25 ವರ್ಷಗಳಿಂದ ನಟ ದರ್ಶನ್ ಜೊತೆಗಿದ್ದ ಆಪ್ತ ಇನ್ನಿಲ್ಲ, ಶೋಕದಲ್ಲಿ ಡಿಬಾಸ್
ನಟ ದರ್ಶನ್ ತೂಗುದೀಪ ಅವರು ನೋವಿನ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ತಮ್ಮೊಂದಿಗೆ ತೀರಾ ಆಪ್ತರಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯೊಬ್ಬರನ್ನು ಕಳೆದು ವಿಚಾರವನ್ನು ದರ್ಶನ್ ಹೇಳಿಕೊಂಡಿದ್ದಾರೆ. ತಮ್ಮೊಂದಿಗೆ ಬರೋಬ್ಬರಿ 25 ವರ್ಷಗಳಿಂದ ಜೊತೆಯಲ್ಲೇ ಇದ್ದ ವ್ಯಕ್ತಿ ದಿಢೀರ್ ಸಾವನ್ನಪ್ಪಿದ್ದಾರೆ ಎಂದು ನಟ ದರ್ಶನ್ ಆಘಾತಕ್ಕೆ ಒಳಗಾಗಿದ್ದು, ಅವರೊಂದಿಗಿನ ಫೋಟೋ ಹಂಚಿಕೊಂಡು ಸಂತಾಪ ಸೂಚಿಸಿದ್ದಾರೆ.
ಈ ಬಗ್ಗೆ ನಟ ಎಕ್ಸ್‌ನಲ್ಲಿ (ಟ್ವಿಟರ್) ಸಂತಾಪ ಸೂಚಿಸಿರುವ ನಟ ದರ್ಶನ್, 25 ವರ್ಷಗಳಿಂದ ನನ್ನೊಂದಿಗೆ ಕೆಲಸ ಮಾಡಿದ ಪ್ರಿಯ ಮೇಕಪ್ ಆರ್ಟಿಸ್ಟ್ ಹೊನ್ನೆ ಗೌಡ್ರು ಇಂದು ಅಗಲಿದ್ದಾರೆ. ಈ ಸುದ್ದಿ ನಮ್ಮೆಲ್ಲರನ್ನು ಶೋಕದಲ್ಲಿ ಮುಳುಗಿಸಿದೆ. ಅವರ ಕಲೆ, ನಿಷ್ಠೆ ಹಾಗೂ ನಗುಮೊಗದ ಸೇವೆಯನ್ನು ಎಂದಿಗೂ ಮರೆಯಲಾಗದು ಎಂದು ನೆನೆದಿದ್ದಾರೆ. ಈ ದುಃಖದ ಸಮಯದಲ್ಲಿ ದೇವರು ಅವರ ಕುಟುಂಬಕ್ಕೆ ನೋವನ್ನು ನುಂಗುವ ಶಕ್ತಿ ನೀಡಲಿ. ಹೊನ್ನೆಗೌಡರ ಆತ್ಮಕ್ಕೆ ಶಾಂತಿ ದೊರೆಯಲಿ. ಓಂ ಶಾಂತಿ ಎಂದು ಸಂತಾಪ ತಿಳಿಸಿದ್ದಾರೆ.

ಹೊನ್ನೆಗೌಡ ಅವರು ಸುಮಾರು 25 ವರ್ಷಗಳಿಂದ ದರ್ಶನ್ ಅವರೊಂದಿಗೆ ಮೇಕಪ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದರು. ಹಲವು ಸಿನಿಮಾಗಳಲ್ಲಿ ದರ್ಶನ್ ಅವರಿಗೆ ಬಣ್ಣ ಹಚ್ಚಿದ್ದು ಕೂಡ ಇದೇ ಹೊನ್ನೆಗೌಡರು. ಹಾಗಾಗಿ ತಮ್ಮೊಂದಿಗೆ ಎರಡು ದಶಕಗಳಿಂದ ಕೆಲಸ ಮಾಡಿದ್ದ ಮೇಕಪ್ ಆರ್ಟಿಸ್ಸ್ ಅವರ ನಿಧನಕ್ಕೆ ದರ್ಶನ್ ಕಂಬನಿ ಮಿಡಿದಿದ್ದಾರೆ. ದರ್ಶನ್ ಅಭಿಮಾನಿಗಳು ಕೂಡ ಹೊನ್ನೆಗೌಡರ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಗೌಡ್ರೇ ಎಂದು ಪೋಸ್ಟ್ ಮಾಡುತ್ತಿದ್ದಾರೆ.
ಇಂದೇ ದರ್ಶನ್ ತಾಯಿ ಹುಟ್ಟುಹಬ್ಬ
ಒಂದೆಡೆ ದರ್ಶನ್ ತನ್ನ ಮೇಕಪ್ ಆರ್ಟಿಸ್ಟ್ ಅನ್ನು ಕಳೆದುಕೊಂಡಿರುವ ನೋವಿನಲ್ಲಿದ್ದಾರೆ. ವಿಧಿಯಾಟವೆಂದರೆ ಇಂದೇ ದರ್ಶನ್ ಅವರ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅವರ ಹುಟ್ಟುಹಬ್ಬ ಕೂಡ. ದರ್ಶನ್ ಒಡೆತನದ ಡಿ ಕಂಪನಿ ಅಫೀಶಿಯಲ್ ಪೇಜ್‌ನಲ್ಲಿ ಮೀನಾ ಅವರಿಗೆ ಇಂದು ಬೆಳಿಗ್ಗೆ ತನ್ನ ತಾಯಿ ಮೀನಾ ತೂಗುದೀಪ ಶ್ರೀನಿವಾಸ್ ಅಮ್ಮ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು, ತಾಯಿ ಚಾಮುಂಡೇಶ್ವರಿ ನಿಮಗೆ ಹೆಚ್ಚು ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮ ಕನಸುಗಳೆಲ್ಲ ನನಸಾಗಲಿ ಎಂದು ಹಾರೈಸುತ್ತೇವೆ ಅಮ್ಮ ಎಂದು ಶುಭಕೋರಿದ್ದರು.
ಕೋರ್ಟ್‌ಗೆ ಹಾಜರಾದ ದರ್ಶನ್
ದರ್ಶನ್ ಅವರಿಗೆ ಈ ದಿನ ಹಲವು ಮಹತ್ವದ ಬೆಳವಣಿಗೆಗಳಿಗೆ ಸಾಕ್ಷಿಯಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಹೊರಬಂದಿರುವ ನಟ ದರ್ಶನ್ ಅವರು ಇಂದು ಬೆಂಗಳೂರಿನ 57ನೇ ಸಿಸಿಹೆಚ್ ಕೋರ್ಟ್ನಲ್ಲಿ ವಿಚಾರಣೆಗೂ ಹಾಜರಾಗಿದ್ದಾರೆ. ದರ್ಶನ್ ಅವರ ಆಪ್ತೆ ಪವಿತ್ರಾ ಗೌಡ ಸೇರಿದಂತೆ ಈ ಕೇಸ್‌ನ ಇನ್ನಿತರ ಆರೋಪಿಗಳು ಕೂಡ ಕೋರ್ಟ್‌ಗೆ ಹಾಜರಾಗಿದ್ದಾರೆ.
ರೇಣುಕಾ ಸ್ವಾಮಿ ಕೊಲೆ ಕೇಸ್ನಲ್ಲಿ ದರ್ಶನ್ ಎ2 ಆರೋಪಿಯಾಗಿದ್ದಾರೆ. ಜಾಮೀನಿನ ಮೇಲೆ ಹೊರಬಂದ ನಂತರ ಇಬ್ಬರೂ ಭೇಟಿಯಾಗಿರಲಿಲ್ಲ. ಕೋರ್ಟ್ ವಿಚಾರಣೆ ವೇಳೆ ಮಾತ್ರವೇ ಮುಖಾಮುಖಿಯಾಗಿದ್ದರು. ಇಂದು ಕೋರ್ಟ್‌ಗೆ ಬಂದಾಗ ದರ್ಶನ್ ಹಾಗೂ ಪವಿತ್ರಾ ಗೌಡ ಅವರು ಅಕ್ಕ-ಪಕ್ಕದಲ್ಲಿ ನಿಂತಿದ್ದರು, ಅಲ್ಲಿಂದ ಹೊರಬರುವಾಗ ದರ್ಶನ್ ಅವರನ್ನು ಮಾತನಾಡಿಸಲು ಪವಿತ್ರಾ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.












Click it and Unblock the Notifications