ಡಾಲಿ ಧನಂಜಯ್ ಕಾಡುಮೃಗ ತಿಂದಿಲ್ಲ, ನಾನ್ ವೆಜ್ ತಿಂದಿದ್ದು ತಪ್ಪಲ್ಲ: ಡಾಗ್ ಸತೀಶ್
Dali Dhananjay non veg controversy: ನಟ ಡಾಲಿ ಧನಂಜಯ್ ಅವರು ಮಾಂಸಾಹಾರ ಸೇವಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, "ಲಿಂಗಾಯತರಾಗಿ ಚಿಕನ್ ತಿನ್ನಬಹುದೇ?" ಎಂಬ ಪ್ರಶ್ನೆ ಮುಂದಿಟ್ಟು ಪರ-ವಿರೋಧದ ಚರ್ಚೆ ತೀವ್ರಗೊಂಡಿದೆ. ಈ ವಿವಾದದ ನಡುವೆಯೇ ಬಿಗ್‌ಬಾಸ್ ಕನ್ನಡ ಸೀಸನ್-12ರ ಮಾಜಿ ಸ್ಪರ್ಧಿ ಸತೀಶ್ ಕ್ಯಾಡಬಾಮ್ಸ್ (ಡಾಗ್ ಸತೀಶ್) ಬಹಿರಂಗವಾಗಿ ಡಾಲಿ ಧನಂಜಯ್ ಅವರ ಬೆಂಬಲಕ್ಕೆ ನಿಂತಿದ್ದು, ಆಹಾರ ಮತ್ತು ಜಾತಿಯನ್ನು ಜೋಡಿಸುವ ಮನೋಭಾವದ ವಿರುದ್ಧ ಕಟುವಾಗಿ ಪ್ರತಿಕ್ರಿಯಿಸಿದ್ದಾರೆ.
ಡಾಲಿ ವಿಷ ತಿಂದಿಲ್ಲ
ಡಾಲಿ ಧನಂಜಯ್ ಮಾಡಿದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಡಾಗ್ ಸತೀಶ್, ನಾನ್‌ವೆಜ್ ತಿನ್ನುವುದು ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಅಭಿಪ್ರಾಯಪಟ್ಟಿದ್ದಾರೆ. "ಅವರು ವಿಷ ತಿಂದರಾ? ಅಥವಾ ಕಾನೂನುಬಾಹಿರವಾದ ಕಾಡು ಮೃಗವನ್ನು ತಿಂದರಾ? ಅಂತಹದೇನೂ ಇಲ್ಲ. ಸಾಮಾನ್ಯವಾಗಿ ಮಾಂಸಾಹಾರ ಸೇವಿಸಿದ್ದಾರೆ. ಅದರಲ್ಲಿ ತಪ್ಪೇನಿದೆ?" ಎಂದು ಪ್ರಶ್ನಿಸಿರುವ ಅವರು, ಆಹಾರ ಪದ್ಧತಿಯನ್ನು ಆಧರಿಸಿ ವ್ಯಕ್ತಿಯನ್ನು ಅಥವಾ ಜಾತಿಯನ್ನು ತೀರ್ಮಾನಿಸುವುದು ತಪ್ಪು ಎಂಬುದನ್ನು ಒತ್ತಿ ಹೇಳಿದ್ದಾರೆ.

ಇದಲ್ಲದೆ, ಸಮಾಜದಲ್ಲಿ ವಾಸ್ತವ ಸ್ಥಿತಿ ಹೇಗಿದೆ ಎಂಬುದನ್ನೂ ಉದಾಹರಣೆ ಸಹಿತವಾಗಿ ವಿವರಿಸಿರುವ ಡಾಗ್ ಸತೀಶ್, ಬೆಂಗಳೂರಿನ ರಿಚ್‌ಮಂಡ್ ಸರ್ಕಲ್ ಬಳಿ ಇರುವ ಫೇಮಸ್ 'ಫನೂಸ್' ಹೋಟೆಲ್‌ಗೆ ಸಂಜೆ ವೇಳೆಗೆ ಹೋಗಿ ನೋಡಿದ್ರೆ, ಬ್ರಾಹ್ಮಣರು ಹಾಗೂ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಇದು ಆಹಾರ ಮತ್ತು ಜಾತಿಯ ನಡುವೆ ನೇರ ಸಂಬಂಧವಿಲ್ಲ ಎಂಬುದಕ್ಕೆ ಸ್ಪಷ್ಟ ಉದಾಹರಣೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಡಾಲಿ ಧನಂಜಯ್ ಅವರ ಮಾಂಸಾಹಾರ ಸೇವನೆಯನ್ನು ಕೇಂದ್ರವಾಗಿಸಿಕೊಂಡು ನಡೆಯುತ್ತಿರುವ ಈ ಚರ್ಚೆಯು, ಕೇವಲ ಒಬ್ಬ ನಟನ ವಿಚಾರಕ್ಕೆ ಸೀಮಿತವಾಗದೆ, ವೈಯಕ್ತಿಕ ಸ್ವಾತಂತ್ರ್ಯ, ಆಹಾರ ಆಯ್ಕೆ ಮತ್ತು ಜಾತಿ ಗುರುತುಗಳ ನಡುವಿನ ಸಂಘರ್ಷವನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತಂದಿದೆ. ಡಾಗ್ ಸತೀಶ್ ಅವರ ಹೇಳಿಕೆಗಳು, ಆಹಾರವನ್ನು ವೈಯಕ್ತಿಕ ವಿಷಯವಾಗಿ ನೋಡುವ ಅಗತ್ಯವಿದೆ ಎಂಬ ಸಂದೇಶ ಗಮನ ಸೆಳೆದಿದೆ. ಡಾಗ್ ಸತೀಶ್ ಅವರ ಮಾತು ನಿಜಕ್ಕೂ ಒಪ್ಪುವಂತದ್ದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಖಾಸಗಿ ಯೂಟ್ಯೂಬ್ ಚಾನಲ್ ಸಂದರ್ಶನವೊಂದರಲ್ಲಿ ಸತೀಶ್ ಈ ಮಾತುಗಳನ್ನಾಡಿದ್ದು, ವಿಡಿಯೋ ವೈರಲ್ ಆಗಿದೆ.
ಆಹಾರ ಪದ್ಧತಿಯನ್ನು ಜಾತಿಯೊಂದಿಗೆ ಜೋಡಿಸುವ ಮನೋಭಾವವನ್ನೂ ಡಾಗ್ ಸತೀಶ್ ಕಟುವಾಗಿ ಖಂಡಿಸಿದ್ದಾರೆ. "ಲಿಂಗಾಯತರೇ ಆಗಿರಲಿ, ಬ್ರಾಹ್ಮಣರೇ ಆಗಿರಲಿ - ತಿನ್ನುವ ಆಹಾರ ಅವರವರ ವೈಯಕ್ತಿಕ ವಿಚಾರ. ಅದನ್ನು ಆಧರಿಸಿ ವ್ಯಕ್ತಿಯ ನಂಬಿಕೆ, ಸಂಸ್ಕೃತಿ ಅಥವಾ ಧರ್ಮವನ್ನು ಅಳೆಯುವುದು ಸರಿಯಲ್ಲ" ಎಂದು ಹೇಳಿದ್ದಾರೆ. ನಟರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿರುವುದು ದುಃಖಕರ ಎಂದಿದ್ದಾರೆ.
ಈ ವಿವಾದದ ಹಿನ್ನೆಲೆಯಲ್ಲಿ ಅನೇಕರು ಡಾಲಿ ಧನಂಜಯ್ ಅವರ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಧ್ವನಿ ಎತ್ತಿದ್ದು, ಆಹಾರ ಮತ್ತು ಜಾತಿಯನ್ನು ಬೇರ್ಪಡಿಸಿ ನೋಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಕೆಲವರು ಪರಂಪರೆ ಮತ್ತು ನಂಬಿಕೆಗಳ ಹೆಸರಿನಲ್ಲಿ ಟೀಕೆ ಮುಂದುವರಿಸಿದ್ದು, ಈ ಚರ್ಚೆ ಇನ್ನೂ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ.












Click it and Unblock the Notifications