ಜೈಲಿನಲ್ಲಿ 2-3 ದಿನ ನಿದ್ದೆ ಬಾರದೇ ಕೊನೆಗೆ ಮಾತ್ರೆಗಳನ್ನು ಹಾಕಿದ್ರು- ನಟಿ ಸಂಜನಾ ಗಲ್ರಾನಿ
ಬೆಂಗಳೂರು, ಆಗಸ್ಟ್ 28: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ಲೇಟೆಸ್ಟ್ ಫೋಟೋವೊಂದು ಎಲ್ಲೆಡೆ ವೈರಲ್ ಆಗಿತ್ತು. ದರ್ಶನ್ ಟೀ ಕುಡಿಯುತ್ತಾ, ಸಿಗರೇಟ್ ಸೇದುತ್ತಾ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನಾ ಎನ್ನುವ ರೌಡಿಶೀಟರ್ ಜೊತೆಗೆ ಜೈಲಿನ ಆವರಣದ ಒಳಗೆ ಕುಳಿತಿರುವ ಫೋಟೋ ಎಲ್ಲೆಡೆ ವೈರಲ್ ಆಗಿದೆ. ಈ ಫೋಟೋ ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದ್ದು, ಜೈಲಿನಲ್ಲಿ ಇಂತಹ ಸವಲತ್ತುಗಳು ಇದೆಯಾ..? ಎನ್ನುವ ಪ್ರಶ್ನೆ ಎದುರಾಗಿದೆ.
ದರ್ಶನ್ ಫೋಟೋ ವೈರಲ್ ಬಗ್ಗೆ ನಟಿ ಸಂಜನಾ ಗಲ್ರಾನಿ ಮಾತನಾಡಿದ್ದು, ಈ ವೇಳೆ ತಾವು ಜೈಲಿನಲ್ಲಿ ಕಂಡ ನೋವುಗಳನ್ನು ಹಂಚಿಕೊಂಡಿದ್ದಾರೆ. ಟಿವಿ 9 ಕನ್ನಡದ ಜೊತೆ ಮಾತನಾಡಿದ ಅವರು, ಜೈಲಿನ ಒಳಗೆ ಯಾರೂ ನನಗೆ ಸಹಾಯ ಮಾಡಲು ಬಂದಿಲ್ಲ. ಜೀವನದಲ್ಲಿ ಮನುಷ್ಯ ತುಂಬಾ ಜೋರಾಗಿ ಬಿದ್ದು ಪೆಟ್ಟು ಮಾಡಿಕೊಂಡ ಬಳಿಕ ಆತನಲ್ಲಿ ಏಕಾಂತ ಬರುತ್ತದೆ. ಆ ಏಕಾಂತದಲ್ಲಿ ನೀವೇ ನಿಮಗೆ ಒಂದು ದೊಡ್ಡ ಸಪೋರ್ಟ್ ಆಗುತ್ತೀರಾ ಎಂದರು.

ಜೈಲಿನಲ್ಲಿ ಒಂದಿಷ್ಟು ಜನ ನನ್ನ ಬಳಿಯೇ ಬಂದು ಹಣಕಾಸಿನ ಸಹಾಯ ಕೇಳುತ್ತಿದ್ದರು. ನನ್ನ ಹತ್ತಿರ ವಕೀಲರು ಇಲ್ಲ ಆದರೆ ನಾನು ಬಿಡುಗಡೆಯಾಗಬೇಕು. ಹೊರಗಡೆ ಮಗಿ ಇದೆ ಅಂತೆಲ್ಲಾ ಅವರ ಅವರ ನೋವನ್ನು ಬಂದು ನಮಗೆ ಹೇಳುತ್ತಿದ್ದರು. ಹೀಗಿರುವಾಗ ನಾವು ಹೋಗಿ ಯಾರಿಗೆ ಏನು ಹೇಳುವುದು ಎಂದು ನಟಿ ಸಂಜನಾ ಪ್ರಶ್ನಿಸಿದರು.
ಜೈಲಿನ ಒಳಗೆ ಒಂದು ದೇವಸ್ಥಾನ ಇದೆ ನನಗೂ ಈಗಲೂ ನೆನಪಿದೆ. ಎರಡು ಮೂರು ದಿನ ನನಗೆ ಸ್ವಲ್ಪವೂ ನಿದ್ದೆ ಬರುತ್ತಿರಲಿಲ್ಲ. ಕೊನೆಗೆ ನನಗೆ ನಿದ್ದೆ ಮಾತ್ರೆಗಳನ್ನು ಸಹ ಹಾಕಿದರು. ಅದನ್ನು ಹಾಕಿದರೆ ಮಾತ್ರ ನನಗೆ ನಿದ್ದೆ ಬರುವುದು. ಅದನ್ನು ತಿನ್ನದೇ ಇದ್ದರೆ ನಿದ್ದೆನೇ ಬರುತ್ತಿರಲಿಲ್ಲ. ನನ್ನ ಪರಿಸ್ಥಿತಿ ಏನು ಇತ್ತು ಎಂದರೆ, ಬಲಿಪಶು ಮಾಡಿ ನನ್ನನ್ನೇ ಯಾಕೆ ಕರೆದುಕೊಂಡು ಬಂದಿದ್ದಾರೆ. ನನ್ನನ್ನೇ ಯಾಕೆ ಹೀಗೆ ಮಾಡಿದ್ದಾರೆ ಎನ್ನುವ ಪ್ರಶ್ನೆ ಇತ್ತು.

ನಿರ್ದೋಷಿಯಾದ ನನ್ನನ್ನು ಜೈಲಿಗೆ ಕರೆದುಕೊಂಡು ಬಂದಿದ್ದಾರೆ. ನಾವು ಮನುಷ್ಯರಾ..? ಇಲ್ಲಾ ಪ್ರಾಣಿಗಳಾ..? ನಮ್ಮ ಜೀವನಕ್ಕೆ ಲೆಕ್ಕಾ ಇಲ್ವಾ..? ನಮ್ಮ ದೇಶದಲ್ಲಿ ಕಾನೂನು ಇದೆಯಾ..? ಎನ್ನುವ ಆ ಮಟ್ಟದ ಆಲೋಚನೆಗೆ ಹೋಗಿದ್ದೆ. ಮಾನಸಿಕವಾಗಿ ಹಲವು ಪ್ರಶ್ನೆಗಳು ಕೊರೆಯುತ್ತಿದ್ದ ಕಾರಣ ನಿದ್ದೆನೇ ಬರುತ್ತಿರಲಿಲ್ಲ. ಕೊನೆಗೂ ಅದರಿಂದೆಲ್ಲಾ ಹೊರಗೆ ಬಂದಿದ್ದೇನೆ. ಅದರ ಬಗ್ಗೆ ಯೋಚನೆ ಮಾಡಿದರೂ ಕೂಡ ನೋವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಜೈಲಿನಲ್ಲಿ ನಾನು ಯಾರಿಗೂ ಹತ್ತಿರ ಆಗಿಲ್ಲ. ಯಾರನ್ನೂ ಫ್ರೆಂಡ್ಸ್ ಮಾಡಿಕೊಂಡಿಲ್ಲ. ಯಾರಿಗೂ ನನ್ನ ನಂಬರ್ ಕೊಟ್ಟಿಲ್ಲ. ಯಾರ ನಂಬರ್ ಕೂಡ ನಾನು ತೆಗೆದುಕೊಂಡಿಲ್ಲ. ಆದರೆ ಅಲ್ಲಿ ಬದುಕುತ್ತಿರುವ ಕೆಲವೊಬ್ಬರ ಪರಿಸ್ಥಿತಿ ನೋಡಿದರೆ, ಅವರ ಬೇಸರ ನೋಡಿದರೆ ಭಗವಂತ ಅವರಿಗೆ ಮುಕ್ತಿ ಕೊಡು ಆದರೆ ಈ ಜೈಲು ವಾಸ ಬೇಡ ಅನಿಸಿಬಿಡುತ್ತದೆ ಎಂದರು.
ಇನ್ನು ಜೈಲಿನಲ್ಲಿರುವ ನಟ ದರ್ಶನ್ ಫೋಟೋ ವೈರಲ್ ಬಗ್ಗೆ ಮಾತನಾಡಿದ ಅವರು, ದರ್ಶನ್ ಅಲ್ಲಿ ಯಾರೋ ಜೊತೆ ಕುಳಿತಿದ್ದಾರೆ. ಅವರ ಜೊತೆ ಕುಳಿತ ಕಾರಣಕ್ಕೆ ಅಲ್ಲಿ ಇರುವವರೆಲ್ಲಾ ದರ್ಶನ್ ಅವರ ಫ್ರೆಂಡ್ಸ್ ಆಗಲ್ಲ. ಆ ಕ್ಷಣಕ್ಕೋಸ್ಕರ ಅವರ ಪಕ್ಕದಲ್ಲಿ ಕುಳಿತಿದ್ದಾರೆ ಅಷ್ಟೆ. ಅದು ಯಾರೇ ಆಗಿರಬಹುದು. ನಾವು ಸೆಲೆಬ್ರೆಟಿಗಳು ಕುಳಿತಿರುತ್ತೇವೆ ಯಾರೋ ಬಂದು ನಮ್ಮ ಪಕ್ಕ ಕುಳಿತು ಮಾತನಾಡು ಅಂದ್ರೆ ಎದ್ದು ಹೋಗು ಅಂತಾ ನಾವು ಅವರ ಜೊತೆ ಜಗಳ ಮಾಡಲು ಆಗುವುದಿಲ್ಲ. ಎರಡು ನಿಮಿಷ ಮಾತಾಡಿ ಹೋಗಿ ಬಿಡುತ್ತೇವೆ. ದರ್ಶನ್ ಅಂದರೂ ಎಲ್ಲರಿಗೂ ಹಾಗೇ ಇರುತ್ತದೆ. ಆದರೆ ಇಂತಹ ಸಮಯದಲ್ಲಿ ಇಷ್ಟೆಲ್ಲಾ ಬೇಕಾ ಅನಿಸುತ್ತದೆ ಎಂದು ನಟಿ ಸಂಜನಾ ಗಲ್ರಾನಿ ಹೇಳಿದ್ದಾರೆ.












Click it and Unblock the Notifications