'ಕೊನೆಯದಾಗಿ ಚಪ್ಪಲಿ ಕೇಳಿದ ಅಪ್ಪನಿಗೆ ಅದರಲ್ಲೇ ಹೊಡಿತೀನಿ ಅಂದೆ'
ಕನ್ನಡದ ಜನಪ್ರಿಯ ನಿರೂಪಕಿ ಅನುಪಮಾ ಗೌಡ ತಮ್ಮ ತಂದೆಯನ್ನು ಕಳೆದುಕೊಂಡ ಘಟನೆಯನ್ನು ವಿವರಿಸಿದ್ದಾರೆ. ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅವರು, ತಂದೆಯನ್ನು ಕಳೆದುಕೊಂಡ ಕ್ಷಣ ಕ್ಷಣವನ್ನು ವಿವರಿಸಿದ್ದಾರೆ.
'ನಾನು ಬಿಗ್ ಬಾಸ್‌ನಿಂದ ಬಂದ ಏಳು-ಎಂಟು ತಿಂಗಳಲ್ಲಿ ತಂದೆ ತೀರಿಕೊಂಡರು. ಅವರಿಗೆ ಜಾಂಡೀಸ್ ಆಗಿತ್ತು. ಅದಾದ ಮೇಲೆ ಅವರಿಗೆ ಕಿಡ್ನಿ ವೈಫಲ್ಯ ಆಯ್ತು. ಆಮೇಲೆ ಒಂದೊಂದೇ ಅಂಗ್ಯವೈಫಲ್ಯವಾಯ್ತು. ನಾನು ಕನ್ನಡ ಕೋಗಿಲೆ ಶೂಟಿಂಗ್ ಮಾಡುವ ವೇಳೆ ನನ್ನ ತಂಗಿ ಫೋನ್ ಮಾಡಿ ಹೇಳಿದಳು. ಅವರಿಗೆ ಕಣ್ಣೆಲ್ಲಾ ಹಳದಿ ಆಗಿದೆ. ಆದರೂ ಆಸ್ಪತ್ರೆಗೆ ಹೋಗಲು ಒಪ್ಪುತ್ತಿಲ್ಲ ಅಂತಾ ಹೇಳಿದಳು. ಬಾಯಿ ಮುಚ್ಚಿಕೊಂಡು ಹೋಗಬೇಕು ಅಂದೆ. ಕೊನೆಗೆ ಮನೆಯವರೆಲ್ಲಾ ಸೇರಿ ಆಸ್ಪತ್ರೆಗೆ ಸೇರಿಸಿದ್ದಾರೆ.

'ಆ ಆಸ್ಪತ್ರೆಯವರು ನಿಜವಾದ ಸಮಸ್ಯೆಗೆ ಚಿಕಿತ್ಸೆ ಕೊಡದೇ ಬೇರೆ ಏನೋ ಔಷಧಿಗಳನ್ನು ಕೊಟ್ಟ ಕಾರಣ ಒಂದೇ ವಾರದಲ್ಲಿ ಹಂತ ಹಂತವಾಗಿ ಕುಗ್ಗಿ ಹೋದರು. ಕೊನೆ ಕೊನೆಗೆ ಅವರು ಯಾರನ್ನೂ ಗುರುತು ಸಹ ಹಿಡಿಯುತ್ತಿರಲಿಲ್ಲ. ಒಬ್ಬ ತಂದೆ ಮಗಳನ್ನೇ ಗುರುತು ಹಿಡಿಯುತ್ತಿಲ್ಲ ಅಂದರೆ ಅದಕ್ಕಿಂತ ಕೆಟ್ಟ ಪರಿಸ್ಥಿತಿ ಬೇರೆ ಏನು ಇಲ್ಲ' ಎಂದರು.
'ನಾನು ಶೂಟಿಂಗ್‌ನಲ್ಲಿದ್ದು, ನನ್ನ ಸ್ನೇಹಿತರನ್ನು ಆಸ್ಪತ್ರೆಯಲ್ಲಿ ಬಿಟ್ಟಿದ್ದೆ. ಆ ಸಮಯದಲ್ಲಿ ಕೆಲಸ ಕೂಡ ಮುಖ್ಯವಾಗಿತ್ತು. ಹೀಗಾಗಿ ನನ್ನ ಸ್ನೇಹಿತರು ನನ್ನ ಬದಲಿಗೆ ಅಲ್ಲಿದ್ದು ನೋಡಿಕೊಳ್ಳುತ್ತಿದ್ದರು, ಕೊನೆಗೆ ಬೇರೆ ಆಸ್ಪತ್ರೆಗೆ ಸೇರಿಸುವ ಎಲ್ಲಾ ರೀತಿಯ ತಯಾರಿ ಕೂಡ ಮಾಡಿಕೊಂಡೆವು. ನಾನು ಕೂಡ ಆಸ್ಪತ್ರೆಗೆ ಹೋದೆ. ಅವರ ಶರ್ಟ್ ಬದಲಿಸಿ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ಈ ವೇಳೆ ಒಂದು ಕೆಟ್ಟ ಅನುಭವವಾಯ್ತು'.

'ನನಗೆ ನರ್ಸ್‌ಗಳ ಮೇಲೆ ಬಹಳ ಗೌರವ ಇದೆ. ಆದರೆ ಕೆಲವು ನರ್ಸ್‌ಗಳ ವರ್ತನೆ ಕೆಟ್ಟ ಕೋಪ ತರಿಸುತ್ತದೆ. ಆ ವ್ಯಕ್ತಿಗೆ ಏನು ಆಗುತ್ತಿದೆ ಅಂತಾ ಗೊತ್ತಿಲ್ಲ ಅಂತಹ ಪರಿಸ್ಥಿತಿಯಲ್ಲಿರುವ ವ್ಯಕ್ತಿಯನ್ನು ಬೇಕಾಬಿಟ್ಟಿ ಎಳೆದಾಡುತ್ತಿದ್ದರು. ಅದನ್ನು ನೋಡಿ ನಾನೇ ಬೇಡ ಎಂದು ಬಟ್ಟೆ ಹಾಕಿದೆ. ಆಮೇಲೆ ಅವರನ್ನು ಲಿಫ್ಟ್ ಒಳಗೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ನನ್ನ ಚಪ್ಪಲಿ ಎತ್ತಿಕೋ, ಬೇಕು ಅಂದರು. ಆ ಸಮಯದಲ್ಲಿ ನನಗೆ ಕೋಪ ಬಂತು, ಪರಿಸ್ಥಿತಿ ಇಷ್ಟಾಗುವವರೆಗೂ ನನಗೆ ಹೇಳಿಲ್ಲ, ಹುಷಾರಾಗಿ ಮನೆಗೆ ಬಂದ ಮೇಲೆ ಅದರಲ್ಲೇ ಹೊಡೆಯುತ್ತೇನೆ ಅಂದೆ. ಅದನ್ನು ಕೇಳಿ ಅವರು ನಕ್ಕರು'.
'ಬೇರೆ ಆಸ್ಪತ್ರೆಗೆ ಸೇರಿಸಿದಾಗ ನಮ್ಮ ಕೈಯಲ್ಲಿ ಏನೂ ಮಾಡಲು ಆಗುವುದಿಲ್ಲ ಅಂತಾ ಹೇಳಿದರು. ಆಗ ನಾನು ಎಷ್ಟು ಖರ್ಚಾದರೂ ತೊಂದರೆ ಇಲ್ಲ ಉಳಿಸಿಕೊಡಿ ಅಂದೆ. ನನಗೆ ಆಗ ಆ ವ್ಯಕ್ತಿ ಹುಷಾರಾಗಿ ಮನೆಗೆ ಬಂದು ನನ್ನ ಗುರುತು ಹಿಡಿಯಬೇಕು ಎನ್ನುವುದಷ್ಟೇ ತಲೆಯಲ್ಲಿ ಇತ್ತು. ಅವರು ಕೂಡ ನಮ್ಮ ಭರವಸೆ ಮೇಲೆ ಚಿಕಿತ್ಸೆ ಶುರು ಮಾಡಿದರು. ಮೊದಲು ವೆಂಟಿಲೇಟರ್ ಹಾಕುವಾಗಲೇ ಮುಂದಿನ ನಾಲ್ಕು ಹಲ್ಲು ಮುರಿದು ಹೋಯ್ತು. ಅದಾದ ಮೇಲೆ ಮೂರು ದಿನ ಇದ್ದರು. ನಾನು ಶೂಟಿಂಗ್ ಹೋದ ದಿನ ಅವರು ತೀರಿಹೋದರು. ಹಿಂದಿನ ದಿನ ಅವರ ಜೊತೆಗೆ ಇದ್ದೆ. ಅವತ್ತು ಕೆಲಸಕ್ಕೆ ಹೋಗಲೇ ಬೇಕಾದ ಅನಿವಾರ್ಯತೆಗೆ ಹೋಗಿದ್ದೆ. ಈಗಲೂ ಕಾಡುವುದು ಒಂದೇ ನಾನಿದ್ದಾಗ ಹೋಗಬೇಕು ಅಂತ ಅನಿಸಲಿಲ್ವಾ ಅವರಿಗೆ ಅಂತಾ' ಎಂದು ಅನುಪಮಾ ಗೌಡ ಭಾವುಕರಾದರು.












Click it and Unblock the Notifications