"ಪೇಯ್ಡ್ ಕಾಮೆಂಟ್ಸ್ ಮಾಡ್ತಾರೆ, ಹಣ ಕೊಟ್ಟು ಟ್ರೋಲರ್ಸ್‌ನ ಇಟ್ಟಿದ್ದಾರೆ"
ಸ್ಯಾಂಡಲ್‌ವುಡ್ ನಟಿ ರಮ್ಯಾಗೆ ದರ್ಶನ್ ಅಭಿಮಾನಿಗಳು ಅಶ್ಲೀಲ ಕಾಮೆಂಟ್ ಮಾಡಿರುವ ಪ್ರಕರಣದ ಬಗ್ಗೆ ಬಹುಭಾಷಾ ನಟ ಕಿಶೋರ್ ಮಾತನಾಡಿದ್ದಾರೆ. ಇನ್ನು 'ಈಗೆಲ್ಲ ಹಣ ಕೊಟ್ಟು ಕಾಮೆಂಟ್ಸ್ ಮಾಡಿಸುವುದು, ವ್ಯಕ್ತಿಗಳ ತೇಜೋವಧೆ ಮಾಡಲು ಟ್ರೋಲರ್‌ಗಳಿಗೆ ಹಣ ನೀಡಲಾಗುತ್ತಿದೆ ಎಂದು ಕಿಶೋರ್ ಶಾಕಿಂಗ್ ಆರೋಪ ಮಾಡಿದ್ದಾರೆ. ಎಲ್ಲರಿಗೂ ಮಾತನಾಡುವ ಹಕ್ಕಿದೆ. ಸರಿ ತಪ್ಪನ್ನ ಹೇಳುವ ಹಕ್ಕಿದೆ. ಖಂಡಿಸುವುದು ಬೇರೆ, ಆದರೆ ಅಶ್ಲೀಲ ಪದಗಳನ್ನು ಬಳಸಿ ತೇಜೋವಧೆ ಮಾಡುವುದು ಸರಿಯಲ್ಲ. ಹೆದರಿಸುವುದು, ಚಾರಿತ್ರ್ಯವಧೆ ಮಾಡುವುದು ನಿಜಕ್ಕೂ ಕೆಟ್ಟದ್ದು. ಅದು ಯಾರೇ ಮಾಡಿದರೂ ಸರಿಯಲ್ಲ. ಆ ಕೆಲಸ ಪ್ರಧಾನ ಮಂತ್ರಿಗಳೇ ಮಾಡಿದರೂ ಅಷ್ಟೇ, ಸಾಮಾನ್ಯ ವ್ಯಕ್ತಿ ಮಾಡಿದರೂ ಅಷ್ಟೇ ಅದು ಮನುಷ್ಯತ್ವ ಅಲ್ಲ' ಎಂದಿದ್ದಾರೆ ಕಿಶೋರ್.
'ದರ್ಶನ್ ಫ್ಯಾನ್ಸ್ ಈ ಕೆಲಸ ಮಾಡಲಿ'
'ಯಾವ ನಟರ ಅಭಿಮಾನಿಗಳೇ ಆಗಿರಲಿ, ತಾವು ಮಾಡುವ ತಪ್ಪು ತಮ್ಮ ನೆಚ್ಚಿನ ನಟನಿಗೆ ಕೆಟ್ಟ ಹೆಸರು ತರುತ್ತದೆ ಎನ್ನುವುದನ್ನ ಅರ್ಥ ಮಾಡಿಕೊಳ್ಳಬೇಕು. ಹಾಗಾಗಿ ಅವರಿಗೆ ಕೆಟ್ಟ ಹೆಸರು ಬರದಂತೆ ಒಳ್ಳೆಯ ಕೆಲಸಗಳನ್ನ ಮಾಡಬೇಕು ಎಂದು ದರ್ಶನ್ ಅಭಿಮಾನಿಗಳಿಗೆ ಕಿವಿಮಾತು ಹೇಳಿದ್ದಾರೆ. ನಾನು ನೋಡಿದಂತೆ ಅವರು ಬೇಕಾದಷ್ಟು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಪ್ರಾಣಿಗಳ ರಕ್ಷಣೆ ಸೇರಿದಂತೆ ಹಲವು ಒಳ್ಳೆಯ ಕೆಲಸಗಳನ್ನ ಮಾಡಿದ್ದಾರೆ. ಇತ್ತೀಚೆಗೆ ವನ್ಯಜೀವಿ ಸಂಬಂಧಪಟ್ಟ ವ್ಯಕ್ತಿಯೊಬ್ಬರು ನನಗೆ ಹೇಳಿದರು. ದರ್ಶನ್ ಅವರು ಕೋವಿಡ್ ಸಮಯದಲ್ಲಿ ತುಂಬಾ ಸಹಾಯ ಮಾಡಿದ್ದರು ಎಂದು ಹೇಳಿದ್ರು. ಆ ರೀತಿಯ ಕೆಲಸಗಳನ್ನ ಅಭಿಮಾನಿಗಳು ಮಾಡಿದ್ರೆ ಒಳ್ಳೆಯದು, ಅದರಿಂದ ಒಳ್ಳೆಯ ಹೆಸರು ಬರುತ್ತೆ' ಎಂದು ಕಿವಿಮಾತು ಹೇಳಿದ್ದಾರೆ.

'ಇದರಿಂದಲೂ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡಬಹುದು. ನಮಗೆ ಸಿಕ್ಕಿರುವ ಪ್ರೀತಿಯ ಸವಲತ್ತನ್ನ ಬೆಳೆಸಿದಾಗ ಮಾತ್ರ ಸ್ಟಾರ್‌ಗಳ ಕರ್ತವ್ಯ. ದ್ವೇಷ ಎಲ್ಲಿಯೂ ಒಳ್ಳೆಯದಲ್ಲ. ಅದು ಫ್ಯಾನ್ಸ್ ನಡುವೆಯೇ ಇರಬಹುದು, ಜನಗಳ ಮಧ್ಯೆ ಇರಬಹುದು. ಜಾತಿಗಳ, ಭಾಷೆಗಳ ಮಧ್ಯೆ, ಧರ್ಮದ ಮಧ್ಯೆ ಎಲ್ಲಿಯೂ ದ್ವೇಷ ಒಳ್ಳೆಯದಲ್ಲ, ಪ್ರೀತಿ ಒಳ್ಳೆಯದು' ಎಂದು ನಟ ಕಿಶೋರ್ ಹೇಳಿದ್ದಾರೆ.
'ಪೇಯ್ಡ್ ಕಾಮೆಂಟ್‌ಗಳು ಇರುತ್ತವೆ'
'ಪ್ರೀತಿಯಿಂದಲೇ ಯಾವುದೇ ಸಮಸ್ಯೆಯನ್ನ ಪರಿಹರಿಸಿಕೊಳ್ಳಲು ಮುಂದಾಗಬೇಕು. ಪ್ರೀತಿಯಿಂದ ಹೇಳಿದರೆ ಯಾರೇ ಆದರೂ ತಪ್ಪು ತಿದ್ದಿಕೊಳ್ತಾರೆ. ಇನ್ನು ನಾನಂತೂ ಕಾಮೆಂಟ್ಸ್ ಓದೋಕೆ ಹೋಗುವುದೇ ಇಲ್ಲ. ಯಾರು ಏನಾದ್ರೂ ಮಾಡಿಕೊಳ್ಳಿ ಅಂತ ಸುಮ್ಮನಾಗ್ತೀನಿ. ಯಾಕಂದ್ರೆ ಪೇಯ್ಡ್ ಕಾಮೆಂಟ್‌ಗಳೂ ಇರುತ್ತವೆ. ಟ್ರೋಲರ್ಸ್ ಇರ್ತಾರೆ, ಅವರಿಗೆ ಏನೇ ಹೇಳಿದ್ರೂ ಅರ್ಥವಾಗಲ್ಲ, ತೇಜೋವಧೆ ಮಾಡಬೇಕು ಅಂತಾನೆ ಕೆಲವರು ದುಡ್ಡು ಕೊಟ್ಟು ಇಟ್ಟುಕೊಂಡಿರುತ್ತಾರೆ. ಈಗೆಲ್ಲ ರಾಜಕೀಯ ಪಕ್ಷಗಳು ಅದನ್ನೇ ಮಾಡ್ತವೆ, ಅಂತದ್ದಕ್ಕೆ ಬೆಲೆಯೂ ಇರಲ್ಲ. ಆದರೆ ವಿಷಯ ಎಲ್ಲೋ ಒಂದು ಕಡೆ ತಲುಪುತ್ತಿದೆಯಾ? ಅದರಿಂದ ಏನಾದರೂ ಬದಲಾವಣೆ ಆಗ್ತಿದೆಯಾ? ಸಮಸ್ಯೆ ವಿರುದ್ಧ ಧ್ವನಿ ಎತ್ತಬೇಕು ಅನಿಸುತ್ತಿದ್ದರೆ ಅಷ್ಟು ಸಾಕು' ಎಂದಿದ್ದಾರೆ ಕಿಶೋರ್.












Click it and Unblock the Notifications