ಯಶ್ ತಾಯಿಗೆ ದರ್ಶನ್, ಸುದೀಪ್, ಅಪ್ಪು ಫ್ಯಾನ್ಸ್ ಮಾಡಿದ ಕಾಮೆಂಟ್ಸ್ ಏನು?
ರಾಕಿಂಗ್ ಸ್ಟಾರ್ ಯಶ್ ಅವರು ಈಗಾಗಲೇ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ. ಇದೀಗ ಅವರ ತಾಯಿ ಪುಷ್ಪ ಅರುಣ್ ಕುಮಾರ್ ಕೂಡ ನಿರ್ಮಾಪಕಿಯಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ತಮ್ಮ ನಿರ್ಮಾಣದ ಮೊದಲ ಸಿನಿಮಾ "ಕೊತ್ತಲವಾಡಿ" ರಿಲೀಸ್‌ಗೆ ರೆಡಿಯಾಗಿದೆ. ಇದೇ ವೇಳೆ ನಟರಾದ ದರ್ಶನ್, ಕಿಚ್ಚ ಸುದೀಪ್ ಹಾಗೂ ಧ್ರುವ ಸರ್ಜಾ ಅವರ ಅಭಿಮಾನಿಗಳ ಬಗ್ಗೆ ಯಶ್ ತಾಯಿ ಮಾತನಾಡಿದ್ದಾರೆ. ಇದೇ ವೇಳೆ ಎಲ್ಲ ನಟರ ಅಭಿಮಾನಿಗಳಿಗೆ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಈಗಷ್ಟೇ ನಿರ್ಮಾಪಕಿಯಾಗಿ ಕಾಲಿಟ್ಟಿರುವ ನಟ ಯಶ್ ಅವರ ತಾಯಿಗೆ ಪುಷ್ಪ ಅವರಿಗೆ ಸ್ಯಾಂಡಲ್‌ವುಡ್ ನಟರಾದ ಚಾಲೆಂಜಿಂಗ್ ಸ್ಟಾರ್ ದರ್ಶನ್, ಕಿಚ್ಚ ಸುದೀಪ್, ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಮೆಸೇಜ್ ಹಾಗೂ ಕಾಮೆಂಟ್ ಹಾಕುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. 'ನೀವೆಲ್ಲರೂ ಮೊದಲು ಸಿನಿಮಾ ನೋಡಿ ಆ ಮೇಲೆ ರಿಸಲ್ಟ್ ಹೇಳಿ' ಎಂದು ಪುಷ್ಪ ಅವರು ಹೇಳಿದ್ದಾರೆ.

'ದರ್ಶನ್ ಅಭಿಮಾನಿಗಳು, ಸುದೀಪ್ ಅಭಿಮಾನಿಗಳು, ಧ್ರುವನ ಅಭಿಮಾನಿಗಳು, ಯಶ್ ಹಾಗೂ ಪುನೀತ್ ಅಭಿಮಾನಿಗಳು ಕೂಡ ಮೆಸೇಜ್ ಹಾಕುತ್ತಿದ್ದಾರೆ. ಇದು ನನಗೆ ಬಹಳ ಖುಷಿ ತಂದಿದೆ. ನಾನು ಎಲ್ಲರಿಗೂ ಕೇಳಿಕೊಳ್ಳುವುದು ಇಷ್ಟೇ. ಮೊದಲು ನಮ್ಮ ಸಿನಿಮಾವನ್ನ ನೋಡಿ ಎಂದಿದ್ದಾರೆ. ನಿಮಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಾ ಎಂಬ ಪ್ರಶ್ನೆಗೂ ನೇರವಾಗಿ ಉತ್ತರಿಸಿರುವ ಪುಷ್ಪ ಅವರು, ನನಗೆ ಮಾತನಾಡಲು ಬರೋದಿಲ್ಲ. ಆ ಒರಟು ಭಾಷೆ ಮೊದಲಿನಿಂದಲೂ ಬಂದುಬಿಟ್ಟಿದೆ. ನಾವು ಒಂದು ಕಮ್ಯುನಿಟಿ ಬಗ್ಗೆ ಹೇಳೋದಿಲ್ಲ. ನಾವು ಅಣ್ಣಾವ್ರ ರೀತಿ ವಿಶ್ವಮಾನವರು. ನಾವು ಮಂಡ್ಯ, ಮೈಸೂರು, ಹಾಸನದವರಂತೆಯೇ ಮಾತನಾಡುತ್ತೇವೆ. ಇದರಲ್ಲಿ ಜಾತಿ ಬೇಧ ಇಲ್ಲ. ಮಗನನ್ನೂ ಆ ರೀತಿ ಬೆಳೆಸಿಲ್ಲ' ಎಂದಿದ್ದಾರೆ.
ಅಪ್ಪು ನಮ್ಮನೆ ಮಗ
ಕೊತ್ತಲವಾಡಿ ಸಿನಿಮಾ ಪ್ರಚಾರಕ್ಕೂ ಮುನ್ನ ಡಾ.ರಾಜ್‌ಕುಮಾರ್ ಹಾಗೂ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗಳಿಗೆ ಭೇಟಿ ನೀಡಿ ಯಶ್ ತಾಯಿ ವಿಶೇಷ ಪೂಜೆ ಸಲ್ಲಿಸಿದರು. 'ಕನ್ನಡ ಚಿತ್ರರಂಗಕ್ಕೆ ಅಣ್ಣಾವ್ರು ದೇವರು ಇದ್ದಂತೆ. ಹೀಗಾಗಿ ಮೊದಲ ಸಿನಿಮಾ ಪ್ರಚಾರಕ್ಕೂ ಮುನ್ನ ದೇವರ ಪೂಜೆ ಮಾಡಿದ್ದೇವೆ ಎಂದಿದ್ದಾರೆ. ಇನ್ನು ಅಪ್ಪು ನಮ್ಮನೆ ಮಗನಿದ್ದಂತೆ, ಅವರನ್ನು ಕಳೆದುಕೊಂಡಿದ್ದು ನಿಜಕ್ಕೂ ದುರಾದೃಷ್ಟ. ಹಾಗಾಗಿ ಅಪ್ಪು ಅವರಿಗೂ ಪೂಜೆ ಸಲ್ಲಿಸಿ ಪ್ರಚಾರ ಶುರು ಮಾಡಿದ್ದೇವೆ. ರೆಬಲ್ ಸ್ಟಾರ್ ಅಂಬರೀಶ್ ಸಮಾಧಿಗೂ ಪೂಜೆ ಮಾಡಿದ್ದೇವೆ. ಅವರು ಮಗ ಯಶ್‌ನ ತುಂಬಾ ಪ್ರೀತಿಯಿಂದ ನೋಡುತ್ತಿದ್ದರು' ಎಂದಿದ್ದಾರೆ.
'ಕೊತ್ತಲವಾಡಿ ಸಿನಿಮಾಗೆ ನಮ್ಮ ಪ್ರಚಾರದ ಯೋಜನೆ ಅಷ್ಟಾಗಿಲ್ಲ. ಜನರೇ ನಮ್ಮ ಸಿನಿಮಾನ ಪ್ರಚಾರ ಮಾಡ್ತಾರೆ, ಅಂದುಕೊಂಡ ತಕ್ಷಣ ಸಿನಿಮಾ ಪ್ರಚಾರ ಆಗೋದಿಲ್ಲ. ಇಲ್ಲಿ ನಮ್ಮದು ಏನೂ ನಡೆಯುವುದಿಲ್ಲ. ಇಷ್ಟ ಆಗಲ್ಲ ಅಂದಾಗ ಇಂತಹ ನೂರಾರು ಸಿನಿಮಾಗಳನ್ನ ಜನ ಮೂಲೆಗೆ ಬಿಸಾಡುತ್ತಾರೆ. ಜನರಿಗೆ ಈಗ ಬುದ್ಧಿ ಚೆನ್ನಾಗಿದೆ. ಪ್ರಚಾರ ಮಾಡಿದ ಮಾತ್ರಕ್ಕೆ ಜನ ಬಂದು ಸಿನಿಮಾ ನೋಡುತ್ತಾರೆ ಅಂದುಕೊಳ್ಳುವುದು ದಡ್ಡತನ' ಎಂದು ಯಶ್ ತಾಯಿ ಪುಷ್ಪ ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications