Lawyer Jagadish: ಮೂರು ತಿಂಗಳ ಬಳಿಕ ಲಾಯರ್ ಜಗದೀಶ್ ಜೈಲಿನಿಂದ ರಿಲೀಸ್
ಗಲಾಟೆ ಕೇಸ್‌ನಲ್ಲಿ ಜೈಲು ಸೇರಿದ್ದ ಬಿಗ್‌ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಅವರು ಮೂರು ತಿಂಗಳ ಬಳಿಕ ರಿಲೀಸ್ ಆಗಿದ್ದಾರೆ. ಸದಾ ಸೋಶಿಯಲ್ ಮೀಡಿಯಾದಲ್ಲಿ ಸೌಂಡ್ ಮಾಡ್ತಿದ್ದ ಜಗದೀಶ್ ರಾಜಕೀಯ ನಾಯಕರು, ಸಿನಿಮಾ ನಟ ನಟಿಯರ ಮೇಲೆ ಗಂಭೀರ ಆರೋಪಗಳನ್ನು ಮಾಡುತ್ತಾ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಾ ಸುದ್ದಿಯಾಗುತ್ತಿದ್ದರು. ಈ ಜನಪ್ರಿಯತೆಯಿಂದ ಅವರು ಕನ್ನಡ ಬಿಗ್‌ಬಾಸ್ ಸೀಸನ್-11ರ ಸ್ಪರ್ಧಿಯಾಗಿದ್ದರು. ಅಲ್ಲಿಂದ ಹೊರಬಂದ ನಂತರ ಜಗದೀಶ್ ಗಲಾಟೆ ಪ್ರಕರಣದಲ್ಲಿ ಜನವರಿ ತಿಂಗಳಲ್ಲಿ ಬಂಧನಕ್ಕೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಅವರಿಗೆ ಜಾಮೀನು ಸಿಕ್ಕಿದ್ದು, ಫೇಸ್‌ಬುಕ್ ಪೇಜ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ʼನಮಸ್ತೆ ಕರ್ನಾಟಕ, ನಾನು ಕೆ.ಎನ್.ಜಗದೀಶ್ ಕುಮಾರ್, ಹಲವು ವರ್ಷಗಳಿಂದ ಭ್ರಷ್ಟಾಚಾರದ ವಿರುದ್ಧ ಧೀರ ಹೋರಾಟ ನಡೆಸುತ್ತಿರುವ ಹೋರಾಟಗಾರ ಎಂದು ಜಗದೀಶ್ ಬರೆದುಕೊಂಡಿದ್ದಾರೆ. PSI ಹಗರಣವನ್ನು ಬಯಲು ಮಾಡಿದ್ದು, ADGP ಅಮೃತಪಾಲ್ ಅವರನ್ನು ಜೈಲಿಗೆ ಕಳಿಸಿದ್ದು ನಮ್ಮ ಟೀಂ, ದೊಡ್ಡ ರಾಜಕಾರಣಿಗಳ ಅಶ್ಲೀಲ ಸ್ಕ್ಯಾಂಡಲ್ ಅನ್ನು ಬಹಿರಂಗಪಡಿಸಿದ್ದು, ರವಿ ಡಿ.ಚೆನ್ನಣ್ಣನವರ್ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದು, ಟ್ರಾಫಿಕ್ ಟೋಯಿಂಗ್ ಸಿಸ್ಟಂ ಅನ್ನು ನಿಲ್ಲಿಸಿದ್ದು, ಕೊಡಿಗೇಹಳ್ಳಿ ಸುತ್ತಮುತ್ತ ಡ್ರಗ್ಸ್ ವಿರುದ್ಧ ಹೋರಾಟ ನಡೆಸಿದ್ದು ಇವೆಲ್ಲವೂ ನನ್ನ ಹೋರಾಟದ ಭಾಗʼ ಎಂದಿದ್ದಾರೆ.

ʼಈ ಧೈರ್ಯದ ಹೋರಾಟವನ್ನು ಸಹಿಸದ ಭ್ರಷ್ಟ ರಾಜಕೀಯ ಮತ್ತು ಪೊಲೀಸ್ ವ್ಯವಸ್ಥೆಯು ನನ್ನ ಮತ್ತು ನನ್ನ ಮಗನ ವಿರುದ್ಧ ಸಂಚು ರೂಪಿಸಿ, ಜನವರಿ 25ರಂದು ಸ್ಥಳೀಯ ಪುಂಡರಿಂದ ನನಗೆ ಮಾರಣಾಂತಿಕ ಹಲ್ಲೆ ನಡೆಸಿ, ಅಕ್ರಮವಾಗಿ ಜೈಲಿಗೆ ಕಳುಹಿಸಲಾಗಿತ್ತು. ಇವತ್ತಿಗೆ 93 ದಿನಗಳ ನಂತರ ನನಗೆ ನ್ಯಾಯ ಸಿಕ್ಕಿದೆ. ನನಗೆ ಜಾಮೀನು ಲಭಿಸಿದೆ. ನ್ಯಾಯಕ್ಕಾಗಿ ನನ್ನ ಹೋರಾಟ ಇನ್ನೂ ಜೀವಂತವಿದೆ, ನಾನು ಶರಣಾಗುವುದಿಲ್ಲ, ಜೈ ಕರ್ನಾಟಕʼ ಎಂದು ಬರೆದುಕೊಂಡಿದ್ದಾರೆ.
ಜಗದೀಶ್ ಅರೆಸ್ಟ್ ಆಗಿದ್ದೇಕೆ?
ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ಅಣ್ಣಮ್ಮ ದೇವಿಯ ಉತ್ಸವದ ವಿಚಾರವಾಗಿ ಲಾಯರ್ ಜಗದೀಶ್ ಹಾಗೂ ಸ್ಥಳೀಯರ ನಡುವೆ ದೊಡ್ಡ ಗಲಾಟೆ ನಡೆದಿತ್ತು. ಈ ವೇಳೆ ಕಾನೂನು ಬಾಹಿರವಾಗಿ ಫೈರ್ ಮಾಡಿದ ಆರೋಪದ ಮೇಲೆ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು. ಉತ್ತರ ಪ್ರದೇಶದಲ್ಲಿ ಮಾತ್ರ ಬಳಸಲು ಆ ಗನ್ ಲೈಸೆನ್ಸ್ ಪಡೆದಿದ್ದರು. ಆದರೆ ಗಲಾಟೆ ವೇಳೆ ಗನ್ ಬಳಸಿದ್ದು, ಕಾನೂನು ಬಾಹಿರವಾಗಿ ಗುಂಡು ಹಾರಿಸಿರುವ ಆರೋಪ ಕೇಳಿ ಬಂದಿತ್ತು.
ಬಳಿಕ ಪೊಲೀಸರಿಗೆ ಈ ಬಗ್ಗೆ ದೂರು ನೀಡಿದ್ದರಿಂದ ಜಗದೀಶ್ ಹಾಗೂ ಅವರ ಗನ್ ಮ್ಯಾನ್‌ನನ್ನು ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದರು. ಗಲಾಟೆಯಲ್ಲಿ ಜಗದೀಶ್ ಗನ್ಮ್ಯಾನ್ ಕಾನೂನು ಬಾಹಿರವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದರಿಂದ ಇಬ್ಬರ ಮೇಲೂ ಕೇಸ್ ದಾಖಲಾಗಿತ್ತು. ಇವರ ಮೇಲೆ ಹಲ್ಲೆ ಆರೋಪವೂ ಇದೆ.

ಅಣ್ಣಮ್ಮ ದೇವಿ ಕೂರಿಸುವ ವಿಚಾರಕ್ಕೆ ಜಗದೀಶ್ ಕಿರಿಕ್ ಮಾಡಿಕೊಂಡಿದ್ದರು. ಆಗ ಜಗದೀಶ್ ಮೇಲೆ ಹಲ್ಲೆಗೆ ಯತ್ನವೂ ನಡೆದಿತ್ತು. ಅವರಿಗೆ ಅವಾಜ್ ಹಾಕಿದ್ದ ಜಗದೀಶ್, ದರ್ಶನ್ ಅಭಿಮಾನಿಗಳನ್ನು ಕೆಣಕುವ ರೀತಿ ಮಾತನಾಡಿದ್ದರು. ಬಳಿಕ ಜಗದೀಶ್ ಕಾರಿನ ಮೇಲೆ ಅಟ್ಯಾಕ್ ಕೂಡ ಆಗಿತ್ತು. ಕೆಲವರು ದೊಣ್ಣೆ ತೆಗೆದುಕೊಂಡು ಬಂದು ಜಗದೀಶ್ ಕಾರಿಗೆ ಹಾನಿ ಮಾಡಿದ್ದಲ್ಲದೆ, ಹಲ್ಲೆ ಯತ್ನ ನಡೆಸಿದ್ದರು. ಈ ವೇಳೆ ಜಗದೀಶ್ ಅವರ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿದ್ದರು ಎಂದು ಆರೋಪಿಸಲಾಗಿದೆ.












Click it and Unblock the Notifications