"ಕನ್ನಡ ಕಲಿಯಲ್ಲ ಅಂದ್ರೆ ಒದ್ದು ಓಡಿಸ್ತೀವಿ, ಇದು ನಿಮ್ಮ ತಾತನ ಮನೆ ಅಲ್ಲ"
ಕನ್ನಡ ಚಿತ್ರರಂಗದ ಹಿರಿಯ ನಟಿ ಗಿರಿಜಾ ಲೋಕೇಶ್ ಅವರು ಕನ್ನಡ ಭಾಷೆಯ ಪರ ಧ್ವನಿ ಎತ್ತಿದ್ದಾರೆ. ಕರ್ನಾಟಕದಲ್ಲಿ ತುಂಬಿಕೊಳ್ಳುತ್ತಿರುವ ಪರಭಾಷಿಕರು ಕನ್ನಡ ಕಲಿಯಲ್ಲ ಎಂದು ನೇರವಾಗಿ ಹೇಳುತ್ತಾ ದರ್ಪದ ಮಾತುಗಳನ್ನಾಡುತ್ತಿರುವ ಬಗ್ಗೆಯೂ ಅವರು ಗರಂ ಆಗಿದ್ದಾರೆ. ಇಲ್ಲಿಗೆ ಬಂದ ಮೇಲೆ ಕನ್ನಡ ಕಲೀಬೇಕು. ಇಲ್ಲದಿದ್ರೆ ಒದ್ದು ಓಡಿಸಬೇಕಾಗುತ್ತೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ. ಇತ್ತೀಚೆಗೆ ಕರ್ನಾಟಕ ರಕ್ಷಣಾ ವೇದಿಕೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ನಟಿ ಗಿರಿಜಾ ಲೋಕೇಶ್ ಪರಭಾಷಿಕರ ವಿರುದ್ಧ ಗುಡುಗಿದ್ದಾರೆ.
ʼಕರ್ನಾಟಕ ರಕ್ಷಣಾ ವೇದಿಕೆಯು ಕನ್ನಡವನ್ನು ರಕ್ಷಿಸಿ ಎಂದು ಹೋರಾಡುತ್ತಿದೆ. ಕನ್ನಡಕ್ಕಾಗಿ ಒಂದು ವೇದಿಕೆ ಸೃಷ್ಟಿಸಿಕೊಳ್ಳುವ ಪರಿಸ್ಥಿತಿ ನಮಗೆ ಬಂದಿದೆ. ಕರವೇ ನಾರಾಯಣಗೌಡರಂತೆ ಇನ್ನೂ ಅನೇಕರು ಕನ್ನಡಕ್ಕಾಗಿ ಹುಟ್ಟಿಕೊಳ್ಳಬೇಕಿದೆ. ನಾವೇ ಇಲ್ಲಿ ಪರಕೀಯರಂತೆ ಬದುಕುತ್ತಿದ್ದೇವೆʼ ಎಂದು ಗಿರಿಜಾ ಲೋಕೇಶ್ ಬೇಸರ ಹೊರಹಾಕಿದ್ದಾರೆ.

ʼಈಗೆಲ್ಲ ಕನ್ನಡದವರನ್ನ ಬೆರಳೆಣಿಕೆಯಷ್ಟು ಮಾತ್ರ ನೋಡಬಹುದು. ಈಗ ಮನೆಗಳಲ್ಲೂ ಕನ್ನಡ ಬದಲಿಗೆ ಇಂಗ್ಲಿಷ್, ಬೇರೆ ಭಾಷೆಗಳನ್ನ ಕಲಿಸುತ್ತಿದ್ದಾರೆ. ಕನ್ನಡವನ್ನು ಮರೆಮಾಚುವ ಕೆಲಸ ಆಗುತ್ತಿದೆ. ನಾನಂತೂ ಹಾಗೆ ಮಾಡಿಲ್ಲ. ನಮ್ಮ ಮಕ್ಕಳು ಕನ್ನಡ, ವ್ಯಾಖ್ಯಾನ ಎಲ್ಲವನ್ನೂ ಕಲಿತು, ಚೆನ್ನಾಗಿ ಕನ್ನಡವನ್ನು ಬರೀತಿದಾರೆ. ಅವರ ಕನ್ನಡ ಅಕ್ಷರಗಳನ್ನ ನೋಡಿದರೆ ತುಂಬಾ ಖುಷಿಯಾಗುತ್ತೆʼ ಎಂದಿದ್ದಾರೆ.
ʼಬೇರೆ ಭಾಷೆಗಳ ಮೇಲೆ ವ್ಯಾಮೋಹ ಬೇಡʼ
ʼನಿಮ್ಮ ಮನೆಗಳಲ್ಲೂ ಅಂತಹ ಮಕ್ಕಳನ್ನ ತಯಾರು ಮಾಡಿ, ಕನ್ನಡ ವ್ಯಾಮೋಹವನ್ನು ಬೆಳೆಸಿಕೊಳ್ಳಿ. ಬೇರೆ ಭಾಷೆಯ ಬಗ್ಗೆ ನಿಮಗೂ ಗೌರವ ಇರಲಿ, ಆದರೆ ವ್ಯಾಮೋಹ ಇರಬಾರದು. ನಮ್ಮ ಕನ್ನಡದ ನೆಲ, ಜಲಕ್ಕೆ ಆ ವ್ಯಾಮೋಹ ಇರಬೇಕು. ಆ ಮೂಲಕ ಎಲ್ಲರೂ ಕನ್ನಡವನ್ನು ಬೆಳೆಸಿ, ರಕ್ಷಿಸಬೇಕುʼ ಎಂದು ಕೇಳಿಕೊಂಡಿದ್ದಾರೆ.

ʼನಾರಾಯಣಗೌಡರು ಚಿಕ್ಕ ವಯಸ್ಸಿನಿಂದಲೂ ನನಗೆ ಗೊತ್ತು. ಅವರು ಕನ್ನಡಕ್ಕೋಸ್ಕರ ಹೋರಾಡುತ್ತಿದ್ದಾರೆ. ಅವರು ನನ್ನ ಮಗನಿದ್ದಂತೆ. ಅವರ ಹೋರಾಟ ಕೆಲವೊಮ್ಮೆ ಉಗ್ರ ರೂಪದಲ್ಲಿ, ಶಾಂತ ರೂಪದಲ್ಲಿ ನಡೆಯುತ್ತೆ. ಅವರು ಉಗ್ರ ರೂಪ ತಾಳುವಂತೆ ಮಾಡಬೇಡಿ ಎಂದು ನಾನು ಕೇಳಿಕೊಳ್ಳುತ್ತೀನಿ. ಎಲ್ಲರೂ ಕನ್ನಡ ನಾಡಿಗೆ ಬಂದವರು ಕನ್ನಡವನ್ನ ಕಲಿಯಿರಿ. ದಯವಿಟ್ಟು ಕನ್ನಡ ಕಲಿಯಿರಿʼ ಎಂದು ಮನವಿ ಮಾಡಿದ್ದಾರೆ.
ಎಲ್ಲ ಸೌಕರ್ಯ ಕೊಟ್ಟಿಲ್ವಾ?
ʼಇಲ್ಲ ನಾವು ಕನ್ನಡ ಮಾತನಾಡಲ್ಲ, ನಾವ್ಯಾಕೆ ಮಾತನಾಡಬೇಕು? ಏನಿವಾಗ ಏನಿವಾಗ ಅಂದ್ರೆ ನಿಮ್ಮನ್ನ ಒದ್ದು ಓಡಿಸುತ್ತೀವಿ. ದಯವಿಟ್ಟು ಕನ್ನಡವನ್ನ ಕಲೀರಿ ಅಷ್ಟೇ. ಇಲ್ಲಿ ಬದುಕೋಕೆ ನಿಮಗೆ ಎಲ್ಲ ರೀತಿಯ ಸೌಕರ್ಯವನ್ನ ನಾವು ಮಾಡಿಕೊಟ್ಟಿದ್ದೀವಿ. ಆದರೆ ನೀವೆಲ್ಲ ಕನ್ನಡ ಅಂದ್ರೆ ಯಾಕೆ ಕಲಿಯಲ್ಲ ಅಂತೀರಿ? ಇದೇನು ನಿಮ್ಮ ತಾತನ ಮನೆ ಅಲ್ಲ, ನಮ್ಮ ಮನೆ, ಹಾಗಾಗಿ ಇಲ್ಲಿಗೆ ಬಂದವರು ಕನ್ನಡವನ್ನು ಕಲಿತು, ಉಳಿಸಿ ಬೆಳೆಸಿ ಎಂದಷ್ಟೇ ನಾವು ಕೇಳಿಕೊಳ್ಳೋದುʼ ಎಂದಿದ್ದಾರೆ.
ʼಈಗ ನಾವು ಬೇರೆ ರಾಜ್ಯಕ್ಕೆ ಹೋದ್ರೆ ಆ ಭಾಷೆಯಲ್ಲಿ ಮಾತನಾಡ್ತೀವಿ. ಏಕೆಂದರೆ ಕನ್ನಡವರು ಅಂದ್ರೆ ಪಂಡಿತರಿದ್ದಂತೆ. ಅವರು ಎಲ್ಲೇ ಹೋದರೂ ಜಯಿಸಿಕೊಂಡು ಬರ್ತಾರೆ, ಅದು ಕನ್ನಡಿಗರ ಶಕ್ತಿ, ನಿಮ್ಮ ಮನೆಗಳಲ್ಲಿ ನಿಮ್ಮ ಭಾಷೆಗಳನ್ನ ಬಳಸಿ. ಆದರೆ ಹೊರಗಡೆ ಬಂದಾಗ ಕನ್ನಡವನ್ನೇ ಬಳಸಿʼ ಎಂದು ಕಿವಿಮಾತು ಹೇಳಿದ್ದಾರೆ.












Click it and Unblock the Notifications