Bigg Boss: 'ಟ್ಯೂಷನ್'ಗೆ ಬರ್ಲಾ ಎಂದು ಕೇಳಿದ ಮಂಜು ತಲೆಗೆ ಬಾಟಲ್‌ನಿಂದ ಹೊಡೆದ ಮೋಕ್ಷಿತಾ...
ಬಿಗ್‌ಬಾಸ್ ಮನೆಯಲ್ಲಿ ಈಗ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ. ಈ ಬಾರಿಯ ನಾಮಿನೇಷನ್ ಪ್ರಕ್ರಿಯೆ ತುಂಬಾ ವಿಚಿತ್ರವಾಗಿದೆ. ಮನೆಯ ಸದಸ್ಯರು ತಲೆಗೆ ಗಾಜಿನ ಬಾಟಲಿ ಹೊಡೆಯುವ ಮೂಲಕ ಮನೆಯಲ್ಲಿ ಇರಲು ಅರ್ಹರಲ್ಲದ ಸ್ಪರ್ಧಿಗಳನ್ನು ನಾಮಿನೆಟ್ ಮಾಡಬೇಕು. ಜೊತೆಗೆ ನಾಮಿನೆಟ್ ಮಾಡಲು ಸೂಕ್ತ ಕಾರಣಗಳನ್ನು ನೀಡಬೇಕು. ಈ ಪ್ರೋಮೋ ಇಂದು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ನಾಮಿನೇಷನ್ ವೇಳೆ ಮೋಕ್ಷಿತಾ ಪೈ ಹಾಗೂ ಮಂಜು ನಡುವೆ ಜೋರು ಗಲಾಟೆಯಾಗಿದೆ.
ಹೌದು... ಬಿಗ್‌ಬಾಸ್ ಮನೆಗೆ ಆಗಮಿಸಿದ ಆರಂಭದಲ್ಲಿ ಉಗ್ರಂ ಮಂಜು, ಮೋಕ್ಷಿತಾ ಪೈ ಹಾಗೂ ಗೌತಮಿ ತುಂಬಾ ಒಳ್ಳೆಯ ಸ್ನೇಹಿತರು. ಒಬ್ಬರನ್ನೊಬ್ಬರು ಯಾವತ್ತೂ ಕೂಡ ಬಿಟ್ಟು ಕೊಡುತ್ತಿರಲಿಲ್ಲ. ಆದರೆ ಈ ಹಿಂದೆ ಬಿಗ್‌ಬಾಸ್ ನೀಡಿದ ಮಹಾರಾಜ ಟಾಸ್ಕ್‌ನಲ್ಲಿ ಮೋಕ್ಷಿತಾ ಹಾಗೂ ಮಂಜು ನಡುವೆ ಮನಸ್ತಾಪ ಚುಗುರು ಒಡೆಯಿತು.

ನಂತರ ಕ್ಯಾಪ್ಟನ್ ಆದ ಬಳಿಕ ಗೌತಮಿ ಅವರು ಮಂಜು ಜೊತೆ ಅಂತರ ಕಾಯ್ದುಕೊಂಡರು. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಒಂದಾಗಿದ್ದ ಸ್ನೇಹಿತರು ಒಡೆದ ಕನ್ನಡಿಯಂತಾಗಿದ್ದಾರೆ. ಬೂದಿ ಮುಚ್ಚಿದ ಕೆಂಡಂದಂತಿದ್ದ ಮೋಕ್ಷಿತಾ ಹಾಗೂ ಮಂಜು ನಡುವಿನ ಕೋಪ ಇಂದು ಸ್ಪೋಟಗೊಂಡಿದೆ. ಹಾಗಾದರೆ ಮೋಕ್ಷಿತಾ ವಿರುದ್ಧ ಮಂಜು ಸಿಡಿದೆದ್ದಿದ್ದು ಯಾಕೆ?
ಮೋಕ್ಷಿತಾಗೆ 'ಟ್ಯೂಷನ್'ಗೆ ಬರ್ಲಾ ಎಂದು ಕೇಳಿದ ಮಂಜು
ಮೋಕ್ಷಿತಾ ನಾಮಿನೇಷನ್ ಮಾಡುವಾಗ ಮಂಜು ಅವರನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ನೀಡಿದ ಮೋಕ್ಷಿತಾ, 'ಮಂಜಣ್ಣ ಅವರು ಬಿಗ್‌ಬಾಸ್ ಮನೆಯಲ್ಲಿ ಅಷ್ಟಾಗಿ ಕಾಣಿಸಿಕೊಂಡಿಲ್ಲ' ಎಂದು ಹೇಳುತ್ತಾರೆ. ಇದಕ್ಕೆ ಪ್ರತಿಯುತ್ತರ ನೀಡಿದ ಮಂಜು ಅವರು, 'ಮನೆಯಲ್ಲಿ ಹೇಗೆ ಕಾಣಿಸಿಕೊಳ್ಳಬೇಕು ಅಂತ ನಾಳೆಯಿಂದ ಟ್ಯೂಷನ್‌ಗೆ ಬರುತ್ತೇನೆ' ಎಂದು ಹೇಳುತ್ತಾರೆ. ಕ್ಷುಲ್ಲಕ ಕಾರಣಗಳಿಗೆ ನಾಮಿನೇಷನ್ ಮಾಡಿದರೆ ನಾನು ಒಪ್ಪಲ್ಲ ಎಂದು ಮಂಜು ಮೋಕ್ಷಿತಾ ಅವರೊಂದಿಗೆ ವಾದಕ್ಕೆ ಇಳಿಯುತ್ತಾರೆ. ಈ ವೇಳೆ ಮೋಕ್ಷಿತಾ ಕೂಡ ಧ್ವನಿ ಏರಿಸಿ ಮಾತನಾಡುತ್ತಾರೆ.
ಆಗ ಮೋಕ್ಷಿತಾ 'ಇದು ನನ್ನ ಇಷ್ಟ. ನನ್ನ ನಾಮಿನೇಷನ್. ನಾನ್ ಯಾರನ್ನ ಬೇಕಾದ್ರೂ ನಾಮಿನೇಟ್ ಮಾಡುತ್ತೇನೆ' ಎಂದು ಮಂಜು ವಿರುದ್ಧ ಕೂಗಾಡಿ ತಲೆಗೆ ಗಾಜಿನ ಬಾಟಲಿ ಹೊಡೆಯುತ್ತಾರೆ.
ಮೋಕ್ಷಿತಾ ಟ್ಯೂಷನ್ ಮಾಡುತ್ತಿರುವ ಬಗ್ಗೆ ಮಂಜುಗೆ ಮೊದಲೇ ಗೊತ್ತಿತ್ತಾ?
ಮೋಕ್ಷಿತಾ ಅಲಿಯಾಸ್ ಐಶ್ವರ್ಯ ಅವರು ಕಿರುತೆರೆಗೆ ಆಗಮಿಸುವ ಮುನ್ನ ಈ ಹಿಂದೆ ಟ್ಯೂಷನ್ ಮಾಡುತ್ತಿದ್ದರು. ಈ ವೇಳೆ ಅವರ ಮೇಲೆ 'ಮಕ್ಕಳ ಕಳ್ಳಿ' ಆರೋಪ ಕೂಡ ಮಾಡಲಾಗುತ್ತಿದೆ. ಇಂತಹ ಹಲವಾರು ಸುದ್ದಿಗಳು ಮೋಕ್ಷಿತಾ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಮೋಕ್ಷಿತಾ ಅವರು ಮಕ್ಕಳಿಗೆ ಟ್ಯೂಷನ್ ತೆಗೆದುಕೊಳ್ಳುತ್ತಿದ್ದಾಗ ಅವರ ಬಳಿ ಟ್ಯೂಷನ್‌ಗೆ ಬರುತ್ತಿದ್ದ ಮಗುವನ್ನು ಅಪಹರಣ ಮಾಡಿಸಿದ್ದರು ಎನ್ನುವ ಆರೋಪ ಮಾಡಲಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಅವರ ಬಗ್ಗೆ ಇಂತಹ ಹಲವು ಸುದ್ದಿಗಳು ಹರಿದಾಡುತ್ತಿವೆ.
ಇದೀಗ ಉಗ್ರಂ ಮಂಜು ಅವರು ಮೋಕ್ಷಿತಾ ನಾಮಿನೇಟ್ ಮಾಡಿ ಕೊಟ್ಟ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡು 'ನಿಮ್ಮ ಬಳಿ ಟ್ಯೂಷನ್‌ಗೆ ಬರುತ್ತೇನೆ' ಎಂದು ಹೇಳಿದ್ದಾರೆ. ಮಂಜು ಅವರು ಮಾತಿನ ಭರದಲ್ಲಿ ಈ ರೀತಿ ಹೇಳಿದ್ರೋ ಅಥವಾ ಮೋಕ್ಷಿತಾ ಮೇಲಿರುವ ಆರೋಪ ಈ ಮೊದಲೇ ಮಂಜು ಅವರಿಗೆ ಗೊತ್ತಿತ್ತೋ ಗೊತ್ತಿಲ್ಲ. ಆದರೆ ಈ ಮಾತಿಗೆ ಮೋಕ್ಷಿತಾ ಕೆನ್ನೆ ಮಾತ್ರ ಕೆಂಪಾಗಿದ್ದು ಸುಳ್ಳಲ್ಲ.
ಇನ್ನೂ ವೈರಲ್ ವೀಡಿಯೋದಲ್ಲಿ ಹನುಮಂತ ಚೈತ್ರಾ ಅವರ ತಲೆಗೆ ಬಾಟಲಿ ಒಡೆದು ನಾಮಿನೇಟ್ ಮಾಡುತ್ತಾರೆ. ಇನ್ನುಳಿದ ಸ್ಪರ್ಧಿಗಳು ಯಾರನ್ನು ನಾಮಿನೇಟ್ ಮಾಡುತ್ತಾರೆ ಎಂದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ. ಒಟ್ಟಿನಲ್ಲಿ ಈ ವಾರದ ನಾಮಿನೇಟ್ ಪ್ರಕ್ರಿಯೆ ತುಂಬಾ ವಿಭಿನ್ನವಾಗಿದ್ದು ಯಾರು ಯಾರನ್ನು ನಾಮಿನೆಟ್ ಮಾಡಿದರು? ಅವರು ಕೊಟ್ಟ ಕಾರಣ ಏನು? ಸ್ಪರ್ಧಿಗಳು ನೀಡಿದ ಕಾರಣ ಸೂಕ್ತವಾಗಿತ್ತಾ? ಎಲ್ಲವೂ ವಾರದ ಕತೆ ಕಿಚ್ಚನ ಜೊತೆ ಚರ್ಚೆಯಾಗಲಿದೆ.












Click it and Unblock the Notifications