Duniya Vijay: ಕೀರ್ತಿ ಪಟ್ಟಾಡಿ ಅವರನ್ನು ದುನಿಯಾ ವಿಜಯ್ ಎರಡನೇ ಪತ್ನಿ ಎಂದು ದಯವಿಟ್ಟು ಪ್ರಸಾರ ಮಾಡಬೇಡಿ!
ಬೆಂಗಳೂರು, ಜೂನ್. 14: ಸದ್ಯ ಸ್ಯಾಂಡಲ್‌ವುಡ್ ಸ್ಕ್ಯಾಂಡಲ್‌ವುಡ್ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮ ಆಬಿಡುಗಡೆ ಮಾಡಿ ಕನ್ನಡಿಗರಿಗೆ ಮನರಂಜನೆ ನೀಡಿ ಎಂದರೆ, ಇವರುಗಳು ಟಿವಿಗಳಲ್ಲಿ ನ್ಯೂಸ್‌ಗಳ ರೂಪದಲ್ಲಿ ಬಿಟ್ಟಿ ಮನರಂಜನೆ ನೀಡುತ್ತಿದ್ದಾರೆ. ಚಂದನವನದಿಂದ ಒಂದಾದ ಮೇಲೊಂದು ವಿವಾದಗಳು ಹೊರಬರುತ್ತಲೆ ಇವೆ.
ಇವತ್ತು ನಟ ದುನಿಯಾ ವಿಜಯ್ ಅವರ ಪತ್ನಿ ನಾಗರತ್ನ ಅವರು ಹಾಕಿರುವ ಫೇಸ್‌ಬುಕ್ ಪೋಸ್ಟ್ ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಹೊಸ ಸುದ್ದಿಗೆ ಕಾರಣವಾಗಿರುವ ಈ ವಿಷಯ ದುನಿಯಾ ವಿಜಯ್ ಅವರು ಎರಡನೇ ಮದುವೆ ಆಗಿಲ್ಲವೇ..? ಎಂಬ ಹೊಸ ಪ್ರಶ್ನೆಯನ್ನು ಕನ್ನಡಿಗರ ಮುಂದಿಟ್ಟಿದೆ. ಇಷ್ಟು ದಿನ ನಟಿ ಕೀರ್ತಿ ಪಟ್ಟಾಡಿ ಜೊತೆಗೆ ಮದುವೆಯಾಗದೆ ಸಹಜೀವನ ನಡೆಸುತ್ತಿದ್ದರೇ ಎಂದು ಹಲವರು ಪ್ರಶ್ನೆ ಮಾಡುತ್ತಿದ್ದಾರೆ.

ಸುದ್ದಿಯಾಗುತ್ತಿದೆ ದುನಿಯಾ ವಿಜಯ್ ದಾಂಪತ್ಯ ಪ್ರಕರಣ
ನಟ ದುನಿಯಾ ವಿಜಯ್ ತಮ್ಮ ಮೊದಲ ಪತ್ನಿ ನಾಗರತ್ನ ಅವರಿಗೆ ವಿಚ್ಛೇಧನ ನೀಡಲು ಮುಂದಾಗಿದ್ದರು. ಕೆಲವು ವರ್ಷಗಳ ಹಿಂದೆ ನಾಗರತ್ನ ಅವರಿಂದ ತಮಗೆ ಡಿವೋರ್ಸ್ ಬೇಕೆಂದು ನಟ ವಿಜಯ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿದ್ದು, ವಿಚ್ಛೇದನ ನೀಡಲು ನಿರಾಕರಿಸಿದೆ. ಇದಕ್ಕೆ ನಾಗರತ್ನ ಅವರು ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ ಎಂದಿದ್ದಾರೆ.
ಕೆಲವು ವರ್ಷಗಳಿಂದ ನಟಿ ಕೀರ್ತಿ ಪಟ್ಟಾಡಿ ಅವರು ದುನಿಯಾ ವಿಜಯ್ ಅವರ ಎರಡನೇ ಹೆಂಡತಿ ಎಂದೇ ಕರೆಯಲಾಗುತ್ತಿತ್ತು. ಎಲ್ಲಾ ಕಡೆಯೂ ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಮಾಧ್ಯಮಗಳು, ಅಭಿಮಾನಿಗಳು ಸೇರಿದಂತೆ ಪ್ರತಿಯೊಬ್ಬರು ಇಬ್ಬರನ್ನು ಗಂಡ- ಹೆಂಡತಿ ಎಂದೇ ಕರೆಯುತ್ತಿದ್ದರು. ಕೀರ್ತಿ ಪಟ್ಟಾಡಿ ಅವರನ್ನು ವಿಜಯ್ ಅವರ ಎರಡನೇ ಹೆಂಡತಿ ಎಂದು ಕರೆಯಲಾಗುತ್ತಿತ್ತು. ಆದರೆ, ನಾಗರತ್ನ ಅವರ ಹೇಳಿಕೆ ಪ್ರಕಾರ ವಿಜಯ್‌ಗೆ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಎನ್ನುವುದು.

ಕೀರ್ತಿ ಪಟ್ಟಡಿಯನ್ನು ೨ನೇ ಹೆಂಡ್ತಿ ಅಂತಾ ದಯವಿಟ್ಟು ಪ್ರಸಾರ ಮಾಡಬೇಡಿ!
ಜೂನ್ 13 ರಂದು ಪೋಸ್ಟ ಹಂಚಿಕೊಂಡಿರುವ ನಾಗರತ್ನ ವಿಜಯ್ ಅವರು ಕೀರ್ತಿ ಪಟ್ಟಡಿಯನ್ನು ಎರಡನೇ ಹೆಂಡ್ತಿ ಅಂತಾ ದಯವಿಟ್ಟು ಪ್ರಸಾರ ಮಾಡಬೇಡಿ! ಎಂದು ಮಾಧ್ಯಮಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ನಟಿ ಕೀರ್ತಿ ಪಟ್ಟಾಡಿ ಕೂಡ ವಿಜಯ್ ಜೊತೆಗೆ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ. ಇಬ್ಬರೂ ಬೇರಾಗಿದ್ದಾರೆ ಎನ್ನುವ ವದಂತಿಯಿತ್ತು. ಅದರ ಬೆನ್ನಲ್ಲೆ ಇಷ್ಟೇಲ್ಲಾ ಬೆಳವಣಿಗೆಗಳು ನಡೆದಿದೆ.
ನಾಗರತ್ನ ಅವರು ತನ್ನ ಸೋಶಿಯಲ್ ಮೀಡಿಯಾ ಪೋಸ್ಟ್‌ನಲ್ಲಿ "ನನ್ನ ಪತಿ ವಿಜಯ್ ರವರು ತಮಗೆ ವಿಚ್ಛೇಧನ ಬೇಕೆಂದು ಸ್ವಲ್ಪ ವರ್ಷಗಳ ಹಿಂದೆ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುತ್ತಾರೆ. ಆ ಹೋರಾಟದಲ್ಲಿ ನಿಮ್ಮೆಲ್ಲರ ಆಶೀರ್ವಾದದಿಂದ ನನಗೆ ಜಯ ಸಿಕ್ಕಿದೆ, ನಾನು ನಂಬಿದ ದೇವರು ನನ್ನ ಕೈ ಬಿಡಲಿಲ್ಲ.ಇದು ನನ್ನ ಜಯ ಅನ್ನೋದಕ್ಕಿಂತ ನನ್ನ ಪತಿ ಅಧಿಕೃತವಾಗಿ ಇನ್ನೊಂದು ಮದುವೆಯಾಗಲು ಅವಕಾಶ ಸಿಕ್ಕಿಲ್ಲ ಅನ್ನೋ ನಿಜ!!!" ಎಂದಿದ್ದಾರೆ.
" ನನ್ನ ಅಪ್ಪ ಅಮ್ಮ ಮದುವೆ ಮಾಡಿಕೊಟ್ಟಾಗ ಹೇಳಿದ್ದು ಕಲಿಸಿದ್ದು ಒಂದೇ ಗಂಡನೇ ದೇವರು, ಅತ್ತೆ ಮಾವನೇ ನಿಮ್ಮವರು, ಗಂಡನ ಮನೆಯೇ ನಿನ್ನ ಮನೆ, ಎಷ್ಟೇ ಕಷ್ಟಗಳು, ಏನೇ ಸಮಸ್ಯೆ ಬಂದರೂ ಅದೇ ಮನೆಯಲ್ಲೇ ಇರ್ಬೇಕು ಅವರೇ ನಿನಗೆ ಎಲ್ಲಾ ಎಂದಿದ್ದರು. ನಾನೂ ಅದನ್ನೇ ಪಾಲಿಸಿಕೊಂಡು ಬಂದವಳು!. ಅದನ್ನೇ ಪಾಲಿಸಿಕೊಂಡು ಹೋಗುವಳು ನನಗೆ ನನ್ನ ಗಂಡ ಮಕ್ಕಳು ಇಷ್ಟೇ ಸರ್ವಸ್ವ!.ನನ್ನ ಜೀವ ಇರುವವರೆಗೂ ಅವರ ಜೊತೆಯಲ್ಲೇ ಇದ್ದು ಸಾಯುತ್ತೇನೆ. ನಮ್ಮ ಕಾನೂನಿನ ಪ್ರಕಾರ ವಿಚ್ಚೇದನ ಆದ ನಂತರನೇ ಇನ್ನೊಂದು ಮದುವೆಗೆ ಅವಕಾಶ ಇರುವುದು ಎಂಬ ಸತ್ಯ ನಿಮಗೂ ಗೊತ್ತು, ನನ್ನ ಪತಿ ಇನ್ನೊಂದು ಮದುವೆಯಾಗಿಲ್ಲ ಎಂದು ಅವರೇ ನಮಗೆ ಹೇಳಿರುತ್ತಾರೆ" ಎಂದು ವಿಜಯ್ ಮದುವೆಯಾಗಿಲ್ಲ ಎಂಬವ ಸುದ್ದಿಯನ್ನು ಬಹಿರಂಗ ಮಾಡಿದ್ದಾರೆ.
"ದಯವಿಟ್ಟು ಬೇರೆ ವದಂತಿಗಳಿಗೆ ಕಿವಿಕೊಡದೆ, ನಿಮ್ಮ ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲೆ ಇರಲಿ ಎಂದು ಸಮಸ್ತ ನಾಡಿನ ಜನತೆಗೆ ಈ ಮೂಲಕ ಕೇಳಿಕೊಳ್ಳುತ್ತೇನೆ. ದಯವಿಟ್ಟು ಮಾದ್ಯಮ ಮಿತ್ರರಿಗೆ ಕೇಳಿಕೊಳ್ಳುವುದೇನೆಂದರೆ ಕೀರ್ತಿ ಪಟ್ಟಡಿಯನ್ನು 2ನೇ ಹೆಂಡತಿ ಅಂತಾ ದಯವಿಟ್ಟು ಪ್ರಸಾರ ಮಾಡಬೇಡಿ! ನಮ್ಮ ಸಂಸಾರ ಚೆನ್ನಾಗಿರಲಿ ಅಂತ ಹರಸಿ ಹಾರೈಸಿ" ಎಂದು ಮನವಿ ಮಾಡಿದ್ದಾರೆ.












Click it and Unblock the Notifications