CCL 2025: ಚೆನ್ನೈ ವಿರುದ್ಧದ ಸೆಮಿಫೈನಲ್‌ಗೆ ಮುನ್ನ ಕರ್ನಾಟಕ ಬುಲ್ಡೋಜರ್ಸ್‌ಗೆ ಸ್ಫೋಟಕ ಬ್ಯಾಟರ್ ಎಂಟ್ರಿ!
ಸೆಲೆಬ್ರಿಟಿ ಕ್ರಿಕೆಟ್ ಲೀಗ್ (CCL) 2025ರ ಸೆಮಿಫೈನಲ್ ಪಂದ್ಯಗಳು ಶನಿವಾರ ಮೈಸೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ನಡೆಯಲಿವೆ. ಮಧ್ಯಾಹ್ನ 2 ಗಂಟೆಗೆ ಆರಂಭವಾಗುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಾಲ್ ಟೈಗರ್ಸ್ ತಂಡವು ಪಂಜಾಬ್ ದಿ ಶೇರ್ ತಂಡವನ್ನು ಎದುರಿಸಲಿದ್ದು, ಸಂಜೆ 6.30ಕ್ಕೆ ಆರಂಭವಾಗುವ ಎರಡನೇ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ಚೆನ್ನೈ ರ್‍ಹಿನೋಸ್ ವಿರುದ್ಧ ಸೆಣೆಸಲಿದೆ.
ಲೀಗ್ ಹಂತದ ಪಂದ್ಯಗಳಿಂದ ಹೊರಗುಳಿದಿದ್ದ ಸ್ಫೋಟಕ ಬ್ಯಾಟರ್ ಬಚ್ಚನ್ ಅರುಣ್ ಬಚ್ಚನ್ ತಂಡಕ್ಕೆ ವಾಪಸಾಗಿದ್ದಾರೆ. ಕಳೆದ ಆವೃತ್ತಿಯಲ್ಲಿ ಸ್ಫೋಟಕ ಬ್ಯಾಟಿಂಗ್‌ನಿಂದಲೇ ಗಮನ ಸೆಳೆದಿದ್ದ ಅರುಣ್ ಬಚ್ಚನ್, ಈ ಬಾರಿ ಲೀಗ್ ಹಂತದ ಪಂದ್ಯಗಳಲ್ಲಿ ಆಡಿರಲಿಲ್ಲ, ಚೆನ್ನೈ ರ್‍ಹಿನೋಸ್ ವಿರುದ್ಧದ ಸೆಮಿಫೈನಲ್ ಪಂದ್ಯಕ್ಕೆ ಮುನ್ನ ಅವರು ತಂಡಕ್ಕೆ ಮರಳಿದ್ದಾರೆ.

ಕರ್ನಾಟಕ ಬುಲ್ಡೋಜರ್ಸ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಅರುಣ್ ಬಚ್ಚನ್ ತಂಡಕ್ಕೆ ವಾಪಸಾಗಿದ್ದು, ಮೈಸೂರಿನಲ್ಲಿ ಅವರ ಸ್ಫೋಟಕ ಬ್ಯಾಟಿಂಗ್ ನೋಡಲು ಸಜ್ಜಾಗಿ ಎಂದು ಹೇಳಿದೆ. ಡಾರ್ಲಿಂಗ್ ಕೃಷ್ಣ, ರಾಜೀವ್ ಹನು ಈಗಾಗಲೇ ಉತ್ತಮ ಫಾರ್ಮ್‌ನಲ್ಲಿದ್ದು ಅರುಣ್ ಬಚ್ಚನ್ ಬಂದಿರುವುದು ತಂಡದ ಬ್ಯಾಟಿಂಗ್‌ಗೆ ಮತ್ತಷ್ಟು ಬಲ ತಂದುಕೊಟ್ಟಿದೆ.
ಸುದೀಪ್ ಪಡೆಯಿಂದ ಅಭ್ಯಾಸ
ಶುಕ್ರವಾರ ಮೈಸೂರಿನ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಕರ್ನಾಟಕ ಬುಲ್ಡೋಜರ್ಸ್ ತಂಡದ ಆಟಗಾರರು ವಿಶೇಷ ಪೂಜೆ ಸಲ್ಲಿಸಿದರು. ನಾಯಕ ಕಿಚ್ಚ ಸುದೀಪ್‌ಗೆ ಪತ್ನಿ ಪ್ರಿಯಾ ಸುದೀಪ್ ಜೊತೆಯಾಗಿದ್ದರು. ಸುನಿಲ್ ರಾವ್, ಮಂಜುನಾಥ್ ಗೌಡ, ರಾಜೀವ್ ಹನು, ಡಾರ್ಲಿಂಗ್ ಕೃಷ್ಣ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.
ಶುಕ್ರವಾರ ತಂಡದ ಆಟಗಾರರು ಅಭ್ಯಾಸ ನಡೆಸಿದ್ದು ಶನಿವಾರದ ಪಂದ್ಯಕ್ಕೆ ಸಜ್ಜಾಗಿದ್ದಾರೆ. ಲೀಗ್ ಹಂತದಲ್ಲಿ ಚೆನ್ನೈ ರ್‍ಹಿನೋಸ್ ವಿರುದ್ಧ ಗೆಲುವು ಸಾಧಿಸಿರುವ ಕರ್ನಾಟಕ ಬುಲ್ಡೊಜರ್ಸ್ ಸೆಮಿಫೈನಲ್‌ನಲ್ಲೂ ಚೆನ್ನೈ ಪಡೆಯನ್ನು ಮಣಿಸಿ ಫೈನಲ್‌ಗೇರುವ ವಿಶ್ವಾಸದಲ್ಲಿದೆ.
ಶನಿವಾರ ಸಂಜೆ 6.30ಕ್ಕೆ ಈ ಪಂದ್ಯ ಆರಂಭವಾಗಲಿದೆ. ಈಗಾಗಲೇ ಈ ಪಂದ್ಯದ ಎಲ್ಲಾ ಟಿಕೆಟ್ ಸೋಲ್ಡ್ ಔಟ್ ಆಗಿದ್ದು ಕಿಚ್ಚನ ಪಡೆಗೆ ಮೈದಾನದಲ್ಲಿ ಭಾರಿ ಬೆಂಬಲ ಸಿಗಲಿದೆ. ತವರಿನ ಅಭಿಮಾನಿಗಳ ಎದುರು ಪ್ರಶಸ್ತಿ ಗೆಲ್ಲುವ ಸುವರ್ಣ ಅವಕಾಶ ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಸಿಕ್ಕಿದ್ದು ಸದುಪಯೋಗಪಡಿಸಿಕೊಳ್ಳುತ್ತಾ ಎಂದು ಕಾದುನೋಡಬೇಕಿದೆ.
ಕರ್ನಾಟಕ ಬುಲ್ಡೋಜರ್ಸ್ ತಂಡ
ಸುದೀಪ್ (ನಾಯಕ), ರಾಜೀವ್ ಹನು, ಡಾರ್ಲಿಂಗ್ ಕೃಷ್ಣ, ಜಯರಾಮ್ ಕಾರ್ತಿಕ್, ಗೋಲ್ಡನ್ ಸ್ಟಾರ್ ಗಣೇಶ್, ಮಂಜುನಾಥ್ ಗೌಡ, ಕರಣ್ ಆರ್ಯನ್,ಸುನೀಲ್ ರಾವ್, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ಅನೂಪ್ ಭಂಡಾರಿ.












Click it and Unblock the Notifications