Bigg Boss: ಮಂಜು ಗೌತಮಿ ಗೆಳೆತನದ ನಡುವೆ ಬಿರುಕು- ಬಿಗ್‌ಬಾಸ್ ಮನೆ ರಣರಂಗ
ಬಿಗ್‌ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿ ಆಟ ಶುರುವಾಗಿದೆ. ಇದಕ್ಕಾಗಿ ಪ್ರತಿ ಬಾರಿಯಂತೆ ಎರಡು ತಂಡಗಳನ್ನು ರಚನೆ ಮಾಡಲಾಗಿದೆ. ಗೌತಮಿ ತಂಡದಲ್ಲಿ ಮಂಜು, ಮೋಕ್ಷಿತಾ, ಚೈತ್ರಾ, ಧನ್‌ರಾಜ್, ತ್ರಿವಿಕ್ರಮ್ ಇದ್ದಾರೆ. ಇನ್ನೊಂದು ತಂಡದಲ್ಲಿ ಹನುಮಂತ, ಭವ್ಯ, ರಜತ್, ಸುರೇಶ್, ಐಶ್ವರ್ಯ, ಶಿಶಿರ್ ಇದ್ದಾರೆ. ಟಾಸ್ಕ್ ವೇಳೆ ಆತ್ಮೀಯ ಗೆಳೆಯರಾಗಿದ್ದ ಗೌತಮಿ ಹಾಗೂ ಮಂಜು ನಡುವೆ ಮನಸ್ತಾಪ ಉಂಟಾಗಿದೆ. ಇದರಿಂದಾಗಿ ಗೌತಮಿ ಮಂಜು ಅವರೊಂದಿಗಿನ ಗೆಳೆತನಕ್ಕೆ ಬ್ರೇಕ್ ಹಾಕಿದ್ದಾರೆ. ಜೊತೆಗೆ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಮಂಜು ಅವರನ್ನು ಹೊರಗಿಟ್ಟಿದ್ದಾರೆ. ಗೌತಮಿ ಅವರ ಈ ನಡೆ ಬಿಗ್‌ಬಾಸ್ ವೀಕ್ಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಹೌದು... ಈ ವಾರ ಗೌತಮಿ ಜಾದವ್ ಬಿಗ್‌ಬಾಸ್ ಮನೆಯ ಕ್ಯಾಪ್ಟನ್ ಆಗಿರುವುದು ಎಲ್ಲರಿಗೂ ಗೊತ್ತೇ ಇದೆ. ಕ್ಯಾಪ್ಟನ್ ಪಟ್ಟ ಸಿಕ್ಕ ಬಳಿಕ ಗೌತಮಿ ಅವರು ಮಂಜು ಅವರೊಂದಿಗಿನ ಗೆಳೆತನಕ್ಕೆ ಬ್ರೇಕ್ ಹಾಕಿದ್ದಾರೆ. ಕೆಲ ವಿಚಾರದಲ್ಲಿ ಮಂಜು ಕೊಟ್ಟ ಸಲಹೆಗಳನ್ನು ಗೌತಮಿ ಸ್ವೀಕಾರ ಮಾಡುತ್ತಿಲ್ಲ. ಮಂಜು ಅವರು ಏರು ಧ್ವನಿಯಲ್ಲಿ ಮಾತನಾಡಿದ್ದಕ್ಕೆ ಗೌತಮಿ ಎಚ್ಚರಿಕೆ ಕೂಡ ನೀಡಿದ್ದಾರೆ. ನಿಮ್ಮ ಧ್ವನಿ ಮುಂದೆ ನನ್ನ ಧ್ವನಿ ಕೇಳಿಸುತ್ತಿಲ್ಲ. ನಾನು ಮಾತನಾಡುವಾಗ ನೀವು ಮಾತನಾಡಲೇ ಬೇಡಿ ಎಂದು ಮಂಜು ಅವರಿಗೆ ಗೌತಮಿ ಅವರು ಖಡಕ್ ಸೂಚನೆ ಕೊಟ್ಟಿದ್ದಾರೆ. ಇದಲ್ಲದೆ ಗೌತಮಿ ನಿಮ್ಮೊಂದಿಗಿನ ಸ್ನೇಹಕ್ಕೆ ನಾನು ಬ್ರೇಕ್ ಹಾಕಿದಿನಿ ಎಂದು ನೇರವಾಗಿ ಮಂಜು ಬಳಿ ಹೇಳಿಕೊಂಡಿದ್ದಾರೆ. ಹೀಗಾಗಿ ಬಿಗ್‌ಬಾಸ್ ಮನೆಯಲ್ಲಿ ಮನಸ್ಸುಗಳು ಒಡೆದು ಹೋಗಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಮಹಾರಾಜಾ ಟಾಸ್ಕ್ ಅಲ್ಲಿ ಗೌತಮಿ ಹೇಗಿದ್ದರು? ಈಗ ಹೇಗಾದರು?
ಉಗ್ರಂ ಮಂಜು ಮಹಾರಾಜಾ ಟಾಸ್ಕ್ ಆಡುವಾಗ ಗೌತಮಿ ತಮಗೆ ಹೇಗೆ ಬೇಕು ಹಾಗೆ ಇದ್ದರು. ಇದನ್ನು ಮಂಜು ಕೂಡ ಪ್ರಶ್ನೆ ಮಾಡುತ್ತಿರಲಿಲ್ಲ. ಜೊತೆಗೆ ಮನೆಯ ಇತರ ಸದಸ್ಯರಿಗೆ ಒಂದು ರೀತಿಯ ನ್ಯಾಯ ಆಗಿದ್ದರೆ ಗೌತಮಿಗೇ ಒಂದು ರೀತಿ ನ್ಯಾಯ ನೀಡಲಾಗಿರುವುದು ಬಿಗ್‌ಬಾಸ್ ಮನೆಯಲ್ಲಿ ಸ್ಪಷ್ಟವಾಗಿ ಕಂಡು ಬಂದಿತ್ತು.
ಮಂಜು ಜೊತೆಗಿನ ಗೆಳೆತನಕ್ಕೆ ಬ್ರೇಕ್ ಹಾಕಿದ ಗೌತಮಿ
ಇದಕ್ಕಾಗಿ ಕಿಚ್ಚ ಸುದೀಪ್ ಗೌತಮಿ ಹಾಗೂ ಉಗ್ರಂ ಮಂಜು ಅವರಿಗೆ ವಾರಾಂತ್ಯದಲ್ಲಿ ಸರಿಯಾಗೇ ಕ್ಲಾಸ್ ತೆಗೆದುಕೊಂಡಿದ್ದರು. ಇದಾದ ನಂತರವೂ ಗೌತಮಿ ಹಾಗೂ ಮಂಜು ಸ್ನೇಹಿತರಾಗೇ ಇದ್ದರು. ಆದರೆ ಗೌತಮಿ ಕ್ಯಾಪ್ಟನ್ ಆದ ಬಳಿಕ ಎಲ್ಲವೂ ಚೇಂಜ್ ಆಗಿದೆ. ಗೌತಮಿ ಮಂಜು ಮಾತನಾಡಿದರೆ ಸಿಡಿದು ಬೀಳುತ್ತಿದ್ದಾರೆ. ಮಂಜು ಮಾತನಾಡಿದರೆ ಕ್ಯಾಪ್ಟನ್ ನೀವಾ ನಾನಾ? ಎಂದು ಪ್ರಶ್ನೆ ಮಾಡುವ ಹಂತಕ್ಕೆ ಬಂದಿದ್ದಾರೆ. ಅಷ್ಟೇ ಅಲ್ಲ ಮಂಜು ಅವರೊಂದಿಗೆ ಸ್ನೇಹ ಕೂಡ ಮುರಿದುಕೊಂಡಿದ್ದಾರೆ. ಇದು ಬಿಗ್‌ಬಾಸ್ ವೀಕ್ಷಕರ ಕೋಪಕ್ಕೆ ಗುರಿಯಾಗಿದೆ.

ಗೌತಮಿ ತಾನು ಕ್ಯಾಪ್ಟನ್ ಆಗುವವರೆಗೂ ಬೇಕಾದ ಸಹಾಯ ಸೌಲಭ್ಯವನ್ನೆಲ್ಲಾ ಪಡೆದು, ಈಗ ಮಂಜು ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಕೆಲಸ ಮೊದಲೇ ಮಾಡಿದ್ದರೆ ಮಂಜು ಅವರು ಬಿಗ್‌ಬಾಸ್ ಮನೆಯಲ್ಲಿ ಟಾಪ್ ಸ್ಪರ್ಧಿ ಆಗಿರುವುದರಲ್ಲಿ ಅನುಮಾನವೇ ಇರಲಿಲ್ಲ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್‌ಯಿಂದ ಮಂಜು ಅವರನ್ನು ಹೊರಗಿಟ್ಟ ಗೌತಮಿ
ಈ ಬಾರಿ ಅನಿರೀಕ್ಷಿತವಾಗಿ ಮನೆಯ ಕ್ಯಾಪ್ಟನ್ ಆದ ಗೌತಮಿ ಸದ್ಯ ಮನೆಯಲ್ಲಿ ಹವಾ ಸೃಷ್ಟಿಸಲು ಪ್ರಾರಂಭಿಸಿದ್ದಾರೆ. ತಮ್ಮ ಸ್ನೇಹಿತ ಮಂಜು ಅವರಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸುತ್ತಿದ್ದಾರೆ. ಅಲ್ಲದೆ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ಯಿಂದ ಗೌತಮಿ ಅವರು ಮಂಜು ಅವರನ್ನು ಹೊರಗಿಟ್ಟಿದ್ದು ವೀಕ್ಷಕರ ಕೋಪವನ್ನು ನೆತ್ತಿಗೇರಿಸಿದೆ.
ಕ್ಯಾಪ್ಟನ್ ಗೌತಮಿ ಮಂಜು ಅವರಿಗೆ ಆಡಿದ ಮಾತುಗಳಿವು...
ಕ್ಯಾಪ್ಟನ್ ಆದ ಬಳಿಕ ಗೌತಮಿ ಅವರು ಮಂಜು ಅವರಿಗೆ ಹೇಳಿದ ಮಾತುಗಳಿವು, 'ನಾನು ಕ್ಯಾಪ್ಟನ್ ಆದಾಗ ಡುನಾಟ್ ಲೀಡ್ ಮಿ. ನಿಮ್ ಧ್ವನಿಯಲ್ಲಿ ನನ್ನ ಧ್ವನಿ ಕೆಳಗೆ ಹೋಗುತ್ತಿದೆ. ಮೋಕ್ಷಿತಾ ಅವರು ಹೇಳ್ತಾರೆ ನೀವಿಬ್ಬರೇ ಮಾತನಾಡುತ್ತೀರಾ ಎಂದು, ನನಗೂ ಹಾಗೇ ಅನಿಸುತ್ತೆ. ಹೀಗಾಗಿ ನೀವು(ಮಂಜು) ಮಾತನಾಡಬೇಡಿ. ನಾನೇ ಮಾತನಾಡುತ್ತೇನೆ' ಎಂದು ಹೇಳಿದ್ದಾರೆ. ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿದ ಇಂದಿನ ಈ ವೀಡಿಯೋ ಸಾಕಷ್ಟು ವೈರಲ್ ಆಗುತ್ತಿದೆ.
ಹೀಗಾಗಿ ಇಂದಿನ ಸಂಚಿಕೆ ಭಾರೀ ಕುತೂಹಲವನ್ನು ಸೃಷ್ಟಿಸಿದೆ. ಬಿಗ್‌ಬಾಸ್ ಮನೆಯಲ್ಲಿ ಸ್ನೇಹಿತರಾಗಿದ್ದ ಗೌತಮಿ ಹಾಗೂ ಮಂಜು ನಡುವೆ ಬಿರುಕು ಉಂಟಾಗುತ್ತಿದ್ದಂತೆ ಇತ್ತ ಮೋಕ್ಷಿತಾ ಪೈ ಕೂಡ ಇದರ ಮಜಾ ತೆಗೆದುಕೊಳ್ಳುತ್ತಿರುವಂತೆ ಕಾಣಿಸುತ್ತಿದೆ. ಅಲ್ಲದೆ ಗೌತಮಿ ಮೋಕ್ಷಿತಾಗೆ ಕಪ್ಪು ಮಸಿ ನೀರು ಹಾಕುವ ಮೂಲಕ ನಾಮಿನೇಟ್ ಮಾಡಿದ್ದಾರೆ. ಇದು ಮತ್ತಷ್ಟು ಕಿಡಿಯನ್ನು ಹೊತ್ತಿಸಿದೆ.
ಒಟ್ಟಿನಲ್ಲಿ ಬಿಗ್‌ಬಾಸ್ ಮನೆಯಲ್ಲಿ ಒಂದಾಗಿದ್ದ ಮೋಕ್ಷಿತಾ, ಮಂಜು ಹಾಗೂ ಗೌತಮಿ ಈಗ ಎದುರಾಳಿಗಳಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ನಡುವೆ ಆಟ ಹೇಗೆ ನಡೆಯಲಿದೆ ಅನ್ನೋ ಕುತೂಹಲ ಮೂಡಿದೆ.












Click it and Unblock the Notifications