ಸುದೀಪಣ್ಣ ಮನೆಗೆ ಕರೆದು 10 ಲಕ್ಷ ಹಣ ಕೊಟ್ರು, ಆ ಒಂದು ಮಾತು ಹೇಳಿ ಕಳಿಸಿದ್ರು: ಗಿಲ್ಲಿ
ಬಿಗ್‌ಬಾಸ್ ಕನ್ನಡ ಸೀಸನ್-12ರ ವಿಜೇತರಾಗಿ ಹೊರಹೊಮ್ಮಿದ ಗಿಲ್ಲಿ, ಗೆಲುವಿನ ನಂತರ ಬಹುಮಾನ ಹಣದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ವಿವಿಧ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. "ಬಿಗ್‌ಬಾಸ್ ಗೆದ್ದ 50 ಲಕ್ಷ ರೂಪಾಯಿ ಬಹುಮಾನ ಹಣ ಖಂಡಿತವಾಗಿಯೂ ಬಂದೇ ಬರುತ್ತೆ. ಇದರಲ್ಲಿ ಯಾವುದೇ ಗೊಂದಲವಿಲ್ಲ" ಎಂದು ಗಿಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಬಿಗ್‌ಬಾಸ್ ಫಿನಾಲೆ ವೇದಿಕೆಯಲ್ಲೇ ಕಿಚ್ಚ ಸುದೀಪ್ ಅವರು ಗಿಲ್ಲಿಗೆ ವೈಯಕ್ತಿಕವಾಗಿ 10 ಲಕ್ಷ ರೂಪಾಯಿ ಕೊಡುವುದಾಗಿ ಘೋಷಿಸಿದ್ದರು. ಈ ಬಗ್ಗೆಯೂ ಗಿಲ್ಲಿ ಕ್ಲಾರಿಟಿ ಕೊಟ್ಟಿದ್ದಾರೆ.
ಬಿಗ್‌ಬಾಸ್ ಕಾರ್ಯಕ್ರಮದ ನಿರೂಪಕ ಹಾಗೂ ಕನ್ನಡ ಚಿತ್ರರಂಗದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಬಿಗ್‌ಬಾಸ್ ವೇದಿಕೆಯಲ್ಲೇ ನೀಡಿದ್ದ ಭರವಸೆಯನ್ನೂ ಗಿಲ್ಲಿ ನೆನಪಿಸಿಕೊಂಡಿದ್ದಾರೆ. "ಸುದೀಪಣ್ಣ 10 ಲಕ್ಷ ರೂಪಾಯಿ ಕೊಡ್ತೀನಿ ಅಂತ ಫೈನಲ್ ದಿನವೇ ಹೇಳಿದ್ರು. ಅವರು ಕೊಟ್ಟ ಮಾತು ಉಳಿಸಿಕೊಂಡರು. ಅವರು ನನ್ನನ್ನು ತಮ್ಮ ಮನೆಗೆ ಕರೆಸಿ ಆತ್ಮೀಯವಾಗಿ ಮಾತನಾಡಿಸಿ, ಆ ಹಣವನ್ನು ಸ್ವತಃ ನನ್ನ ಕೈಗೆ ನೀಡಿ ಶುಭ ಹಾರೈಸಿದರು" ಎಂದು ಗಿಲ್ಲಿ ಹೇಳಿದ್ದಾರೆ.

ತಂದೆ ರೀತಿ ಬುದ್ಧಿವಾದ ಹೇಳಿದ್ರು
ಫೈನಲ್ ವೇದಿಕೆಯಲ್ಲಿನ ಆ ಕ್ಷಣಗಳು ತನ್ನ ಜೀವನದಲ್ಲಿ ಮರೆಯಲಾಗದ ಅನುಭವ ಎಂದು ಹೇಳಿದ ಗಿಲ್ಲಿ, ಕಿಚ್ಚ ಸುದೀಪ್ ನೀಡಿದ ಅಮೂಲ್ಯ ಸಲಹೆಗಳ ಕುರಿತು ವಿವರಿಸಿದರು. "ಫೈನಲ್‌ನಲ್ಲಿ ನಾನು ಮತ್ತು ರಕ್ಷಿತಾ ಶೆಟ್ಟಿ ಉಳಿದಿದ್ದಾಗ, ನಿಮ್ಮಿಬ್ಬರಲ್ಲಿ ಯಾರೇ ಗೆದ್ದರೂ ಸರಿಯೇ. ಆದರೆ ಗೆದ್ದ ಮೇಲೆ ಅದನ್ನು ತಲೆಗೆತ್ತಿಕೊಳ್ಳಬೇಡಿ. ತಗ್ಗಿ ಬಗ್ಗಿ ನಡೆಯಿರಿ. ಮುಂದೆ ಜೀವನದಲ್ಲಿ ಇನ್ನಷ್ಟು ಸವಾಲುಗಳು ಬರುತ್ತವೆ. ಪ್ರತಿಯೊಂದು ಹೆಜ್ಜೆ ಇಡುವಾಗಲೂ ಎಚ್ಚರಿಕೆಯಿಂದ ಯೋಚಿಸಿ ಇಡಿ ಎಂದು ಹೇಳಿದರು" ಎಂದು ಗಿಲ್ಲಿ ರಿವೀಲ್ ಮಾಡಿದ್ದಾರೆ.
ಹೆಸರು, ಹಣ ಮತ್ತು ಜನಪ್ರಿಯತೆ ಬಂದಾಗಲೂ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳಬೇಕು ಎಂಬ ಸಂದೇಶವನ್ನು ಸುದೀಪ್ ಅವರು ಅಪ್ಪನಂತೆ ಬುದ್ಧಿಮಾತು ಹೇಳಿ ಕಳಿಸಿದರು ಎಂದು ಗಿಲ್ಲಿ ಹೇಳಿದರು. "ಜೀವನದಲ್ಲಿ ಎಲ್ಲವನ್ನೂ ಬ್ಯಾಲೆನ್ಸ್ ಮಾಡಿ ನಡೆಯಬೇಕು. ಗೆಲುವಿನ ಕ್ಷಣದಲ್ಲಿ ಹಿಗ್ಗದೆ, ಸೋಲಿನ ಸಮಯದಲ್ಲಿ ಕುಗ್ಗದೆ ಮುಂದೆ ಸಾಗಬೇಕು ಎಂಬ ಅವರ ಮಾತುಗಳು ನನ್ನ ಮನಸ್ಸಿನಲ್ಲಿ ಆಳವಾಗಿ ಉಳಿದಿವೆ" ಎಂದು ಹೇಳಿದರು.
ಬಿಗ್‌ಬಾಸ್ ವೇದಿಕೆಯಿಂದ ಸಿಕ್ಕ ಗೆಲುವು ಕೇವಲ ಟ್ರೋಫಿ ಅಥವಾ ಹಣವಲ್ಲ, ಬದುಕಿನ ಪಾಠವೂ ಹೌದು ಎಂದು ಗಿಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಕಿಚ್ಚ ಸುದೀಪ್ ಅವರ ಬೆಂಬಲ, ಮಾರ್ಗದರ್ಶನ ಮತ್ತು ಆಶೀರ್ವಾದ ತನ್ನ ಮುಂದಿನ ಬದುಕು ಹಾಗೂ ವೃತ್ತಿಜೀವನಕ್ಕೆ ದಿಟ್ಟ ಶಕ್ತಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.












Click it and Unblock the Notifications