Darshan: ಜೈಲಿನಿಂದ ದರ್ಶನ್ ಬೇಗ ಬಿಡುಗಡೆಯಾಗಲಿ ಎಂದು ಗದಗದಲ್ಲಿ ಅಭಿಮಾನಿಗಳ ವಿಶೇಷ ಪೂಜೆ
ಗದಗ, ಜುಲೈ. 16: ಇತ್ತೀಚೆಗೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ವಿಚಾರಣಾಧೀನ ಕೈದಿಯಾಗಿರುವ ನಟ ದರ್ಶನ್ ತೂಗುದೀಪ ಅವರಿಗೆ ಅಭಿಮಾನಿಗಳ ಬೆಂಬಲ ಮಾತ್ರ ಕಡಿಮೆಯಾಗಿಲ್ಲ. ಸೋಶಿಯಲ್ ಮಿಡಿಯಾದಲ್ಲಿ ದರ್ಶನ್ ಫ್ಯಾನ್ಸ್ ಪೋಸ್ಟರ್, ವಿಡಿಯೋಗಳ ಮೂಲಕ ಜೊತೆಗೆ ನಿಂತಿದ್ದಾರೆ.
ಇದರ ಜೊತೆಗೆ ದರ್ಶನ್ ಬಿಡುಗಡೆಗಾಗಿ ಪ್ರಾರ್ಥನೆ ಮಾಡುತ್ತಿದ್ದಾರೆ. ನೆಚ್ಚಿನ ನಟನಲ್ಲಿ ತಮ್ಮ ನಂಬಿಕೆ ಕಳೆದುಕೊಳ್ಳದ ಅಭಿಮಾನಿಗಳು ಹಲವು ಭಾಗಗಳಲ್ಲಿ ವಿಶೇಷ ಪೂಜೆ ನಡೆಸುತ್ತಿದ್ದಾರೆ. ಗದಗಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ನಟ ದರ್ಶನ್ ಅವರ ಭಾವಚಿತ್ರ ಮತ್ತು ಚಿತ್ರದ ಪೋಸ್ಟರ್‌ಗಳನ್ನು ಇಟ್ಟು ಅಭಿಮಾನಿಗಳು ಪೂಜೆ ಸಲ್ಲಿಸಿದರು, ಪಂಡಿತ್ ಪುಟ್ಟರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.

ದರ್ಶನ್‌ಗಾಗಿ ವೀರೇಶ್ವರ ಪುಣ್ಯಾಶ್ರಮದಲ್ಲಿ ವಿಶೇಷ ಪೂಜೆ
ನಟ ದರ್ಶನ್ ಜೈಲಿನಿಂದ ಶೀಘ್ರ ಬಿಡುಗಡೆಯಾಗಲಿ ಎಂದು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿದ ಅಭಿಮಾನಿಗಳು, ತಮ್ಮ ಪ್ರೀತಿಯ ನಟನನ್ನು ಆದಷ್ಟು ಬೇಗ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. "ನಾವು ದರ್ಶನ್ ಅವರ ನಿಜವಾದ ಅಭಿಮಾನಿಗಳು. ನಾವು ಅವರನ್ನು ನಂಬುತ್ತೇವೆ . ಅವರು ಈ ಪರಿಸ್ಥಿತಿಯಿಂದ ಹೊರಬರಬೇಕೆಂದು ನಾವು ಬಯಸುತ್ತೇವೆ. ರೇಣುಕಾ ಸ್ವಾಮಿ ಪ್ರಕರಣದಲ್ಲಿ ದರ್ಶನ್ ಅವರ ಯೋಗಕ್ಷೇಮ ಮತ್ತು ನ್ಯಾಯ ಎರಡೂ ಸಿಗಬೇಕು. ಸಂತ್ರಸ್ತರ ಕುಟುಂಬಕ್ಕೆ ಶಕ್ತಿ ಸಿಗಲಿ" ಎಂದಿದ್ದಾರೆ.
ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ತಮ್ಮ ಜೈಲು ಜೀವನಕ್ಕೆ ಹೊಂದಿಕೊಳ್ಳುವ ಸಂದರ್ಭದಲ್ಲಿ ದರ್ಶನ್ ಹೆಚ್ಚು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ವರದಿಯಾಗಿದೆ. ಜೈಲಿನ ಆಹಾರದ ಕಳಪೆ ಗುಣಮಟ್ಟದಿಂದಾಗಿ ನಿರಂತರ ಭೇದಿ ಸೇರಿದಂತೆ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದ್ದಾರೆ, ಇದರ ಪರಿಣಾಮವಾಗಿ 10 ಕೆಜೆ ತೂಕ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.
ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ನಟ ದರ್ಶನ್ ಯೋಗದತ್ತ ಮುಖಮಾಡಿದ್ದಾರೆ. ಸಾಂತ್ವನವನ್ನು ಬಯಸುತ್ತಿದ್ದಾರೆ ಮತ್ತು ತಮ್ಮ ಹೆಚ್ಚಿನ ಸಮಯವನ್ನು ಒಂಟಿಯಾಗಿ ಕಳೆಯುತ್ತಿದ್ದಾರೆ ಎನ್ನಲಾಗಿದೆ. ಜೈಲಿನಲ್ಲಿ ಇತರ ಕೈದಿಗಳಿಂದ ದೂರವಿರುತ್ತಾರೆ ಮತ್ತು ಜೈಲಿನ ಲೈಬ್ರರಿಯಿಂದ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಸಮಯವನ್ನು ಕಳೆಯುತ್ತಿದ್ದಾರೆ ಎಂದು ವರದಿಯಾಗಿದೆ.

ತಮ್ಮ ಬಾಸ್ ತಪ್ಪು ಮಾಡಿಲ್ಲ ಎನ್ನುತ್ತಾರೆ ಫ್ಯಾನ್ಸ್
ಚಿತ್ರದುರ್ಗದ ರೇಣುಕಾ ಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಜೂನ್ 11 ರಂದು ಮೈಸೂರಿನಲ್ಲಿ ನಟ ದರ್ಶನ್ ಅವರನ್ನು ಬಂಧಿಸಲಾಗಿದೆ. ಬಳಿಕ ದರ್ಶನ್ ಆಪ್ತೆ ಪವಿತ್ರ ಗೌಡ ಮತ್ತು ಇತರ ಹನ್ನೊಂದು ಮಂದಿಯನ್ನು ಬಂಧಿಸಲಾಗಿದೆ. ಪೋಲೀಸರ ಪ್ರಕಾರ, ದರ್ಶನ್ ಅವರ ಅಭಿಮಾನಿಯಾಗಿರುವ ರೇಣುಕಾ ಸ್ವಾಮಿ ಅವರು ಪವಿತ್ರಾ ಗೌಡ ಅವರಿಗೆ ಅಸಭ್ಯ ಮತ್ತು ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ನಟ ದರ್ಶನ್ ಬಂಧನದ ಬಗ್ಗೆ ಅವರ ಅಭಿಮಾನಿಗಳಲ್ಲಿ ಹಲವು ಅಸಮಾಧನವಿದೆ. ತಮ್ಮ ಬಾಸ್ ಯಾವುದೇ ತಪ್ಪು ಮಾಡಿಲ್ಲ ಎಂದು ವಾದಿಸುತ್ತಿದ್ದಾರೆ. ಜೊತೆಗೆ ರೇಣುಕಾಸ್ವಾಮಿ ನಿಮ್ಮ ಮನೆಯ ಹೆಣ್ಣು ಮಕ್ಕಳಿಗೆ ಹೀಗೆ ಮಾಡಿದ್ದರೆ ಸುಮ್ಮನೆ ಇರುತ್ತಿದ್ದಿರಾ ಎಂಬ ಪ್ರಶ್ನೆಗಳನ್ನು ಎತ್ತಿದ್ದಾರೆ. ತಮ್ಮ ನಾಯಕ ನಿರಪರಾಧಿ ಎಂದು ಬಿಡುಗಡೆಯಾಗುತ್ತಾರೆ ಎಂಬ ನಂಬಿಕೆಯಲ್ಲಿದ್ದಾರೆ.
ಜೂನ್ 8 ರಂದು ರೇಣುಕಾ ಸ್ವಾಮಿ ಕೊಲೆಯಾಗಿದ್ದು, ಬೆಂಗಳೂರಿನ ಕಾಮಾಕ್ಷಿಪಾಳ್ಯದಲ್ಲಿನ ಚರಂಡಿಯಲ್ಲಿ ಅವರ ಶವ ಪತ್ತೆಯಾಗಿತ್ತು. ಅವರನ್ನು ಕೊಲೆ ಮಾಡುವ ಮುನ್ನ ಅಪಹರಿಸಿ, ಸೆರೆಯಲ್ಲಿಟ್ಟು, ಚಿತ್ರಹಿಂಸೆ ನೀಡಲಾಗಿದೆ ಎಂದು ಪೊಲೀಸ್ ವರದಿಗಳು ತಿಳಿಸಿವೆ.












Click it and Unblock the Notifications