Rishab Shetty: ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ರಿಷಬ್ ಶೆಟ್ಟಿ, ಬಾಲಿವುಡ್ ಸ್ಟಾರ್ ನಿರ್ದೇಶಕ ಆಕ್ಷನ್ ಕಟ್
ಸ್ಯಾಂಡಲ್‌ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ (Rishab Shetty) ಅವರು ಕಾಂತಾರ ಚಾಪ್ಟರ್-1 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅತ್ತ ಬಾಲಿವುಡ್‌ನ ನಿರ್ದೇಶಕನ ಐತಿಹಾಸಿಕ ಸಿನಿಮಾದಲ್ಲಿ ಶಿವಾಜಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇತ್ತ ತೆಲುಗಿನಲ್ಲಿ ಪೌರಾಣಿಕ ಹನುಮಾನ್ ಪಾತ್ರವನ್ನೂ ಅವರು ಒಪ್ಪಿಕೊಂಡಿದ್ದಾರೆ. ಈಗ ಮತ್ತೊಂದು ಐತಿಹಾಸಿಕ ಸಿನಿಮಾದಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಹೊಸ ಸುದ್ದಿ ಹೊರಬಿದ್ದಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಅಶುತೋಷ್ ಗೋವರ್ಕರ್ (Ashutosh Gowariker) ಈ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದು, ಕರ್ನಾಟಕದ ಇತಿಹಾಸ ಸಾರುವ ವಿಜಯನಗರ ಸಾಮ್ರಾಜ್ಯ ಕಾಲದ ಮಹಾನ್ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಪಾತ್ರವನ್ನು ರಿಷಬ್ ನಿರ್ವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಕಾಂತಾರ ಸಿನಿಮಾ ಬಳಿಕ ರಿಷಬ್ ಅವರಿಗೆ ಬೇರೆ ಚಿತ್ರರಂಗಗಳಲ್ಲಿ ಭಾರಿ ಬೇಡಿಕೆ ಹೆಚ್ಚಾಗಿದೆ. ಸದ್ಯ ರಿಷಬ್ ಶೆಟ್ಟಿ ಮತ್ತು ಬಾಲಿವುಡ್‌ನ ಪ್ರಸಿದ್ಧ ನಿರ್ದೇಶಕ ಅಶುತೋಷ್ ಗೋವರ್ಕರ್ ಮೊದಲ ಬಾರಿಗೆ ಒಟ್ಟಿಗೆ ಬೃಹತ್ ಐತಿಹಾಸಿಕ ಚಿತ್ರಕ್ಕೆ ಕೈ ಜೋಡಿಸಿದ್ದಾರೆ. ವಿಜಯನಗರ ಸಾಮ್ರಾಜ್ಯದ ಮಹಾನ್ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಜೀವನಾಧಾರಿತ ಈ ಸಿನಿಮಾವನ್ನು ವಿಷ್ಣುವರ್ಧನ್ ಇಂಡೂರಿ ನಿರ್ಮಾಣ ಮಾಡಲಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಕೃಷ್ಣದೇವರಾಯ ಅವರ ಜೀವನ ಮತ್ತು ಕಾಲಘಟ್ಟವನ್ನು ಆಧರಿಸಿ ಈ ಐತಿಹಾಸಿಕ ಸಿನಿಮಾ ಹೊರಬರಲಿದೆ. ಈ ಸಿನಿಮಾವನ್ನು ಬಾಲಿವುಡ್‌ನ ಖ್ಯಾತ ಸಿನಿಮಾಗಳಾದ ಲಗಾನ್, ಜೋಧಾ ಅಕ್ಬರ್, ಮೋಹೆಂಜೋ ದಾರೋ ಮತ್ತು ಪಾಣಿಪತ್ ಮುಂತಾದ ಐತಿಹಾಸಿಕ ಚಿತ್ರಗಳಿಗೆ ಹೆಸರಾಗಿರುವ ಅಶುತೋಷ್ ಗೋವರ್ಕರ್ ನಿರ್ದೇಶಿಸುತ್ತಿರುವುದು ಮಹತ್ವ ಪಡೆದಿದೆ. ಈ ಸಿನಿಮಾದಲ್ಲಿ ರಿಷಬ್ ಶೆಟ್ಟಿ ಮುಖ್ಯ ಪಾತ್ರದಲ್ಲಿ ನಟಿಸಲಿದ್ದು, ಚಿತ್ರವು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಹುಭಾಷಾ ಸಿನಿಮಾ ಆಗಿ ತೆರೆಗೆ ಬರಲಿದೆ.
ಈ ಚಿತ್ರದಲ್ಲಿ ದಕ್ಷಿಣ ಮತ್ತು ಉತ್ತರ ಭಾರತದ ಪ್ರಮುಖ ನಟರು ಭಾಗವಹಿಸುವ ಸಾಧ್ಯತೆ ಇದೆ ಎಂದು ಚಿತ್ರತಂಡ ತಿಳಿಸಿದೆ. ಇನ್ನು ರಿಷಬ್ ಶೆಟ್ಟಿ ಈ ಚಿತ್ರದ ಜೊತೆಗೆ ಜೈ ಹನುಮಾನ್ ಮತ್ತು ಕಾಂತಾರ ಸರಣಿ ಚಿತ್ರಗಳಲ್ಲಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವಿಜಯನಗರ ಸಾಮ್ರಾಜ್ಯದ ವೈಭವ, ಕೃಷ್ಣದೇವರಾಯರ ಆಡಳಿತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ದೇಶಾದ್ಯಂತ ಪ್ರೇಕ್ಷಕರಿಗೆ ಪರಿಚಯಿಸುವ ಉದ್ದೇಶದಿಂದ ಈ ಮಹತ್ವಾಕಾಂಕ್ಷಿ ಚಿತ್ರ ರೂಪುಗೊಳ್ಳುತ್ತಿದೆ.
ಪಾತ್ರಕ್ಕೆ ರಿಷಬ್ ಏನಂದ್ರು?
ವಿಜಯನಗರ ಸಾಮ್ರಾಜ್ಯದ ವೈಭವ ಮತ್ತು ಕೃಷ್ಣದೇವರಾಯರ ಮಹತ್ವವನ್ನು ಸಾಂಸ್ಕೃತಿಕವಾಗಿ ಮತ್ತು ದೃಶ್ಯಾತ್ಮಕವಾಗಿ ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದೊಂದಿಗೆ ಈ ಸಿನಿಮಾವನ್ನು ಕೈಗೆತ್ತಿಕೊಳ್ಳಲಾಗಿದ್ದು, ವಿಜಯನಗರ ಸಾಮ್ರಾಜ್ಯದ ಕಾಲದ ಮಹತ್ವದ ಘಟನೆಗಳು, ಅವರ ಆಡಳಿತ, ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಾಧನೆಗಳು. ವಿಜಯನಗರ ವೈಭವ ಮತ್ತು ಶ್ರೀಕೃಷ್ಣದೇವರಾಯರ ಮಹತ್ವವನ್ನು ರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸುವ ಮಹತ್ವದ ಪ್ರಯತ್ನ ಎನ್ನಲಾಗಿದೆ. ಈಗಾಗಲೇ ರಿಷಬ್ ಈ ಪಾತ್ರ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಅಶುತೋಷ್ ಗೋವರ್ಕರ್ ಅವರ ನಿರ್ದೇಶನ ಶೈಲಿಯಲ್ಲಿ ವಾಸ್ತವಿಕತೆ, ಐತಿಹಾಸಿಕ ವಿವರಗಳ ಪರಿಶುದ್ಧತೆ ಮತ್ತು ನಿಖರ ಅಧ್ಯಯನಕ್ಕೆ ಆದ್ಯತೆ ಇದೆ. ಇದರಿಂದ ಚಿತ್ರದಲ್ಲಿ ನೈಜ ರಾಜಕೀಯ, ಆಡಳಿತ, ಸಾಂಸ್ಕೃತಿಕ ವೈಭವ ಮತ್ತು ವಿಜಯನಗರ ಸಾಮ್ರಾಜ್ಯದ ವಾಸ್ತವಿಕ ಚಿತ್ರಣ ಕಾಣಬಹುದು. ಹಾಗಾಗಿ ಈ ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ.












Click it and Unblock the Notifications