ಯುವ ರಾಜ್‌ಕುಮಾರ್ ಮನೆಯಲ್ಲಿ ನಟಿ ಸಪ್ತಮಿ ಗೌಡ ನೋಡಿದ್ದೇನು..?
ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಹಾಗೂ ಕಾಂತಾರ ಬೆಡಗಿ ಸಪ್ತಮಿ ಗೌಡ ಅಭಿನಯದ ಯುವ ಚಿತ್ರ ತೆರೆಕಂಡು ಹಿಟ್ ಆಗಿದೆ. ಈ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ನಟಿ ಸಪ್ತಮಿ ಗೌಡ ಒಮ್ಮೆ ಯುವ ರಾಜ್‌ಕುಮಾರ್ ಅವರ ಮನೆಗೆ ಭೇಟಿ ನೀಡಿದ್ದರಂತೆ. ಈ ವೇಳೆ ತಮಗಾದ ಅನುಭವವನ್ನು ನಟಿ ಸಪ್ತಮಿ ಗೌಡ ಹಂಚಿಕೊಂಡಿದ್ದಾರೆ.
ಯುವ ಚಿತ್ರ ಬಿಡುಗಡೆ ಸಮಯದಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಸಪ್ತಮಿ ಗೌಡ, 'ಏಪ್ರಿಲ್ 23 ಯುವ ರಾಜ್‌ಕುಮಾರ್ ಅವರ ಹುಟ್ಟುಹಬ್ಬ. ಕಳೆದ ವರ್ಷ 23ರಂದು ನಾನು ಅವರ ಮನೆಗೆ ಹೋಗಿದ್ದಾಗ. ಅವರ ಮನೆಯ ಮೇಲೆ ಫಸ್ಟ್ ಪ್ಲೋರ್‌ನಲ್ಲಿ ಚಿಕ್ಕ ಮ್ಯೂಸಿಯಂ ರೀತಿ ಇದೆ. ಅಲ್ಲಿ ರಾಜ್‌ಕುಮಾರ್ ಅವರ ನೆನಪುಗಳಿದೆ.

ರಾಜ್‌ಕುಮಾರ್ ಅವರು ಸಿನಿಮಾದಲ್ಲಿ ಬಳಸಿದ ಕಿರೀಟಗಳು, ಅವರ ಹಾರ್ಮೋನಿಯಂ, ಅವರ ಮೇಕಪ್ ಕಿಟ್, ಹಾಗೂ ಅವರು ಧರಿಸುತ್ತಿದ್ದ ಬಟ್ಟೆ, ಅವರು ಕೊನೆಯ ಬಾರಿ ಓದಿದ್ದ ಪುಸ್ತಕ. ಅವರ ದಾದ ಸಾಹೇಬ್ ಪಾಲ್ಕೆ ಅವಾರ್ಡ್, ಆಮೇಲೆ ಅವರು ಪಾಯಿಂಟ್ ಸ್ಕ್ರೀನ್ ಯೂಸ್ ಮಾಡುತ್ತಿದ್ದರು. ಅದು ಇನ್ನೂ ಹಾಗೆಯೇ ಇದೆ.
ಎಷ್ಟು ವರ್ಷ ಆಗಿದೆ ಆ ಪಾಯಿಂಟ್ ಸ್ಕ್ರೀನ್ ತೆಗೆದರೆ ಅಷ್ಟೇ ಪರಿಮಳ ಬರುತ್ತದೆ. ಇದುವರೆಗೂ ಅವರ ಬಟ್ಟೆ ಮಡಿಚಿಟ್ಟಿರುವುದು ಒಂದು ಸಲನೂ ಅವರು ಮತ್ತೆ ತೆಗೆದು ಒಗೆದಿಲ್ಲವಂತೆ. ಅಷ್ಟು ವರ್ಷಗಳಿಂದ ಹಾಗೇ ಇಟ್ಟಿದ್ದಾರೆ. ಆದರೆ ಆ ಬಟ್ಟೆಗಳು ಹಾಗೇ ಇವೆ. ಸಾಮಾನ್ಯವಾಗಿ ನಾವೇ ಈಗ ಬಟ್ಟೆಗಳನ್ನು ಹಾಗೇ ಇಟ್ಟಿದ್ದರೆ ವಾಸನೆ ಬರುತ್ತಲ್ಲ. ಆದರೆ ಅವರ ಬಟ್ಟೆಗಳಲ್ಲಿ ಇನ್ನೂ ಘಮ ಇದೆ ಎಂದರು.

ಮಂಗಳಮ್ಮ ಹೇಳುತ್ತಿದ್ದರು ರಾಜ್‌ಕುಮಾರ್ ಅವರ ಮನಸ್ಸು ಎಷ್ಟು ಶುದ್ಧವಾಗಿತ್ತು ಅಂದರೆ, ಹಾಗೇ ಇಟ್ಟ ಅವರ ಬಟ್ಟೆ ಇದುವರೆಗೂ ವಾಸನೆ ಬಂದಿಲ್ಲ. ಅದನೆಲ್ಲಾ ನನ್ನ ಕೈಗೆ ಕೊಟ್ಟರು..ನಾನು ಅವುಗಳನ್ನು ನೋಡಿ ನನ್ನ ಕೈಯಲ್ಲಿ ಹಿಡಿದುಕೊಂಡೆ. ನನಗೆ ಎಷ್ಟು ಖುಷಿ ಆಯ್ತು ಅಂದರೆ ನಾನಂತೂ ಇಡೀ ದಿನ ಎಲ್ಲರಿಗೂ ಅದನ್ನೇ ಹೇಳುತ್ತಿದೆ. ಫೋನ್ ಮಾಡಿದವರೆಲ್ಲರಿಗೂ ಇವತ್ತು ಏನಾಯ್ತು ಗೊತ್ತಾ ಅಂತಾ ಎಲ್ಲರಿಗೂ ಎಲ್ಲವನ್ನೂ ಹೇಳಿದ್ದೆ ಎಂದು ನಟಿ ಸಪ್ತಮಿ ಗೌಡ, ಡಾ.ರಾಜ್‌ಕುಮಾರ್ ಅವರ ನೆನಪುಗಳನ್ನು ನೋಡಿದ ಖುಷಿಯನ್ನು ಹಂಚಿಕೊಂಡಿದ್ದಾರೆ.












Click it and Unblock the Notifications