ರೇಣುಕಾಸ್ವಾಮಿ ಕೊಲೆ ಕೇಸ್‌ನ ಚಾರ್ಜ್‌ಶೀಟ್‌ನಲ್ಲಿ ಹೆಸರು: ನಟಿ ಶುಭಾ ಪೂಂಜಾ ಹೇಳಿದ್ದೇನು?
ಬೆಂಗಳೂರು, ಸೆಪ್ಟೆಂಬರ್ 11: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ಸುಮಾರು ಮೂರು ತಿಂಗಳು ಕಳೆದಿದೆ. ಈ ಪ್ರಕರಣದ ಬಗ್ಗೆ ಪೊಲೀಸ್ ಅಧಿಕಾರಿಗಳು ಇಂಚಿಂಚು ತನಿಖೆ ನಡೆಸಿದ್ದು, ಈಗಾಗಲೇ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಿದ್ದಾರೆ.
ಅಶ್ಲೀಲ ಸಂದೇಶವೇ ರೇಣುಕಾಸ್ವಾಮಿ ಕೊಲೆಗೆ ಪ್ರಮುಖ ಪ್ರಚೋದನೆ ಎನ್ನುವ ಆರೋಪ ಬಲವಾಗಿದೆ. ಮೃತ ರೇಣುಕಾಸ್ವಾಮಿ ದರ್ಶನ್ ಆಪ್ತೆ ಪವಿತ್ರಾ ಗೌಡ ಮಾತ್ರವಲ್ಲದೇ ಕನ್ನಡ ಚಿತ್ರರಂಗದ ಕೆಲವು ನಟಿಯರಿಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎನ್ನುವ ಆರೋಪವಿದೆ. ಜೊತೆಗೆ ಚಾರ್ಜ್‌ಶೀಟ್‌ನಲ್ಲಿ ಸಹ ಕೆಲವು ನಟಿಯರ ಹೆಸರನ್ನೂ ಕೂಡ ಉಲ್ಲೇಖ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಈ ಪ್ರಕರಣದಲ್ಲಿ ನಟಿ ಶುಭ ಪೂಂಜಾ ಹೆಸರು ಕೇಳಿ ಬಂದಿದೆ. ಚಾರ್ಜ್‌ಶೀಟ್‌ನಲ್ಲಿ ನಟಿ ಶುಭ ಪೂಂಜಾ ಹೆಸರನ್ನು ಕೂಡ ಉಲ್ಲೇಖ ಮಾಡಲಾಗಿದೆ ಎನ್ನಲಾಗಿದೆ. ಈ ವಿಚಾರ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಈ ವಿಚಾರಕ್ಕೆ ಸ್ವತಃ ನಟಿ ಶುಭಾ ಪೂಂಜಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಈ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ ಶುಭಾ ಪೂಂಜಾ, 'ರೇಣುಕಾಸ್ವಾಮಿ ಸಂದೇಶದ ವಿಚಾರವಾಗಿ ಬೆಳಿಗ್ಗೆಯಿಂದ ನನಗೆ ಕರೆ ಮಾಡಿದ ನನ್ನ ಎಲ್ಲಾ ಆತ್ಮೀಯ ಮಾಧ್ಯಮ ಮಿತ್ರರಿಗೆ ಸ್ಪಷ್ಟಪಡಿಸಲು ಬಯಸುತ್ತೇನೆ. ನನ್ನ ವೈಯಕ್ತಿಕ ಖಾತೆಗೆ ಯಾವುದೇ ಸಂದೇಶಗಳು ಬಂದಿಲ್ಲ' ಎಂದಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟಿ ಶುಭಾ ಪೂಂಜಾ ಹೆಸರು ಕೇಳಿಬಂದಿದ್ದೇಗೆ..?
ಈ ಕೊಲೆ ಪ್ರಕರಣದಲ್ಲಿ ಚಾರ್ಜ್ಶೀಟ್ ಸಲ್ಲಿಕೆಯಾಗಿದೆ. ಪ್ರಕರಣದ ಎ 14 ಆರೋಪಿ ಪ್ರದೋಶ್ ಎನ್ನುವಾತನ ಸ್ವ-ಇಚ್ಛಾ ಹೇಳಿಕೆಯಲ್ಲಿ ಇಬ್ಬರ ನಟಿಯರ ಹೆಸರು ಉಲ್ಲೇಖ ಮಾಡಲಾಗಿದೆ. ಆ ಇಬ್ಬರು ನಟಿಯರಿಗೂ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಹೇಳಿಕೆ ನೀಡಿದ್ದಾನೆ ಎಂದು ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ.
ರೇಣುಕಾಸ್ವಾಮಿ ಮೇಲೆ ಹಲ್ಲೆ ಮಾಡಿದ ಬಳಿಕ ದರ್ಶನ್ ಆತನ ಮೊಬೈಲ್ ತೆಗೆದು ಪ್ರದೂಶ್ಗೆ ನೀಡಿದ್ದಾನೆ. ಈ ವೇಳೆ ರೇಣುಕಾಸ್ವಾಮಿ ಮೊಬೈಲ್ ಅನ್ನು ಪ್ರದೂಶ್ ನೋಡಿದ್ದು, ಆ ವೇಳೆ ನಟಿ ಶುಭಾ ಪೂಂಜಾಗೂ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ ಎಂದು ಪ್ರದೋಶ್ ಹೇಳಿಕೆ ನೀಡಿದ್ದಾನೆ ಎನ್ನಲಾಗಿದೆ. ಇನ್ನು ಮತ್ತೋರ್ವ ನಟಿಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದು, ಆ ಬಗ್ಗೆ ಇನ್ನೂ ಯಾವುದೇ ಸ್ಪಷ್ಟನೆ ಹೊರಬಿದ್ದಿಲ್ಲ.












Click it and Unblock the Notifications