Ed Sheeran: 'ಶೇಪ್ ಆಫ್ ಯು' ಗಾಯಕನಿಗೆ ಚರ್ಚ್ ಸ್ಟ್ರೀಟ್‌ನಲ್ಲಿ ಶೇಪ್ ಔಟ್, ಅಸಲಿಗೆ ನಡೆದಿದ್ದೇನು?
ಶೇಪ್ ಆಫ್ ಯು (Shape of You) ಹಾಡಿನ ಖ್ಯಾತಿಯ ಇಂಗ್ಲೆಂಡ್‌ನ ಫೇಮಸ್ ಗಾಯಕ ಹಾಗೂ ಗೀತರಚನೆಕಾರ ಎಡ್ ಶೀರನ್ (Ed Sheeran) ಬೆಂಗಳೂರಿಗೆ ಬಂದು ಮುಜುಗರಕ್ಕೆ ಒಳಗಾಗಿದ್ದಾರೆ. ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಬೀದಿಯಲ್ಲೇ ನಿಂತು ತಮ್ಮ ಗಾಯನದ ಮೂಲಕ ಎಲ್ಲರನ್ನೂ ರಂಜಿಸುತ್ತಿದ್ದಾಗ ಮಧ್ಯಪ್ರವೇಶಿಸಿದ ಬೆಂಗಳೂರು ಪೊಲೀಸರು ಗಾಯಕನಿಗೆ ಹಾಡು ಹಾಡದಂತೆ ತಡೆದಿದ್ದಾರೆ. ಈ ವಿಡಿಯೋ ವೈರಲ್ ಆಗಿದ್ದು ಪರ ಮತ್ತು ವಿರೋಧದ ಚರ್ಚೆ ಹುಟ್ಟುಹಾಕಿದೆ.
ಎಡ್ ಶೀರನ್ ಅವರು ಬೆಂಗಳೂರಿಗೆ ಬಂದಿದ್ದರು. ಚರ್ಚ್‌ಸ್ಟ್ರೀಟ್‌ನಲ್ಲಿ ಸಾಮಾನ್ಯರಂತೆ ಬಂದು ಏಕಾಏಕಿ ತಮ್ಮ ಗಾಯನದ ಮೂಲಕ ಸರ್‌ಪ್ರೈಸ್ ಕೊಡಲು ಮುಂದಾಗಿದ್ದರು. ಆದರೆ, ಪೊಲೀಸರು ತಡೆದಿದ್ದರಿಂದ ಬೇಸರಗೊಂಡು ಅಲ್ಲಿಂದ ಹೊರಟು ಹೋದರು. ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿವೆ. ಅನುಮತಿಯಿಲ್ಲದೆ ಸಂಗೀತ ಕಾರ್ಯಕ್ರಮ ನಡೆಸಿದ ಹಿನ್ನೆಲೆ ಪೊಲೀಸರು ಎಡ್ ಶೀರನ್ ಅವರನ್ನು ತಡೆದಿದ್ದಾಗಿ ತಿಳಿದುಬಂದಿದೆ.

ಸೋಶಿಯಲ್ ಮೀಡಿಯಾದಲ್ಲಿ ಹಲವರು ಎಡ್ ಶೀರನ್ ಬೆನ್ನಿಗೆ ನಿಂತಿದ್ದಾರೆ. ಕಲಾವಿದರೊಬ್ಬರಿಗೆ ಬೆಂಗಳೂರು ಪೊಲೀಸರು ಈ ರೀತಿ ಅವಮಾನ ಮಾಡಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ. ಇನ್ನೂ ಕೆಲವರು ಎಡ್ ಶೀರನ್ ಸೆಲೆಬ್ರಿಟಿ ಆದ ಕಾರಣ ಸಂಗೀತ ಕಾರ್ಯಕ್ರಮವನ್ನು ಆ ರೀತಿ ಅನುಮತಿಯಿಲ್ಲದೆ ಆಯೋಜಿಸಿದ್ದು ತಪ್ಪು, ಇದರಲ್ಲಿ ಪೊಲೀಸರ ತಪ್ಪೇನಿಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.
ಈ ಘಟನೆ ಬಗ್ಗೆ ಜಾಗತಿಕವಾಗಿ ಚರ್ಚೆ ನಡೆಯುತ್ತಿದೆ. ಬಹುತೇಕರು ಎಡ್ ಶೀರನ್ ಅವರಿಗೆ ಬೆಂಗಳೂರು ಪೊಲೀಸರು ಅವಮಾನ ಮಾಡಿದ್ದಾರೆ. ಬೀದಿಗಳಲ್ಲಿ ಫೇಮಸ್ ಗಾಯಕನಿಗೆ ಈ ರೀತಿ ಮಾಡಬಾರದಿತ್ತು ಎಂದು ಖಂಡಿಸಿದ್ದಾರೆ. ಆದರೆ ಈ ಬಗ್ಗೆ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಸದಾ ಜನಜಂಗುಳಿ ಇರುತ್ತದೆ. ಅದರಲ್ಲೂ ವೀಕೆಂಡ್‌ನಲ್ಲಿ ಇನ್ನೂ ಹೆಚ್ಚಿನ ಜನ ಸೇರುತ್ತಾರೆ. ಈ ಕಾರಣದಿಂದ ಎಡ್ ಶೀರನ್ ಅವರ ಕಾರ್ಯಕ್ರಮವನ್ನು ತಡೆಯಲಾಯಿತು ಎಂದಿದ್ದಾರೆ.

ಚರ್ಚ್‌ಸ್ಟ್ರೀಟ್‌ನಲ್ಲಿ ಎಡ್ ಶೀರನ್ ಅವರ ಸಂಗೀತ ಕಾರ್ಯಕ್ರಮಕ್ಕೆ ಆಯೋಜಕರು ಬಂದು ಅನುಮತಿ ಕೇಳಿದ್ದರು. ಜನಸಂದಣಿ ಹೆಚ್ಚಾಗುವ ಕಾರಣಕ್ಕೆ ಅನುಮತಿ ನೀಡಲಿಲ್ಲ. ಆದರೂ ಅವರು ಸಂಗೀತ ಕಾರ್ಯಕ್ರಮ ನಡೆಸಲು ಮುಂದಾದಾಗ ಪೊಲೀಸರು ಅಲ್ಲಿಂದ ತೆರಳುವಂತೆ ಎಡ್ ಶೀರನ್ ಅವರಿಗೆ ತಿಳಿಸಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಬಿಜೆಪಿ ಸಂಸದ ಪಿ.ಸಿ.ಮೋಹನ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ ಪೊಲೀಸರ ನಡೆಯನ್ನು ಶ್ಲಾಘಿಸಿದ್ದಾರೆ. ಶೇಪ್ ಆಫ್ ಯು, ಬೆಂಗಳೂರು ಪೊಲೀಸರು ಯಾವುದೇ ಅನುಮತಿಯಿಲ್ಲದೆ ಹಾಡುತ್ತಿದ್ದ ಖ್ಯಾತ ಗಾಯಕನ ಮೈಕ್ ಕಸಿದು ತಡೆದಿದ್ದಾರೆ. ನೀವು ಗ್ಲೋಬಲ್ ಸ್ಟಾರ್ ಆದರೂ ಸ್ಥಳೀಯವಾಗಿರುವ ರೂಲ್ಸ್ ಫಾಲೋ ಮಾಡಬೇಕು. ಅನುಮತಿ ಇಲ್ಲದಿದ್ರೆ, ಯಾವುದೇ ಪ್ರದರ್ಶನವಿಲ್ಲ ಎಂದು ಹೇಳಿದ್ದಾರೆ.












Click it and Unblock the Notifications