'ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ': ಆ ನಟಿಯ ಬಗ್ಗೆ ಚಂದನ್ ಶೆಟ್ಟಿ ಸ್ಪಷ್ಟನೆ
ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಡಿವೋರ್ಸ್ ವಿಚಾರದಲ್ಲಿ ಅನೇಕ ಗಾಸಿಪ್‌ಗಳು ಕೇಳಿ ಬಂದಿದ್ದವು. ಆದರೆ ವಿಚ್ಛೇದನ ಪಡೆದುಕೊಂಡು ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ದೂರಾದ ಬಳಿಕ ನಟಿ ಸಂಜನಾ ಆನಂದ್ ಜೊತೆ ಚಂದನ್ ಶೆಟ್ಟಿ ಹೆಸರು ತಳುಕು ಹಾಕಿಕೊಂಡಿತ್ತು.
ಅಲ್ಲದೇ ಈ ನಟಿಯ ಜೊತೆಗೆ ಚಂದನ್ ಶೆಟ್ಟಿ ಮದುವೆಯಾಗಲು ಸಿದ್ಧರಾಗಿದ್ದಾರೆ ಎನ್ನುವ ಕೆಲವು ಪೋಸ್ಟ್‌ಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಈ ಬಗ್ಗೆ ಈ ಹಿಂದೆ ಸಂಜನಾ ಆನಂದ್ ಅನೇಕ ಬಾರಿ ಸ್ಪಷ್ಟನೆ ನೀಡಿದ್ದರು. ಇದೀಗ ಮೊದಲ ಬಾರಿಗೆ ಚಂದನ್ ಶೆಟ್ಟಿ ಈ ಬಗ್ಗೆ ಮಾತನಾಡಿದ್ದಾರೆ.

ಟಿವಿ 9 ಕನ್ನಡದ ಜೊತೆ ಮಾತನಾಡಿದ ಅವರು, 'ಇದು ತುಂಬಾ ದೊಡ್ಡ ಗಾಸಿಪ್ ಆಗಿತ್ತು. ಚಂದನ್ ಶೆಟ್ಟಿ ಹಾಗೂ ಸಂಜನಾ ಆನಂದ್ ಮದುವೆ ಆಗುತ್ತಿದ್ದಾರೆ ಅಂತಾ ತುಂಬಾ ಯೂಟ್ಯೂಬ್ ವಿಡಿಯೋಗಳು ಕೂಡ ಇದೆ. ನಮ್ಮ ಕುಟುಂಬದವರೆಲ್ಲಾ ನಮಗೆ ಕಾಲ್ ಮಾಡಲು ಶುರು ಮಾಡಿದರು. ಸಂಜನಾ ಅವರಿಗೂ ನಾನು ಕಾಲ್ ಮಾಡಿ ಮಾತನಾಡಿದ್ದೆ. ಈ ರೀತಿ ಗಾಸಿಪ್ ಬರುತ್ತಿದೆ ಅಂತಾ. ಅವರು ಕೂಡ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿ ಸ್ಪಷ್ಟನೆ ಕೊಟ್ಟಿದ್ದರು. ಈ ಬಗ್ಗೆ ಸ್ಪಷ್ಟನೆ ಕೊಟ್ಟರೂ ಗಾಸಿಪ್‌ಗಳು ನಿಲ್ಲುತ್ತಿಲ್ಲ. ನನಗೂ ತುಂಬಾ ಕಾಲ್ ಬರಲು ಶುರುವಾಯ್ತು. ಹೀಗಾಗಿ ಇದಕ್ಕೆ ಪೂರ್ಣ ವಿರಾಮ ಹಾಕೋಣ ಅಂತಾ ಸ್ಪಷ್ಟನೆ ನೀಡಿದ್ದೇನೆ' ಎಂದರು.
'ಸಾಮಾಜಿಕ ಬದುಕಿನಲ್ಲಿ ಇರುವವರಿಗೆ ಗಾಸಿಪ್ ಎನ್ನುವುದು ಸಾಮಾನ್ಯ. ಅಲ್ಲದೇ ಈ ರೀತಿಯ ಸಂದರ್ಭ ಬರುವುದು ಕೂಡ ಸಾಮಾನ್ಯ. ಯಾರೋ ಒಂದು ನಟ ನಟಿ ಒಟ್ಟಿಗೆ ಕಾಣಿಸಿಕೊಂಡಾಗ ಅವರ ಮಧ್ಯೆ ಸಂಬಂಧ ಕಲ್ಪಿಸುವುದು, ಅವರು ಲವ್‌ನಲ್ಲಿ ಇದ್ದಾರೆ, ಅವರು ಮದುವೆಯಾಗುತ್ತಿದ್ದಾರೆ ಎನ್ನುವುದು ಸಾಮಾನ್ಯ. ಹೀಗಾಗಿ ನಾನು ಈ ಗಾಸಿಪ್‌ಗಳಿಗೆ ಸ್ಪಷ್ಟನೆ ಕೊಡುತ್ತಿದ್ದೇನೆ' ಎಂದು ಹೇಳಿದರು.

ಕಾಟನ್ ಕ್ಯಾಂಡಿ ಹಾಡಿನ ನಟಿಯ ಬಗ್ಗೆ ಬಂದ ಗಾಸಿಪ್ ಬಗ್ಗೆ ಪ್ರತಿಕ್ರಿಯಿಸಿದ ಅವರು, 'ಕಾಟನ್ ಕ್ಯಾಂಡಿ ಹಾಡಿನ ನಟಿ ಸುಶ್ಮಿತಾ ಗೋಪಿನಾಥ ಅವರು ನನಗೆ ಒಬ್ಬ ಸಹ ನಟಿ ಅಷ್ಟೇ. ಕಾಟನ್ ಕ್ಯಾಂಡಿ ಹಾಡಿನಲ್ಲಿ ತುಂಬಾ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಆ ಹಾಡಿಗೆ ಅವರು ಒಂದು ಬೆಲೆ ತಂದುಕೊಟ್ಟಿದ್ದಾರೆ. ಜೊತೆಗೆ ಆ ಹಾಡಿನಿಂದ ಅವರಿಗೆ ಸಾಕಷ್ಟು ಅವಕಾಶಗಳು ಬರುತ್ತಿದೆ. ಅದರ ಬಗ್ಗೆ ನನಗೆ ಖುಷಿ ಇದೆ. ನನಗೂ ಅವರಿಗೂ ಯಾವುದೇ ಸಂಬಂಧ ಇಲ್ಲ. ನಾವು ಕಲಾವಿದರಷ್ಟೇ. ಅವರ ಕೆಲಸ ಅವರು ಮಾಡಿ ಹೋಗಿದ್ದಾರೆ ಅಷ್ಟೇ' ಎಂದರು.
ಇನ್ನು ನಿವೇದಿತಾ ಗೌಡ ಜೊತೆಗಿನ ಸಂಬಂಧದ ಬಗ್ಗೆ ಮಾತನಾಡಿದ ಚಂದನ್ ಶೆಟ್ಟಿ, 'ನಮ್ಮಿಬ್ಬರ ಮಧ್ಯೆ ಪ್ರೀತಿ ಏನೂ ಇಲ್ಲ. ಹಾಗೇನಾದರೂ ಇದ್ದಿದ್ದರೆ ಅವರೇ ಹೇಳುತ್ತಿದ್ದರು. ಅವರು ಮುದ್ದು ರಾಕ್ಷಸಿ ಸಿನಿಮಾ ಮುಗಿಯಿತು ಅಂತಾ ಎಮೋಷನಲ್ ಆಗಿ ಕಣ್ಣೀರು ಹಾಕಿದರು ಅಷ್ಟೇ' ಎಂದು ಸ್ಪಷ್ಟನೆ ನೀಡಿದರು.












Click it and Unblock the Notifications