Rukmini Vasanth: ಯಶ್ ಒಂದು ಹೊಸ ಸಿನಿಮೀಯ ಜಗತ್ತನ್ನು ಸೃಷ್ಟಿಸುತ್ತಿದ್ದಾರೆ: ಟಾಕ್ಸಿಕ್ ಬಗ್ಗೆ ನಟಿ ರುಕ್ಮಿಣಿ ವಸಂತ್
ಬಾಲಿವುಡ್ ಮತ್ತು ಸ್ಯಾಂಡಲ್‌ವುಡ್‌ನಲ್ಲಿ ಸದ್ಯ ಭಾರಿ ಸಂಚಲನ ಮೂಡಿಸುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್. ಈ ಸಿನಿಮಾ ಕುರಿತು ಮಾತನಾಡಿರುವ ನಟಿ ರುಕ್ಮಿಣಿ ವಸಂತ್, ಸಿನಿಮಾದ ಮೇಕಿಂಗ್ ಬಗ್ಗೆ ಮನಬಿಚ್ಚಿ ಹಂಚಿಕೊಂಡಿದ್ದಾರೆ. ಟಾಕ್ಸಿಕ್ ಈವರೆಗೆ ತಾನು ನೋಡಿರುವ ಯಾವುದೇ ಚಿತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿದೆ ಎಂದು ಅವರು ರುಕ್ಮಿಣಿ ಬಣ್ಣಿಸಿದ್ದಾರೆ.
ನಿರ್ದೇಶಕಿ ಗೀತು ಮೋಹನ್ ದಾಸ್ ಮತ್ತು ಯಶ್ ಅವರು ಈ ಚಿತ್ರದ ಮೂಲಕ ಒಂದು ಹೊಸ ಸಿನಿಮೀಯ ಜಗತ್ತನ್ನು ಸೃಷ್ಟಿಸುತ್ತಿದ್ದಾರೆ ಎಂದು ರುಕ್ಮಿಣಿ ತಿಳಿಸಿದ್ದಾರೆ. ಈ ಸಿನಿಮಾ ಕಥೆ ಹೇಳುವ ಶೈಲಿ ಮತ್ತು ದೃಶ್ಯ ವೈಭವವು ಅತ್ಯಂತ ವಿಶಾಲವಾಗಿದ್ದು, ಇದೊಂದು ಹೊಸ ಆವಿಷ್ಕಾರದಂತೆ ಭಾಸವಾಗುತ್ತಿದೆ ಎಂದಿದ್ದಾರೆ. ಇಂತಹದೊಂದು ದೊಡ್ಡ ಯೋಜನೆಯಲ್ಲಿ ಭಾಗಿಯಾಗಿರುವುದು ತಮಗೆ ಹೆಮ್ಮೆಯ ವಿಷಯವಾಗಿದ್ದು, ಜನರು ಈ 'ಹೊಸ ಲೋಕ'ವನ್ನು ತೆರೆಯ ಮೇಲೆ ಹೇಗೆ ಸ್ವೀಕರಿಸುತ್ತಾರೆ ಎಂಬುದನ್ನು ನೋಡಲು ತಾವು ಕಾತರದಿಂದ ಕಾಯುತ್ತಿದ್ದೇನೆ ಎಂದಿದ್ದಾರೆ.

ಈ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ
ತಮ್ಮ ಸಿನಿಮಾ ಪಯಣದ ಬಗ್ಗೆ ಕೃತಜ್ಞತೆ ಸಲ್ಲಿಸಿರುವ ರುಕ್ಮಿಣಿ ವಸಂತ್, ಇಷ್ಟು ದೊಡ್ಡ ಮಟ್ಟದ ಚಿತ್ರದಲ್ಲಿ ಅವಕಾಶ ಸಿಕ್ಕಿರುವುದು ತಮ್ಮ ಭಾಗ್ಯ ಎಂದು ಭಾವಿಸಿದ್ದಾರೆ. ಜೂನ್ 4ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿರುವ 'ಟಾಕ್ಸಿಕ್' ಚಿತ್ರವು ಕೇವಲ ಯಶ್ ಅಭಿಮಾನಿಗಳಿಗಷ್ಟೇ ಅಲ್ಲದೆ, ಇಡೀ ಭಾರತೀಯ ಚಿತ್ರರಂಗಕ್ಕೆ ಹೊಸ ಅನುಭವ ನೀಡಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಯಶ್ ಜೊತೆಗಿನ ಮೊದಲ ಭೇಟಿಯ ಅನುಭವವನ್ನು ಹಂಚಿಕೊಂಡಿರುವ ನಟಿ ರುಕ್ಮಿಣಿ ವಸಂತ್, ಆ ಕ್ಷಣದ ದಿಗ್ರಮೆ ಮತ್ತು ಯಶ್ ಅವರ ವ್ಯಕ್ತಿತ್ವದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಯಶ್ ಅವರಂತಹ ದೊಡ್ಡ ತಾರೆಯನ್ನ ಭೇಟಿ ಮಾಡುವುದು ಆರಂಭದಲ್ಲಿ ಸಾಕಷ್ಟು ಒತ್ತಡದಿಂದ ಕೂಡಿದ್ದ ವಿಷಯವಾಗಿತ್ತು ಎಂದು ಒಪ್ಪಿಕೊಂಡಿದ್ದಾರೆ.
ಯಶ್ ಅವರನ್ನು ಮೊದಲ ಬಾರಿ ಭೇಟಿಯಾದಾಗ ಅವರ ಹಿಂದಿನ ಸಿನಿಮಾಗಳ ಸಾಧನೆ ಮತ್ತು ಅವರು ಬೆಳೆಸಿರುವ ಬೃಹತ್ ಇಮೇಜ್ ತನ್ನ ಮನಸ್ಸಿನ ಮೇಲೆ ಭಾರವಾಗಿತ್ತು ಎಂದು ರುಕ್ಮಿಣಿ ಹೇಳಿದ್ದಾರೆ. ಯಶ್ ಸರ್ ಅವರನ್ನು ಮೊದಲ ಬಾರಿ ಭೇಟಿಯಾಗಲು ಹೋದಾಗ, ಅವರು ಈವರೆಗೆ ಮಾಡಿರುವ ಸಾಧನೆಗಳ ಪರಂಪರೆಯನ್ನು ಹೊತ್ತುಕೊಂಡೇ ನಾನು ಆ ಕೋಣೆಯೊಳಗೆ ಹೆಜ್ಜೆ ಇಟ್ಟಿದ್ದೆ. ಅಷ್ಟು ದೊಡ್ಡ ವ್ಯಕ್ತಿತ್ವವನ್ನು ಎದುರಿಸುವುದು ಆರಂಭದಲ್ಲಿ ನಿಜಕ್ಕೂ ದಿಗ್ಭ್ರಮೆ ಹುಟ್ಟಿಸುವಂತಿತ್ತು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಕೆಲಸದಲ್ಲೇ ಯಶ್ ಮಗ್ನ
ಆದರೆ ಯಶ್ ಅವರ ಸರಳತೆ ಮತ್ತು ಕೆಲಸದ ಕಡೆಗಿನ ಅವರ ದೃಷ್ಟಿಕೋನ ರುಕ್ಮಿಣಿ ಅವರಿಗೆ ಅಚ್ಚರಿ ಮೂಡಿಸಿದೆ. ಯಶ್ ಅವರು ತಮ್ಮ ಹಿಂದಿನ ಯಶಸ್ಸಿನ ಹೊರೆಯನ್ನು ಎಲ್ಲಿಯೂ ತೋರ್ಪಡಿಸುವುದಿಲ್ಲ. ಪ್ರತಿಯೊಂದು ಹೊಸ ಸಿನಿಮಾವನ್ನು ಅವರು ಅಷ್ಟೇ ಹೊಸತನ ಮತ್ತು ಉತ್ಸಾಹದಿಂದ ಆರಂಭಿಸುತ್ತಾರೆ. ಅವರ ಈ ನಡವಳಿಕೆಯು ಸಹನಟರಿಗೂ ಒಂದು ರೀತಿಯ ಹಗುರವಾದ ಮತ್ತು ಆರಾಮದಾಯಕ ವಾತಾವರಣವನ್ನು ನಿರ್ಮಿಸಿಕೊಡುತ್ತದೆ ಎಂದು ರುಕ್ಮಿಣಿ ಹೇಳಿದ್ದಾರೆ.
ಯಶ್ ಅವರಿಗೆ ಅವರ ಸಾಧನೆಯ ಹಾದಿ ಅಥವಾ ಪರಂಪರೆಯು ಎಂದಿಗೂ ಹೊರೆಯಾಗಿ ಕಾಣಿಸುವುದಿಲ್ಲ. ಅದು ಅವರು ಮಾಡಿದ ಕೆಲಸ ಅಷ್ಟೇ ಎಂಬ ಭಾವನೆ ಅವರಲ್ಲಿದೆ. ಸದ್ಯಕ್ಕೆ ತಾವು ಏನನ್ನು ಸೃಷ್ಟಿಸುತ್ತಿದ್ದೇವೆಯೋ ಅದರಲ್ಲೇ ಸಂಪೂರ್ಣವಾಗಿ ಮಗ್ನರಾಗುವ ಗುಣ ಯಶ್ ಅವರಲ್ಲಿದೆ. ಈ ನಡವಳಿಕೆಯಿಂದ ತಾನು ಪ್ರಭಾವಿತಳಾಗಿರುವುದಾಗಿ ಮತ್ತು ಅದನ್ನು ನೋಡಿ ಕಲಿಯುತ್ತಿರುವುದಾಗಿ ರುಕ್ಮಿಣಿ ವಸಂತ್ ಈ ಇತ್ತೀಚಿನ ಸಂವಾದದಲ್ಲಿ ಹೇಳಿಕೊಂಡಿದ್ದಾರೆ.
ಈ ಚಿತ್ರವು ಅತ್ಯಂತ ಬಲಿಷ್ಠ ತಾರಾಗಣವನ್ನು ಹೊಂದಿದ್ದು, ಯಶ್ ಮತ್ತು ರುಕ್ಮಿಣಿ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ, ಹುಮಾ ಖುರೇಷಿ, ಅಕ್ಷಯ್ ಒಬೆರಾಯ್ ಮತ್ತು ಸುದೇವ್ ನಾಯರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಂತರಾಷ್ಟ್ರೀಯ ಗುಣಮಟ್ಟದ ಮೇಕಿಂಗ್ ಮತ್ತು ಗೀತು ಮೋಹನ್ ದಾಸ್ ಅವರ ವಿಶಿಷ್ಟ ದೃಷ್ಟಿಕೋನವು 'ಟಾಕ್ಸಿಕ್' ಚಿತ್ರವನ್ನು 2026ರ ಅತ್ಯಂತ ನಿರೀಕ್ಷಿತ ಸಿನಿಮಾಗಳ ಸಾಲಿನಲ್ಲಿ ನಿಲ್ಲಿಸಿದೆ.












Click it and Unblock the Notifications