Actor R Madhavan: ಬಂಜರು ಭೂಮಿಯನ್ನು ಹಸಿರು ತೆಂಗಿನ ತೋಟವನ್ನಾಗಿ ಮಾಡಿದ ನಟ ಮಾಧವನ್‌!

ಧುರಂಧರ್‌ನಲ್ಲಿ ಅಜಿತ್‌ ದೋವಲ್‌ ಹೋಲುವ ಪಾತ್ರದಲ್ಲಿ ಕಾಣಿಸಿಕೊಂಡ ನಟ ಆರ್‌. ಮಾಧವನ್‌ ಮತ್ತೊಮ್ಮೆ ಭಾರತದಾದ್ಯಂತ ಸುದ್ದಿಯಾದರು. ಇದಕ್ಕೂ ಮುನ್ನ ಅವರು ಹೆಂಗಳೆಯರ ಮನ ಮೆಚ್ಚಿನ ಹೀರೋ. ಈಗ ಪ್ರಬುದ್ಧ, ಪ್ರೌಢ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮಾಧವನ್‌, ಒಳ್ಳೆಯ ಕುಟುಂಬ ಜೀವನ ಕೂಡ ಹೊಂದಿದವರು. ಅವರು ಮಗನ ಜೊತೆ ಕುಳಿತು ಸಂಧ್ಯಾವಂದನೆ ಮಾಡುವ ಫೋಟೋ ನೀವು ನೋಡಿರಬಹುದು. ಆತ ಪ್ರಗತಿಪರ ಕೃಷಿಕ ಕೂಡ ಎಂಬುದು ನಿಮಗೆ ಗೊತ್ತೆ?

ಆರ್. ಮಾಧವನ್ ಮತ್ತು ಅವರ ಸಹೋದರ ಸುಬಯೋಗನ್ ಹಲವು ವರ್ಷಗಳ ಹಿಂದೆ ತಮಿಳುನಾಡಿನ ಪಳನಿ ಸಮೀಪದ ಬಂಜರು ಭೂಮಿಯೊಂದನ್ನು ಖರೀದಿಸಿ, ಅದನ್ನು ಹಸಿರಿನ ತೆಂಗಿನ ತೋಟವನ್ನಾಗಿ ಪರಿವರ್ತಿಸುವ ಪ್ರಯತ್ನ ಮಾಡಿದ್ದರು. ಹಲವು ವರ್ಷಗಳ ಪರಿಶ್ರಮದ ಬಳಿಕ ಈ ಪ್ರಯೋಗ ಯಶಸ್ವಿಯಾಗಿ, ಒಣಗಿದ್ದ ಜಾಗ ಹಸಿರಿನಿಂದ ಕಂಗೊಳಿಸುವಂತಾಗಿದೆ. ಬಂಜರು ಭೂಮಿಯನ್ನು ಹಸಿರಾಗಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅದಕ್ಕೆ ತಾಳ್ಮೆ, ಸರಿಯಾದ ಕೃಷಿ ಪದ್ಧತಿ ಮತ್ತು ಪ್ರಕೃತಿಯೊಂದಿಗೆ ಹೊಂದಿಕೊಂಡು ಕೆಲಸ ಮಾಡುವ ಮನಸ್ಥಿತಿ ಬೇಕು.

Actor R Madhavan

ಬಂಜರು ಭೂಮಿಯಲ್ಲಿ ತೆಂಗಿನ ತೋಟ

ಮಾಧವನ್ ಮತ್ತು ಅವರ ಸಹೋದರ ಸುಬಯೋಗನ್ ಪಳನಿ ಸಮೀಪ ಒಣ ಪ್ರದೇಶವೊಂದನ್ನು ಖರೀದಿಸಿದ್ದರು. ಅಲ್ಲಿ ಕೃಷಿ ಮಾಡಲು ಹೊರಟಾಗ, ಹೇಗೆ ಎಂಬ ಪ್ರಶ್ನೆ ಎದುರಾಯಿತು. ಆಧುನಿಕ ಕೃಷಿ ಪದ್ಧತಿ, ಸಾವಯವ ಕೃಷಿ ಮತ್ತು ಸಾಂಪ್ರದಾಯಿಕ ಸ್ಥಳೀಯ ಜ್ಞಾನವನ್ನು ಒಟ್ಟಿಗೆ ಬಳಸಲು ಮುಂದಾದರು.

ಈ ಭೂಮಿಯ ಪರಿವರ್ತನೆ ಒಂದೆರಡು ತಿಂಗಳಲ್ಲಿ ಆದದ್ದಲ್ಲ. ಸುಮಾರು ಮೂರೂವರೆ ವರ್ಷಗಳ ಕಾಲ ನಿರಂತರ ಪ್ರಯತ್ನ ನಡೆಸಿದ ಬಳಿಕ ಆ ಒಣ ಪ್ರದೇಶ ನಿಧಾನವಾಗಿ ಹಸಿರಿನ ತೋಟವಾಗಿ ಬದಲಾಗತೊಡಗಿತು. ಮೊದಲಿಗೆ ಅಲ್ಲಿ ಕಡಿಮೆ ಎತ್ತರಕ್ಕೆ ಬೆಳೆಯುವ ತೆಂಗಿನ ಮರಗಳನ್ನು ಬೆಳೆಸಿದರು. ಈ ಮರಗಳಲ್ಲಿ ಸಿಹಿಯಾದ ಎಳನೀರು ಸಿಗುವ ತೆಂಗಿನಕಾಯಿಗಳು ಬೆಳೆಯತೊಡಗಿದವು.

ಆದರೆ ಮಾಧವನ್ ಕೇವಲ ತೆಂಗಿನಕಾಯಿ ಬೆಳೆಯುವುದಕ್ಕೆ ಸೀಮಿತವಾಗಲಿಲ್ಲ. ಹಿಂದೆ ಒಣಗಿದ್ದ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಸುಧಾರಿಸತೊಡಗಿತು. ಎರೆಹುಳುಗಳು ಕಾಣಿಸಿಕೊಂಡವು. ಸ್ಥಳೀಯ ಪಕ್ಷಿಗಳು ಮತ್ತೆ ಆ ಪ್ರದೇಶಕ್ಕೆ ಬರಲು ಆರಂಭಿಸಿದವು. ಇದರಿಂದ ಆ ಭೂಮಿಯಲ್ಲಿ ನಿಧಾನವಾಗಿ ಆರೋಗ್ಯಕರ ಪರಿಸರ ವ್ಯವಸ್ಥೆ ರೂಪುಗೊಳ್ಳುತ್ತಿದೆ ಎಂಬುದು ಗೊತ್ತಾಯಿತು.

ಮಾಧವನ್ ಮತ್ತು ಅವರ ಸಹೋದರರ ಪ್ರಯತ್ನ ವೈಯಕ್ತಿಕ ಕೃಷಿಗೆ ಮಾತ್ರ ಸೀಮಿತವಾಗಿರಲಿಲ್ಲ. ತೋಟದಲ್ಲಿ ಬೆಳೆಸಿದ ಕೆಲವು ತೆಂಗಿನ ಸಸಿಗಳನ್ನು ಸ್ಥಳೀಯ ರೈತರಿಗೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಯಲ್ಲಿ ನೀಡಿದರು. ಇದರಿಂದ ಸ್ಥಳೀಯ ರೈತರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಸಸಿಗಳು ಸಿಗುವಂತಾಯಿತು. ಜೊತೆಗೆ ತೆಂಗಿನ ಕೃಷಿ ಮತ್ತು ಸಸಿ ಮಾರಾಟದ ಮೂಲಕ ಆದಾಯ ಗಳಿಸುವ ಮತ್ತೊಂದು ಅವಕಾಶವೂ ಸೃಷ್ಟಿಯಾಯಿತು. ಮಾಧವನ್ ಈ ಯೋಜನೆಯಿಂದ ಸಿಕ್ಕ ಅನುಭವವನ್ನು ಇತರ ಪ್ರದೇಶಗಳಲ್ಲಿಯೂ ಬಳಸಬಹುದೇ ಎಂಬ ಬಗ್ಗೆಯೂ ಯೋಚಿಸಿದ್ದರು.

ಮಾಧವನ್ ಕಲಿತ 3 ಪ್ರಮುಖ ಪಾಠಗಳು

1. ಕೃಷಿಯಲ್ಲಿ ತಾಳ್ಮೆ ಬಹಳ ಮುಖ್ಯ. ಬಂಜರು ಭೂಮಿಯನ್ನು ಹಸಿರಾಗಿಸುವುದು ತಕ್ಷಣದ ಫಲಿತಾಂಶ ನೀಡುವ ಕೆಲಸವಲ್ಲ ಎನ್ನುತ್ತಾರೆ ಮಾಧವನ್.‌ ಸುಮಾರು ಮೂರೂವರೆ ವರ್ಷಗಳ ಕಾಲ ಪ್ರಯತ್ನ ನಡೆಸಿದ ಬಳಿಕವೇ ಆ ಭೂಮಿಯಲ್ಲಿ ಗಮನಾರ್ಹ ಬದಲಾವಣೆ ಕಾಣಿಸಿತು. ಮಣ್ಣು ಸಿದ್ಧಪಡಿಸುವುದು, ನೀರಿನ ಮೂಲವನ್ನು ನಿರ್ವಹಿಸುವುದು, ಸೂಕ್ತ ಪದಾರ್ಥಗಳನ್ನು ಬಳಸಿ ಮಣ್ಣಿನ ಗುಣಮಟ್ಟ ಹೆಚ್ಚಿಸುವುದು ಸೇರಿದಂತೆ ಪ್ರತಿಯೊಂದು ಹಂತಕ್ಕೂ ಸಮಯ ಬೇಕಾಯಿತು. ಅಂದರೆ ಕೃಷಿಯಲ್ಲಿ ತಕ್ಷಣದ ಫಲಿತಾಂಶಕ್ಕಾಗಿ ಕಾಯುವುದಕ್ಕಿಂತ ದೀರ್ಘಕಾಲದ ದೃಷ್ಟಿಕೋನ ಮುಖ್ಯ..

2. ಪ್ರಕೃತಿಯೊಂದಿಗೆ ಕೆಲಸ ಮಾಡಬೇಕು. ಮಣ್ಣು, ನೀರು, ಸಸ್ಯಗಳು, ಎರೆಹುಳುಗಳು, ಪಕ್ಷಿಗಳು ಸೇರಿದಂತೆ ಪರಿಸರದ ಪ್ರತಿಯೊಂದು ಅಂಶವೂ ಕೃಷಿಯಲ್ಲಿ ತನ್ನದೇ ಆದ ಪಾತ್ರ ಹೊಂದಿವೆ. ಮಣ್ಣಿನ ಆರೋಗ್ಯ ಕಾಪಾಡುವುದು ಮತ್ತು ಸಾವಯವ ಹಾಗೂ ಸ್ಥಳೀಯ ವಿಧಾನಗಳನ್ನು ಬಳಸುವುದು ಕೃಷಿಯ ದೀರ್ಘಕಾಲದ ಯಶಸ್ಸಿಗೆ ಸಹಾಯ ಮಾಡಬಹುದು. ಬಂಜರು ಭೂಮಿಯಲ್ಲಿ ಮತ್ತೆ ಎರೆಹುಳುಗಳು ಮತ್ತು ಸ್ಥಳೀಯ ಪಕ್ಷಿಗಳು ಕಾಣಿಸಿಕೊಂಡಿದ್ದು, ಕೃಷಿ ಮತ್ತು ಪ್ರಕೃತಿಯ ನಡುವಿನ ಸಂಬಂಧವನ್ನು ಮನದಟ್ಟು ಮಾಡಿಸುವಂತಿದೆ.

3. ಮೂರನೇ ಪಾಠ ಎಂದರೆ ಒಂದು ಪ್ರಯೋಗ ಯಶಸ್ವಿಯಾದಾಗ ಅದರ ಪ್ರಯೋಜನವನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ಇತರರಿಗೂ ತಲುಪಿಸುವುದು. ತೋಟದಲ್ಲಿ ಬೆಳೆಸಿದ ಕೆಲವು ತೆಂಗಿನ ಸಸಿಗಳನ್ನು ಸ್ಥಳೀಯ ರೈತರಿಗೆ ಕಡಿಮೆ ಬೆಲೆಯಲ್ಲಿ ನೀಡುವ ಮೂಲಕ ಮಾಧವನ್ ಮತ್ತು ಅವರ ಸಹೋದರರು ತಮ್ಮ ಅನುಭವವನ್ನು ಇತರರಿಗೂ ತಲುಪಿಸಲು ಪ್ರಯತ್ನಿಸಿದರು. ಇಂತಹ ಮಾದರಿಗಳನ್ನು ಬೇರೆ ಪ್ರದೇಶಗಳಲ್ಲೂ ಅಳವಡಿಸಿಕೊಳ್ಳಬಹುದೇ ಎಂಬ ಆಲೋಚನೆಯೂ ಅವರಲ್ಲಿ ಮೂಡಿತ್ತು.

ಟೆರೇಸ್ ಗಾರ್ಡನ್‌ನಲ್ಲೂ ಕೃಷಿ

ಮಾಧವನ್ ಅವರ ಕೃಷಿಯ ಆಸಕ್ತಿ ಈ ತೆಂಗಿನ ತೋಟಕ್ಕೆ ಮಾತ್ರ ಸೀಮಿತವಾಗಿಲ್ಲ. 2020ರ ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಅವರು ಮುಂಬೈನ ತಮ್ಮ ಮನೆಯ ಟೆರೇಸ್ ಗಾರ್ಡನ್‌ನ ಕೆಲವು ಚಿತ್ರಗಳು ಮತ್ತು ವಿಡಿಯೊಗಳನ್ನು ಹಂಚಿಕೊಂಡಿದ್ದರು.

ಅಲ್ಲಿ ವಿವಿಧ ತರಕಾರಿಗಳು ಮತ್ತು ಹಣ್ಣುಗಳನ್ನು ಬೆಳೆಸಲಾಗಿತ್ತು. ಜುಕಿನಿ, ಬೀನ್ಸ್, ನುಗ್ಗೆಕಾಯಿ ಮತ್ತು ಪಪ್ಪಾಯಿ ಸೇರಿದಂತೆ ಹಲವು ಸಸ್ಯಗಳು ಅವರ ಮನೆಯ ತೋಟದಲ್ಲಿದ್ದವು. ಮನೆಯಲ್ಲೇ ಚೆರ್ರಿ ಹಣ್ಣು ಬೆಳೆದಿರುವುದನ್ನೂ ಅವರು ತಮಾಷೆಯಾಗಿ ಹಂಚಿಕೊಂಡಿದ್ದರು. ಇದರಿಂದ ಪ್ರಕೃತಿ, ಕೃಷಿ ಮತ್ತು ಸುಸ್ಥಿರ ಜೀವನಶೈಲಿಯ ಬಗ್ಗೆ ಮಾಧವನ್ ಅವರ ಆಸಕ್ತಿ ಎಷ್ಟು ಆಳವಾಗಿದೆ ಎಂಬುದು ತಿಳಿಯುತ್ತದೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಆರ್. ಮಾಧವನ್ ಇತ್ತೀಚೆಗೆ ಸಂಶೋಧಕ ಗೋಪಾಲಸ್ವಾಮಿ ದೊರೈಸ್ವಾಮಿ ನಾಯ್ಡು ಅವರ ಜೀವನವನ್ನು ಆಧರಿಸಿದ 'ಜಿಡಿಎನ್‌' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಆಗಸ್ಟ್ 7ರಂದು ಬಿಡುಗಡೆಯಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+