ಡಿಗ್ರಿ ಓದುವಾಗಲೇ ಆ ನಟಿ ಮೇಲೆ ಕ್ರಶ್ ಆಗಿತ್ತು: ಮದುವೆ ಬಳಿಕ ಗುಟ್ಟು ಬಿಚ್ಚಿಟ್ಟ ವಸಿಷ್ಠ ಸಿಂಹ
ಸ್ಯಾಂಡಲ್‌ವುಡ್‌ನಲ್ಲಿ ಖಳನಾಯಕನಾಗಿ ಮಿಂಚಿ ನಾಯಕ ನಟನಾಗಿ ಹವಾ ಕ್ರಿಯೇಟ್ ಮಾಡಿರುವ ವಸಿಷ್ಠ ಸಿಂಹ ಅವರು ಇದೀಗ ಟಾಲಿವುಡ್‌ನಲ್ಲೂ ಮಿಂಚುತ್ತಿದ್ದಾರೆ. ವಸಿಷ್ಠ ಅವರಿಗೆ ಈಗ ತೆಲುಗು ಹಾಗೂ ತಮಿಳು ಚಿತ್ರರಂಗದಿಂದ ಹಲವು ಆಫರ್‌ಗಳು ಬರುತ್ತಿವೆ. 'ಓದೆಲ ರೈಲ್ವೆ ಸ್ಟೇಷನ್' ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಸಿಂಹ ಕಾಲಿಟ್ಟಿದ್ದರು. ಇತ್ತೀಚೆಗೆ ಅವರ 'ಓದೆಲ-2' ತೆಲುಗು ಹಾರರ್ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಹಾಗಾಗಿ ವಸಿಷ್ಠ ಅವರು ಟಾಲಿವುಡ್‌ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವಸಿಷ್ಠ ಅವರು ನಟಿ ಹರಿಪ್ರಿಯಾ ಅವರನ್ನು ಮದುವೆಯಾಗಿರುವುದು ಗೊತ್ತೇ ಇದೆ. ಆದರೆ ವಸಿಷ್ಠ ಅವರಿಗೆ ಖ್ಯಾತ ನಟಿ ಮೇಲೆ ಕ್ರಶ್ ಆಗಿತ್ತು ಎಂಬ ವಿಚಾರವನ್ನು ಹೇಳಿಕೊಂಡಿದ್ದಾರೆ. ಅಚ್ಚರಿಯೆಂದರೆ ಆ ನಟಿಯೊಂದಿಗೆ ವಸಿಷ್ಠ ನಟನೆಯೂ ಮಾಡಿದ್ದಾರೆ.
ʼನಾನು ಡಿಗ್ರಿ ಓದುತ್ತಿದ್ದಾಗ ಹ್ಯಾಪಿಡೇಸ್ ಸಿನಿಮಾ ರಿಲೀಸ್ ಆಗಿತ್ತು. ನನ್ನ ಸ್ನೇಹಿತ ಅದರ ಹಾಡುಗಳನ್ನ ಕೇಳಿದ್ದ. ತುಂಬಾ ಚೆನ್ನಾಗಿದೆ ಬಾ ಮಗಾ ಎಂದು ಸಿನಿಮಾ ನೋಡಲು ಕರೆದಿದ್ದ. ಆಗ ನಾನು ಆ ಕಲಾವಿದರು ಯಾರೂ ಅನ್ನೋದೆ ಗೊತ್ತಿಲ್ಲ, ಆ ಸಿನಿಮಾದೊಂದಿಗೆ ಅಷ್ಟೊಂದು ಕನೆಕ್ಷನ್ ಕೂಡ ಇಲ್ಲ ಎಂದು ಹೇಳಿದ್ದೆ. ಆಗ ಅದರಲ್ಲಿ ನನಗೆ ಗೊತ್ತಿರುವ ಕಲಾವಿದರು ಯಾರೂ ಇರಲಿಲ್ಲ, ಹಾಗಾಗಿ ಸಿನಿಮಾ ನೋಡಲು ಆಸಕ್ತಿ ಇಲ್ಲ ಎಂದಿದ್ದೆʼ ಎಂದು ನಟ ರಿವೀಲ್ ಮಾಡಿದ್ದಾರೆ.

ನಟಿ ಬಿಳಿಜಿರಳೆ ಇದ್ದಂಗಿದ್ದಾಳೆ ಎಂದಿದ್ದೆ
ʼಆಗ ನನ್ನ ಸ್ನೇಹಿತ ಅವನು ಏಯ್ ಇಲ್ಲ ಕಣೋ ಹೊಸ ಹೀರೋಯಿನ್ ಅಂತೆ, ಸಖತ್ತಾಗಿದ್ದಾಳೆ ಎಂದು ಹೇಳಿದ್ದ. ಆಗ ನಾನು ತಮನ್ನಾ ಅವರನ್ನ ಮೊದಲಿಗೆ ಇವಳು ಯಾರೋ ಬಿಳಿಜಿರಳೆ ಇದ್ದಂಗಿದ್ದಾಳೆ ಎಂದಿದ್ದೆ. ಆಗ ಆ ಸಿನಿಮಾದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದರು. ಇದೇ ಭಾವನೆಯಲ್ಲಿ ಸಿನಿಮಾ ನೋಡಲು ಹೋದೆ. ಆದರೆ ಸಿನಿಮಾ ನೋಡಿ ಹೊರ ಬರುವಾದ ಅವರ ಮೇಲೆ ಕ್ರಶ್ ಆಗಿತ್ತು. ಆ ಸಿನಿಮಾ ನೋಡಿದ ಎಲ್ಲರಿಗೂ ತಮನ್ನಾ ಆಗ ಇಷ್ಟವಾಗಿದ್ದರುʼ ಎಂದು ವಸಿಷ್ಠ ಇತ್ತೀಚಿನ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದಾರೆ.
ʼತಮನ್ನಾ ಭಾಟಿಯಾ ಅವರು 20 ವರ್ಷಗಳಿಂದ ಸಿನಿಮಾರಂಗದಲ್ಲಿದ್ದಾರೆ. ಇಂತಹ ನಟಿಯರು ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದಾರೆ. ದೇಶದಾದ್ಯಂತ ಅಪಾರ ಅಭಿಮಾನಿಗಳನ್ನ ಹೊಂದಿರುವ ನಟಿ. ಅವರೊಂದಿಗೆ ನಾನು ನಟನೆ ಮಾಡಿದ್ದು ತುಂಬಾ ಖುಷಿ ನೀಡಿದೆ. ಅವರ ಆಸಕ್ತಿ ಹಾಗೂ ವ್ಯಕ್ತಿತ್ವ ನಿಜಕ್ಕೂ ಅಚ್ಚರಿ ಮೂಡಿಸುವಂತದ್ದು. ಅವರಿಗೆ ನಾನು ದೊಡ್ಡ ನಟಿ, 20 ವರ್ಷಗಳಿಂದ ಸಿನಿಮಾರಂಗದಲ್ಲಿದ್ದೀನಿ ಅನ್ನೋ ಅಹಂ ಚೂರೂ ಇಲ್ಲʼ ಎಂದು ವಸಿಷ್ಠ ಹೇಳಿದ್ದಾರೆ.
ʼಅವರು ತುಂಬಾ ಸರಳವಾಗಿ, ಸಹಜವಾಗಿ ಇರ್ತಾರೆ. ಇನ್ನೂ ಈಗಷ್ಟೇ ಚಿತ್ರರಂಗಕ್ಕೆ ಬಂದಿದ್ದೇನೆ ಎನ್ನುವಂತೆ ಇರುತ್ತಾರೆ. ಪ್ರತಿ ವಿಚಾರವನ್ನೂ ತಾಳ್ಮೆಯಿಂದ ಕೇಳಿ ಕಲಿಯುವ ಗುಣ ಅವರಲ್ಲಿದೆ. ಇದೇ ಕಾರಣಕ್ಕೆ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ನಾನು ಅವರೊಂದಿಗೆ ನಾನು ಸಿನಿಮಾದಲ್ಲಿ ನಟಿಸುತ್ತೇನೆ ಎಂದು ಊಹೆ ಮಾಡಿರಲಿಲ್ಲ. ಸಹಜವಾಗಿ ಅವರನ್ನು ಗೌರವಿಸಬೇಕು ಅನಿಸುತ್ತೆʼ ಎಂದು ಹೇಳಿದ್ದಾರೆ.
ಕನ್ನಡದ ಹಲವರು ಬೇರೆ ಜಾಗಗಳಿಗೆ ಹೋಗಿ ತಮ್ಮ ಪ್ರತಿಭೆ ಮೂಲಕ ಅಲ್ಲಿ ಕರ್ನಾಟಕದ ಪತಾಕೆ ಹಾರಿಸಿದ್ದಾರೆ. ಈಗ ನಾನೂ ಅದೇ ಸಾಲಿನಲ್ಲಿ ಹೆಜ್ಜೆ ಇಡುತ್ತಿರುವುದಕ್ಕೆ ನನಗೆ ಖುಷಿ ಇದೆ. ನಾನು ಸಾಧಿಸಬೇಕಿರುವುದು ಕೂಡ ತುಂಬಾ ಇದೆ. ಯಾವಾಗ ನಮ್ಮ ಗಡಿ ದಾಟಿ ಬೇರೆ ಕಡೆ ಹೋದಾಗ ಅಲ್ಲಿ ಮನ್ನಣೆ ಸಿಕ್ಕಾಗ ಅದು ಪ್ರತಿಭೆಗೆ ಸಿಗುವ ನಿಜವಾದ ಗೌರವ. ತೆಲುಗಿನಲ್ಲಿ ಈಗ ಕನ್ನಡದ ದೀಕ್ಷಿತ್ ಶೆಟ್ಟಿಗೂ ಒಳ್ಳೆಯ ಬೇಡಿಕೆ ಇದೆ. ಇನ್ನೂ ಅನೇಕರು ಬೇರೆ ಬೇರೆ ಚಿತ್ರರಂಗಳಲ್ಲಿ ಒಳ್ಳೆಯ ಹೆಸರು ಮಾಡಿದ್ದಾರೆ ಎಂದು ವಸಿಷ್ಠ ಸಿಂಹ ತಿಳಿಸಿದ್ದಾರೆ.












Click it and Unblock the Notifications