Bigg Boss Kannada: ಮದುವೆಯಾಗಿ ಒಂದೇ ತಿಂಗಳು, ಆಂಕರ್ ಅನುಶ್ರೀ ಗಂಡ ರೋಷನ್ ಬಿಗ್‌ಬಾಸ್‌ಗೆ ಹೋಗ್ತಾರಾ?
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಕನ್ನಡ ಸೀಸನ್-12ಕ್ಕೆ ದಿನಗಣನೆ ಶುರುವಾಗಿದೆ. ಯಾರೆಲ್ಲ ಸ್ಪರ್ಧಿಗಳನ್ನ ಈ ಬಾರಿ ಬಿಗ್‌ಬಾಸ್ ಮನೆಯಲ್ಲಿ ನೋಡಬಹುದು? ಎಂದು ಪ್ರೇಕ್ಷಕರು ಕಾತುರದಿಂದ ಕಾದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ಒಂದು ಪಟ್ಟಿ ಹರಿದಾಡುತ್ತಿದ್ದು, ಬಹುತೇಕ ಇವರೇ ಈ ಸೀಸನ್‌ನ ಸ್ಪರ್ಧಿಗಳು ಎಂದು ವೈರಲ್ ಆಗುತ್ತಿದೆ. ಹಲವರ ಹೆಸರು ಚರ್ಚೆಯಲ್ಲಿದ್ದು, ಇತ್ತೀಚೆಗಷ್ಟೇ ಮದುವೆಯಾದ ಕನ್ನಡದ ಖ್ಯಾತ ನಿರೂಪಕಿ ಅನುಶ್ರೀ ಅವರ ಪತಿ ರೋಷನ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ರೋಷನ್‌ಗೆ ಬಿಗ್‌ಬಾಸ್‌ನಿಂದ ಆಫರ್ ಬಂದಿದೆ ಎಂದು ಹೇಳಲಾಗುತ್ತಿದೆ.
ಹೌದು, ಕಳೆದ ಎರಡು ತಿಂಗಳಿಂದ ಹಲವರ ಹೆಸರು ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿವೆ. ಮೊದಲಿಗೆ ಮೇಘನಾ ರಾಜ್, ಸುಧಾರಾಣಿ ಸೇರಿದಂತೆ ಪ್ರಮುಖ ನಟಿಯರು ಕೂಡ ಬಿಗ್‌ಬಾಸ್‌ಗೆ ಹೋಗ್ತಾರೆ ಎಂದು ಹೇಳಲಾಗಿತ್ತು. ಆದರೆ ಈ ಬಗ್ಗೆ ಅವರೇ ಕ್ಲಾರಿಟಿ ನೀಡಿದ್ದು, ಇದು ಸುಳ್ಳು ಸುದ್ದಿ ಎಂದಿದ್ದಾರೆ. ಇನ್ನು ಕಳೆದ ಕೆಲವು ದಿನಗಳಿಂದ ಬಿಗ್‌ಬಾಸ್ ಸ್ಪರ್ಧಿಗಳ ಪಟ್ಟಿಯೊಂದು ಸಖತ್ ವೈರಲ್ ಆಗಿದೆ. ಇದರಲ್ಲಿ ಕಿರುತೆರೆ & ಹಿರಿತೆರೆಯ ನಟ, ನಟಿಯರು ಸೇರಿದಂತೆ ಪ್ರಮುಖ ಹೆಸರುಗಳಿವೆ. ಇದೀಗ ಆಂಕರ್ ಅನುಶ್ರೀ ಅವರ ಪತಿ ರೋಷನ್ ಕೂಡ ಬಿಗ್‌ಬಾಸ್‌ಗೆ ಹೋಗೋದು ಪಕ್ಕಾ ಎಂಬ ಸುದ್ದಿ ಹರಿದಾಡುತ್ತಿದೆ.

ಆಗಸ್ಟ್ 28ರಂದು ಅನುಶ್ರೀ ಹಾಗೂ ರೋಷನ್ ಅವರ ವಿವಾಹ ನೆರವೇರಿತ್ತು. ಇತ್ತೀಚೆಗಷ್ಟೇ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸೆಪ್ಟೆಂಬರ್ 28ರಂದು ಬಿಗ್‌ಬಾಸ್ ಗ್ರ್ಯಾಂಡ್ ಓಪನಿಂಗ್ ಇದೆ. ಹೀಗಾಗಿ ಮದುವೆಯಾದ ಒಂದೇ ತಿಂಗಳಲ್ಲಿ ರೋಷನ್ ಅನುಶ್ರೀ ಅವರನ್ನು ಬಿಟ್ಟು ಬಿಗ್‌ಬಾಸ್‌ಗೆ ಹೋಗ್ತಾರಾ? ಎನ್ನುವ ಪ್ರಶ್ನೆಯೂ ಎದ್ದಿದೆ. ಅನುಶ್ರೀ ಅವರ ಮದುವೆ ವಿಚಾರ ದೊಡ್ಡ ಸುದ್ದಿಯಾಗಿತ್ತು. ಅವರ ಪತಿ ಯಾರು ಎನ್ನುವ ಕುತೂಹಲವೂ ರಾಜ್ಯದಾದ್ಯಂತ ಮನೆಮಾಡಿತ್ತು.
ಇಬ್ಬರೂ ಕೂಡ ಪುನೀತ್ ರಾಜ್‌ಕುಮಾರ್ ಅವರ ದೊಡ್ಡ ಫ್ಯಾನ್ಸ್ ಆಗಿದ್ದು, ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆ ನಂತರ ಅನುಶ್ರೀ ಮತ್ತೆ ನಿರೂಪಣೆಗೆ ಮರಳಿದ್ದು, ರೋಷನ್ ಕೂಡ ಕೆಲಸದಲ್ಲಿ ಬ್ಯುಸಿ ಇರುವುದಾಗಿ ಹೇಳಿಕೊಂಡಿದ್ದರು. ಇದರ ನಡುವೆ ರೋಷನ್‌ಗೆ ಬಿಗ್‌ಬಾಸ್‌ನಿಂದ ಆಫರ್ ಬಂದಿದೆ ಎಂದು ಸುದ್ದಿಯೊಂದು ಸಖತ್ ಸೌಂಡ್ ಮಾಡ್ತಿದೆ. ಆದರೆ ಈ ಬಗ್ಗೆ ಅನುಶ್ರೀ ಅವರಾಗಲಿ, ರೋಷನ್ ಆಗಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಅನುಶ್ರೀ ಅವರ ಗಂಡ ರೋಷನ್, ಧರ್ಮಸ್ಥಳ ಕೇಸ್‌ನಲ್ಲಿ ಸದ್ದು ಮಾಡಿದ ಯೂಟ್ಯೂಬರ್‌ಗಳಾದ ಅಭಿಷೇಕ್ ಮತ್ತು ಎಂಡಿ ಸಮೀರ್ ಪಾಲ್ಗೊಳ್ಳಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಅಧಿಕೃತ ಪಟ್ಟಿ ಇನ್ನೂ ಹೊರಬಿದ್ದಿಲ್ಲ. ಕಿಚ್ಚ ಸುದೀಪ್ ನಿರೂಪಣೆ ಮುಂದುವರಿಸಿದ್ದು, ಈ ಬಾರಿ ಸಾಕಷ್ಟು ಹೊಸ ಮುಖಗಳು ಮತ್ತು ಚರ್ಚೆಗೆ ಕಾರಣವಾಗುವ ಸ್ಪರ್ಧಿಗಳು ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರು ಯಾರೆಲ್ಲ ಎಂಬ ಕುತೂಹಲಕ್ಕೆ ಸದ್ಯದಲ್ಲೇ ಉತ್ತರ ಸಿಗಲಿದೆ.












Click it and Unblock the Notifications