BBK 12: ನನ್ನ ಗಂಡನ ಸ್ಥಾನ ಬೇರೊಬ್ಬರಿಗೆ ಹೋದಾಗ ಬೆಲೆ ಕಳೆದುಕೊಳ್ತು: ಡಿವೋರ್ಸ್ ಬಗ್ಗೆ ಜಾನ್ವಿ ಹೇಳಿದ್ದೇನು?
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳು ಈಗೀಗ ಒಬ್ಬರ ಬಗ್ಗೆ ಮತ್ತೊಬ್ಬರು ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಆಂಕರ್ ಜಾನ್ವಿ ಹಾಗೂ ಮಲ್ಲಮ್ಮ ಅವರು ಇಬ್ಬರೂ ತಮ್ಮ ಬದುಕಿನ ಬಗ್ಗೆ ಪರಿಚಯ ಮಾಡಿಕೊಡುತ್ತಾ ಬಿಗ್ ಬಾಸ್ ಮನೆಯಲ್ಲಿ ಭಾವುಕರಾಗಿದ್ದಾರೆ. ಈ ವೇಳೆ ಜಾನ್ವಿ ಅವರ ಡಿವೋರ್ಸ್ ಬಗ್ಗೆಯೂ ಚರ್ಚೆಯಾಗಿದೆ. ಮಲ್ಲಮ್ಮ ಅವರು ಜಾನ್ವಿ ಅವರ ಕುಟುಂಬದ ಬಗ್ಗೆ ಕೇಳಿದಾದ ಡಿವೋರ್ಸ್ ಆಗಿದ್ದು ಏಕೆ ಎಂದು ಮೌನ ಮುರಿದಿದ್ದಾರೆ. ಡಿವೋರ್ಸ್ ಕೊಡಬಾರದಿತ್ತು ಎಂದು ಮಲ್ಲಮ್ಮ ಬುದ್ಧಿವಾದ ಹೇಳಿದ್ದಾರೆ.
ಸುದ್ದಿ ವಾಹಿನಿಯಲ್ಲಿ ನಿರೂಪಕಿಯಾಗಿ ಗುರುತಿಸಿಕೊಂಡಿದ್ದ ಜಾನ್ವಿ, ಬಳಿಕ ರಿಯಾಲಿಟಿ ಶೋಗಳಲ್ಲಿ ಮಿಂಚಿದ್ದರು. ತಮಗೆ ಒಬ್ಬ ಮಗ ಇದ್ದು, ಕಾರಣಾಂತರಗಳಿಂದ ಪತಿಗೆ ಡಿವೋರ್ಸ್ ನೀಡಿದ್ದರು. ಈ ಬಗ್ಗೆ ಅವರು ನೇರವಾಗಿಯೇ ಹಲವು ಸಂದರ್ಶನಗಳಲ್ಲಿ ಹೇಳಿಕೊಂಡಿದ್ದರು. ಇದೀಗ ಬಿಗ್‌ಬಾಸ್ ಮನೆಯಲ್ಲೂ ತಮ್ಮ ಡಿವೋರ್ಸ್ ವಿಚಾರ ಪ್ರಸ್ತಾಪವಾದಾಗ, ಆ ನಿರ್ಧಾರಕ್ಕೆ ನಿಜವಾದ ಕಾರಣ ಏನೆಂದು ಜಾನ್ವಿ ಹೇಳಿದ್ದಾರೆ.

'ಬೇರೆ ಮದುವೆಯಾಗಿ ಮಗು ಇತ್ತು'
ಮಲ್ಲಮ್ಮ ಅವರು ಜಾನ್ವಿ ಅವರ ಪತಿ ಬಗ್ಗೆ ಕೇಳಿದಾಗ, 'ಇಲ್ಲ ಡಿವೋರ್ಸ್ ಆಯ್ತು' ಎಂದಿದ್ದಾರೆ. ಇದಕ್ಕೆ ಮಲ್ಲಮ್ಮ ಶಾಕ್ ಆಗಿ ಯಾಕೆ ಎಂದು ಕೇಳಿದ್ದಾರೆ. 'ಮದುವೆ ಆದ್ಮೇಲೆ ಹಾಗೆಲ್ಲ ಬಿಡಬಾರದು' ಎಂದು ಜಾನ್ವಿಗೆ ಮಲ್ಲಮ್ಮ ಬುದ್ಧಿವಾದ ಹೇಳಿದ್ದಾರೆ. ಆಗ ಅಸಲಿ ಸತ್ಯ ತಿಳಿಸಿದ ಜಾನ್ವಿ, 'ನನ್ನ ಜೊತೆಯಲ್ಲಿರುವಾಗಲೇ ಬೇರೊಬ್ಬರ ಜೊತೆ ಮದುವೆಯಾಗಿ ಮಗು ಕೂಡ ಇತ್ತು. ಅದಕ್ಕೆ ನಾನು ಬಿಟ್ಟಿದ್ದು, ಸುಮ್ನೆ ಡಿವೋರ್ಸ್ ಕೊಟ್ಟಿದ್ದಲ್ಲ' ಎಂದು ಹೇಳಿದ್ದಾರೆ.
'ಗಂಡಸರೇ ಆಗಲಿ, ಹೆಂಗಸರೇ ಆಗಲಿ ತಪ್ಪು ಮಾಡ್ತೀವಿ. ಆದರೆ ಅದನ್ನ ಮನೆಯವರಿಗೆ ತೆಗೆದುಕೊಂಡು ಬರಬಾರದು. ಈಗ ನಾನು ಗಂಡ ಅನ್ನೋ ಸ್ಥಾನ ಕೊಟ್ಟಿರುತ್ತೀನಿ. ಆ ಸ್ಥಾನ ಬೇರೊಬ್ಬರಿಗೆ ಹೋದಾಗ ಅದು ಬೆಲೆ ಕಳೆದುಕೊಳ್ಳುತ್ತೆ. ಆಗ ಜೊತೆಯಲ್ಲಿದ್ರೆ ಅರ್ಥ ಕೂಡ ಇರಲ್ಲ' ಎಂದಿದ್ದಾರೆ ಜಾನ್ವಿ.
ಕಣ್ಣೀರಿಟ್ಟ ಮಲ್ಲಮ್ಮ
ಇನ್ನು ಮಲ್ಲಮ್ಮ ಅವರ ಜೀವನದ ಬಗ್ಗೆ ಮಾತನಾಡಿರುವ ಜಾನ್ವಿ, 'ನೀವು ಎಷ್ಟೋ ಮಂದಿಗೆ ಸ್ಫೂರ್ತಿ ಎಂದಿದ್ದಾರೆ. ನೀವು ನಿಮಗೋಸ್ಕರ ಬದುಕಲೇ ಇಲ್ಲ. 15ನೇ ವಯಸ್ಸಿಗೆ ನಿಮಗೆ ಮದುವೆ ಆಯ್ತು, ಮಕ್ಕಳಾಯ್ತು. ಮಕ್ಕಳಿಗೋಸ್ಕರ ಬದುಕಿದ್ರಿ' ಎಂದು ಜಾನ್ವಿ ಹೇಳಿದ್ದಕ್ಕೆ ಮಲ್ಲಮ್ಮ ಕಣ್ಣೀರಿಟ್ಟಿದ್ದಾರೆ. ಆಗ ಕಾಕ್ರೋಚ್ ಸುಧಿ ಹಾಗೂ ಜಾನ್ವಿ ಸಮಾಧಾನ ಪಡಿಸಿದ್ದಾರೆ.
ಇನ್ನು ಬಿಗ್‌ಬಾಸ್ ಮನೆಯಲ್ಲಿ ಮಲ್ಲಮ್ಮ ಅಬ್ಬರಕ್ಕೆ ಉಳಿದ ಸ್ಪರ್ಧಿಗಳು ಸುಸ್ತಾಗಿದ್ದಾರೆ. ಬಿಗ್‌ಬಾಸ್ ಕನ್ಫೆಷನ್ ರೂಂಗೆ ಹೋದಾಗಲೂ ಮಲ್ಲಮ್ಮ ಅವರು ಬಿಗ್‌ಬಾಸ್‌ಗೆ ಒಗಟು ಬಿಡಿಸುವಂತೆ ಸವಾಲ್ ಹಾಕಿದ್ದಾರೆ. ಅದಕ್ಕೆ ಸರಿಯಾಗಿ ಉತ್ತರಿಸಲಾಗದೆ ಬಿಗ್‌ಬಾಸ್ ಕೂಡ ಒದ್ದಾಡಿರುವ ಪ್ರಸಂಗ ನಡೆದಿದೆ.












Click it and Unblock the Notifications