ನಿನ್ ಜೀವನ ನನ್ ಚಪ್ಪಲಿಗೂ ಸಮ ಅಲ್ಲ: ಮನೆ ಕೆಲಸದಾಕೆಗೆ ಖ್ಯಾತ ನಟಿ ಟಾರ್ಚರ್, ಕೇಸ್ ದಾಖಲು
ನಟ ನಟಿಯರು ಪರದೆಯ ಮೇಲೆ ಕಾಣುವಂತೆ ನಿಜ ಜೀವನದಲ್ಲಿ ಇರೋದಿಲ್ಲ ಎನ್ನುವ ಮಾತಿದೆ. ಪಾತ್ರಕ್ಕೆ ತಕ್ಕಂತೆ ಬಣ್ಣ ಹಚ್ಚುವ ಅವರು, ತೆರೆ ಹಿಂದೆ ಹೇಗಿರುತ್ತಾರೆ ಎಂಬುದು ಹೆಚ್ಚಿನವರಿಗೆ ತಿಳಿಯುವುದಿಲ್ಲ. ಪರದೆ ಮೇಲೆ ನಾಯಕಿಯಾಗಿ ಮಿಂಚುವವರು ನಿಜ ಜೀವನದಲ್ಲೂ ಆ ಗುಣಗಳನ್ನು ಹೊಂದಿರುವುದಿಲ್ಲವೇ? ಎಂಬ ಅನುಮಾನ ಮೂಡಿಸುವ ಘಟನೆಯೊಂದು ಬೆಳಕಿಗೆ ಬಂದಿದೆ. ಸದ್ಗುಣ ಸಂಪನ್ನೆ ಎಂಬ ರೀತಿಯಲ್ಲಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸಿನಿಮಾ ನಟಿಯೊಬ್ಬರು ನಿಜಜೀವನದ ವಿಲನ್ ಆಗಿದ್ದಾರೆ.
ನನಗೆ ಅವರಿಂದ ಕಿರುಕುಳ ಆಯ್ತು, ಇವರಿಂದ ಆಯ್ತು ಎಂದು ನಟಿಯರು ಹೇಳಿಕೊಳ್ಳುತ್ತಿದ್ದಾರೆ. ಇದರ ನಡುವೆ ಖ್ಯಾತ ನಟಿಯೇ ತನ್ನ ಮನೆಯಲ್ಲಿ ಕೆಲಸ ಮಾಡುವವರಿಗೆ ಕಿರುಕುಳ ನೀಡಿ ಸುದ್ದಿಯಾಗಿದ್ದಾರೆ. ಖ್ಯಾತ ನಟಿ ಡಿಂಪಲ್ ಹಯಾತಿ (Dimple Hayathi) ವಿರುದ್ಧ ಈ ಆರೋಪ ಕೇಳಿಬಂದಿದ್ದು, ತನ್ನ ಮನೆಯಲ್ಲಿ ಕೆಲಸ ಮಾಡುವ ಯುವತಿಗೆ ನಿರಂತರವಾಗಿ ಕಿರುಕುಳ ಕೊಟ್ಟಿದ್ದಾರೆ ಎನ್ನಲಾಗಿದೆ. ನಿನ್ನ ಜೀವನ ನನ್ನ ಚಪ್ಪಲಿಗೂ ಸಮ ಅಲ್ಲ ಎಂದು ನಿಂದಿಸುತ್ತಾ ಪದೇ ಪದೇ ಟಾರ್ಚರ್ ಕೊಟ್ಟಿದ್ದಾಗಿ ಮನೆ ಕೆಲಸದಾಕೆ ದೂರು ನೀಡಿದ್ದು, ನಟಿ ಹಾಗೂ ಆಕೆಯ ಪತಿ ವಿರುದ್ಧ ಕೇಸ್ ದಾಖಲಾಗಿದೆ.

ಹೈದರಾಬಾದ್‌ನ ಶೈಕ್‌ಪೇಟೆಯಲ್ಲಿರುವ ವಂಶಿರಾಮ್ ಅವರ ವೆಸ್ಟ್‌ವುಡ್ ಅಪಾರ್ಟ್‌ಮೆಂಟ್‌ನಲ್ಲಿ ನಟಿ ವಾಸವಿದ್ದಾರೆ. ಒಡಿಶಾದ ರಾಯಗಡ ಮೂಲದ 22 ವರ್ಷದ ಪ್ರಿಯಾಂಕಾ ಬಿಬರ್ ಎಂಬುವವರು ನಟಿಯ ಮನೆಯಲ್ಲಿ ಕೆಲಸಕ್ಕಿದ್ದರು. ಮನೆ ಸಹಾಯಕಿಯಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದ ಪ್ರಿಯಾಂಕಾ ಅವರಿಗೆ ನಟಿ ಡಿಂಪಲ್ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ
ಪೊಲೀಸ್ ವರದಿಯ ಪ್ರಕಾರ ಪ್ರಿಯಾಂಕಾ ತನ್ನ ಕೆಲಸ ಆರಂಭಿಸಿದಾಗಿನಿಂದ ನಿರಂತರವಾಗಿ ದೌರ್ಜನ್ಯ ಮತ್ತು ಅವಮಾನವನ್ನು ಅನುಭವಿಸುತ್ತಿರುವುದಾಗಿ ಆರೋಪಿಸಿದ್ದಾರೆ. ಡಿಂಪಲ್ ಹಯಾತಿ ಮತ್ತು ಅವರ ಪತಿ ಡೇವಿಡ್ ಆಗಾಗ್ಗೆ ತನಗೆ ಆಹಾರವನ್ನು ಸಹ ನಿರಾಕರಿಸುತ್ತಿದ್ದರು. ನೇರವಾಗಿ ನಿಂದಿಸುತ್ತಿದ್ದರು. "ನಿನ್ನ ಜೀವನ ನನ್ನ ಚಪ್ಪಲಿಗಳಿಗೂ ಸಮನಲ್ಲ" ಎಂದು ಅವಮಾನಿಸುತ್ತಿದ್ದರು ಎಂದು ಅವರು ಆರೋಪಿಸಿದ್ದಾರೆ.
ಸೆಪ್ಟೆಂಬರ್ 29ರಂದು ಅವರ ಸಾಕು ನಾಯಿ ಬೊಗಳಿದ ನಂತರ ಜಗಳ ತಾರಕಕ್ಕೇರಿದೆ. ಈ ವೇಳೆ ದಂಪತಿ ನನ್ನನ್ನು ಕೆಟ್ಟ ಪದಗಳಿಂದ ನಿಂದಿಸಿ, ನನ್ನ ಪೋಷಕರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದರು ಎಂದು ಪ್ರಿಯಾಂಕಾ ಆರೋಪಿಸಿದ್ದಾರೆ. ತನ್ನ ಫೋನ್‌ನಲ್ಲಿ ಜಗಳವನ್ನು ರೆಕಾರ್ಡ್ ಮಾಡಲು ಪ್ರಯತ್ನಿಸಿದಾಗ, ಡೇವಿಡ್ ಫೋನ್ ಕಸಿದುಕೊಂಡು ನೆಲದ ಮೇಲೆ ಒಡೆದು ಹಾಕಿದರು. ದೈಹಿಕವಾಗಿ ಹಲ್ಲೆ ಮಾಡಲು ಪ್ರಯತ್ನಿಸಿದರು. ಇದೇ ಜಗಳದಲ್ಲಿ ನನ್ನ ಬಟ್ಟೆ ಹರಿದಿವೆ. ಬಳಿಕ ಅಲ್ಲಿಂದ ತಪ್ಪಿಸಿಕೊಂಡು ಬಂದು ಪೊಲೀಸರಿಗೆ ದೂರು ಕೊಟ್ಟೆ ಎಂದು ಹೇಳಿಕೊಂಡಿದ್ದಾರೆ.
ಮನೆಕೆಲಸದಾಕೆ ನೀಡಿದ ದೂರಿನ ಆಧಾರದ ಮೇಲೆ ಹೈದರಾಬಾದ್‌ನ ಫಿಲ್ಮ್‌ನಗರ ಪೊಲೀಸರು ಡಿಂಪಲ್ ಹಯಾತಿ ಮತ್ತು ಡೇವಿಡ್ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಪ್ರಿಯಾಂಕಾ ಅವರ ದೂರಿನ ಆಧಾರದ ಮೇಲೆ ನಟಿ ಮತ್ತು ಅವರ ಪತಿ ಇಬ್ಬರಿಗೂ ನೋಟಿಸ್ ಜಾರಿ ಮಾಡುವುದಾಗಿ ಪೊಲೀಸರು ಹೇಳಿದ್ದಾರೆ.












Click it and Unblock the Notifications