Actor Shiva Rajkumar: ಇನ್ಮುಂದೆ ವರ್ಷಕ್ಕೆ ಒಂದೇ ಸಿನಿಮಾ ಮಾಡ್ತೀನಿ ಎಂದ ಶಿವರಾಜ್‌ಕುಮಾರ್: ಹೀಗಂದಿದ್ದು ಯಾಕೆ?
ಶಿವಮೊಗ್ಗ ನವೆಂಬರ್ 24: ಬೈರತಿ ರಣಗಲ್ ಚಿತ್ರದ ಪ್ರಚಾರದಲ್ಲಿ ಬ್ಯೂಸಿ ಆಗಿರುವ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಇಂದು ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ. ಅಲ್ಲದೆ ಬೈರತಿ ರಣಗಲ್ ಸಿನಿಮಾಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ, ಕಲೆಕ್ಷನ್ ಸಹ ಚೆನ್ನಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ತಮ್ಮ ಆರೋಗ್ಯದ ಬಗ್ಗೆ ಶಿವಣ್ಣ ಹೇಳಿದ್ದೇನು?
ಇಂದು ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಬೈರಗಿ ರಣಗಲ್ ಸಿನಿಮಾ ಬಗ್ಗೆ ಒಳ್ಳೆಯ ಅಭಿಪ್ರಾಯ ಬಂದಿದೆ. ಜನರು ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡ್ತಾ ಇದ್ದಾರೆ. ಮಫ್ತಿಯಲ್ಲಿ ಇದ್ದ ಪಾತ್ರ ಜನರಿಗೆ ಮೆಚ್ಚಿಗೆ ಆಗಿತ್ತು. ಆ ಪಾತ್ರದಲ್ಲಿ ಫ್ರಿಕ್ವೆಲ್ ಮಾಡಬೇಕು ಅಂದುಕೊಂಡಿದ್ದೆವು. ನರ್ತನ್ ತುಂಬಾ ಅಚ್ಚುಕಟ್ಟಾಗಿ ಚಿತ್ರವನ್ನು ಮಾಡಿದ್ದಾರೆ. ಇದೇ ನವೆಂಬರ್ 29ಕ್ಕೆ ತಮಿಳು, ತೆಲುಗು ಭಾಷೆಯಲ್ಲಿ ಚಿತ್ರ ತೆರೆಕಾಣಲಿದೆ. ಶಿರಸಿ, ಹುಬ್ಬಳ್ಳಿ, ರಾಣೆಬೇನ್ನೂರು ತುಮಕೂರಿಗೆ ಹೋಗಿ ಸಿನಿಮಾದ ಪ್ರಚಾರ ಮಾಡ್ತೇನೆ ಎಂದು ಹೇಳಿದರು.

ತಮ್ಮ ಆರೋಗ್ಯದ ಬಗ್ಗೆ ಅಪ್‌ಡೇಟ್ ಕೊಟ್ಟ ಶಿವಣ್ಣ
ಇನ್ನು ಇದೇ ವೇಳೆ ಆರೋಗ್ಯದ ಬಗ್ಗೆ ಮಾತಾನಾಡಿದ ಅವರು, 'ನನ್ನ ಆರೋಗ್ಯ ಸುಧಾರಿಸಿದೆ, ಮುಂದಿನ ತಿಂಗಳು ಆಪರೇಷನ್ ಇದೆ. ಮೂರು ಹಂತದ ಚಿಕಿತ್ಸೆ ಬಳಿಕ ಆಪರೇಷನ್ ಮಾಡಲಾಗುತ್ತದೆ. ಅದಕ್ಕಾಗಿ ಯುಎಸ್ ಗೆ ಹೊಗುತ್ತಿದ್ದೇನೆ. ಅರೋಗ್ಯ ಒಂದು ಲೆವಲ್ ಗೆ ಸುಧಾರಿಸಿದೆ' ಎಂದರು. 'ಕರುನಾಡ ಚಕ್ರವರ್ತಿ' ನಟ ಶಿವರಾಜ್‌ಕುಮಾರ್ ತಾವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ತಿಳಿಸಿದ್ದಾರೆ. ಅನಾರೋಗ್ಯದ ನಡುವೆಯೂ ಅವರು ಒಪ್ಪಿಕೊಂಡ ಸಿನಿಮಾಗಳ ಚಿತ್ರೀಕರಣ ಮುಗಿಸುತ್ತಿದ್ದಾರೆ.
ವರ್ಷಕ್ಕೆ ಒಂದೇ ಸಿನಿಮಾ ಮಾಡ್ತೀನಿ ಅಂದ ಶಿವರಾಜ್‌ಕುಮಾರ್
ಇನ್ನು ಮುಂದೆ ಒಂದು ವರ್ಷಕ್ಕೆ ಒಂದು ಸಿನಿಮಾ ಮಾಡುತ್ತೇನೆ. 45ನೇ ಚಿತ್ರ ಇನ್ನೇನು ತೆರೆಗೆ ಬರುತ್ತೆ. ತೆಲುಗಿನಲ್ಲಿ ರಾಮ್ ಚರಣ್ ಜೊತೆ ಒಂದು ಸಿನಿಮಾ ಇದೆ. ಎ ಪಾರ್ ಅನಂದ್ ಚಿತ್ರ ಇದೆ. ನನ್ನ ಮಗಳ ನಿರ್ಮಾಣದ ಚಿತ್ರ ಕೂಡ ರಿಲೀಸ್ ಆಗುತ್ತೆ. ಈಸೂರು ದಂಗೆ ಚಿತ್ರ ಮಾಡಬೇಕು ಎಂದ್ರೆ ಸಾಕಷ್ಟು ತಯಾರಿ ನೆಡಸಬೇಕು. ನಿರ್ದೇಶಕರ ಜೊತೆ ಮಾತನಾಡಿದ್ದೇನೆ. ಈ ಚಿತ್ರ ತಮಾಷೆಗೆ ಮಾಡೋದಲ್ಲ, ಈಸೂರು ದಂಗೆ ಚಲನ ಚಿತ್ರ ಮಾಡೇ ಮಾಡಲಾಗುತ್ತೆ. ಮಫ್ತಿ 2 ಚಲನಚಿತ್ರ ಮುಂದೆ ಬರಲಿದೆ ಎಂದರು.
ಆರೋಗ್ಯ ಸಮಸ್ಯೆ ಇದೆ ಎಂದಿದ್ದ ಶಿವಣ್ಣ
ನನಗೆ ಆರೋಗ್ಯ ಸಮಸ್ಯೆ ಇರುವುದು ನಿಜ. ಇದರಲ್ಲಿ ಮುಚ್ಚಿಡುವಂತಹದ್ದು ಏನೂ ಇಲ್ಲ. ಟ್ರೀಟ್‌ಮೆಂಟ್ ಕೂಡ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ. ಆದರೆ, ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ. ಆರಂಭದಲ್ಲಿ ನನಗೂ ಸ್ವಲ್ಪ ಭಯವಾಗಿತ್ತು. ಆದರೆ, ಎಲ್ಲರೂ ಧೈರ್ಯ ತುಂಬಿದ್ದಾರೆ. ನಾನು ಕೂಡ ಧೈರ್ಯದಿಂದ ಇದ್ದೇನೆ ಎಂದಿದ್ದಾರೆ.

ಕೆಲವು ತಿಂಗಳ ಹಿಂದಿನಿಂದಲೇ ನನಗೆ ಅನಾರೋಗ್ಯದ ಬಗ್ಗೆ ಗೊತ್ತಾಗಿತ್ತು. ಆ ಅವಧಿಯಲ್ಲಿಯೇ '45' ಸಿನಿಮಾದ ಶೂಟಿಂಗ್ ಮುಗಿಸಿದೆ. ಕೆಲವು ಸಾಹಸ ಸನ್ನಿವೇಶಗಳನ್ನೂ ಮಾಡಿದ್ದೇನೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ಭಾಗಿಯಾಗಿದ್ದೇನೆ. 'ಭೈರತಿ ರಣಗಲ್' ಚಿತ್ರದ ಪ್ರಚಾರಲ್ಲಿ ಭಾಗಿಯಾಗಿದ್ದೇನೆ. ನನ್ನ ಎಲ್ಲಾ ನಿರ್ಮಾಪಕರಿಗೂ ಈ ಬಗ್ಗೆ ಮಾಹಿತಿ ಕೊಟ್ಟಿದ್ದೇನೆ. ಯಾರಿಂದಲೂ ಅನಾರೋಗ್ಯದ ವಿಷಯ ಮುಚ್ಚಿಟ್ಟಿಲ್ಲ ಎಂದು ಶಿವಣ್ಣ ಹೇಳಿಕೊಂಡಿದ್ದಾರೆ. ಈ ವಿಚಾರ ಅವರ ಅಭಿಮಾನಿಗಳಲ್ಲೂ ಆತಂಕ ಸೃಷ್ಟಿ ಮಾಡಿದೆ.












Click it and Unblock the Notifications