ಟ್ರೋಲ್ ಮಾಡುವವರಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ ರಚಿತಾ ರಾಮ್, ಕಾರಣ ಇಲ್ಲಿದೆ
ನಟಿಯರು ಸಾಮಾನ್ಯವಾಗಿ ಟ್ರೋಲ್ ಹಾಗೂ ಮೀಮ್‌ಗಳಿಗೆ ಹೆದರುತ್ತಾರೆ. ಎಲ್ಲಿ ಏನು ಮಾತನಾಡುವುದಕ್ಕೂ ಹಿಂಜರಿಯುತ್ತಾರೆ. ಸ್ವಲ್ಪ ಎಡವಟ್ಟಾದ್ರೂ ಟ್ರೋಲ್ ಮಾಡಿ ಬಿಸಾಡ್ತಾರೆ ಅಂತ ಸೈಲೆಂಟ್ ಆಗೋ ನಟಿಯರೇ ಹೆಚ್ಚು. ಆದರೆ ಸ್ಯಾಂಡಲ್‌ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ಟ್ರೋಲ್‌ಗಳು ಡೋಂಟ್ ಕೇರ್ ಎನ್ನುತ್ತಾ ಬಂದವರು. ನಾನು ಅದಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಎಂದು ಹಲವು ಬಾರಿ ರಚಿತಾ ಹೇಳಿದ್ದರು. ಆದರೆ ಈಗ ರಚಿತಾ ಹಾಗೂ ಮೀಮ್ ಕ್ರಿಯೇಟರ್‌ಗಳಿಗೆ ಸ್ಪೆಷಲ್ ಥ್ಯಾಂಕ್ಸ್ ಹೇಳಿದ್ದಾರೆ.
ರಚಿತಾ ರಾಮ್ ಅವರ "ಬರೀ ಇಂತದ್ದೇಯಾ" ಅನ್ನೋ ಡೈಲಾಗ್ ಇಂದಿಗೂ ಟ್ರೋಲ್ ಹಾಗೂ ಮೀಮ್‌ಗಳಲ್ಲಿ ಬಳಕೆಯಾಗುತ್ತಿದೆ. ಹೆಚ್ಚಾಗಿ ಸಿನಿಮಾ ಮಂದಿ ಮುಜುಗರದಿಂದ ತಮ್ಮ ಬಗ್ಗೆ ಟ್ರೋಲ್ ಮಾಡಬೇಡಿ ಎಂದು ಕೇಳಿಕೊಳ್ಳುತ್ತಿರುತ್ತಾರೆ. ಆದರೆ ರಚಿತಾ ಡಿಫರೆಂಟ್ ಆಗಿ ಎಲ್ಲ ಟ್ರೋಲ್ ಹಾಗೂ ಮೀಮ್ ಮಾಡುವವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣವೂ ಇದೆ.

ಇತ್ತೀಚೆಗೆ ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ರಿಲೀಸ್ ಆಗಿದೆ. ಇದರಲ್ಲಿ ನಟಿ ರಚಿತಾ ರಾಮ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಅಭಿನಯಕ್ಕೆ ಭಾರಿ ಮೆಚ್ಚಿಗೆಯೂ ವ್ಯಕ್ತವಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೂಲಿ ಸಿನಿಮಾದಲ್ಲಿ ಮೊದಲಿಗೆ ರಚಿತಾ ಮುಗ್ಧ ಹುಡುಗಿಯಾಗಿ ಕಾಣಿಸಿಕೊಂಡು, ನಂತರ ಉಗ್ರರೂಪ ತಾಳುವ ಮೂಲಕ ಪ್ರೇಕ್ಷಕರಿಗೆ ಶಾಕ್ ನೀಡಿದ್ದಾರೆ.
ರಚಿತಾ ಅವರ ಅಭಿನಯವನ್ನು ಬಹುತೇಕರು ಇಷ್ಟಪಟ್ಟಿದ್ದಾರೆ. ಅವರ ಪಾತ್ರ ಕೂಲಿಯಲ್ಲಿ ಹೈಲೈಟ್ ಎನ್ನುತ್ತಿದ್ದಾರೆ. ಇನ್ನು ಕೆಲವರು ಮುಗ್ಧರನ್ನು ಜಾಸ್ತಿ ನಂಬಬಾರದು ಎಂದು ಕೂಲಿ ಸಿನಿಮಾದಲ್ಲಿ ರಚಿತಾ ಅವರ ವಿಡಿಯೋಗಳನ್ನು ಹಂಚಿಕೊಂಡು ಟ್ರೋಲ್ ಕೂಡ ಮಾಡುತ್ತಿದ್ದಾರೆ. ಒಟ್ಟಾರೆ ಎರಡೂ ರೀತಿಯಲ್ಲಿ ರಚ್ಚು ಪಾತ್ರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಕಲ್ಯಾಣಿ ಪಾತ್ರಕ್ಕೆ ಅದ್ಭುತ ಪ್ರತಿಕ್ರಿಯೆ
ಈ ಬಗ್ಗೆ ಅವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. "ಕೂಲಿ" ಚಿತ್ರದಲ್ಲಿನ ನನ್ನ ಪಾತ್ರ "ಕಲ್ಯಾಣಿ"ಗೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿದೆ. ನನ್ನ ಪಾತ್ರದ ಮೇಲಿನ ವಿಮರ್ಶೆಗಳು ಮತ್ತು ಪ್ರೀತಿಯಿಂದ ನಾನು ತುಂಬಿ ಹೋಗಿದ್ದೇನೆ. ಮಾಧ್ಯಮ, ವಿಮರ್ಶಕರು, ಟ್ರೋಲ್‌ಗಳು ಮತ್ತು ಮೀಮ್ ಕ್ರಿಯೇಟರ್‌ಗಳು ಎಲ್ಲರಿಗೂ ಧನ್ಯವಾದಗಳು' ಎಂದಿದ್ದಾರೆ.
'ನನ್ನ ಮೇಲೆ ನಂಬಿಕೆ ಇಟ್ಟು ಈ ಅವಕಾಶ ನೀಡಿದ್ದಕ್ಕಾಗಿ ಕೂಲಿ ಸಿನಿಮಾ ನಿರ್ದೇಶಕರಾದ ಲೋಕೇಶ್ ಕನಗರಾಜ್ ಅವರಿಗೆ ವಿಶೇಷ ಧನ್ಯವಾದಗಳು. ರಜನಿಕಾಂತ್, ಉಪೇಂದ್ರ, ಅಮೀರ್ ಖಾನ್, ನಾಗಾರ್ಜುನ್ ಸೇರಿದಂತೆ ಲೆಜೆಂಡ್ಸ್ ಜೊತೆ ಕೆಲಸ ಮಾಡಿದ್ದು ಮರೆಯಲಾಗದ ಅನುಭವ. ಈ ಯಶಸ್ಸಿಗೆ ಇಡೀ ಕೂಲಿ ತಂಡಕ್ಕೆ ಶುಭಾಶಯಗಳು' ಎಂದು ವಿಶ್ ಮಾಡಿದ್ದಾರೆ.
ಕೂಲಿ ಸಿನಿಮಾ ಬಳಿಕ ರಚಿತಾ ರಾಮ್ ಅವರಿಗೆ ಕಲ್ಯಾಣಿ ಎಂಬ ಹೆಸರನ್ನೇ ಫಿಕ್ಸ್ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೂಲಿ ಸಿನಿಮಾದಲ್ಲಿ ರಚಿತಾ ಅವರ ಫೋಟೋ ಹಾಗೂ ವಿಡಿಯೋಗಳು ಟ್ರೆಂಡಿಂಗ್‌ನಲ್ಲಿವೆ. ರಚಿತಾ ಅವರ ಪ್ರತಿಭೆಗೆ ಒಳ್ಳೆಯ ಅವಕಾಶಗಳು ಸಿಗುತ್ತಿಲ್ಲ. ಅವರ ನಿಜವಾದ ಪ್ರತಿಭೆ ಕೂಲಿಯಲ್ಲಿ ಹೊರಬಂದಿದೆ ಎಂದೆಲ್ಲ ಚರ್ಚೆಗಳು ನಡೆಯುತ್ತಿವೆ. ತಮಿಳಿನ ಒಂದೇ ಸಿನಿಮಾದ ಮೂಲಕ ರಚ್ಚು ತಮಿಳು ಪ್ರೇಕ್ಷಕರನ್ನು ಮೋಡಿ ಮಾಡಿದ್ದಾರೆ.












Click it and Unblock the Notifications