Darshan Thoogudeepa: ದರ್ಶನ್‌ಗೆ ಸಿಹಿ ಸುದ್ದಿ ಕೊಟ್ಟ ಕೋರ್ಟ್
ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ತೂಗುದೀಪ ಜಾಮೀನಿನ ಮೇಲೆ ಹೊರಗಡೆ ಇದ್ದಾರೆ. ಆರಂಭದಲ್ಲಿ ದರ್ಶನ್‌ಗೆ ಮೈಸೂರಿಗೆ ತೆರಳಲು ಕೋರ್ಟ್ ಅನುಮತಿ ಕೊಟ್ಟಿರಲಿಲ್ಲ, ಬಳಿಕ ಅವರಿ ಮೈಸೂರಿಗೆ ತೆರಳಲು ಅನುಮತಿ ನೀಡಿತ್ತು. ಈಗ ಕೋರ್ಟ್ ದರ್ಶನ್‌ಗೆ ಮೈಸೂರಿಗೆ ತೆರಳಲು ನೀಡಿದ್ದ ಅನುಮತಿಯನ್ನು ವಿಸ್ತರಣೆ ಮಾಡಿದೆ.
ದರ್ಶನ್ ಮೈಸೂರು ಜಿಲ್ಲೆಗೆ ತೆರಳಲು ಇದ್ದ ಅವಕಾಶವನ್ನು ಫೆಬ್ರವರಿ 10ರವರೆಗೆ ವಿಸ್ತರಣೆ ಮಾಡಿ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯ ಆದೇಶ ನೀಡಿದೆ. ಬಳ್ಳಾರಿ ಜೈಲಿನಲ್ಲಿರುವಾಗಲೇ ಬೆನ್ನು ನೋವಿನಿಂದ ಬಳಲುತ್ತಿದ್ದ ನಟ ದರ್ಶನ್ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ ಎಂದು ಮಧ್ಯಂತರ ಜಾಮೀನು ಪಡೆದಿದ್ದರು.

ಆದರೆ ಬೆಂಗಳೂರಿನಲ್ಲೇ ಚಿಕಿತ್ಸೆ ಪಡೆಯುವಂತೆ ಷರತ್ತಿ ವಿಧಿಸಿದ್ದ ಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು, ಬಳ್ಳಾರಿ ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ದರ್ಶನ್ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಹೈಕೋರ್ಟ್ ದರ್ಶನ್‌ಗೆ ನಿಯಮಿತ ಜಾಮೀನು ನೀಡಿತ್ತು.
ಮೈಸೂರು ಜಿಲ್ಲೆಯಲ್ಲಿ ಚಿಕಿತ್ಸೆ ಪಡೆಯುವುದಾಗಿ ಹೇಳಿದ್ದ ದರ್ಶನ್ ಮೈಸೂರು ಜಿಲ್ಲೆಗೆ ತೆರಳಲು ಕೋರ್ಟ್‌ನಿಂದ ಅನುಮತಿ ಪಡೆದಿದ್ದರು. ಕೋರ್ಟ್ ನೀಡಿದ್ದ ಅವಧಿ ಮುಗಿಯುತ್ತಾ ಬಂದಿದ್ದರೂ ಇನ್ನೂ ಚಿಕಿತ್ಸೆ ಮುಗಿಯದ ಕಾರಣ ಮೈಸೂರಿಗೆ ತೆರಳಲು ಇರುವ ಅನುಮತಿಯನ್ನು ವಿಸ್ತರಿಸುವಂತೆ ಕೋರಿ ದರ್ಶನ್ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅರ್ಜಿದಾರರ ಮನವಿಯನ್ನು ಪುರಸ್ಕರಿಸಿರುವ ಕೋರ್ಟ್ ಫೆಬ್ರವರಿ 10ರವರೆಗೆ ವಿಸ್ತರಣೆ ಮಾಡಿದೆ.
ಸಿನಿಮಾ ಶೂಟಿಂಗ್ ಯಾವಾಗ?
ಬೆನ್ನು ನೋವಿನಿಂದ ಬಳಲುತ್ತಿರುವ ನಟ ದರ್ಶನ್ ಈಗ ಚಿಕಿತ್ಸೆ ಪಡೆಯುತ್ತಿದ್ದು, ಅವರು ಚೇತರಿಸಿಕೊಂಡ ಬಳಿಕ ಡೆವಿಲ್ ಸಿನಿಮಾ ಶೂಟಿಂಗ್ ಆರಂಭವಾಗುವ ಸಾಧ್ಯತೆ ಇದೆ. ಡೆವಿಲ್ ಸಿನಿಮಾ ಶೂಟಿಂಗ್ ಮಾಡುವ ಸಂದರ್ಭದಲ್ಲೇ ನಟ ದರ್ಶನ್‌ರನ್ನು ಮೈಸೂರಿನಲ್ಲಿ ಬಂಧಿಸಲಾಗಿತ್ತು.
ಸಿನಿಮಾದ ಶೂಟಿಂಗ್ ಅರ್ಧಕ್ಕೆ ನಿಂತಿದ್ದು ಕೋಟಿ ಕೋಟಿ ಬಂಡವಾಳ ಹಾಕಿದ್ದ ನಿರ್ಮಾಪಕರು ನಷ್ಟದ ಭೀತಿಯಲ್ಲಿದ್ದರು. ಆದರೆ ದರ್ಶನ್‌ಗೆ ಜಾಮೀನು ಸಿಕ್ಕ ಬಳಿಕ ನಿರಾಳರಾಗಿದ್ದು ಸಿನಿಮಾ ಶೂಟಿಂಗ್ ಆರಂಭಿಸಲು ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಡೆವಿಲ್ ಸಿನಿಮಾದ ಬಹುತೇಕ ಶೂಟಿಂಗ್ ಬೆಂಗಳೂರು ಮತ್ತು ಮೈಸೂರಿನಲ್ಲಿ ನಡೆಯುವುದರಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಚಿತ್ರತಂಡ ನಿರೀಕ್ಷೆ ಮಾಡಿದೆ. ಕಾಟೇರ ಸಿನಿಮಾ ಭರ್ಜರಿ ಯಶಸ್ಸು ಕಂಡ ಬಳಿಕ ಡೆವಿಲ್ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಿದೆ. ದೊಡ್ಡ ಪರದೆಯ ಮೇಲೆ ಮತ್ತೊಮ್ಮೆ ದರ್ಶನ್‌ರನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications