Get Updates
Get notified of breaking news, exclusive insights, and must-see stories!

ಕನ್ನಡದ ಸಿನಿ ಸ್ಟಾರ್‌ಗಳೇಕೆ ಹೀಗೆ ಚಿತ್ರರಂಗದ ಹಿತದ ಬಗ್ಗೆ ಯೋಚಿಸುವುದಿಲ್ಲ: ಚೇತನ್ ನಾಡಿಗೇರ್ ಬರಹ

ಬೆಂಗಳೂರು: ಕನ್ನಡ ಚಿತ್ರರಂಗ ಹುಟ್ಟಿ ಒಂಬತ್ತು ದಶಕಗಳಾದರೂ ಶೂಟಿಂಗ್ ಮೂಲಸೌಕರ್ಯಕ್ಕಾಗಿ ಜಾಗ ಹುಡುಕುತ್ತಿದ್ದೇವೆ. ಹಣಕ್ಕಾಗಿ ಸರ್ಕಾರದ ಮುಂದೆ ಕೈ ಒಡ್ಡುವ ಪರಿಸ್ಥಿತಿ ಇದೆ. ಚಿತ್ರರಂಗದಲ್ಲಿ ದುಡಿದು ಹೆಸರು, ಹಣ ಮಾಡಿದ ಅನೇಕ ನಟರು ಮರಳಿ ಚಿತ್ರರಂಗಕ್ಕೆ ಏನು ನೀಡಿದ್ದಾರೆ? ಎಂಬ ಪ್ರಶ್ನೆ ಉದ್ಭವಿಸಿದೆ. ಒಟಿಟಿ ಜಮಾನಾ ಶುರುವಾಗಿ ಚಿತ್ರಮಂದಿರುಗಳು ಮುಚ್ಚಿವೆ. ಇತ್ತ ತೆಲುಗು ನಟರು ಚಿತ್ರರಂಗದಲ್ಲಿ ವ್ಯಾಪಾರ ಶುರುಮಾಡಿ ಹೊಸ ಅಲೆ ಸೃಷ್ಟಿಸುತ್ತಿದ್ದಾರೆ. ಅಂತದ್ದೇ ಒಂದು ವ್ಯಾಪಾರ ಬೆಂಗಳೂರಿಗೂ ಆಗಮಿಸಿದೆ. ಇಲ್ಲಿನ ಕಪಾಲಿ ಥಿಯೇಟರ್‌ನಲ್ಲಿ ತೆಲುಗು ನಟ ಹೆಸರಿನಲ್ಲಿ ಮಲ್ಪಿಫ್ಲೆಕ್ಸ್ ಆರಂಭವಾಗಿದೆ. ಇದೆಲ್ಲ ವಿಚಾರಗಳ ಕುರಿತು ಪತ್ರಕರ್ತ ಚೇತನ್ ನಾಡಿಗೇರ್ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ಅವರ ಬರಹ ಮುಂದಿದೆ.

''ಕೆರೆಯ ನೀರನು ಸ್ವಲ್ಪವಾದರೂ ಕೆರೆಗೆ ಚೆಲ್ಲಬಹುದಿತ್ತು...' ಬೆಂಗಳೂರಿನಲ್ಲಿ ನಿನ್ನೆ ಶುಕ್ರವಾರ (ಜನವರಿ 16) ಸದ್ದಿಲ್ಲದೆ ಒಂದು ಹೊಸ ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿದೆ. ಗಾಂಧಿನಗರದ ಕಪಾಲಿ ಚಿತ್ರಮಂದಿರವಿದ್ದ ಜಾಗದಲ್ಲೇ ಒಂಬತ್ತು ಪರದೆಗಳಿರುವ, ಅತ್ಯಧುನಿಕ ತಂತ್ರಜ್ಞಾನವಿರುವ, ಬಾರ್ಕೋ ಲೇಸರ್ ಪ್ರೊಜೆಕ್ಷನ್ ಇರುವ, ದಕ್ಷಿಣ ಭಾರತದ ಮೊದಲ ಡಾಲ್ಬಿ ಚಿತ್ರಮಂದಿರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ (ಒಂದು ಪರದೆ ಮಾತ್ರ) ಹೊಸ ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿದೆ. ಹೆಸರು 'ಎಎಂಬಿ ಕಪಾಲಿ'. ಏಷ್ಯನ್‍ ಸಿನಿಮಾಸ್‍ ಎಂಬ ಮಲ್ಟಿಪ್ಲೆಕ್ಸ್ ಚೈನ್‍ ಮತ್ತು ತೆಲುಗಿನ ಜನಪ್ರಿಯ ನಟ ಮಹೇಶ್‍ ಬಾಬು ಜೊತೆಯಾಗಿ ಎಎಂಬಿ ಹೆಸರಿನಲ್ಲಿ ಪ್ರಾರಂಭಿಸಿರುವ ಮಲ್ಟಿಪ್ಲೆಕ್ಸ್ ಇದು.

AMB Cinemas Kapali Investing Back into Industry Chetan Nadiger Critiques Kannada Stars Vision

ಆಂಧ್ರ ಪ್ರದೇಶ, ತೆಲಂಗಾಣ ಮುಂತಾದ ಕಡೆ ಜನಪ್ರಿಯಗೊಂಡ ನಂತರ, ಇದೀಗ ಎಎಂಬಿ ಕಪಾಲಿಯೊಂದಿಗೆ ಕರ್ನಾಟಕಕ್ಕೆ ಕಾಲಿಟ್ಟಿದೆ. ಗಾಂಧೀನಗರದಲ್ಲಿ ಚಿತ್ರಮಂದಿರಗಳು ಖಾಲಿಯಾಗುತ್ತಿವೆ ಎಂಬ ಕೊರಗಿನ ಮಧ್ಯೆಯೇ ಹೊಸ ಮಲ್ಟಿಪ್ಲೆಕ್ಸ್ ಪ್ರಾರಂಭವಾಗಿರುವುದು, ಒಂಬತ್ತು ಹೊಸ ಪರದೆಗಳು ಸಿಕ್ಕಿರುವುದು ಖುಷಿಯ ವಿಚಾರ.

ಬರೀ ನಟ ಮಹೇಶ್‍ ಬಾಬು ಅಷ್ಟೇ ಅಲ್ಲ, ಅಲ್ಲು ಅರ್ಜುನ್‍ ಮತ್ತು ವಿಜಯ್‍ ದೇವರಕೊಂಡ ಸಹ ಏಷ್ಯನ್‍ ಸಿನಿಮಾಸ್ ಜೊತೆಗೆ ಸೇರಿ ತೆಲಂಗಾಣದ ಹಲವು ಕಡೆ ಎಎಎ ಸಿನಿಮಾಸ್ ಮತ್ತು ಎವಿಡಿ ಸಿನಿಮಾಸ್ ಎಂಬ ಮಲ್ಟಿಪ್ಲೆಕ್ಸ್ ಚೈನ್ ಪ್ರಾರಂಭಿಸಿದ್ದಾರೆ. ಇಲ್ಲೊಂದು ವಿಷಯವನ್ನು ಗಮನಿಸಬೇಕು. ಏಷ್ಯನ್‍ ಸಿನಿಮಾಸ್ ಸಂಸ್ಥೆಯು, ತೆಲುಗು ಚಿತ್ರರಂಗದ ಹಲವು ಜನಪ್ರಿಯ ನಟರನ್ನು ವ್ಯಾಪಾರಕ್ಕೆ ಎಳೆಯುತ್ತಿದೆ. ಅವರ ಸಹಯೋಗದೊಂದಿಗೆ ಚಿತ್ರಮಂದಿರಗಳನ್ನು ನಿರ್ಮಿಸುತ್ತಿದೆ. ಅಂಥದ್ದೇ ಒಂದು ಪ್ರಯತ್ನ ಈ ಎಎಂಬಿ ಕಪಾಲಿ.

ಇದಲ್ಲದೆ, ತೆಲುಗಿನ ಇನ್ನೂ ಹಲವು ನಟರು ಚಿತ್ರರಂಗದ ಬೇರೆ ಬೇರೆ ವಲಯಗಳಲ್ಲಿ ಸಾಕಷ್ಟು ಹಣ ಹೂಡಿದ್ದಾರೆ. ಚಿರಂಜೀವಿ, ಮಹೇಶ್‍ ಬಾಬು, ನಂದಮೂರಿ ಬಾಲಕೃಷ್ಣ, ಅಲ್ಲು ಅರ್ಜುನ್‍, ಅಕ್ಕಿನೇನಿ ನಾಗಾರ್ಜುನ, ಮೋಹನ್‍ ಬಾಬು ಮುಂತಾದವರು ನಿರ್ಮಾಣ ಸಂಸ್ಥೆಗಳನ್ನು ಪ್ರಾರಂಭಿಸಿ ಚಿತ್ರ ನಿರ್ಮಾಣ ಮಾಡಿದರೆ, ಇನ್ನೂ ಕೆಲವರು ಚಿತ್ರರಂಗದ ಬೇರೆ ವ್ಯಾಪಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಾಗಾರ್ಜುನ ಚಾನಲ್‍ ನಡೆಸುವುದರ ಜೊತೆಗೆ ಅನ್ನಪೂರ್ಣ ಕಾಲೇಜ್‍ ಆಫ್‍ ಫಿಲ್ಮ್ ಆ್ಯಂಡ್ ಮೀಡಿಯಾ ನಡೆಸುತ್ತಾರೆ. ಜೊತೆಗೆ ಅನ್ನಪೂರ್ಣ ಸ್ಟುಡಿಯೋ ನಡೆಸುತ್ತಾರೆ. ಒಂದು ಕಡೆ ತಾವೂ ಬೆಳೆಯುತ್ತಾ, ಚಿತ್ರರಂಗವನ್ನೂ ಬೆಳೆಸುವಲ್ಲಿ ಹೆಜ್ಜೆ ಇಟ್ಟಿದ್ದಾರೆ.

ಇದು ಈಗಿನ ವಿಷಯವಷ್ಟೇ ಅಲ್ಲ, ಹಿಂದೆ ಎನ್‍.ಟಿ. ರಾಮರಾವ್‍, ಹೈದರಾಬಾದ್‌ನಲ್ಲಿ ರಾಮಕೃಷ್ಣ ಸಿನಿ ಸ್ಟುಡಿಯೋಸ್ ಕಟ್ಟಿದ್ದರು. ಚಿತ್ರೀಕರಣಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಜೊತೆಗೆ ಚಿತ್ರ ನಿರ್ಮಾಣದಲ್ಲೂ ತೊಡಗಿಸಿಕೊಂಡರು. ಅಕ್ಕಿನೇನಿ ನಾಗೇಶ್ವರ ರಾವ್‍ (ಅನ್ನಪೂರ್ಣ ಸ್ಟುಡಿಯೋಸ್), ಕೃಷ್ಣ (ಪದ್ಮಾಲಯ ಸ್ಟುಡಿಯೋಸ್), ಡಿ. ರಾಮಾನಾಯ್ಡು (ರಾಮಾನಾಯ್ಡು ಸ್ಟುಡಿಯೋಸ್‍), ರಾಮೋಜಿ ರಾವ್‍ (ರಾಮೋಜಿ ರಾವ್‍ ಫಿಲಂ ಸಿಟಿ) ಮುಂತಾದವರು ಆಂಧ್ರದಲ್ಲಿ ಸ್ಟುಡಿಯೋಗಳನ್ನು ಕಟ್ಟಿ, ಮದರಾಸಿನಲ್ಲಿದ್ದ ತೆಲುಗು ಚಿತ್ರರಂಗವನ್ನು ಆಂಧ್ರಕ್ಕೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಹಿಂದಿಯಲ್ಲೂ ರಾಜ್‍ ಕಪೂರ್, ದೇವ್‍ ಆನಂದ್ ಮುಂತಾದವರು ಚಿತ್ರೀಕರಣಕ್ಕೆ ಸ್ಟುಡಿಯೋಗಳನ್ನು ಕಟ್ಟಿದರೆ, ನಟ ಧರ್ಮೇಂದ್ರ, ಸನ್ನಿ ಸೂಪರ್‍ ಸೌಂಡ್‌ನಂತಹ ರೆಕಾರ್ಡಿಂಗ್‍ ಸ್ಟುಡಿಯೋಗಳನ್ನು ಮುಂಬೈನಲ್ಲಿ ಪ್ರಾರಂಭಿಸಿದರು.

ಕನ್ನಡದ ಕೆಲ ಕಲಾವಿದರಲ್ಲಿದೆ ಈ ಯೋಚನೆ

ಆದರೆ, ಕನ್ನಡ ಚಿತ್ರರಂಗದಲ್ಲಿ ಅದ್ಯಾಕೋ ಇದು ಮೊದಲಿನಿಂದಲೂ ಆಗಲೇ ಇಲ್ಲ. ಬಾಲಕೃಷ್ಣ, ಶಂಕರ್‍ ನಾಗ್‍, ರಾಕ್‍ಲೈನ್‍ ವೆಂಕಟೇಶ್‍ ಸೇರಿದಂತೆ ಬೆರಳಣಿಕೆಯಷ್ಟು ಜನರು ಮೂಲಭೂತ ಸೌಕರ್ಯಗಳ (ಸ್ಟುಡಿಯೋ ನಿರ್ಮಾಣ, ರೆಕಾರ್ಡಿಂಗ್‍ ಸೇರಿದಂತೆ ಬೇರೆ ಚಟುವಟಿಕೆಗಳು) ಕುರಿತು ಯೋಚಿಸಿ, ಅಭಿಮಾನ್‍, ಸಂಕೇತ್‍, ರಾಕ್‍ಲೈನ್‍ ಮುಂತಾದ ಸ್ಟುಡಿಯೋಗಳ ಹುಟ್ಟಿಗೆ ಕಾರಣರಾದರು. ಮಿಕ್ಕಂತೆ, ಕೆಲವು ನಟರು ಅಭಿನಯದ ಹೊರತಾಗಿ ನಿರ್ಮಾಣದಲ್ಲೂ ತೊಡಗಿಸಿಕೊಂಡು, ಒಂದಿಷ್ಟು ಒಳ್ಳೆಯ ಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಹಲವು ಪ್ರತಿಭೆಗಳೂ ಬೆಳೆಯುವುದಕ್ಕೆ ಕಾರಣರಾದರು.

ಸಿನಿಮಾ ಮೂಲಸೌಕರ್ಯ ಬಗ್ಗೆ ಯೋಚಿಸಲಿಲ್ಲ

ಮಿಕ್ಕಂತೆ ಬಹಳಷ್ಟು ಕನ್ನಡದ ನಟರು, ನಿರ್ಮಾಪಕರು ಮತ್ತು ಇತರರು ಮೂಲಭೂತ ಸೌಕರ್ಯಗಳ ಕುರಿತಾಗಿ ಅಥವಾ ಚಿತ್ರರಂಗವನ್ನು ಇನ್ನಷ್ಟು ಬೆಳೆಸುವ ನಿಟ್ಟಿನಲ್ಲಿ ಹೆಜ್ಜೆ ಇಡಲೇ ಇಲ್ಲ. ಗಂಭೀರವಾಗಿ ಯೋಚಿಸಲೇ ಇಲ್ಲ. ಬಂದಿದ್ದನ್ನು ಜೋಪಾನವಾಗಿಟ್ಟುಕೊಂಡು ಆಸ್ತಿ, ಮನೆ ಮಾಡಿದರೇ ಹೊರತಾಗಿ, ಚಿತ್ರರಂಗಕ್ಕೆ ಉಪಯೋಗವಾಗಲೇ ಇಲ್ಲ. ಇತ್ತೀಚಿನ ಕೆಲವು ವರ್ಷಗಳಲ್ಲಿ ಚಿತ್ರವೊಂದಕ್ಕೆ ಕೋಟಿ ಕೋಟಿ ಪಡೆಯುವ ನಟರು ಸಹ ಫಾರ್ಮ್ ಹೌಸ್‍, ಬಂಗಲೆ, ಕಾರುಗಳೆಂದು ಆ ಬಗ್ಗೆ ಹೆಚ್ಚು ಯೋಚಿಸುತ್ತಿದ್ದಾರೆಯೇ ಹೊರತು, ಒಟ್ಟಾರೆ ಚಿತ್ರರಂಗದ ಹಿತದೃಷ್ಟಿಯ ಬಗ್ಗೆಯಾಗಲೀ, ಮೂಲಭೂತ ಸೌಕರ್ಯಗಳ ಬಗ್ಗೆಯಾಗಲೀ ಯೋಚಿಸಲೇ ಇಲ್ಲ.

ಅಂತಿಮವಾಗಿ ಯಾರೇ ಆಗಲೀ, ಅದು ಅವರ ದುಡಿಮೆ ಮತ್ತು ಅವರ ದುಡ್ಡಿನ ವಿಷಯ. ಅದನ್ನು ಹೀಗೇ ಖರ್ಚು ಮಾಡಿ, ಇಲ್ಲೇ ಹೂಡಿಕೆ ಮಾಡಿ ಎಂದು ಹೇಳುವುದು ತಪ್ಪು. ಆದರೂ ಅಷ್ಟೆಲ್ಲಾ ಹೆಸರು, ಜನಪ್ರಿಯತೆ, ಯಶಸ್ಸು, ದುಡ್ಡು, ಖ್ಯಾತಿ ಮತ್ತು ಅನ್ನ ಕೊಟ್ಟ ಚಿತ್ರರಂಗಕ್ಕೆ ಸ್ವಲ್ಪವಾದರೂ ಮರಳಿ ಕೊಡುವ ಸಣ್ಣ ಪ್ರಯತ್ನವನ್ನಾದರೂ ಮಾಡಬಹುದಿತ್ತು. ಕೆರೆಯ ನೀರನು ಸ್ವಲ್ಪವಾದರೂ ಕೆರೆಗೆ ಚೆಲ್ಲಬಹುದಿತ್ತು. ಆದರೆ, ಅದು ಆಗಲೇ ಇಲ್ಲ. ತಮಗೆ ಸಿಗಬೇಕಾದ ಗೌರವ, ಪ್ರಾಶಸ್ತ್ಯ ಕಡಿಮೆಯಾಯಿತು ಎಂಬ ಬೇಸರ ವ್ಯಕ್ತವಾಗುತ್ತದೆಯೇ ಹೊರತು, ಅವರಿಂದ ಚಿತ್ರರಂಗಕ್ಕೆ ಏನು ಅನುಕೂಲವಾಯಿತು ಎಂದು ಕೇಳಿದರೆ ಉತ್ತರಿಸುವುದು ಕಷ್ಟ.

ಕನ್ನಡ ಚಿತ್ರರಂಗದ ಪರಿಸ್ಥಿತಿ ಬದಲಾಗಿಲ್ಲ

ಅದೇ ಕಾರಣಕ್ಕೆ, ಚಿತ್ರರಂಗ ಹುಟ್ಟಿ 91 ವರ್ಷಗಳ ನಂತರವೂ ಸರ್ಕಾರದ ಎದುರು ಕೈಒಡ್ಡಿ ನಿಲ್ಲುವ ಪರಿಸ್ಥಿತಿ ತಪ್ಪಿಲ್ಲ. ಇಷ್ಟು ವರ್ಷಗಳ ನಂತರವೂ ಚಿತ್ರೀಕರಣಕ್ಕೆ ಸರಿಯಾದ ಜಾಗವಿಲ್ಲದೆ, ಸರ್ಕಾರ ಸ್ಟುಡಿಯೋ ನಿರ್ಮಾಣಕ್ಕೆ ಜಾಗ ಎಲ್ಲಿ ಕೊಡುತ್ತದೆ, ಅದರಲ್ಲಿ ಯಾವಾಗ ಸ್ಟುಡಿಯೋ ನಿರ್ಮಾಣವಾಗುತ್ತದೆ ಎಂದು ಕಾಯುವುದು ಬಿಟ್ಟರೆ ಹೆಚ್ಚೇನೂ ಆಗಲೇ ಇಲ್ಲ. ಹೋಗಲಿ ಕೊಟ್ಟಿದ್ದನ್ನಾದರೂ ಚಿತ್ರರಂಗದವರು ಸರಿಯಾಗಿ ಬಳಸಿಕೊಂಡರಾ ಎಂದರೆ ಅದೂ ಇಲ್ಲ. ಅದೇ ಕಾರಣಕ್ಕೆ ನೋಡ ನೋಡುತ್ತಿದ್ದಂತೆಯೇ ಹೆಸರುಘಟ್ಟದಲ್ಲಿ ಚಿತ್ರರಂಗಕ್ಕಿದ್ದ 200 ಎಕರೆ ಜಾಗ ಕೈತಪ್ಪಿ ಹೋಯಿತು. ಈಗ ಅಭಿಮಾನ್‍ ಸ್ಟುಡಿಯೋ ಸಹ ಕನಸಾಗುತ್ತಿದೆ. ಇದು ಒಂದು ಉದಾಹರಣೆ ಅಷ್ಟೇ. ಒಂದೊಳ್ಳೆಯ ನಾಯಕತ್ವವಿಲ್ಲದೆ, ದೂರದರ್ಶಿತ್ವವಿಲ್ಲದೆ ಮತ್ತು ಸಂಘಟಿತ ಹೋರಾಟವಿಲ್ಲದೆ, ಈ ತರಹ ಕನ್ನಡ ಚಿತ್ರರಂಗ ಅದೆಷ್ಟು ಕಳೆದುಕೊಂಡಿದೆಯೋ ಗೊತ್ತಿಲ್ಲ.

ಬಿ ಮತ್ತು ಸಿ ಕೇಂದ್ರಗಳಲ್ಲಿ ಚಿತ್ರಮಂದಿರಗಳೇ ಇಲ್ಲ, ಏಕಪರದೆಯ ಚಿತ್ರಮಂದಿರಗಳು ಕಾಣೆಯಾಗುತ್ತಿವೆ, ಮಲ್ಟಿಪ್ಲೆಕ್ಸ್‌ನವರಿಂದ ಸಮಸ್ಯೆ ಆಗುತ್ತಿದೆ ಎಂದು ಹಲವು ನಟರು ಆಗಾಗ ಬೇಸರದಿಂದ ಮಾತಾಡುತ್ತಿರುತ್ತಾರೆ. ಹೊಸದನ್ನು ಶುರು ಮಾಡುವುದು ಬೇಡ, ರಾಜ್ಯಾದ್ಯಂತ ಸರಿಯಾದ ಸೌಲಭ್ಯಗಳಿಲ್ಲದೆ ಮುಚ್ಚಲ್ಪಡುತ್ತಿರುವ ಚಿತ್ರಮಂದಿರಗಳನ್ನು ಸುಪರ್ದಿಗೆ ಪಡೆದು, ಅದನ್ನು ನವೀಕರಿಸಿ ಪ್ರದರ್ಶನ ಮಾಡಿದ್ದರೂ, ಹಲವು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಚಿತ್ರಮಂದಿರಗಳಿಲ್ಲದ ಪರಿಸ್ಥಿತಿ ಇರುತ್ತಿರಲಿಲ್ಲ. ಕನ್ನಡ ಚಿತ್ರಗಳನ್ನು ಕನ್ನಡಿಗರು ನೋಡುತ್ತಿಲ್ಲ ಎಂಬ ಅಪವಾದ ಕೇಳಿ ಬರುತ್ತಿರಲಿಲ್ಲ.

ಓಟಿಟಿಯಿಂದ ಜನ ಚಿತ್ರಮಂದಿರಗಳಿಗೆ ಬರುತ್ತಿಲ್ಲ, ಚಿತ್ರಮಂದಿರಗಳೇನಿದ್ದರೂ ನೆನಪು ಮಾತ್ರ ಎಂಬ ಮಾತು ಕೇಳಿ ಬರುತ್ತಿರುವ ಸಮಯದಲ್ಲೇ, ತೆಲುಗು ನಟರು ಅತ್ಯಾಧುನಿಕ ಮಲ್ಟಿಪ್ಲೆಕ್ಸ್‌ಗಳನ್ನು ನಿರ್ಮಿಸುತ್ತಿದ್ದಾರೆ. ಚಿತ್ರಮಂದಿರಗಳಿಂದ ದೂರವಾಗುತ್ತಿರುವ ಜನರನ್ನು ಚಿತ್ರಮಂದಿರಗಳಿಗೆ ವಾಪಸ್ಸು ಕರೆಸುತ್ತಿದ್ದಾರೆ. ಇದೆಲ್ಲವನ್ನೂ ನಾವು ನೋಡಿ ಸಂತೋಷಪಡುತ್ತಿದ್ದೇವೆ' ಎಂದು ಅವರು ಬರೆದುಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+