7 ಸಿನಿಮಾದಿಂದ ಕದ್ದು ಮಾಡಿದ 'ಕಲಾಸಿಪಾಳ್ಯ' ಬ್ಲಾಕ್‌ಬಸ್ಟರ್ ಆಯ್ತು: ಓಂ ಪ್ರಕಾಶ್ ರಾವ್
ಸ್ಯಾಂಡಲ್‌ವುಡ್‌ನಲ್ಲಿ ಹಲವು ರಿಮೇಕ್ ಸಿನಿಮಾಗಳು ಕೂಡ ಹಿಟ್ ಆಗಿವೆ. ಬೇರೆ ಚಿತ್ರರಂಗಗಳಲ್ಲಿ ಹೆಸರು ಮಾಡಿದ ಚಿತ್ರಕಥೆಯನ್ನು ಮತ್ತೆ ಕನ್ನಡದಲ್ಲಿ ಮಾಡಿ ಗೆದ್ದಿರುವ ಕಥೆಗಳು ಸಾಕಷ್ಟಿವೆ. ಈಗಿನ ಟಾಪ್ ನಟರು ಕೂಡ ಅಂತಹ ಸಿನಿಮಾಗಳಲ್ಲಿ ನಟಿಸಿ ಸ್ಟಾರ್‌ಗಿರಿ ಪಡೆದವರಿದ್ದಾರೆ. ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ನಟಿಸಿದ್ದ ಕಲಾಸಿಪಾಳ್ಯ ಸಿನಿಮಾ, ಅವರ ಕೆರಿಯರ್‌ಗೆ ತಿರುವು ಕೊಟ್ಟ ಹಾಗೂ ಅವರಿಗೆ ಸ್ಟಾರ್‌ಡಮ್ ತಂದುಕೊಟ್ಟ ಸಿನಿಮಾ ಎಂದರೆ ತಪ್ಪಾಗಲ್ಲ. ಈ ಸಿನಿಮಾದ ನಿರ್ದೇಶಕರಾದ ಓಂ ಪ್ರಕಾಶ್ ರಾವ್ ಅವರು ಏಳು ಸಿನಿಮಾಗಳ ಕಥೆ ಕದ್ದು ಕಲಾಸಿಪಾಳ್ಯ ಸಿನಿಮಾ ಮಾಡಿದ್ದು ಎಂಬ ಅಚ್ಚರಿ ವಿಚಾರ ಬಹಿರಂಗಪಡಿಸಿದ್ದಾರೆ.
2004ರಲ್ಲಿ ರಿಲೀಸ್ ಆಗಿದ್ದ ಕಲಾಸಿಪಾಳ್ಯ ಸಿನಿಮಾವನ್ನು ಓಂ ಪ್ರಕಾಶ್ ರಾವ್ ನಿರ್ದೇಶಿಸಿದ್ದರು. ರಾಮು ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗಿತ್ತು. ಈ ಚಿತ್ರದಲ್ಲಿ ದರ್ಶನ್ ಮತ್ತು ರಕ್ಷಿತಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಆಗಿನ ಕಾಲಕ್ಕೆ ಕಲಾಸಿಪಾಳ್ಯ ಇಂಡಸ್ಟ್ರಿಯ ದೊಡ್ಡ ಹಿಟ್ ಸಿನಿಮಾಗಳ ಸಾಲಿನಲ್ಲಿ ನಿಂತಿತ್ತು. ಇದರ ಕಥೆ ಬಗ್ಗೆ ಮಾತನಾಡಿರುವ ನಿರ್ದೇಶಕ ಓಂ ಪ್ರಕಾಶ್ ರಾವ್ ಅವರು ಏಳು ಸಿನಿಮಾಗಳಿಂದ ಕದ್ದು, ಈ ಸಿನಿಮಾ ಮಾಡಿದ್ದು ಎಂದು 'ನ್ಯೂಸೋ ನ್ಯೂಸು' ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

'ಕನ್ನಡ ಪ್ರೇಕ್ಷಕರ ಪಲ್ಸ್ ಏನು ಅಂತ ತಿಳಿದುಕೊಳ್ಳದೇ ಹೋದರೆ ನಾನು ಕನ್ನಡ ಡೈರೆಕ್ಟರ್ ಆಗಿ ಏನು ಪ್ರಯೋಜನ? ಅವರು ಎಂತ ಡೈಲಾಗ್‌ಗೆ ಶಿಳ್ಳೆ, ಚಪ್ಪಾಳೆ ಹೊಡೀತಾರೆ ಅನ್ನೋದು ತಿಳಿದುಕೊಳ್ಳಬೇಕು. ಕನ್ನಡ ಇಂಡಸ್ಟ್ರಿಯಲ್ಲೇ ಮೊದಲ ಬಾರಿಗೆ "ಕಲಾಸಿಪಾಳ್ಯ" ಸಿನಿಮಾನ ಏಳು ಸಿನಿಮಾದಿಂದ ಕದ್ದು ಮಾಡಿದೆ. ಆಗ ನನಗೆ ಕೈತುಂಬಾ ಕೆಲಸ ಇತ್ತು. ಸಾಹುಕಾರ ಸಿನಿಮಾ ಮಾಡ್ತಿದ್ದೆ. ಕಥೆ ಮಾಡೋಕೆ ಸಮಯ ಸಿಗುತ್ತಿರಲಿಲ್ಲ' ಎಂದಿದ್ದಾರೆ.
'ಹುಚ್ಚ ಸಿನಿಮಾನೂ ಹೀಗೇ ಮಾಡಿದ್ದು'
'ಸುದೀಪ್ ನಟನೆಯ ಹುಚ್ಚ ಸಿನಿಮಾದಿಂದ ಆಗ ಈ ಐಡಿಯಾ ನನಗೆ ಬಂತು. ಹುಚ್ಚ ಸಿನಿಮಾ ಕೂಡ ಎರಡು ಮೂರು ಸಿನಿಮಾ ಕಥೆ ಮಿಕ್ಸ್ ಮಾಡಿ ತೆಗೆದಿದ್ದು, ಆ ಸಿನಿಮಾ ದೊಡ್ಡ ಹಿಟ್ ಆಗಿತ್ತು. ಹಾಗಾಗಿ ಕಲಾಸಿಪಾಳ್ಯ ಸಿನಿಮಾಗೂ ಹಾಗೇ ಮಾಡೋಣ ಅಂತ ಫಿಕ್ಸ್ ಆದೆ. ಈ ವಿಚಾರವನ್ನ ಯಾವ ಡೈರೆಕ್ಟರ್ ಕೂಡ ಹೇಳಲ್ಲ. ಸಿನಿಮಾ ರಿಲೀಸ್ ಆದ್ರೂ ಇದನ್ನ ಒಪ್ಪಿಕೊಳ್ಳಲ್ಲ. ಆದರೆ ನಾನು ಮಾಧ್ಯಮಗಳ ಮುಂದೆ ರಿಲೀಸ್‌ಗೂ ಮುನ್ನವೇ ಹೇಳಿದ್ದೆ. ಎಲ್ಲರೂ ಇದನ್ನು ಕೇಳಿ ಶಾಕ್ ಆಗಿದ್ರು' ಎಂದಿದ್ದಾರೆ.
'ಇದು ಬೆರಕೆ ಸೊಪ್ಪಿನ ಸಾರು, ಈ ಸಿನಿಮಾ ತುಂಬಾ ಚೆನ್ನಾಗಿರುತ್ತೆ. ಜನ ಇಷ್ಟ ಪಡ್ತಾರೆ ಅಂತ ಹೇಳಿದ್ದೆ. ಅದರಂತೆ ಸಿನಿಮಾ ಸೂಪರ್ ಡೂಪರ್ ಹಿಟ್ ಆಯ್ತು. ದರ್ಶನ್ ಹಾಗೂ ರಕ್ಷಿತ ಅವರಿಗೆ ಆ ಸಿನಿಮಾ ಸ್ಟಾರ್‌ಡಮ್ ತಂದುಕೊಡ್ತು. ಹಾಗಾಗಿ ನಾನು ಸುಳ್ಳು ಹೇಳಲ್ಲ. ಕನ್ನಡ ಇಂಡಸ್ಟ್ರಿಯಲ್ಲಿ ಜನರ ಮುಂದೆ ಹಾಗೂ ಮಾಧ್ಯಮದವರ ಮುಂದೆ ಸುಳ್ಳು ಹೇಳೋಕೆ ಇಷ್ಟ ಇಲ್ಲ' ಎಂದು ನೇರವಾಗಿ ಒಪ್ಪಿಕೊಂಡಿದ್ದಾರೆ.
'ದರ್ಶನ್ ಅವರ ಯೋಧ ಸಿನಿಮಾ ಶೂಟಿಂಗ್ ವೇಳೆ ಶ್ರೀನಿವಾಸಮೂರ್ತಿ ಅವರು ದರ್ಶನ್ ಕಪಾಳಕ್ಕೆ ಹೊಡೆಯುವ ಸೀನ್ ಇತ್ತು. ಆದರೆ ಶ್ರೀನಿವಾಸ ಮೂರ್ತಿ ಅವರು ಸುಮ್ಮನೆ ಹೊಡೆದಂತೆ ನಟಿಸಿದ್ರು. ಆಗ ದರ್ಶನ್ ಅವರೇ ಡೈರೆಕ್ಟರ್ ನನ್ನ ಸುಮ್ನೆ ಬಿಡಲ್ಲ ಅಂತ ಕೇಳಿ ಕೇಳಿ ಮೂರು ಸಲ ಕೆನ್ನೆಗೆ ಹೊಡೆಸಿಕೊಂಡ್ರು. ಕೆಲಸ ಅಂದ್ರೆ ದರ್ಶನ್‌ಗೆ ಅಷ್ಟು ಆಸಕ್ತಿ' ಎಂದು ಓಂ ಪ್ರಕಾಶ್ ರಾವ್ ಹೇಳಿದ್ದಾರೆ.
'ನಾನು ಇಂಡಸ್ಟ್ರಿ ಹಿಟ್ ಕೊಟ್ಟಿದ್ದೀನಿ ಅನ್ನೋದನ್ನ ಜನ ಹೇಳ್ತಾರೆ. ಆದ್ರೆ ಆ ಸಿನಿಮಾಗಳಲ್ಲಿ ನಟಿಸಿದ ನಟರು ಆ ಮಾತು ಹೇಳಬೇಕು. ನಮ್ಮ ಜನಗಳ ಮುಂದೆ ನಿಲ್ಲಿಸಿ ಚಪ್ಪಾಳೆ ಹೊಡೆಸಿದ್ದು ಯಾರು, ಸ್ಟಾರ್ ಮಾಡಿದ ನಿರ್ದೇಶಕ ಯಾರು ಅನ್ನೋದನ್ನು ಯೋಚನೆ ಮಾಡಬೇಕು' ಎಂದು ಬೇಸರ ಹೊರಹಾಕಿದ್ದಾರೆ.












Click it and Unblock the Notifications