Dhruva Sarja: ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಧ್ರುವ ಸರ್ಜಾ ಹೇಳಿದ್ದೇನು?
ಧ್ರುವ ಸರ್ಜಾ ಅವರ ಬಹು ನಿರೀಕ್ಷಿತ ಮಾರ್ಟಿನ್ ಸಿನಿಮಾ ಬಿಡುಗಡೆಯಾಗಿದ್ದು ಉತ್ತಮ ಪ್ರದರ್ಶನ ಕಾಣುತ್ತಿದೆ. ಮೂರು ವರ್ಷಗಳ ಬಳಿಕ ಧ್ರುವ ಸರ್ಜಾ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ಮಾರ್ಟಿನ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾದರೂ, ಕಲೆಕ್ಷನ್ ಚನ್ನಾಗಿದೆ ಎನ್ನಲಾಗುತ್ತಿದೆ. ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಪ್ರಚಾರದ ವೇಳೆ ಟಿವಿ9ಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ತೂಗುದೀಪ ಜೊತೆಗಿನ ಮನಸ್ತಾಪದ ಬಗ್ಗೆ ಕೂಡ ಮಾತನಾಡಿದ್ದಾರೆ.
ದರ್ಶನ್ ಮತ್ತು ಧ್ರುವ ಸರ್ಜಾ ನಡುವೆ ಮೊದಲು ಉತ್ತಮ ಬಾಂಧವ್ಯ ಇತ್ತು. ಧ್ರುವ ಸರ್ಜಾ ಅವರ ಸಿನಿಮಾಗೆ ದರ್ಶನ್ ಕೂಡ ಬೆಂಬಲ ಕೊಡುತ್ತಿದ್ದರು. ಅರ್ಜುನ್ ಸರ್ಜಾ ನಿರ್ದೇಶನ ಮಾಡಿದ್ದ ಪ್ರೇಮ ಬರಹ ಸಿನಿಮಾದಲ್ಲಿ ದರ್ಶನ್ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು. ಸರ್ಜಾ ಫ್ಯಾಮಿಲಿ ಜೊತೆ ದರ್ಶನ್ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ ಅದ್ಯಾಕೋ ಇದ್ದಕ್ಕಿದ್ದಂತೆ ಇಬ್ಬರ ನಡುವೆ ಶುರುವಾಗಿತ್ತು. ಒಮ್ಮೆ ಕಾವೇರಿ ಗಲಾಟೆ ಸಂದರ್ಭದಲ್ಲಿ ಕನ್ನಡ ಚಿತ್ರರಂಗ ಪ್ರತಿಭಟನೆ ನಡೆಸುವಾಗ ದರ್ಶನ್ ವೇದಿಕೆಗೆ ಬರುತ್ತಿದ್ದಂತೆ, ಧ್ರುವ ಸರ್ಜಾ ವೇದಿಕೆಯಿಂದ ಹೊರನಡೆದಿದ್ದರು. ಇದರಿಂದ ಇಬ್ಬರ ನಡುವೆ ಏನೂ ಸರಿಯಿಲ್ಲ ಎನ್ನುವುದು ಧೃಡವಾಗಿತ್ತು.

ಇದೀಗ ಟಿವಿ9 ವಾಹಿನಿಗೆ ನೀಡಿದ ಸಂದರ್ಶನದಲ್ಲಿ ದರ್ಶನ್ ಜೊತೆಗಿನ ಮನಸ್ತಾಪದ ಬಗ್ಗೆ ಮಾತನಾಡಿದ್ದಾರೆ. ಇಬ್ಬರ ನಡುವೆ ಮನಸ್ತಾಪಕ್ಕೆ ಕಾರಣ ಏನು ಎಂದು ಬಿಟ್ಟುಕೊಟ್ಟಿಲ್ಲವಾದರೂ, ಇಬ್ಬರ ನಡುವೆ ಏನೋ ಗಂಭೀರವಾದ ಸಮಸ್ಯೆಯೇ ಇದೆ ಎನ್ನುವುದು ಮಾತ್ರ ಅರ್ಥವಾಗಿದೆ.
ಧ್ರುವ ಸರ್ಜಾ ಹೇಳಿದ್ದೇನು?
ಮನಸ್ತಾಪ ಯಾಕೆ ಎನ್ನುವ ಕಾರಣ ಹೇಳುವುದಿದ್ದರೆ ಎಂದೋ ಹೇಳಿರುತ್ತಿದ್ದೆ. ಇದು ಸರಿ ಹೋಗಬಹುದು, ಹೋಗದೆಯೂ ಇರಬಹುದು. ಆದರೆ ನಾನು ಆ ವಿಚಾರವನ್ನು ಬಹಿರಂಗಪಡಿಸಲ್ಲ. ಅದನ್ನೆಲ್ಲಾ ಹೊರಗಡೆ ಹೇಳಿದರೆ ನಾವು ಬಿಟ್ಟುಕೊಟ್ಟಂತೆ ಆಗುತ್ತದೆ. ನಾನು ಅಂತಹ ಕೆಟಗೆರಿಗೆ ಸೇರಿಲ್ಲ. ಯಾರೋ ನೋಡುತ್ತಾರೆ ಎಂದು ನಾಟಕೀಯವಾಗಿ ಇರಲು ನನಗೆ ಬರಲ್ಲ, ಎರಡರ ಮಧ್ಯೆ ಇರೋಕೆ ಬರಲ್ಲ ಎಂದು ಹೇಳಿದ್ದಾರೆ.
ಫಿಲ್ಮಿಬೀಟ್ ಕನ್ನಡ ವರದಿ ಮಾಡಿರುವ ಪ್ರಕಾರ, ಅರ್ಜುನ್ ಸರ್ಜಾ ನಿರ್ದೇಶನದ 'ಪ್ರೇಮ ಬರಹ' ಸಿನಿಮಾ ಇಬ್ಬರ ನಡುವಿನ ವೈಮನಸ್ಸಿಗೆ ಕಾರಣವಾಗಿರಬಹುದು. ದರ್ಶನ್ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ 'ಪ್ರೇಮ ಬರಹ' ಸಿನಿಮಾ ವಿತರಣೆ ಹಕ್ಕು ಪಡೆದಿದ್ದರು, ಆದರೆ ಸಿನಿಮಾ ಅಂದುಕೊಂಡಂತೆ ಯಶಸ್ವಿಯಾಗದ ಕಾರಣ ನಷ್ಟ ಮಾಡಿಕೊಂಡಿದ್ದರು. ಸಾಲದ ಸುಳಿಗೆ ಸಿಲುಕಿ ಸಿನಿಮಾರಂಗದಿಂದಲೇ ದೂರವಾಗಿದ್ದರು, ದರ್ಶನ್ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದರಿಂದಲೇ ಸರ್ಜಾ ಕುಟುಂಬ ಮತ್ತು ದರ್ಶನ್ ನಡುವೆ ಕಂದಕ ಸೃಷ್ಟಿಯಾಗಿರಬಹುದು ಎನ್ನಲಾಗಿದೆ.
ಹುಟ್ಟುಹಬ್ಬದ ಕಾರ್ಯಕ್ರಮದ ವೇಳೆ ಧ್ರುವ ಸರ್ಜಾ ಅವರು, ದರ್ಶನ್ ಸಿಕ್ಕರೆ ಕೆಲವು ಪ್ರಶ್ನೆಗಳನ್ನು ಕೇಳಬೇಕು, ಅದಕ್ಕೆ ಅವರು ಉತ್ತರ ಕೊಟ್ಟರೆ ನಮಗೂ ಕ್ಲಾರಿಟಿ ಸಿಗುತ್ತದೆ, ನಮಗೂ ಸೆಲ್ಫ್ ರೆಸ್ಪೆಕ್ಟ್ ಇದೆ ಎಂದಿದ್ದರು. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಬಂಧನವಾದ ಬಳಿಕ ಪ್ರತಿಕ್ರಿಯೆ ನೀಡಿದ್ದ ಧ್ರುವ ಸರ್ಜಾ, ತನಿಖೆ ನಡೆಯಲಿ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ ಎಂದಿದ್ದರು. ಇದು ದರ್ಶನ್ ಅಭಿಮಾನಿಗಳನ್ನು ಕೆರಳಿಸಿತ್ತು. ಮಾರ್ಟಿನ್ ಸಿನಿಮಾ ಬಗ್ಗೆ ಕೆಲವು ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದು, ಅಭಿಮಾನಿಗಳ ನಡುವೆ ಸೋಷಿಯಲ್ ಮೀಡಿಯಾದಲ್ಲಿ ಮಾತಿನ ಚಕಮಕಿ ನಡೆಯುತ್ತಿದೆ.












Click it and Unblock the Notifications