ಕನ್ನಡ ಚಿತ್ರರಂಗದ ಒಳಿತಿಗಾಗಿ ವಿಶೇಷ ಹೋಮ-ಹವನ: ನಟ ಚೇತನ್ ಅಹಿಂಸಾ ಹೇಳಿದ್ದೇನು?
ಬೆಂಗಳೂರು, ಆಗಸ್ಟ್ 12: ಇತ್ತೀಚಿನ ಕೆಲ ದಿನಗಳಿಂದ ಕನ್ನಡ ಚಿತ್ರರಂಗ ಬಹಳ ಪಾತಾಳಕ್ಕೆ ಕುಸಿಯುತ್ತಿದೆ. ಜನ ಚಿತ್ರಮಂದಿರಗಳಿಗೆ ಬರುವುದನ್ನು ಕಡಿಮೆ ಮಾಡುತ್ತಿದ್ದಾರೆ. ಯಾವುದೇ ಸಿನಿಮಾ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ. ಹೀಗಾಗಿ ಸಂಕಷ್ಟಕ್ಕೆ ಸಿಲುಕಿರುವ ಕನ್ನಡ ಚಿತ್ರರಂಗವನ್ನು ಕಾಪಾಡುವಂತೆ ಕರ್ನಾಟಕ ಕಲಾವಿದರ ಸಂಘ ದೇವರ ಮೊರೆ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಬೃಹತ್ ಹೋಮ-ಹವನ ನಡೆಸಲು ಸಜ್ಜಾಗುತ್ತಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕಲಾವಿದರ ಸಂಘದ ಕಟ್ಟಡದಲ್ಲಿ ಸುಬ್ರಮಣ್ಯ ಸರ್ಪ ಶಾಂತಿ ಹೋಮ ಆಗಸ್ಟ್ 14ರಂದು ನಡೆಸಲು ಭರ್ಜರಿ ಸಿದ್ಧತೆ ನಡೆಸಲಾಗುತ್ತಿದೆ. ಬೆಳಗ್ಗೆ 8 ಗಂಟೆಯಿಂದ ಪೂಜೆ ಆರಂಭವಾಗಲಿದ್ದು, ಗಣಪತಿ ಹೋಮ , ಮೃತ್ಯುಂಜಯ ಹೋಮ ಬಳಿಕ ಸರ್ಪ ಶಾಂತಿ ಹೋಮ ನಡೆಯಲಿದೆ. ಪೂಜೆ ಬಳಿಕ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೋಮ ಕಾರ್ಯಕ್ರಮಕ್ಕೆ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರಿಗೂ ಆಹ್ವಾನ ನೀಡಲಾಗಿದೆ.

ಈ ಬಗ್ಗೆ ಕನ್ನಡ ಚಿತ್ರರಂಗದ ನಟ ಚೇತನ್ ಅಹಿಂಸಾ ಪ್ರತಿಕ್ರಿಯಿಸಿದ್ದು, ಕಲಾವಿದರ ಸಂಘ ದೇವರ ಮೊರೆ ಹೋಗಿರುವ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ಈ ವಾರ, ಕನ್ನಡ ಚಲನಚಿತ್ರೋದ್ಯಮದ ಕಲಾವಿದರ ಸಂಘವು ಚಲನಚಿತ್ರೋದ್ಯಮದ ಒಳತಿಗಾಗಿ ಪೂಜೆಯನ್ನು ಆಯೋಜಿಸುತ್ತಿದೆ. ಎಂಥಹಾ ಅನುಪಯುಕ್ತ ಮತ್ತು ಚಿಂತನೆಯಿಲ್ಲದ ಕೃತ್ಯ ಎಂದು ವ್ಯಂಗ್ಯವಾಡಿದ್ದಾರೆ.
ಕನ್ನಡ ಚಲನಚಿತ್ರರಂಗವನ್ನು ನಿಜವಾಗಿ ಉತ್ತಮಗೊಳಿಸಲು, ನಾವು ಬಲವಾದ ಬರಹಗಾರರ ಸಂಘವನ್ನು ಸ್ಥಾಪಿಸಬೇಕು, ಮೀಟೂ ಮತ್ತು ಸ್ಟಾರ್ ಸಂಸ್ಕೃತಿ ಎರಡನ್ನೂ ಕಿತ್ತುಹಾಕಬೇಕು. ಕಾರ್ಮಿಕರಿಗೆ ಪ್ರಯೋಜನಗಳನ್ನು ಒದಗಿಸಬೇಕು. ಮತ್ತು ಗುಣಮಟ್ಟದ, ವಿಷಯ-ಚಾಲಿತ ಚಲನಚಿತ್ರಗಳನ್ನು ತಯಾರಿಸಬೇಕು ಎಂದು ಆಗ್ರಹಿಸಿದರು. ಈ ಮೂಲಕ ಸುಬ್ರಮಣ್ಯ ಸರ್ಪ ಶಾಂತಿ ಹೋಮ ನಡೆಸುತ್ತಿರುವ ಕಲಾವಿದರ ಸಂಘ ಅನುಪಯುಕ್ತ ಮತ್ತು ಚಿಂತನೆಯಿಲ್ಲದ ಕೃತ್ಯ ಮಾಡುತ್ತಿದೆ ಎಂದಿದ್ದಾರೆ.
ದರ್ಶನ್ ಬಿಡುಗಡೆಗಾಗಿ ಕಲಾವಿದರ ಸಂಘದ ಪೂಜೆಯೇ? ರಾಕ್‌ಲೈನ್ ವೆಂಕಟೇಶ್ ಹೇಳಿದ್ದೇನು..?
ಕಲಾವಿದರ ಸಂಘ ಪೂಜೆ ನಡೆಸುತ್ತಿದೆ ಎನ್ನುವ ಸುದ್ದಿ ಹೊರಬಿದ್ದ ಬಳಿಕ ಇದು ಕೊಲೆ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಬಿಡುಗಡೆಗೆ ಮಾಡಲಾಗುತ್ತಿರುವ ಹೋಮ ಎಂದು ಎಲ್ಲೆಡೆ ಉಹಾಪೋಹಾ ಹರಿದಾಡಿತ್ತು. ಈ ಬಗ್ಗೆ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಈ ಪೂಜೆಯನ್ನು ನಾವು ದರ್ಶನ್‌ಗಾಗಿ ಮಾಡಿಸುತ್ತಿಲ್ಲ. ಹಾಗೇ ಮಾಡುವುದಿದ್ದರೆ ಅವರ ಮನೆಯಲ್ಲೋ, ನಮ್ಮ ಮನೆಯಲ್ಲೂ ವೈಯಕ್ತಿಕವಾಗಿ ಮಾಡುತ್ತಿದ್ದೆ. ಇದು ಕೇವಲ ಚಿತ್ರರಂಗ, ಚಿತ್ರೋದ್ಯಮದ ಬೆಳವಣಿಗೆಗಾಗಿ ನಾವು ಆಯೋಜಿಸಿರುವ ಪೂಜೆ ಎಂದು ತಿಳಿಸಿದ್ದಾರೆ.












Click it and Unblock the Notifications