Bigg Boss Kannada: ಕನ್ನಡ ಯುಟ್ಯೂಬರ್ ಸಮೀರ್‌ಗೆ ಬಿಗ್ ಬಾಸ್‌ನಿಂದ ಆಫರ್ ಬಂದಿದೆಯಾ?
ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳಬೇಕು, ಇಡೀ ಕರ್ನಾಟಕ ನನ್ನ ನೋಡಬೇಕು ಅನ್ನೋದು ಎಷ್ಟೋ ಮಂದಿಯ ಕನಸು. ಹೀಗಾಗಿ ಪ್ರತಿ ಸೀಸನ್ ಶುರುವಾದಾಗಲೂ ಸ್ಪರ್ಧಿಗಳು ಯಾರು? ಎಂಬ ಕುತೂಹಲ ಇದ್ದೇ ಇರುತ್ತೆ. ಇನ್ನೇನು ಬಿಗ್ ಬಾಸ್ ಕನ್ನಡ ಸೀಸನ್-12 (Bigg Boss Kannada Season 12) ಕೆಲವೇ ದಿನಗಳಲ್ಲಿ ಶುರುವಾಗಲಿದೆ. ಇತ್ತ ಸೋಷಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್‌ನ ಸಂಭಾವ್ಯ ಸ್ಪರ್ಧಿಗಳ ಹೆಸರುಗಳು ಓಡಾಡುತ್ತಿವೆ. ಈ ಪೈಕಿ ಕನ್ನಡದ ಖ್ಯಾತ ಯುಟ್ಯೂಬರ್ ಸ್ಯಾಮ್ ಸಮೀರ್ (Sam Sameer) ಕೂಡ ಒಬ್ಬರು. ಹೌದು ಈ ಬಾರಿ ಸಮೀರ್ ಬಿಗ್‌ಬಾಸ್ ಮನೆಯಲ್ಲಿ ಕಾಣಿಸಿಕೊಳ್ತಾರೆ, ಆಫರ್ ಕೂಡ ಬಂದಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಮೀರ್ ಪ್ರತಿಕ್ರಿಯಿಸಿದ್ದಾರೆ.
ಯುಟ್ಯೂಬ್ ಹಾಗೂ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುವ ಸ್ಯಾಮ್ ಸಮೀರ್‌ಗೆ ಲಕ್ಷಾಂತರ ಮಂದಿ ಫಾಲೋವರ್ಸ್ ಇದ್ದಾರೆ. ಸದಾ ಫನ್ ವಿಡಿಯೋಗಳ ಮೂಲಕ ಸಮೀರ್ ಜನಪ್ರಿಯತೆ ಗಳಿಸಿದ್ದಾರೆ. ಹಿಂದಿನ ಬಿಗ್‌ಬಾಸ್ ಸೀಸನ್‌ಗಳ ಆರಂಭದ ವೇಳೆಯೂ ಸಮೀರ್ ಅವರ ಹೆಸರು ಹರಿದಾಡಿತ್ತು. ಆದರೆ ಸಮೀರ್ ಯೂಟ್ಯೂಬ್ ಲೋಕದಲ್ಲೇ ಮುಳುಗಿದ್ದರು. ಇನ್ನು ಬಿಗ್ ಬಾಸ್ ಕನ್ನಡ ಸೀಸನ್-12ರ ಸ್ಪರ್ಧಿಯಾಗಿ ಸಮೀರ್ ಹೋಗ್ತಾರೆ, ಆಫರ್ ಕೂಡ ಈಗಾಗಲೇ ಬಂದಿದೆ ಎಂದು ಹೇಳಲಾಗುತ್ತಿದೆ. ಆದರೆ ಅಸಲಿ ವಿಚಾರ ಏನೆಂದು ಸಮೀರ್ ರಿವೀಲ್ ಮಾಡಿದ್ದಾರೆ.

'ನನ್ನ ಟೀಂಗೆ ಕಾಲ್ ಬಂದಿದೆ'
'ಬಿಗ್‌ಬಾಸ್ ತುಂಬಾ ಒಳ್ಳೆಯ ಶೋ. ನಾವು ಚಿಕ್ಕ ವಯಸ್ಸಿನಿಂದಲೂ ನೋಡಿ ತುಂಬಾ ಎಂಜಾಯ್ ಮಾಡಿರೋ ಶೋ. ಟ್ಯೂಶನ್ ಮುಗಿಸಿ ಬಂದ ತಕ್ಷಣ ಬಿಗ್‌ಬಾಸ್ ನೋಡಲು ಟಿವಿ ಮುಂದೆ ಕೂರುತ್ತಿದ್ದೆ. ಶೋ ನೋಡ್ಕೊಂಡು ತುಂಬಾ ಮಜಾ ಮಾಡ್ತಿದ್ದೆ. ನನಗೆ ಬಿಗ್‌ಬಾಸ್ ಆಫರ್ ಅಧಿಕೃತವಾಗಿ ಬಂದಿಲ್ಲ. ಆದರೆ ಒಂದಷ್ಟು ಕಾಲ್ಸ್ ಬಂದಿದೆ. ಅದು ನಿಜಾನಾ? ಸುಳ್ಳಾ? ಅನ್ನೋದು ನನಗೂ ಗೊತ್ತಿಲ್ಲ. ನಮ್ಮ ಟೀಂ ಜೊತೆ ಮಾತನಾಡಿದ್ದಾರೆ. ಒಮ್ಮೆ ಭೇಟಿಯಾಗಿ ಎಂದೆಲ್ಲ ಹೇಳಿದ್ದಾರೆ' ಎಂದಿದ್ದಾರೆ.
'ಬೇರೆಯವರಿಗೆ ಅವಕಾಶ ಸಿಗಲಿ'
'ನನ್ನ ಪ್ರಕಾರ ನಾನು ಅಂತಹ ಶೋಗಳಿಗೆ ಸೂಟ್ ಆಗಲ್ಲ. ಸೀರಿಯಲ್ ಆಗಲಿ, ರಿಯಾಲಿಟಿ ಶೋ ಆಗಲಿ ನನಗೆ ಸರಿ ಬರೋದಿಲ್ಲ ಅಂತ ನನಗೇ ಅನಿಸುತ್ತೆ. ಇದೇ ಕಾರಣಕ್ಕೆ ನಾನು ಅದರಿಂದ ದೂರ ಇದ್ದೀನಿ. ಸದ್ಯಕ್ಕೆ ನಾನು ಬಿಗ್‌ಬಾಸ್ ಹೋಗಲ್ಲ ಎಂದು ಸಮೀರ್ ಕ್ಲಾರಿಟಿ ಕೊಟ್ಟಿದ್ದಾರೆ. ತುಂಬಾ ಜನ ಕಿರುತೆರೆಯಲ್ಲಿ ಮಿಂಚಬೇಕು ಅಂತ ಕಷ್ಟ ಪಡುತ್ತಿದ್ದಾರೆ. ಅವರಿಗೆಲ್ಲ ಅವಕಾಶ ಸಿಗಬೇಕು. ಆ ಅವಕಾಶವನ್ನು ನಾನು ತೆಗೆದುಕೊಳ್ಳೋದು ಸರಿಯಲ್ಲ. ಹಾಗಾಗಿ ಬಿಗ್‌ಬಾಸ್‌ಗೆ ಹೋಗಲು ಆಸಕ್ತಿಯೂ ಇಲ್ಲ. ಇರೋ ಕೆಲಸವನ್ನೇ ಇನ್ನಷ್ಟು ದೊಡ್ಡದಾಗಿ ಮಾಡೋಣ ಅಂದುಕೊಂಡಿದ್ದೀನಿ' ಎಂದಿದ್ದಾರೆ ಸಮೀರ್. ಹೀಗಾಗಿ ಸಮೀರ್ ಈ ಬಾರಿ ಬಿಗ್‌ಬಾಸ್‌ಗೆ ಹೋಗ್ತಾರೆ ಅನ್ನೋ ವದಂತಿ ಸುಳ್ಳಾಗಿದೆ.












Click it and Unblock the Notifications