Chikkanna: ನಾಯಕನಾಗಿ ಎರಡನೇ ಸಿನಿಮಾಗೆ ರೆಡಿ ಆದ್ರು ಉಪಾಧ್ಯಕ್ಷ ಚಿಕ್ಕಣ್ಣ
'ಉಪಾಧ್ಯಕ್ಷ' ಸಿನಿಮಾ ಮೂಲಕ ನಾಯಕನಾಗಿ ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಿದ ನಟ ಚಿಕ್ಕಣ್ಣ, ಈಗ ಮತ್ತೆ ನಾಯಕನಾಗಿ ಬಣ್ಣ ಹಚ್ಚಲು ಸಿದ್ಧತೆ ನಡೆಸಿದ್ದಾರೆ. ಅದ್ಧೂರಿ, ಅಂಬಾರಿ, ಕಿಸ್ ಮತ್ತು ಮಿಸ್ಟರ್ ಐರಾವತದಂತಹ ಚಿತ್ರಗಳಿಂದ ಖ್ಯಾತಿ ಪಡೆದ ನಿರ್ದೇಶಕ ಎಪಿ ಅರ್ಜುನ್ ಉಪಾಧ್ಯಕ್ಷರ ಮುಂದಿನ ಸಿನಿಮಾ ನಿರ್ಮಿಸಲಿದ್ದಾರೆ.
ಈ ವರ್ಷ ಬಿಡುಗಡೆಯಾಗಿ ಉತ್ತಮ ವಿಮರ್ಶೆ ಪಡೆದಿದ್ದ 'ಕೆರೆಬೇಟೆ' ಚಿತ್ರದ ಮೂಲಕ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದ ರಾಜಗುರು ಭೀಮಪ್ಪ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ರಾಜಗುರು ನಿರ್ದೇಶನದ ಮತ್ತು ಗೌರಿ ಶಂಕರ್ ಅಭಿನಯದ 'ಕೆರೆಬೇಟೆ' ಸಿನಿಮಾ ಇತ್ತೀಚೆಗೆ 50 ದಿನಗಳನ್ನು ಪೂರೈಸಿದೆ. ಇದರ ಬೆನ್ನಲ್ಲೇ ಹೊಸ ಸಿನಿಮಾಗೆ ಸಿದ್ದರಾಗುತ್ತಿದ್ದಾರೆ ನಿರ್ದೇಶಕ.

ಮೋಡಿ ಮಾಡುತ್ತಾ ಚಿಕ್ಕಣ್ಣ ರಾಜಗುರು ಜೋಡಿ
ಕೆರೆಬೇಟೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿರುವ ನಿರ್ದೇಶಕ ಗುರು ರಾಜಗುರು ಭೀಮಪ್ಪ ಈಗ ಚಿಕ್ಕಣ್ಣ ಅವರ ಮುಂದಿನ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ಮೊದಲ ಸಿನಿಮಾ ಮೂಲಕ ಕನ್ನಡಿಗರ ಮನಗೆದ್ದ ನಿರ್ದೇಶಕ ಮತ್ತು ಮೊದಲ ಚಿತ್ರದಲ್ಲೇ ಕೋಟಿ ಕೋಟಿ ಕಲೆಕ್ಷನ್ ಮಾಡಿದ ಚಿಕ್ಕಣ್ಣ ಇಬ್ಬರು ಸೇರಿ ಮತ್ತೆ ಮೋಡಿ ಮಾಡುತ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.
ಇನ್ನು, ಹಲವು ವರ್ಷಗಳ ಬಳಿಕ ಧ್ರುವ ಸರ್ಜಾ ಅಭಿನಯದ ಎಪಿ ಅರ್ಜುನ್ ಅವರ ನಿರ್ದೇಶನದ 'ಮಾರ್ಟಿನ್' ಬಿಡುಗಡೆಗೆ ಸಜ್ಜಾಗಿದೆ. ಈ ಚಿತ್ರ ಬಿಡುಗಡೆಯಾದ ನಂತರವೇ ಚಿಕ್ಕಣ್ಣ ಅಭಿನಯದ ಮುಂದಿನ ಸಿನಿಮಾ ನಿರ್ಮಾಣ ಆರಂಭವಾಗಲಿದೆ. ಬಹುನಿರೀಕ್ಷೆಯ ಮಾರ್ಟಿನ್ ಅಕ್ಟೋಬರ್ 11 ರಂದು ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
ನಿರ್ದೇಶಕ, ನಿರ್ಮಾಪಕ ಎಪಿ ಅರ್ಜುನ್, ಚಿಕ್ಕಣ್ಣ ಅವರ ಸಿನಿಮಾ ಜೊತೆಗೆ, ವಿರಾಟ್ ಮತ್ತು ಪ್ರಿಯಾಂಕಾ ಕುಮಾರ್ ಅಭಿನಯದ ಅದ್ಧೂರಿ ಲವರ್ ಸಿನಿಮಾವನ್ನು ಕೂಡ ನಿರ್ಮಿಸುತ್ತಿದ್ದಾರೆ. ಇದರ ಜೊತೆಗೆ ಅವರು ಮತ್ತೊಂದು ಸಿನಿಮಾಗೆ ಸಿದ್ಧವಾಗುತ್ತಿದ್ದಾರೆ. ಹೀಗಾಗಿ ಚಿಕ್ಕಣ್ಣ ಸಿನಿಮಾ ಸೆಟ್ಟೇರಿ ಬಿಡುಗಡೆಯಾಗಲು ತುಂಬಾ ಸಮಯ ಬೇಕಾಗುತ್ತದೆ.

250 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯನಟ
ಕನ್ನಡದ ಪ್ರತಿಭಾವಂತ ನಟರಲ್ಲಿ ಚಿಕ್ಕಣ್ಣ ಕೂಡ ಒಬ್ಬರು. ಬಡತನದಲ್ಲಿ ನೊಂದು ಬಂದ ಇವರು ಬದುಕು ಈಗ ಹಸನಾಗುತ್ತಿದೆ. ಚಿಕ್ಕ ಚಿಕ್ಕ ಕಾಮಿಡಿ ಶೋಗಳ ಮೂಲಕ ಬಣ್ಣ ಹಚ್ಚಿದ ಇವರು ಇಂದು ಹೀರೋ ಆಗಿ ಕನ್ನಡ ಸಿನಿಮಾ ರಂಗದಲ್ಲಿ ಬೆಳೆಯುತ್ತಿರುವುದು ಎಂಥವರಿಗೂ ಸ್ಫೂರ್ತಿ ನೀಡುತ್ತದೆ.
ಕನ್ನಡದ 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟನಾಗಿ ಮತ್ತು ಹಾಸ್ಯ ನಟನಾಗಿ ಅಭಿನಯಿಸಿ ಹೆಸರು ಗಳಿಸಿರುವ ಚಿಕ್ಕಣ್ಣ, ಉಪಾಧ್ಯಕ್ಷ ಚಿತ್ರದ ಮೂಲಕ ನಾಯಕನಾಗಿ ಬೆಳ್ಳಿತೆರೆಗೆ ಕಾಲಿಟ್ಟರು. ಫ್ಯಾಮಿಲಿ ಎಂಟರ್ಟೈನರ್ ಸಿನಿಮಾಕ್ಕೆ ಅನಿಲ್ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಉಮಾಪತಿ ಶ್ರೀನಿವಾಸ್ ಗೌಡ ನಿರ್ಮಾಣದ ಈ ಚಿತ್ರದಲ್ಲಿ ನಟಿ ಮಲೈಕಾ ವಸುಪಾಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು.
ಚಿಕ್ಕಣ್ಣ ತಮ್ಮ ನಟನಾ ವೃತ್ತಿಜೀವನವನ್ನು ಮೈಸೂರಿನಲ್ಲಿ ಹಾಸ್ಯ ಕಾರ್ಯಕ್ರಮಗಳಲ್ಲಿ ಪ್ರಾರಂಭಿಸಿದರು. ಅದರ ನಂತರ, ಅವರು ಜೀ ಕನ್ನಡದಲ್ಲಿ ಕಾಮಿಡಿ ಕಿಲಾಡಿಗಳು ಮತ್ತು ಉದಯ ಟಿವಿಯಲ್ಲಿ ಪ್ರಸಾರವಾದ ಪ್ರಾಂಕ್ ಶೋನಲ್ಲಿ ಕಾಣಿಸಿಕೊಂಡರು. ಬಳಿಕ ನಟ ಯಶ್ ಅವರ ಕಣ್ಣಿಗೆ ಬಿದ್ದು, ಚಿತ್ರರಂಗಕ್ಕೆ ಕಾಲಿಟ್ಟರು. 2011 ರಲ್ಲಿ ಕಿರಾತಕ ಚಿತ್ರದಲ್ಲಿ ನಟಿಸಿದ ಅವರು ರಾಜಾ ಹುಲಿ (2013) ಮತ್ತು ಅಧ್ಯಕ್ಷ (2014) ಚಿತ್ರಗಳಲ್ಲಿ ಯಶ್ ಮತ್ತು ಶರಣ್ ಜೊತೆಗೆ ಗಟ್ಟಿ ಪಾತ್ರಗಳನ್ನು ಮಾಡಿದರು.












Click it and Unblock the Notifications