ಪಾರ್ಸಲ್ ಮೂಲಕ ಕಳುಹಿಸಿದ್ದಾರೆ. ಅದನ್ನು ಪರಿಶೀಲಿಸಿ ಅಧಿಕಾರಿಗಳು ದರ್ಶನ್‌ಗೆ ಪುಸ್ತಕ ನೀಡಿದ್ದಾರೆ. ಆದರೆ ಇದನ್ನು ಪತ್ನಿ ವಿಜಯಲಕ್ಷ್ಮಿ ಕಳುಹಿಸಿರಬಹುದು ಎಂದು ಶಂಕಿಸಲಾಗಿದೆ. ಆದರೆ ವಿಜಯಲಕ್ಷ್ಮಿ ಕಳುಹಿಸಿದ್ದರೆ ಇದರ ಮೇಲೆ ವಿಳಾಸ ನಮೋದಿಸಬೇಕಿತ್ತು. ಆದರೆ ಇದರ ಮೇಲೆ ಯಾರ ಹೆಸರು ಕೂಡ ಇಲ್ಲವಾದ್ದರಿಂದ ಇದು ಯಾರಿಂದ ಬಂದಿದೆ ಎಂಬುದು ಗೊತ್ತಾಗಿಲ್ಲ.
ದಿನಕ್ಕೊಂದು ಬೇಡಿಕೆ ಇಡುತ್ತಿರುವ ದಾಸ..
ಬಳ್ಳಾರಿ ಜೈಲಿನಲ್ಲಿರುವ ದರ್ಶನ್ ದಿನಕ್ಕೊಂದು ಬೇಡಿಕೆ ಇಡುತ್ತಿದ್ದಾರೆ. ಟಿವಿಗೆ ಬೇಡಿಕೆ ಇಟ್ಟಿದ್ದ ದರ್ಶನ್ ಈಗ ತಲೆ ದಿಂಬು ಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಬೆನ್ನು ನೋವು, ಕೈ ನೋವು ಇದೆ ಎಂದು ಮೆತ್ತನೆಯ ದಿಂಬು ಕೊಡಿ ಎಂದು ದರ್ಶನ್ ಕೇಳಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ದರ್ಶನ್ ಮನವಿಯನ್ನು ತಿರಸ್ಕರಿಸಿದ ಜೈಲಾಧಿಕಾರಿಗಳು ನಿಮಗೆ ಬೇಕಾಗಿರುವುದನ್ನು ಕೊಡಲು ಇದು ಮನೆ ಅಲ್ಲ. ಜೈಲಿನ ನಿಯಮದ ಪ್ರಕಾರ ಏನೆಲ್ಲಾ ನೀಡಬೇಕು ಅದನ್ನೆಲ್ಲಾ ಕೊಟ್ಟಿದ್ದೇವೆ. ನಿಮಗೆ ಹೆಚ್ಚುವರಿಯಾಗಿ ಏನಾದರು ಬೇಕಾದರೆ ಕೋರ್ಟ್‌ಗೆ ಮನವಿ ಮಾಡಿ ಪಡೆದುಕೊಳ್ಳಿ ಎಂದು ಹೇಳಿದ್ದಾರೆ.
ಗಣೇಶ ಮೆರವಣಿಗೆಯಲ್ಲೂ ದರ್ಶನ್ ಕೈದಿ ನಂಬರ್ ಟೀ ಶರ್ಟ್ ಧರಿಸಿದ ಯುವಕರು
ಗಣೇಶ ಮೆರವಣಿಗೆಯಲ್ಲೂ ದರ್ಶನ್ ಕೈದಿ ನಂಬರ್ ಇರುವ ಟೀ ಶರ್ಟ್ ಧರಿಸಿ ಡಿ ಬಾಸ್ ಫ್ಯಾನ್ಸ್ ಪುಂಡಾಟ ಮೆರೆದಿದ್ದಾರೆ. ಕುಂದಾಪುರ ತಾಲೂಕು ಬಳ್ಳೂರಿನಲ್ಲಿ ಗಣೇಶೋತ್ಸವದ ವೇಳೆ ದರ್ಶನ್ ಫ್ಯಾನ್ಸ್ ಗಲಾಟೆ ಎಬ್ಬಿಸಿದ್ದಾರೆ. ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಕೈದಿ ನಂಬರ್, ದರ್ಶನ್ ಕೈದಿ ನಂಬರ್ ಇರುವ ಟೀ ಶರ್ಟ್ ಧರಿಸಿ ನೃತ್ಯ ಮಾಡಿದ್ದಾರೆ. ದರ್ಶನ್ ಅಭಿಮಾನಿಗಳ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವಾಗ ದರ್ಶನ್ ಕೈದಿ ನಂಬರ್ 6106 ಆಗಿತ್ತು. ಇದೇ ನಂಬರ್ ಇರುವ ಟೀ ಶರ್ಟ್ ಅನ್ನು ಧರಿಸಿ ಚೊಂಗುಡ್ಡಿ ಫ್ರೆಂಡ್ಸ್ ತಂಡ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗಿಯಾಗಿತ್ತು. ಅಲ್ಲದೆ ಈ ಉತ್ಸವದಲ್ಲಿ ಈ ತಂಡ ಕುಣಿದು ಕುಪ್ಪಳಿಸಿದೆ. ಇದಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ.
ಈ ರೀತಿ ಟೀ ಶರ್ಟ್ ಧರಿಸಬೇಡಿ ಎಂದು ಸಾರ್ವಜನಿಕರು ಕಿವಿ ಮಾತು ಹೇಳಿದರೂ ಕೂಡ ಯುವಕರ ಗುಂಪು ವಿರೋಧಿಸಿದವರ ವಿರುದ್ಧ ತಿರುಗಿ ನಿಂತಿದೆ. ಸಾರ್ವಜನಿಕರ ಮಾತಿಗೆ ಹಾಗೂ ಪೊಲೀಸರಿಗೂ ಕ್ಯಾರೇ ಅನ್ನದೆ ಯುವಕರ ಗುಂಪು ಗಣೇಶೋತ್ಸವದಲ್ಲಿ ಭಾಗಿಯಾಗಿದೆ. ಇಷ್ಟು ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಪೋಟೋ ಶೇರ್ ಮಾಡಿ ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಂಡಿದೆ.












Click it and Unblock the Notifications