Bigg Boss Betting: ಬಿಗ್‌ಬಾಸ್ ವಿನ್ನರ್ ಘೋಷಣೆಗೂ ಮುನ್ನ ಶುರುವಾಯ್ತು ಬೆಟ್ಟಿಂಗ್ ಭರಾಟೆ
ಬಿಗ್‌ಬಾಸ್.. ಬಿಗ್‌ಬಾಸ್.. ಬಿಗ್‌ಬಾಸ್.... ಪ್ರತಿಯೊಬ್ಬರ ಬಾಯಲ್ಲೂ ಈ ದಿನ ಬಿಗ್‌ಬಾಸ್‌ನದ್ದೇ ಜಪ. ಪುಟ್ಟ ಮಕ್ಕಳಿಂದ ಹಿಡಿದು ವಯಸ್ಸಾದವರವರೆಗೆ ಬಿಗ್‌ಬಾಸ್‌ನಲ್ಲಿ ಯಾರು ಗೆದ್ದರು? ಯಾರು ಸೋತರು? ಇದೇ ಪ್ರಶ್ನೆ ಇದೇ ಮಾತು. ಇದೀಗ ವಿಷಯ ಅದಲ್ಲ. ಗಲ್ಲಿ ಗಲ್ಲಿಯಲ್ಲಿ ಬಿಗ್‌ಬಾಸ್ ವಿನ್ನರ್ ವಿಚಾರದಲ್ಲಿ ಬೆಟ್ಟಿಂಗ್ ಶುರುವಾಗಿದೆ. ತೆರೆಮರೆಯಲ್ಲಿ ಯುವಕರು ಗೆಲ್ಲುವ ಕುದುರೆ ಹಿಡಿದುಕೊಂಡು ಬೆಟ್ಟಿಂಗ್ ಕಟ್ಟಲು ಶುರು ಮಾಡಿದ್ದಾರೆ.
ಹೌದು... ಬಿಗ್‌ಬಾಸ್ ಕನ್ನಡ ಸೀಸನ್ 11ರಲ್ಲಿ ಗೆಲ್ಲುವ ರೇಸ್‌ನಲ್ಲಿ ಇದೀಗ ತ್ರಿವಿಕ್ರಮ್ ಹಾಗೂ ಹನುಮಂತ ಉಳಿದುಕೊಂಡಿದ್ದಾರೆ. ಇವರಿಬ್ಬರಲ್ಲಿ ಯಾರು ವಿನ್ ಆಗಲಿದ್ದಾರೆ ಎಂದು ಯುವ ಸಮೂಹ ಬೆಟ್ಟಿಂಗ್ ಕಟ್ಟಲು ಶುರು ಮಾಡಿದೆ. ಹನುಮಂತನ ಪರ ಒಲವು ಅಧಿಕವಾಗಿದ್ದರಿಂದ ಹನುಮಂತನಿಗೆ ಹೆಚ್ಚು ಹಣ ಬಾಜಿ ಕಟ್ಟಲಾಗುತ್ತಿದೆ.

ಹನುಮಂತ ಪರ ಭರ್ಜರಿ ಬೆಟ್ಟಿಂಗ್
5000- 25,000 ರೂಪಾಯಿವರೆಗೂ ಸ್ಪರ್ಧಿಗಳ ಮೇಲೆ ಜನ ಬಾಜಿ ಕಟ್ಟಲು ಆರಂಭಿಸಿದ್ದಾರೆ. ಉತ್ತರ ಕರ್ನಾಟಕದಲ್ಲಿ ಹನುಮಂತನ ಪರ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ. ಸಣ್ಣ ಪುಟ್ಟ ಹಳ್ಳಿಗಳಲ್ಲಿ ಹನುಮಂತನ ಪರ ಒಲವು ಹೆಚ್ಚಾಗಿದ್ದು ಹನುಮಂತನೇ ಗೆಲ್ಲುವ ವಿಶ್ವಾಸದಿಂದ ಬಾಜಿ ಕಟ್ಟುವವರ ಸಂಖ್ಯೆ ಹೆಚ್ಚಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಇನ್ನೂ ತ್ರಿವಿಕ್ರಮ್ ಪರ ಕೂಡ ಜನ ಬಾಜಿ ಕಟ್ಟಿತ್ತಿದ್ದಾರೆ. ಕೊನೆ ಕ್ಷಣದಲ್ಲಿ ಫಲಿತಾಂಶ ಬದಲಾಗಬಹುದು ಎನ್ನುವ ನಿರೀಕ್ಷೆಯಲ್ಲಿ ತ್ರಿವಿಕ್ರಮ್ ಪರ 5000 ದಿಂದ 30,000ದವರೆಗೂ ಬಾಜಿ ಕಟ್ಟಲು ಶುರುವಾಗಿದೆ. ಹೀಗಾಗಿ ಈ ಬಾರಿಯ ಬಿಗ್‌ಬಾಸ್ ಫಲಿತಾಂಶ ಯಾವ ರಾಜಕೀಯ ಚುನಾವಣೆ ಫಲಿತಾಂಶಕ್ಕೂ ಹಾಗೂ ಕ್ರಿಕೆಟ್ ಮ್ಯಾಚ್‌ಗೂ ಕಡಿಮೆ ಇಲ್ಲ ಎನ್ನುವಂತಿದೆ.
ಅಂಗಡಿಗಳ ಮುಂದೆ ಟಿವಿ- ಬಿಗ್‌ಬಾಸ್ ನೋಡಲು ಜಮಾಯಿಸಿದ ಜನ
ಇನ್ನೂ ಕೆಲ ಅಂಗಡಿಗಳ ಮುಂದೆ ಟಿವಿಯನ್ನು ಹೊರಗಡೆ ಇಟ್ಟು ಜನ ಜಮಾಯಿಸಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುತ್ತಿದ್ದಾರೆ. ಈ ಬಾರಿ ಬಿಗ್‌ಬಾಸ್ ಅದೆಷ್ಟು ಹವಾ ಕ್ರಿಯೇಟ್ ಮಾಡಿದೆ ಎಂದರೆ ಜನ ಐಪಿಎಲ್ ಕ್ರಿಕೆಟ್ ಮ್ಯಾಚ್ ನೋಡುವಂತೆ ಬಿಗ್‌ಬಾಸ್ ಅನ್ನು ನೋಡುತ್ತಿದ್ದಾರೆ. ಅಂಗಡಿ ಹೋಟೆಲ್‌ಗಳಲ್ಲಿ ಟಿವಿಯನ್ನು ಹೊರಗಡೆ ಇಟ್ಟಿದ್ದರಿಂದ ಜನ ಗುಂಪು ಗುಂಪಾಗಿ ಸೇರಿ ಬಿಗ್‌ಬಾಸ್ ಗ್ರ್ಯಾಂಡ್ ಫಿನಾಲೆಯನ್ನು ವೀಕ್ಷಿಸುತ್ತಿದ್ದಾರೆ.
ವಿಶೇಷವಾಗಿ ಹನುಮಂತ ಹಾಗೂ ತ್ರಿವಿಕ್ರಮ್ ಫ್ಯಾನ್ಸ್ ಹೆಚ್ಚಾಗಿ ಒಂದೆಡೆ ಸೇರಿ ಬಿಗ್‌ಬಾಸ್ ವೀಕ್ಷಿಸುತ್ತಿದ್ದು, ಬಿಗ್‌ಬಾಸ್ ಕಳೆಯನ್ನು ಹೆಚ್ಚಿಸಿದ್ದಾರೆ. ಇನ್ನೂ ಇಂದು ಭಾನುವಾರವಾಗಿದ್ದರಿಂದ ಹೆಚ್ಚು ಜನ ಬಿಡುವು ಮಾಡಿಕೊಂಡು ಬಿಗ್‌ಬಾಸ್ ವೀಕ್ಷಿಸಲು ಟಿವಿ ಮುಂದೆ ಕುಳಿತುಕೊಂಡಿದ್ದಾರೆ.
ಒಟ್ಟಿನಲ್ಲಿ ಈ ಬಾರಿಯ ಬಿಗ್‌ಬಾಸ್ ಫಲಿತಾಂಶ ತಿಳಿಯಲು ಪ್ರತಿಯೊಬ್ಬ ಮತದಾರರು ಕಾತುರದಿಂದ ಕಾಯುತ್ತಿದ್ದಾರೆ. ಫಲಿತಾಂಶ ಇನ್ನೇನು ಕೆಲವೇ ಗಂಟೆಗಳಲ್ಲಿ ತಿಳಿಯಲಿದ್ದು, ಹೆಚ್ಚು ಮತ ಗಳಿಸುವ ಸ್ಪರ್ಧಿ ವಿಜೇತರಾಗಲಿದ್ದಾರೆ.












Click it and Unblock the Notifications