Shankar Nag: ಬೆಂಗಳೂರು ಮೆಟ್ರೋ, ನಂದಿ ಬೆಟ್ಟಕ್ಕೆ ರೋಪ್‌ವೇ; ಶಂಕರ್ ನಾಗ್ ಕಂಡಿದ್ದ ಕನಸುಗಳೆಷ್ಟು?
ಇಂದು (ನವೆಂಬರ್ 9) ಶಂಕರ್ ನಾಗ್ ಅವರ 70ನೇ ಹುಟ್ಟುಹಬ್ಬ, 35 ವರ್ಷಕ್ಕೆ ಶಂಕರ್ ನಾಗ್ ಕನ್ನಡಿಗರನ್ನು ಬಿಟ್ಟು ಹೋದರೂ, ಕನ್ನಡಿಗರು ಮಾತ್ರ ಶಂಕರ್ ನಾಗ್‌ರನ್ನು ಎಂದಿಗೂ ಮರೆಯಲ್ಲ. ಕನ್ನಡ ಚಿತ್ರರಂಗಕ್ಕೆ, ನಾಟಗ ರಂಗಕ್ಕೆ ಶಂಕರ್ ನಾಗ್ ಕೊಡುಗೆ ಅಪಾರ. ಕನ್ನಡ ಚಿತ್ರರಂಗಕ್ಕಾಗಿ ಮಾತ್ರವಕ್ಕ, ರಾಜ್ಯದ ಅಭಿವೃದ್ಧಿಗಾಗಿ ಹಲವು ಕನಸು ಕಂಡಿದ್ದ ಕನಸುಗಾರ ಶಂಕರ್ ನಾಗ್. ಬೆಂಗಳೂರಿಗೆ ಮೆಟ್ರೋ ಬೇಕು ಎಂದು ಮೊದಲು ಯೋಜಿಸಿದ್ದೇ ಶಂಕ್ರಣ್ಣ.
ಶಂಕರ್ ನಾಗ್ ಸುಮ್ಮನೆ ಬೆಂಗಳೂರಿಗೆ ಮಟ್ರೋ ಬೇಕು ಎಂದವರಲ್ಲ. ಅದಕ್ಕಾಗಿ ಅಧ್ಯಯನ ಕೂಡ ಮಾಡಿದ್ದರು. ತಮ್ಮ ಸ್ವಂತ ಹಣದಲ್ಲೇ ಮಲೇಷ್ಯಾ ಮತ್ತು ಟೋಕಿಯೋಗೆ ತೆರಳಿ ಅಲ್ಲಿನ ಮೆಟ್ರೋ ವ್ಯವಸ್ಥೆ ಹೇಗಿದೆ ಎನ್ನುವುದನ್ನು ಅಧ್ಯಯನ ಮಾಡಿದ್ದ ಶಂಕರ್ ನಾಗ್, ಈ ಬಗ್ಗೆ ಸರ್ಕಾರಕ್ಕೆ ಕೂಡ ವರದಿ ಸಲ್ಲಿಸಿದ್ದರು.

ಅವರು ಅಂದು ಕಂಡಿದ್ದ ಕನಸು ಇಂದು ಲಕ್ಷಾಂತರ ಬೆಂಗಳೂರಿನ ಮಂದಿಗೆ ಟ್ರಾಫಿಕ್ ಸಮಸ್ಯೆಯಿಂದ ಮುಕ್ತಿ ಕೊಟ್ಟಿದೆ. ನಮ್ಮ ಮೆಟ್ರೋ ಬದಲು ಶಂಕರ್ ನಾಗ್ ಮೆಟ್ರೋ ಎಂದು ಮರುನಾಮಕರಣ ಮಾಡಲು ಅಭಿಮಾನಿಗಳು ಒತ್ತಾಯಿಸಿದರು ಯಾವುದೇ ಪ್ರಯೋಜನವಾಗಿಲ್ಲ. ಒಂದು ನಿಲ್ದಾಣಕ್ಕೆ ಶಂಕರ್ ನಾಗ್ ಹೆಸರು ಇಡಬೇಕು ಎನ್ನುವ ಆಗ್ರಹ ಇದ್ದರೂ ಸರ್ಕಾರ ಅದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
ನಂದಿ ಬೆಟ್ಟಕ್ಕೆ ರೋಪ್‌ವೇ
ನಂದಿ ಬೆಟ್ಟಕ್ಕೆ ಕೇಬಲ್ ಕಾರ್ ತರಲು ಸರ್ಕಾರ ಈಗ ಯೋಜಿಸುತ್ತಿದೆ, ಆದರೆ 80ರ ದಶಕದಲ್ಲೇ ಶಂಕರ್ ನಾಗ್ ಈ ಯೋಜನೆ ರೂಪಿಸಿದ್ದರು. ಬೆಂಗಳೂರಿನಿಂದ ನಂದಿ ಬೆಟ್ಟಕ್ಕೆ ರೋಪ್ ವೇ ಮಾಡಬೇಕು ಎನ್ನುವುದು ಅವರ ದೊಡ್ಡ ಕನಸಾಗಿತ್ತು. ಕನಸು ಕಂಡಿದ್ದರು ಎನ್ನುವುದು ಮಾತ್ರವಲ್ಲ, ಯೋಜನೆ ಬಗ್ಗೆ ಸಾಕಷ್ಟು ಅಧ್ಯಯನ ಕೂಡ ಮಾಡುತ್ತಿದ್ದರು. ಅದು ಶಂಕರ್ ನಾಗ್‌ರ ವಿಶೇಷತೆ.
ಇಷ್ಟು ಮಾತ್ರವಲ್ಲ ಕಡಿಮೆ ವೆಚ್ಚದಲ್ಲಿ ಬಡವರಿಗೆ ಮನೆ ನಿರ್ಮಾಣ, ರಾಜ್ಯದಲ್ಲಿ ರಂಗ ಮಂದಿರಗಳು, ಕನ್ನಡ ಚಿತ್ರರಂಗಕ್ಕೆ ಬೇಕಾದ ಸ್ಟುಡಿಯೋ ನಿರ್ಮಾಣ ಮಾಡುವುದು ಕೂಡ ಅವರ ಕನಸಾಗಿತ್ತು. ಒಂದು ಕಾಲದಲ್ಲಿ ಕನ್ನಡ ಚಿತ್ರರಂಗ ಶೂಟಿಂಗ್, ಡಬ್ಬಿಂಗ್, ಎಡಿಟಿಂಗ್ ಎಲ್ಲದಕ್ಕೂ ಅಂದಿನ ಮದ್ರಾಸ್ ಅನ್ನು ಅವಲಂಬಿಸಿತ್ತು, ಮದ್ರಾಸ್ ಬಿಟ್ಟು ಕನ್ನಡ ಚಿತ್ರರಂಗ ಬೆಂಗಳೂರಿನಲ್ಲೇ ಇರಬೇಕು ಎನ್ನುವ ಕನಸು ಕೂಡ ಶಂಕರ್ ನಾಗ್‌ರದ್ದಾಗಿತ್ತು.
ಅಂತಹ ಶಂಕರ್ ನಾಗ್ ನಮ್ಮನ್ನಗಲಿ 35 ವರ್ಷಗಳಾಗಿದೆ. ಇಂದಿಗೂ ಆಟೋಗಳ ಮೇಲೆ ಹೆಚ್ಚಾಗಿ ಕಾಣುವುದು ಶಂಕರ್‍ನಾಗ್‌ರ ಆ ನಗುಮುಖ. ಕನ್ನಡ ಚಿತ್ರರಂಗ, ಕನ್ನಡ ನಾಟಕ ರಂಗ, ಕನ್ನಡಿಗರು ಇರುವವರೆಗೂ ಶಂಕರ್ ನಾಗ್ ಎನ್ನುವ ಬಹುಮುಖ ಪ್ರತಿಭೆ ಸದಾ ಜೀವಂತವಾಗಿರುತ್ತದೆ.












Click it and Unblock the Notifications