Ajit Kumar: ತಮಿಳು ನಟ ಅಜಿತ್ ಕುಮಾರ್ ರೇಸ್ ಕಾರು ಅಪಘಾತ
ತಮಿಳು ಚಿತ್ರರಂಗದ ಖ್ಯಾತ ನಟ ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ದುಬೈನಲ್ಲಿ ನಡೆಯುತ್ತಿರುವ ರೇಸ್‌ನಲ್ಲಿ ಭಾಗವಹಿಸಲು ಅಭ್ಯಾಸ ಮಾಡುವ ವೇಳೆ ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು 180 ಕಿಮೀ ವೇಗದಲ್ಲಿ ಬಂದು ರೇಸ್ ಟ್ರಾಕ್ ಪಕ್ಕದಲ್ಲಿದ್ದ ತಡೆಗೋಡೆಗಳಿಗೆ ಅಪ್ಪಳಿಸಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.
24ಎಚ್ ದುಬೈ 2025 ಎಂದು ಕರೆಯಲಾಗುವ ದುಬೈ 24 ಗಂಟೆಗಳ ರೇಸ್‌ನಲ್ಲಿ ಭಾಗವಹಿಸಲು ನಟ ಅಜಿತ್ ಕುಮಾರ್ ದುಬೈಗೆ ತೆರಳಿದ್ದಾರೆ. ಆರು ಗಂಟೆಗಳ ಅವಧಿಯ ಸಹಿಷ್ಣುತೆ ಪರೀಕ್ಷೆಯ ಅಭ್ಯಾಸದ ಅವಧಿಯಲ್ಲಿ ಕಾರು ತಡೆಗೋಡೆಗೆ ಅಪ್ಪಳಿಸಿದೆ. ಪರೀಕ್ಷಾ ಅವಧಿ ಮುಗಿಯುವ ಕೆಲವೇ ನಿಮಿಷಗಳ ಮೊದಲು ಈ ಘಟನೆ ನಡೆದಿದೆ.

ರೇಸ್‌ನಲ್ಲಿ ಅಜಿತ್ ಕುಮಾರ್ ತಂಡ
ನಟ ಅಜಿತ್ ರೇಸಿಂಗ್ ತಂಡವನ್ನು ಹೊಂದಿದ್ದಾರೆ. ಅಜಿತ್ ಕುಮಾರ್ ರೇಸಿಂಗ್ ಎನ್ನುವ ತಂಡವನ್ನು ಕಟ್ಟಿಕೊಂಡು ರೇಸಿಂಗ್‌ನಲ್ಲಿ ಭಾಗವಹಿಸಲು ಸಿದ್ಧರಾಗಿದ್ದರು. ಅಜಿತ್ ಕುಮಾರ್ ಜೊತೆಗೆ ಇನ್ನೂ ಮೂವರು ರೇಸರ್ ಇದ್ದಾರೆ. ಮ್ಯಾಥ್ಯೂ ಡೆಟ್ರಿ, ಫ್ಯಾಬಿಯನ್ ಡಫಿಯಕ್ಸ್ ಮತ್ತು ಕ್ಯಾಮೆರಾನ್ ಮೆಕ್ಲಿಯೋಡ್ ಅಜಿತ್ ತಂಡದಲ್ಲಿದ್ದಾರೆ. ಕಳೆದ ವರ್ಷ ಡಿಸೆಂಬರ್‌ನಲ್ಲಿ ಅಜಿತ್ ಕುಮಾರ್ ರೇಸಿಂಗ್‌ಗೆ ತಂಡದ ವ್ಯವಸ್ಥಾಪಕರಾಗಿ ಫ್ಯಾಬಿಯನ್ ಡಫಿಯಕ್ಸ್ ಅಧಿಕಾರ ವಹಿಸಿಕೊಂಡಿದ್ದರು.
ಅಜಿತ್‌ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ
ಅಜಿತ್ ಕುಮಾರ್ ಓಡಿಸುತ್ತಿದ್ದ ಕಾರು ತಡೆಗೋಡೆಗೆ ಅಪ್ಪಳಿಸುವ ವಿಡಿಯೋವನ್ನು ಅವರ ತಂಡವು ಬಿಡುಗಡೆ ಮಾಡಿದೆ. ಗೋಡೆಗೆ ಅಪ್ಪಳಿಸಿದಿ ಕಾರು ಏಳು ಬಾರಿ ತಿರುಗಿ ಕೆಳಗೆ ಬಿದ್ದಿದ್ದು, ಬಳಿಕ ಅವರನ್ನು ರಕ್ಷಣೆ ಮಾಡಿ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಅಜಿತ್ ಕುಮಾರ್ ಮ್ಯಾನೇಜರ್ ಸುರೇಶ್ ಚಂದ್ರ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದು, ಘಟನೆಯಲ್ಲಿ ಅಜಿತ್‌ಗೆ ಯಾವುದೇ ಗಾಯವಾಗಿಲ್ಲ, ಅವರು ಆರೋಗ್ಯವಾಗಿದ್ದಾರೆ. ಈ ಘಟನೆ ನಡೆದಾಗ ಅವರು 180 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದರು ಎಂದು ಹೇಳಿದ್ದಾರೆ.
ತಮಿಳು ನಟ ಅಜಿತ್ ಅವರು ನಟನೆಯ ಜೊತೆಗೆ ಡ್ರೈವಿಂಗ್ ಮತ್ತು ಬೈಕ್ ರೇಸ್‌ನಲ್ಲಿ ಆಸಕ್ತಿ ಹೊಂದಿದ್ದಾರೆ. ದುಬೈನಲ್ಲಿ ನಡೆಯುವ ರೇಸ್‌ನಲ್ಲಿ ತಂಡವು 24 ಗಂಟೆಗಳ ಕಾಲ ಕಾರನ್ನು ಓಡಿಸಬೇಕು. ತಂಡದ ಪ್ರತಿ ಸದಸ್ಯ ಆರು ಗಂಟೆಗಳ ಕಾಲ ಕಾರು ಚಾಲನೆ ಮಾಡುತ್ತಾರೆ. ಅಜಿತ್ ಆರು ಗಂಟೆಗಳನ್ನು ಪೂರ್ಣಗೊಳಿಸುವ ಕೆಲವೇ ನಿಮಿಷಗಳ ಮೊದಲು ಅಪಘಾತ ನಡೆದಿದೆ.
ಅಜಿತ್ ಕುಮಾರ್ ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದು ಅಪಘಾತದ ವಿಚಾರ ತಿಳಿದು ಆತಂಕಗೊಂಡಿದ್ದರು. ಆದರೆ ಅಭಿಮಾನಿಗಳು ಆತಂಕ ಪಡುವ ಅಗತ್ಯವಿಲ್ಲ, ಅಜಿತ್‌ಗೆ ಯಾವುದೇ ರೀತಿಯ ಗಾಯವಾಗಿಲ್ಲ ಎಂದು ತಿಳಿದು ನಿರಾಳರಾಗಿದ್ದಾರೆ.












Click it and Unblock the Notifications