ಬಿಗ್‌ಬಾಸ್ ನಿರೂಪಣೆಗೆ ಮೂವರ ಹೆಸರು ಬಂದಿದೆ: ವೇದಿಕೆಯಲ್ಲಿ ಕಿಚ್ಚ ರಿವೀಲ್!
ನಟ ಕಿಚ್ಚ ಸುದೀಪ್ ಅವರ ನಿರೂಪಣೆಯಿಂದಲೇ ಕನ್ನಡ ಬಿಗ್‌ಬಾಸ್ ಮತ್ತಷ್ಟು ಕಳೆ ಹೆಚ್ಚಿಸಿಕೊಂಡಿರುವುದಂತೂ ಸತ್ಯ. ಆದರೆ ಕಿಚ್ಚ ಈ ಸೀಸನ್‌ನಲ್ಲಿ ಮಾತ್ರ ನಡೆಸಿಕೊಡಲಿದ್ದು, ಮುಂದಿನ ಸೀಸನ್‌ನಿಂದ ನಿರೂಪಣೆ ಮಾಡಲ್ಲ ಎಂದು ಈಗಾಗಲೇ ಘೋಷಿಸಿಯೂ ಆಗಿದೆ. ಈ ವಿಚಾರ ಬಿಗ್‌ಬಾಸ್ ಅಭಿಮಾನಿಗಳಿಗೆ ಕಣ್ಣೀರು ಕೂಡ ಹಾಕಿಸಿದೆ. ಕಿಚ್ಚನಿಲ್ಲದ ಬಿಗ್‌ಬಾಸ್ ಊಹಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
ಆದರೆ, ಬಿಗ್‌ಬಾಸ್ ನಿರೂಪಣೆ ತಮಾಷೆಯ ವಿಚಾರವಲ್ಲ. ಅದನ್ನು ಸುದೀಪ್ ಅವರಷ್ಟು ಅಚ್ಚುಕಟ್ಟಾಗಿ ನಿರ್ವಹಿಸುವುದು ದೊಡ್ಡ ಸವಾಲು ಎನ್ನುವ ಮಾತಿದೆ. ಇನ್ನು ಸುದೀಪ್ ಬದಲು ಬಿಗ್‌ಬಾಸ್ ನಿರೂಪಣೆ ಮಾಡುವ ಸಾಮರ್ಥ್ಯ ಇರುವವರು ಯಾರು ಎಂದು ದೊಡ್ಡ ಪ್ರಶ್ನೆಯೂ ಸದ್ಯ ಎಲ್ಲರ ಮುಂದಿದೆ.

ಈಗಾಗಲೇ ಹಲವು ಸ್ಯಾಂಡಲ್‌ವುಡ್ ನಟರ ಹೆಸರು ಕೂಡ ಬಿಗ್‌ಬಾಸ್ ನಿರೂಪಣೆ ವಿಚಾರದಲ್ಲಿ ಚಾಲ್ತಿಯಲ್ಲಿದೆ. ಆದರೆ, ಈ ಬಗ್ಗೆ ವಾಹಿನಿ ಕೂಡ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಕೆಲವರು ರಿಷಬ್ ಶೆಟ್ಟಿ, ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಮೇಶ್ ಅರವಿಂದ್ ಅವರ ಹೆಸರುಗಳನ್ನು ಎಲ್ಲೆಡೆ ಹಬ್ಬಿಸುತ್ತಿದ್ದಾರೆ. ಈಗಾಗಲೇ ಗಣೇಶ್ ಹಾಗೂ ರಮೇಶ್ ಅರವಿಂದ್ ಅವರು ರಿಯಾಲಿಟಿ ಶೋಗಳನ್ನು ನಡೆಸಿಕೊಟ್ಟಿರುವುದರಿಂದ ಅವರೇ ಸೂಕ್ತ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ನಾನು ಹಲವು ವರ್ಷಗಳಿಂದಲೂ ಬಿಗ್‌ಬಾಸ್ ಶೋ ನಡೆಸಿಕೊಂಡು ಬಂದಿದ್ದೇನೆ, ಈಗ ನಾನು ವಿದಾಯ ಹೇಳುತ್ತಿದ್ದೇನೆ. ಇದರ ಬೆನ್ನಲ್ಲೇ ಮುಂದೆ ಬಿಗ್‌ಬಾಸ್ ಕಾರ್ಯಕ್ರಮ ಯಾರು ನಡೆಸಬಹುದು? ಎಂಬ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಎರಡ್ಮೂರು ಜನರ ಹೆಸರುಗಳು ಸಹ ಓಡಾಡುತ್ತಿದೆ ಎಂದು ಸುದೀಪ್ ಹೇಳಿದ್ದಾರೆ. ಇದರ ಬೆನ್ನಲ್ಲೇ ಆ ಮೂವರು ಯಾರಿರಬಹುದು ಎಂದು ಜನ ಮತ್ತೆ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ.
ಕಳೆದ ಎರಡು ವಾರದ ಹಿಂದೆ ಬಿಗ್‌ಬಾಸ್ ಶೋ ಮಧ್ಯೆಯೇ ಕಿಚ್ಚ ಸುದೀಪ್ ಅವರ ತಾಯಿ ಇಹಲೋಕ ತ್ಯಜಿಸಿದ್ದರು. ಇದರಿಂದ ಸುದೀಪ್ ಬಹಳ ನೊಂದಿದ್ದರು. ಹಾಗಾಗಿ ಸುದೀಪ್ ಸದ್ಯಕ್ಕೆ ಆ ನೋವಿನಿಂದ ಹೊರಬಾರದ ಕಾರಣ, ಬಿಗ್‌ಬಾಸ್ ಶೋ ನಡೆಸಿಕೊಡುವುದು ಅನುಮಾನ ಎನ್ನಲಾಗಿತ್ತು. ಆದರೆ, ಸುದೀಪ್ ದೊಡ್ಮನೆ ವೇದಿಕೆಯಲ್ಲಿ ಮೊದಲಿನಂತೆಯೇ ತಮ್ಮ ಖದರ್ ತೋರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.

ಜೊತೆಗೆ ನಿನ್ನೆಯ ಕಾರ್ಯಕ್ರಮದಲ್ಲಿ ಬಿಗ್‌ಬಾಸ್ ವೇದಿಕೆ ಮೇಲೆ ಸುದೀಪ್ ಕಣ್ಣೀರು ಕೂಡ ಹಾಕಿದರು. ಮನೆಯ ಸದಸ್ಯರೊಂದಿಗೆ ಮಾತು ಶುರು ಮಾಡುವ ಮುನ್ನ ಸುದೀಪ್ ತಮ್ಮ ತಾಯಿಯನ್ನು ನೆನೆದರು. ಈ ಸೀಸನ್ ಶುರುವಾದಾಗಲೂ ಸುದೀಪ್ ತಮ್ಮ ಅಮ್ಮನನ್ನು ಉಲ್ಲೇಖಿಸಿ ಮಾತನಾಡಿದ್ದರು. ನಿನ್ನೆಯೂ ಬಿಗ್‌ಬಾಸ್ ಅದನ್ನು ಸುದೀಪ್ ಅವರಿಗೆ ನೆನಪು ಮಾಡಿದರು. ಪ್ರೀತಿಯ ಮಾಣಿಕ್ಯವನ್ನು ಕರ್ನಾಟಕದ ಜನರ ಮಡಿಲಿಗೆ ಹಾಕಿದ ತಾಯಿಗೆ ಈ ವೇದಿಕೆ ಮೂಲಕ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಎಂದು ಬಿಗ್‌ಬಾಸ್ ಹೇಳಿದರು.
ಬಳಿಕ ಮಾಜಿ ಬಿಗ್‌ಬಾಸ್ ಸ್ಪರ್ಧಿ ವಾಸುಕಿ ವೈಭವ್ ಅವರು ವಿಶೇಷ ಹಾಡಿನ ಮೂಲಕ ಸುದೀಪ್ ಅವರ ತಾಯಿಗೆ ವಂದಿಸಿದರು. ಈ ವೇಳೆ ಸುದೀಪ್ ಭಾವುಕರಾಗಿ ಕಣ್ಣೀರು ಹಾಕಿದರು. ಈ ಬಿಗ್‌ಬಾಸ್ ವೇದಿಕೆ ಮೇಲೆ ನನ್ನ ತಾಯಿಯ ಬಗ್ಗೆ ಏನು ಮಾತನಾಡಬೇಕೋ ತಿಳಿಯುತ್ತಿಲ್ಲ. ನನ್ನ ತಾಯಿಗೆ ಬಿಗ್‌ಬಾಸ್ ಶೋ ಅಂದ್ರೆ ಬಹಳ ಇಷ್ಟವಿತ್ತು ಎಂದು ಸುದೀಪ್ ನೆನೆದರು. ಬಳಿಕ ಸಹಜ ಸ್ಥಿತಿಗೆ ಬಂದು ಶೋ ನಡೆಸಿಕೊಟ್ಟರು.












Click it and Unblock the Notifications