ಚಿತ್ರಮಂದಿರದಲ್ಲಿ ಏಕಾಏಕಿ ದರ್ಶನ್ ಅಭಿಮಾನಿಗಳ ದಾಂಧಲೆ: ಯಾಕೆ?
ಬೆಂಗಳೂರು, ಮಾರ್ಚ್ 28: ಬಜಾರ್, ಬೈ ಟು ಲವ್, ಕೈವ ಸಿನಿಮಾಗಳ ಖ್ಯಾತಿಯ ಕನ್ನಡ ಚಿತ್ರರಂಗದ ಖ್ಯಾತ ನಟ ಧನ್ವೀರ್ ಮುಂದಿನ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಮುದ್ದು ರಾಕ್ಷಸಿ ಹಾಡಿನ ಮೂಲಕ ಸಿನಿ ಪ್ರಿಯರ ಗಮನ ಸೆಳೆದಿದ್ದ ವಾಮನ ಸಿನಿಮಾ ಏಪ್ರಿಲ್ 10ರಂದು ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಿನಿಮಾ ತಂಡ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದು, ನಿನ್ನೆಯಷ್ಟೇ ಈ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ. ಇದೀಗ ವಾಮನ ಸಿನಿಮಾದ ಟ್ರೇಲರ್ ಬಿಡುಗಡೆಯ ಸಮಯದಲ್ಲಿ ಆದ ತಪ್ಪಿನಿಂದ ಬೆಂಗಳೂರಿನ ಜನಪ್ರಿಯ ಚಿತ್ರಮಂದಿರ ಅಸ್ತವ್ಯಸ್ತಗೊಂಡಿದೆ.
ಹೌದು ನಟ ಧನ್ವೀರ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಆಪ್ತ ಸ್ನೇಹಿತರು. ಹೀಗಾಗಿ ಧನ್ವೀರ್ ಸಿನಿಮಾದ ಟ್ರೇಲರ್ ಬಿಡುಗಡೆಯನ್ನು ನಟ ದರ್ಶನ್ ಮಾಡಲಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹಬ್ಬಿತ್ತು. ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ವಾಮನ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗತ್ತು. ಈ ಹಿನ್ನೆಲೆಯಲ್ಲಿ ನೂರಾರು ದರ್ಶನ್ ಅಭಿಮಾನಿಗಳು ಪ್ರಸನ್ನ ಚಿತ್ರಮಂದಿರಕ್ಕೆ ಬಂದಿದ್ದರು.

ವಾಮನ ಸಿನಿಮಾಗೆ ಬೆಂಬಲ ನೀಡಿರುವ ದರ್ಶನ್ ಆನ್ಲೈನ್ ಮೂಲಕ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ದರ್ಶನ್ ಟ್ರೇಲರ್ ಬಿಡುಗಡೆ ಮಾಡುವ ವಿಡಿಯೋವನ್ನು ಪ್ರಸನ್ನ ಥಿಯೇಟರ್‌ನಲ್ಲಿ ಪ್ರದರ್ಶಿಸಲಾಯಿತು. ಈ ವೇಳೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ದರ್ಶನ್ ಅಭಿಮಾನಿಗಳು ಅತಿರೇಕದ ವರ್ತನೆ ತೋರಿದ್ದು, ಕುರ್ಚಿ, ಕಿಟಕಿ, ಬಾಗಿಲು ಸೇರಿದಂತೆ ಚಿತ್ರಮಂದಿರದ ಸಿಕ್ಕ ಸಿಕ್ಕ ವಸ್ತುಗಳನ್ನು ಒಡೆದು ಹಾಕಿದ್ದಾರೆ. ಅಲ್ಲದೇ ಚಿತ್ರಮಂದಿರದ ಸೆಕೆಂಡ್ ಕ್ಲಾಸ್ನಲ್ಲಿರುವ 80 ಸೀಟ್ ಹಾಗೂ ಬಾಲ್ಕನಿಯಲ್ಲಿರುವ 10 ಸೀಟ್ಗಳನ್ನು ಮುರಿದುಹಾಕಿದ್ದಾರೆ.
ದರ್ಶನ್ ಅಭಿಮಾನಿಗಳ ಈ ಹುಚ್ಚಾಟಕ್ಕೆ ಚಿತ್ರಮಂದಿರದ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದು, 'ವಾಮನ ಸಿನಿಮಾ ಟ್ರೇಲರ್ ಬಿಡುಗಡೆ ವೇಳೆ ದರ್ಶನ್ ಅಭಿಮಾನಿಗಳು ದಾಂಧಲೆ ಮಾಡಿದ್ದು, ಸೀಟ್ಗಳನ್ನು ಮುರಿದು ಹಾಕಿದ್ದಾರೆ. ಶುಕ್ರವಾರ ಹೊಸ ಸಿನಿಮಾ ಬಿಡುಗಡೆ ಇದೆ. ಈ ಅವಸ್ಥೆಯಲ್ಲಿ ಸಿನಿಮಾ ಬಿಡುಗಡೆಗೆ ನಾವು ಚಿತ್ರಮಂದಿರವನ್ನು ಹೇಗೆ ಕೊಡುವುದು' ಎಂದು ಅಸಮಾಧಾನ ಹೊರಹಾಕಿದ್ದಾರೆ.

ದರ್ಶನ್ ಅಭಿಮಾನಿಗಳ ಈ ಅತಿರೇಕದ ವರ್ತನೆಯಿಂದ ಲಕ್ಷಾಂತರ ರೂಪಾಯಿ ವಸ್ತುಗಳಿಗೆ ಹಾನಿಯಾಗಿದೆ. ಒಟ್ಟಾರೆಯಾಗಿ ವಾಮನ ಸಿನಿಮಾದ ಟ್ರೇಲರ್ ಬಿಡುಗಡೆ ಅವಕಾಶ ಮಾಡಿಕೊಟ್ಟು ಪ್ರಸನ್ನ ಚಿತ್ರಮಂದಿರದ ಮಾಲೀಕರು ನಷ್ಟ ಅನುಭವಿಸುವಂತಾಗಿದ್ದು, ಈ ನಷ್ಟವನ್ನು ಯಾರು ಭರಿಸುತ್ತಾರೆ ಎನ್ನುವುದೇ ಸದ್ಯದ ಪ್ರಶ್ನೆಯಾಗಿದೆ.












Click it and Unblock the Notifications