The Devil: ಡೆವಿಲ್ ಸಿನಿಮಾದಲ್ಲಿ ನಟ ದರ್ಶನ್ ಅಸಲಿ ಪಾತ್ರ ರಿವೀಲ್
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಡೆವಿಲ್ ಸಿನಿಮಾ ಶೂಟಿಂಗ್ ಬಿಡುವಿಲ್ಲದೆ ನಡೆಯುತ್ತಿದೆ. ಕೊಲೆ ಕೇಸ್‌ನಲ್ಲಿ ದರ್ಶನ್ ಅವರು ಹಲವು ತಿಂಗಳ ಕಾಲ ಜೈಲಿನಲ್ಲಿ ಇದ್ದಿದ್ದರಿಂದ ಈ ಸಿನಿಮಾ ಅರ್ಧಕ್ಕೆ ನಿಂತಿತ್ತು. ಜಾಮೀನಿನ ಮೇಲೆ ಹೊರಬಂದ ನಂತರ ಮತ್ತೆ ಶೂಟಿಂಗ್‌ನಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಶೂಟಿಂಗ್ ಬಹುತೇಕ ಮುಗಿದಿದ್ದು, ವಿದೇಶದಲ್ಲಿ ಶೂಟಿಂಗ್ ಬಾಕಿ ಇದೆ. ಇದರ ನಡುವೆ ಚಿತ್ರತಂಡವು ಡೆವಿಲ್ ಸಿನಿಮಾದಲ್ಲಿ ದರ್ಶನ್ ಅವರ ಅಸಲಿ ಪಾತ್ರ ಏನು ಎಂಬುದನ್ನು ಪೋಸ್ಟರ್ ಮೂಲಕ ರಿವೀಲ್ ಮಾಡಿದೆ.
ಡೆವಿಲ್ ಸಿನಿಮಾದ ಪ್ರೈಮರಿ ಸೌಂಡ್ ರೆಕಾರ್ಡಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ ಎಂದು ಚಿತ್ರತಂಡ ಹೇಳಿದೆ. ಇದರೊಂದಿಗೆ ದರ್ಶನ್ ಅವರು ನಿಜಕ್ಕೂ ಡೆವಿಲ್ ಸಿನಿಮಾದಲ್ಲಿ ಮಾಡುತ್ತಿರುವ ಪಾತ್ರವೇನು? ಎಂಬುದರ ಸುಳಿವು ನೀಡಿದ್ದು, ವಿಶೇಷ ಪೋಸ್ಟರ್ ಹಂಚಿಕೊಂಡಿದೆ. ಈ ಹಿಂದೆ ರೆಬೆಲ್ ಸ್ಟಾರ್ ಅಂಬರೀಷ್ ಅವರು ಮಾಡಿದ್ದ ಪಾತ್ರಕ್ಕೂ ದರ್ಶನ್ ಅವರ ಡೆವಿಲ್ ಸಿನಿಮಾದ ಪಾತ್ರಕ್ಕೂ ಸಾಮ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇಷ್ಟಕ್ಕೂ ಆ ಪಾತ್ರ ಯಾವುದು ಗೊತ್ತಾ?

ರೆಬೆಲ್ ಸ್ಟಾರ್ ಅಂಬರೀಷ್ ಅಂದರೆ ಅವರು ಮಾಡಿದ್ದ ಕನ್ವರ್‌ಲಾಲ್ ಪಾತ್ರವೇ ಮೊದಲಿಗೆ ನೆನಪಾಗುತ್ತದೆ. ಅಷ್ಟರಮಟ್ಟಿಗೆ ಆ ಪಾತ್ರ ಅಂಬರೀಷ್ ಅವರ ಬ್ರ್ಯಾಂಡ್ ಆಗಿತ್ತು. ಕನ್ವರ್‌ಲಾಲ್ ಎನ್ನುವ ಕೈದಿಯ ಪಾತ್ರದಲ್ಲಿ ಅಂಬಿ ಎವರ್‌ಗ್ರೀನ್ ಆಗಿ ಮಿಂಚಿದ್ದರು. ಈಗ ಡೆವಿಲ್ ಟೀಂ ಹಂಚಿಕೊಂಡಿರುವ ಹೊಸ ಪೋಸ್ಟರ್‌ನಲ್ಲಿ ಕೂಡ ದರ್ಶನ್ ಅವರ ಪಾತ್ರವು ಅಂಬಿಯ ಕನ್ವರ್‌ಲಾಲ್ ಪಾತ್ರವನ್ನು ಹೋಲುವಂತಿದೆ. ಬಹುತೇಕ ಕನ್ವರ್‌ಲಾಲ್ ಗೆಟಪ್‌ನಲ್ಲೇ ದರ್ಶನ್ ಡೆವಿಲ್ ಆಗಿ ಮಿಂಚಲಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ದರ್ಶನ್ ಅವರು ಗ್ಯಾಂಗ್‌ಸ್ಟರ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಆದರೆ ಇದೇ ಸಿನಿಮಾದಲ್ಲಿ ಶೂಟಿಂಗ್ ವೇಳೆ ಮತ್ತಷ್ಟು ಫೋಟೋಗಳು ಲೀಕ್ ಆಗಿದ್ದವು. ಅದರಲ್ಲಿ ದರ್ಶನ್ ಅವರು ರಾಜಕಾರಣಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದನ್ನು ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿರಲಿಲ್ಲ. ಈಗ ಚಿತ್ರತಂಡವೇ ಕನ್ವರ್‌ಲಾಲ್ ಗೆಟಪ್‌ನಲ್ಲಿರುವ ದರ್ಶನ್ ಅವರ ಪೋಸ್ಟರ್ ಹಂಚಿಕೊಂಡು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ವಿದೇಶಕ್ಕೆ ತೆರಳಲು ದರ್ಶನ್‌ಗೆ ಅನುಮತಿ
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್ ಅವರು ಜಾಮೀನಿನ ಮೇಲೆ ಹೊರಬಂದಿರುವ ಕಾರಣ ಅವರಿಗೆ ಸಾಕಷ್ಟು ಷರತ್ತುಗಳನ್ನು ಹಾಕಲಾಗಿದೆ. ಅದರಂತೆ ವಿದೇಶಕ್ಕೆ ಹೋಗಲು ಕೂಡ ಕೋರ್ಟ್ ಅನುಮತಿ ಪಡೆಯಬೇಕಾಗಿತ್ತು. ಇನ್ನು ಡೆವಿಲ್ ಸಿನಿಮಾ ಶೂಟಿಂಗ್ ವಿದೇಶಗಳಲ್ಲಿ ಫಿಕ್ಸ್ ಆಗಿರುವುದರಿಂದ ಅಲ್ಲಿಗೆ ಹೋಗಲು ಅನುಮತಿ ನೀಡುವಂತೆ ದರ್ಶನ್ ನ್ಯಾಯಾಲಯಕ್ಕೆ ಕೋರಿದ್ದರು. ಅದರಂತೆ ಕೋರ್ಟ್ ಕೂಡ ದರ್ಶನ್‌ಗೆ ಗ್ರೀನ್‌ಸಿಗ್ನಲ್ ನೀಡಿದ್ದು, ಈ ತಿಂಗಳ ಮೂರು ವಾರಗಳವರೆಗೆ ವಿದೇಶಕ್ಕೆ ಹೋಗಲು ಅನುಮತಿ ನೀಡಿದೆ. ಸದ್ಯದಲ್ಲೇ ಡೆವಿಲ್ ಸಿನಿಮಾ ಶೂಟಿಂಗ್ ಪೂರ್ಣಗೊಂಡು ರಿಲೀಸ್‌ಗೆ ರೆಡಿಯಾಗುತ್ತಿದ್ದು, ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.












Click it and Unblock the Notifications