'ಒಂದಷ್ಟು ವರ್ಷ ನಮ್ಮ ಜೀವನವನ್ನೇ ಹಾಳು ಮಾಡಿಬಿಟ್ರು'
ರಿಯಾಲಿಟಿ ಶೋಗಳ ಮೂಲಕ ಕನ್ನಡಿಗರಿಗೆ ಪರಿಚಯವಾಗಿದ್ದ ಸುನಾಮಿ ಕಿಟ್ಟಿ ಹಲವು ವರ್ಷಗಳ ಕಾಲ ತೆರೆ ಮರೆಗೆ ಸರಿದಿದ್ದರು. ಇದೀಗ ಸುನಾಮಿ ಕಿಟ್ಟಿ ಮತ್ತೆ ಮುನ್ನೆಲೆಗೆ ಬಂದಿದ್ದು, ಸದ್ದಿಲ್ಲದೇ ಸಿನಿಮಾ ಮಾಡಿ ಬಿಡುಗಡೆ ಮಾಡಿದ್ದಾರೆ. ಸುನಾಮಿ ಕಿಟ್ಟಿ ನಾಯಕ ನಟನಾಗಿ ನಟಿಸಿರುವ ಕೋರ ಕನ್ನಡ ಸಿನಿಮಾ ಇಂದು ಏಪ್ರಿಲ್ 18ರಂದು ಬಿಡುಗಡೆಯಾಗಿದೆ.
ಕೋರ ಕಾಡಿನಲ್ಲಿ ನಡೆಯುವ ವಿಭಿನ್ನ ಕತೆಯಾಗಿದ್ದು, ಒರಟ ಶ್ರೀ ನಿರ್ದೇಶನ ಮಾಡಿದ್ದಾರೆ. ಪಿ. ಮೂರ್ತಿ ನಿರ್ಮಿಸಿರುವ ಈ ಚಿತ್ರದಲ್ಲಿ ಸುನಾಮಿ ಕಿಟ್ಟಿ ನಾಯಕನಾಗಿದ್ದಾರೆ. ಕೋರ ಸಿನಿಮಾ ಮೂಲಕ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದಿರುವ ಸುನಾಮಿ ಕಿಟ್ಟಿ ಇಷ್ಟು ವರ್ಷಗಳ ಕಾಲ ಸಮಯ ವ್ಯರ್ಥ ಮಾಡಿದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ನಾನು ಹುಟ್ಟಿದ್ದು ಮಂಡ್ಯ, ಬೆಳೆದಿದ್ದು ಮೈಸೂರು, ಬೆಳೆಸಿದ್ದು ಎಚ್.ಡಿ ಕೋಟೆ. ಎಚ್.ಡಿ ಕೋಟೆಯ ಫುಟ್‌ಪಾತ್ ಮೇಲೆ ನಾನು ನನ್ನಮ್ಮ ತರಕಾರಿ ಮಾಡಿಕೊಂಡಿದ್ದೆವು. ಯಾವುದೋ ಒಂದು ಶೋ ಮೂಲಕ ಈ ಮನೋರಂಜನಾ ಕ್ಷೇತ್ರಕ್ಕೆ ಬಂದು ಒಂದು ದೊಡ್ಡ ವೇದಿಕೆ ಸಿಕ್ಕಿತ್ತು. ಆ ವೇದಿಯಲ್ಲಿ ಗೆದ್ದ ಮೇಲೆ ಎಲ್ಲರೂ ನಮ್ಮ ಹುಡುಗ ನಮ್ಮ ಹುಡುಗ ಅಂತಾ ಕೊಂಡಾಡಿದರು. ನಮ್ಮ ಹುಡುಗ ಒಳ್ಳೆ ಟ್ಯಾಲೆಂಟ್ ಇದೆ ಅಂತಾ ಹೇಳಿ ಒಂದಷ್ಟು ವರ್ಷದ ಪಯಣದಲ್ಲಿ ನಮ್ಮ ಜೀವನವನ್ನೇ ಹಾಳು ಮಾಡಿಬಿಟ್ಟರು' ಎಂದರು.
'ಅವರು ಹಾಳು ಮಾಡಿದರು ಎನ್ನುವುದಕ್ಕಿಂತ ನಾನು ತಪ್ಪು ಮಾಡಿದೆ ಅಂತಾ ಅನಿಸುತ್ತದೆ. ನಾವು ಹಳ್ಳಿ ಪ್ರತಿಭೆಗಳು. ನಾವು ಹಳ್ಳಿ ಜನ. ಹಳ್ಳಿ ಜನ ಮುಗ್ಧರು. ಆದರೆ ನಮ್ಮ ಆಕಾರ ನೋಡಿ ನಮಗೆ ಅಹಂಕಾರ, ಕೆಟ್ಟ ಮನಸ್ಥಿತಿ ಅಂತಾ ಅವರಿಗೆ ಅವರೇ ನಿರ್ಧಾರ ಮಾಡುತ್ತಾರೆ. ಒಬ್ಬ ವ್ಯಕ್ತಿಯನ್ನು ನೋಡಿದ ತಕ್ಷಣ ಆತನ ಬಗ್ಗೆ ಎಲ್ಲಾ ಗೊತ್ತಾಗುವುದಿಲ್ಲ. ಅವನ ಜೊತೆಗೆ ಇದ್ದರೆ ಅಷ್ಟೇ ಅವನ ಗುಣ ಗೊತ್ತಾಗುವುದು' ಎಂದು ಹೇಳಿದರು.

'ನನ್ನ ನೋಡಿದ ತಕ್ಷಣ ಹಾಗೆ ಅಂದುಕೊಳ್ಳುತ್ತಾರೆ. ಆದರೆ ಅದೆಲ್ಲಾ ಸುಳ್ಳು. ಒಬ್ಬ ಮನುಷ್ಯ ಅಂದ ಮೇಲೆ ಆಸೆ, ಆಕಾಂಕ್ಷೆ ಇರುವುದು ಸಾಮಾನ್ಯ ಆದರೆ ಗಾಂಧಿ ನಗರ ಅಂದರೆ ಸಿನಿಮಾ ಕ್ಷೇತ್ರದಲ್ಲಿ ಯಾರೋ ನಮ್ಮನ್ನು ಬೆಳೆಸುತ್ತಾರೆ ಅಂತಾ ಅಂದುಕೊಳ್ಳುವುದು ತಪ್ಪು. ಅವರದೇ ಆದ ಪ್ರತಿಭೆ ಹಾಗೂ ಜನ ಸಂಪಾದನೆಯಿಂದ ಕೆಲವರಷ್ಟೇ ಬೆಳೆದಿದ್ದಾರೆ. ಇಷ್ಟು ರಿಯಾಲಿಟಿ ಶೋ ಗೆದ್ದು ನಮ್ಮನ್ನು ಬೆಳೆಸಿಲ್ಲ ಅಂದರೆ ಅದು ವ್ಯರ್ಥ'
'ನನ್ನ ಜೀವನದಲ್ಲಿ ಒಂದಿಷ್ಟು ಕಾಂಟ್ರವರ್ಸಿಗಳು ಆಗಿ ಹೋಯ್ತು. ಆದರೆ ಅದು ಯಾಕೆ ಆಯ್ತು ಅಂತಾ ಯಾರಿಗೂ ಗೊತ್ತಿಲ್ಲ. ಹಣ್ಣು ತಿಂದವ ತಪ್ಪಿಸಿಕೊಂಡ ಸಿಪ್ಪೆ ತಿಂದವ ಸಿಕ್ಕಿಬಿದ್ದ ಎನ್ನುವಂತಾಯಿತು ನನ್ನ ಕಥೆ' ಎಂದು ಸುನಾಮಿ ಕಿಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.












Click it and Unblock the Notifications