Darshan Thoogudeepa: ದರ್ಶನ್ ಇರೋ ಬಳ್ಳಾರಿ ಜೈಲಿಗೆ ಬಂದ ಅಂಬ್ಯುಲೆನ್ಸ್!
ಬಳ್ಳಾರಿ ಅಕ್ಟೋಬರ್ 17: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯನ್ನು ನಗರದ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಗಳು ತಿರಸ್ಕರಿಸಿವೆ. ಹೀಗಾಗಿ ದರ್ಶನ್‌ಗೆ ಮತ್ತೆ ಜೈಲೇ ಗತಿಯಾಗಿದ್ದು ಅವರ ಆರೋಗ್ಯ ಸಮಸ್ಯೆಯ ಬಗ್ಗೆ ಕುಟುಂಬಸ್ಥರಿಗೆ ಆತಂಕ ಶುರುವಾಗಿದೆ. ಈ ನಡುವೆ ದರ್ಶನ್ ಇರೋ ಬಳ್ಳಾರಿ ಜೈಲಿಗೆ ಅಂಬ್ಯುಲೆನ್ಸ್ ಬಂದಿದ್ದು ಈ ಆತಂಕ ದ್ವಿಗುಣಗೊಂಡಿದೆ.
ಹೌದು.. ನಟ ದರ್ಶನ್ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿ ಅಕ್ಟೋಬರ್ 22ರಂದು ಹೈ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಸಾಧ್ಯತೆ ಇದೆ. ಆದರೆ ನಟನ ಆರೋಗ್ಯ ದಿನ ಕಳೆದಂತೆ ಸುಧಾರಣೆ ಕಾಣದೆ ಬಿಗಡಾಯಿಸುತ್ತಿರುವುದು ಕಳವಳ ಹೆಚ್ಚಿಸಿದೆ. ದರ್ಶನ್ ಅವರಿಗೆ L1, L5 ಬೆನ್ನು ನೋವು ಇದೆ. ದರ್ಶನ್ ಅವರಿಗೆ ದಿನ ಕಳೆದಂತೆ ಬೆನ್ನು ನೋವು ಹೆಚ್ಚಾಗುತ್ತಲೇ ಇದೆ. ಇದಕ್ಕೆ ಸರ್ಜರಿ ಮಾಡಬೇಕಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದರು.

ಇದಕ್ಕಾಗಿ ದರ್ಶನ್ ಬಳ್ಳಾರಿ ಜೈಲಿನಲ್ಲಿ ಇರುವುದರಿಂದ ಬಳ್ಳಾರಿ ಆಸ್ಪತ್ರೆಯಲ್ಲಿ ಸರ್ಜರಿ ಮಾಡಿಸಿಕೊಳ್ಳಬೇಕಾಗುತ್ತದೆ. ಆದರೆ ದರ್ಶನ್ ಇದಕ್ಕೆ ಒಪ್ಪಿಗೆ ಸೂಚಿಸುತ್ತಿಲ್ಲ. ಬೆಂಗಳೂರಿನಲ್ಲೇ ಸರ್ಜರಿ ಮಾಡಿಸಿಕೊಳ್ಳುವುದಾಗಿ ಪಟ್ಟು ಹಿಡಿದಿದ್ದಾರೆ. ಇದು ಜೈಲಾಧಿಕಾರಿಗಳಿಗೆ ದೊಡ್ಡ ತಲೆನೋವಾಗಿ ಹೋಗಿದೆ.
ದರ್ಶನ್‌ಗೆ ಆದಷ್ಟು ಬೇಗ ಸರ್ಜರಿ ಮಾಡಿಸಿದರೆ ಬೆನ್ನು ನೋವು ವಾಸಿಯಾಗುತ್ತದೆ ಎಂದು ವೈದ್ಯರು ಸಲಹೆ ನೀಡಿದ್ದನ್ನೇ ಕಾರಣವನ್ನಿಟ್ಟುಕೊಂಡು ಜಾಮೀನು ಅರ್ಜಿಯನ್ನು ಸಲ್ಲಿಸಲಾಗಿತ್ತು. ಆದರೆ ಕೋರ್ಟ್ ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ. ಹೀಗಾಗಿ ದರ್ಶನ್ ನಿತ್ಯ ನೋವು ಅನುಭವಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬೆಳವಣಿಗೆಗಳ ನಡುವೆ ಬಳ್ಳಾರಿ ಜೈಲಿಗೆ ಅಂಬ್ಯುಲೆನ್ಸ್ ಬಂದಿದ್ದು ದರ್ಶನ್‌ಗೇ ಏನಾದ್ರು ಆಯ್ತಾ ಎನ್ನುವ ಪ್ರಶ್ನೆಗಳನ್ನು ಹುಟ್ಟು ಹಾಕಿವೆ.
ಆದರೆ ಈ ಬಗ್ಗೆ ಯಾರೂ ಕೂಡ ಮಾಹಿತಿಯನ್ನು ಹಂಚಿಕೊಂಡಿಲ್ಲ. ದರ್ಶನ್ ಬೆನ್ನು ನೋವಿನಿಂದ ಬಳಲುತ್ತಿದ್ದು ನಿತ್ಯ ಅದಕ್ಕೆ ಸಂಬಂಧಿಸಿದಂತೆ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಜೈಲಿನಲ್ಲಿ ಕುಳಿತುಕೊಳ್ಳಲು ಸರಿಯಾದ ಚೇರು ಹಾಗೂ ಹಾಸಿಗೆ ವ್ಯವಸ್ಥೆ ಇಲ್ಲದೆ ದರ್ಶನ್ ಸಾಕಷ್ಟು ಸಂಕಷ್ಟು ಅನುಭವಿಸುವಂತಾಗಿದೆ.
ಡಾ. ರವಿಕುಮಾರ್ ಹೇಳುವುದೇನು?
ದರ್ಶನ್ ಅವರಿಗೆ L1, L5 ಬೆನ್ನು ನೋವಿನ ಬಗ್ಗೆ ಡಾ. ರವಿಕುಮಾರ್ ಮುಕಾರ್ತಿಹಾಳ್ ಅವರು ಹೇಳುವುದು ಏನೆಂದರೆ ಎಲ್ಲರಿಗೂ ಸರ್ಜರಿ ಅವಶ್ಯಕತೆ ಇರುವುದಿಲ್ಲ. ಆದರೆ ನರದೌರ್ಬಲ್ಯ, ಕಡಿಮೆ ಶಕ್ತಿ, ಮೂತ್ರ ವಿಸರ್ಜನೆಯಲ್ಲಿ ತೊಂದರೆ ಆದಾಗ ಮಾತ್ರ ಸರ್ಜರಿ ಅವಶ್ಯಕತೆ ಇರುತ್ತದೆ. ಹೀಗಾಗಿ ಎಲ್ಲಾ ಬ್ಯಾಕ್‌ಪೇನ್‌ಗಳಿಗೆ ಸರ್ಜರಿ ಅವಶ್ಯತೆ ಇಲ್ಲ ಎಂದು ಹೇಳುತ್ತಾರೆ.
ಬ್ಯಾಕ್ ಪೇನ್‌ಗೆ ಕಾರಣ ಹಲವಾರು ಇರುತ್ತವೆ. ಏಕಾಏಕಿ ಏನಾದರೂ ಭಾರವಾದ ವಸ್ತು ಎತ್ತಿದಾಗ, ವಯಸ್ಸಿನ ಅನುಸಾರವಾಗಿ ಎಲುಬು ಸವೆದು ಈ ಸಮಸ್ಯೆ ಬರಬಹುದು. ಮತ್ತೊಂದು ಕಾರಣ ತುಂಬಾ ಜಿಮ್ ಮಾಡೋರಿಗೂ ಆಗಬಹುದು. ಕೆಲವರಿಗೆ ಸ್ವಲ್ಪ ನೋವಿರುತ್ತದೆ ಅಂಥವರಿಗೆ ಥೆರಪಿ ಮಾಡಿಸಿದರೆ ನೋವು ಸರಿಹೋಗುತ್ತದೆ. ದರ್ಶನ್ ಅವರಿಗೆ ಬೆನ್ನು ನೋವು ಯಾವ ಪ್ರಮಾಣದಲ್ಲಿ ಎಲ್ಲಿ ಆಗುತ್ತಿದೆ ಎನ್ನುವುದು ಎಲ್ಲವೂ ಮುಖ್ಯವಾಗುತ್ತವೆ ಎಂದಿದ್ದಾರೆ. ಅವರಿಗೆ ಸರ್ಜರಿ ಅಗತ್ಯ ಎಂದಿದ್ದಾರೆ ಅಂದರೆ ಅವರಿಗೆ ನೋವು ಅಧಿಕವಾಗಿರಬೇಕು, ಜೊತೆಗೆ ಕೆಲ ಸಮಸ್ಯೆಗಳನ್ನು ಅವರು ಅನುಭವಿಸುತ್ತಿರಬೇಕು ಎಂದು ರವಿಕುಮಾರು ಹೇಳಿದ್ದಾರೆ.
ಒಟ್ಟಿನಲ್ಲಿ ದರ್ಶನ್ ಅನಾರೋಗ್ಯ ಕಾರಣದಿಂದಾಗಿ ಕೋರ್ಟ್ ಜಾಮೀನು ನೀಡುತ್ತಾ? ಅಥವಾ ದರ್ಶನ್ ಅವರೇ ನೋವು ಸಹಿಸಿಕೊಳ್ಳಲಾಗದೆ ಬಳ್ಳಾರಿಯಲ್ಲೇ ಸರ್ಜರಿ ಮಾಡಿಸಿಕೊಳ್ಳುತ್ತಾರಾ ಕಾದು ನೋಡಬೇಕಿದೆ.












Click it and Unblock the Notifications