Aparna: 'ಕನ್ನಡಕ್ಕೆ ಒಬ್ಬರೇ ಮಾಹಾ ನಿರೂಪಕಿ..ನಿರೂಪಣೆ ನೀವಿಲ್ಲದೇ ಅಪೂರ್ಣ'
ಬೆಂಗಳೂರು, ಜುಲೈ 12: ಕನ್ನಡದ ಖ್ಯಾತ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ. ಕಳೆದ ಎರಡು ವರ್ಷಗಳಿಂದ ಶ್ವಾಸಕೋಶ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಜುಲೈ 11ರಂದು ನಿಧನರಾಗಿದ್ದಾರೆ.
ಅಚ್ಚ ಕನ್ನಡದ ನಿರೂಪಕಿ ಅಪರ್ಣಾ ಅಗಲಿಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ. ಹಲವು ವರ್ಷಗಳಿಂದ ಅಪರ್ಣಾ ಅವರ ಜೊತೆ ಬಾಂಧವ್ಯ ಹೊಂದಿರುವ ನಿರೂಪಕಿ ಅನುಶ್ರೀ ಅಪರ್ಣಾ ನಿಧನಕ್ಕೆ ಭಾವುಕರಾಗಿದ್ದಾರೆ. ನಿರೂಪಣೆ ನೀವಿಲ್ಲದೇ ಅಪೂರ್ಣ ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ನಿರೂಪಣೆಗೆ ಘನತೆ ನೀವು, ಕನ್ನಡಕ್ಕೆ ಶೋಭೆ, ನಿರೂಪಣೆ ನೀವಿಲ್ಲದೆ ಅಪೂರ್ಣ ಅಪರ್ಣ ಅಕ್ಕ ಎಂದಿದ್ದಾರೆ ಅನುಶ್ರೀ. ಈ ವಿಚಾರ ನೋವು ತಂದಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿಮ್ಮನ್ನು ಭೇಟಿಯಾದ ಕ್ಷಣ. ಇಂದಿಗೂ ಹಸಿರಾಗಿದೆ. ಅಂದು ಇಂದು ಎಂದೆಂದಿಗೂ ಕನ್ನಡಕ್ಕೆ ಒಬ್ಬರೇ ಮಹಾ ನಿರೂಪಕಿ ಅದು ನೀವು. ಓಂ ಶಾಂತಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಅನುಶ್ರೀ ಬರೆದುಕೊಂಡಿದ್ದಾರೆ.
ಅಪರ್ಣಾ ನಿಧನದ ಸುದ್ದಿ ಕೇಳಿ ನಿಜಕ್ಕೂ ಶಾಕಿಂಗ್-ಮಂಡ್ಯ ರಮೇಶ್
ಇನ್ನು ನಟ ಮಂಡ್ಯ ರಮೇಶ್ ಕೂಡ ಅಪರ್ಣಾ ಅಗಲಿಕೆ ಸಂತಾಪ ಸೂಚಿಸಿದ್ದಾರೆ. ಅಪರ್ಣಾ ನಿಧನದ ಸುದ್ದಿ ಕೇಳಿ ನಿಜಕ್ಕೂ ಶಾಕ್ ಆಗಿತ್ತು. ಅವರ ಆರೋಗ್ಯದ ಸಮಸ್ಯೆ ನಮಗೆ ಗೊತ್ತಿರಲಿಲ್ಲ. ಮೊದಲು ಅವರನ್ನ ನೋಡಿದ್ದು ದೂರದರ್ಶನದಲ್ಲಿ, ಶಾಲಾ ದಿನಗಳಿಂದಲೂ ಅವರ ನ್ಯೂಸ್ ನೋಡುತ್ತಿದೆ. ನಿರೂಪಕಿಯಾಗಿದ್ದ ಅಪರ್ಣಾ ಅವರನ್ನು ಸಾಕಷ್ಟು ಕಾರ್ಯಕ್ರಮದಲ್ಲಿ ಭೇಟಿಯಾಗಿದ್ದೇನೆ. ಅವರ ಅಭಿಮಾನ ಪೂರ್ವಕ ನಗು, ಸ್ಪಷ್ಟ ಮಾತು ನಿಜಕ್ಕೂ ನಮಗೆ ಪ್ರೇರಣೆಯಾಗಿತ್ತು. ಆಕೆ ಇಲ್ಲದ ನೋವನ್ನು ಭರಿಸುವ ಶಕ್ತಿ ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಮಂಡ್ಯ ರಮೇಶ್ ಹೇಳಿದ್ದಾರೆ.
ಎಲ್ಲಿ ಹೋದರೂ ಅವರದೇ ಕನ್ನಡದ ಧ್ವನಿ-ಟಿ.ಎನ್ ಸೀತಾರಾಮ್
ಖ್ಯಾತ ನಿರ್ದೇಶಕ ಟಿ.ಎನ್ ಸೀತಾರಾಮ್ ಅಪರ್ಣಾ ಅವರ ಜೊತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಬಸ್ ನಿಲ್ದಾಣಕ್ಕೆ ಹೋದರೆ, ಏರ್ಪೋರ್ಟ್ಗೆ ಹೋದರೆ, ಮೆಟ್ರೋ ನಿಲ್ದಾಣಕ್ಕೆ ಹೋದರೆ, ರೈಲ್ವೇ ನಿಲ್ದಾಣಕ್ಕೆ ಹೋದರೆ.. ಎಲ್ಲಿ ಹೋದರೂ ಅವರ ಕನ್ನಡದ ಧ್ವನಿ ಇರುತ್ತಿತ್ತು. ಅವರು ಕನ್ನಡದ ಮೇಲೆ ಪ್ರೀತಿ ಬರುವ ಹಾಗೆ ಮಾಡುವವರು. ಅಯ್ಯೋ ಇದು ನಮ್ಮ ಕನ್ನಡ ಅನ್ನೋ ರೀತಿ ಮಾಡುತ್ತಿದ್ದ. ಅನೇಕ ಕಲಾವಿದರಿಗೂ ಕೂಡ ಕನ್ನಡದ ಬಗ್ಗೆ ಪ್ರೀತಿ ಹುಟ್ಟಿಸಿದ್ದಾರೆ. ಅಂತವರಲ್ಲಿ ಅಪರ್ಣ ಕೂಡ ಒಬ್ಬರು. ಅವರ ಅಗಲಿಕೆ ತುಂಬಾ ನೋವಿನ ವಿಚಾರ ಎಂದು ಟಿ.ಎನ್.ಸೀತಾರಾಮ್ ಭಾವುಕರಾಗಿದ್ದಾರೆ.












Click it and Unblock the Notifications