ವರ್ತೂರು ಸಂತೋಷ್ V/s ಜಗ್ಗೇಶ್: ತೇಜೋವಧೆ, ಹಲ್ಲೆ, ಬೆದರಿಕೆ ಆರೋಪದಲ್ಲಿ ದೂರು ದಾಖಲಿಸಿದ ನಟ ಜಗ್ಗೇಶ್
ಬೆಂಗಳೂರು, ಫೆಬ್ರವರಿ.20: ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಹಾಲಿ ರಾಜ್ಯಸಭಾ ಸದಸ್ಯರಾಗಿರುವ ಜಗ್ಗೇಶ್ ಅವರ ಮುಂದಿನ ಸಿನಿಮಾ 'ರಂಗನಾಯಕ' ತೆರೆಗೆ ಬರಲು ಸಿದ್ಧವಾಗಿದೆ. ಚಿತ್ರದ ಹಾಡುಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಜಗ್ಗೇಶ್ ಅವರು, ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರ ಬಗ್ಗೆ ಆಡಿದ್ದ ಮಾತುಗಳಿಗೆ ಟೀಕೆ ವ್ಯಕ್ತವಾಗಿತ್ತು.
ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಹುಲಿ ಉಗುರಿನ ಪೆಂಡೆಂಟ್ ಪ್ರಕರಣದ ಬಗ್ಗೆ ಮಾತನಾಡಿದ್ದ ಅವರು, 'ಯಾವನೋ ಕಿತ್ತೋದ್ ನನ್ಮಗ' ಎಂಬ ವಾಕ್ಯ ಬಳಸಿದ್ದರು. ಇದು ಹಳ್ಳಿಕಾರ್ ಒಡೆಯ ವರ್ತೂರು ಸಂತೋಷ್ ಅವರ ಅಭಿಮಾನಿಗಳನ್ನು ಕೆರಳಿಸುವಂತೆ ಮಾಡಿದೆ. ಜೊತೆಗೆ ಕ್ಷಮೆಯಾಚನೆಗೆ ಪಟ್ಟು ಹಿಡಿದು, ಮನೆಗೆ ಮುತ್ತಿಗೆ ಹಾಕುವ ಎಚ್ಚರಿಕೆ ನೀಡಿದ್ದರು. ಇದರ ಬಗ್ಗೆ ನಟ ಜಗ್ಗೇಶ್ ಈಗ ಕಾನೂನು ಕ್ರಮದ ಮೊರೆ ಹೋಗಿದ್ದಾರೆ.

ಕಿಡಿಗೇಡಿಗಳ ವಿರುದ್ಧ ನಟ ಜಗ್ಗೇಶ್ FIR
ಜಗ್ಗೇಶ್ ವಿಡಿಯೋ ವೈರಲ್ ಆಗುತ್ತಿರುವ ಬೆನ್ನಲ್ಲೇ ಹಲವರು ಟೀಕೆ ವ್ಯಕ್ತಪಡಿಸಿದ್ದರು. ಇಂತಹ ಭಾಷೆ ಬಳಕೆ ಸರಿಯಿಲ್ಲ ಎಂದಿದ್ದರು. ಕ್ಷಮ ಯಾಚಿಸಬೇಕು ಎಂದು ಪಟ್ಟು ಹಿಡಿದಿದ್ದರು. ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ ನಾರಾಯಣ ಸ್ವಾಮಿ ವಿಡಿಯೋ ಮಾಡಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ತಮ್ಮ ಹೇಳಿಕೆಯನ್ನು ತಿರುಚಿ ತೇಜೋವಧೆ ಮಾಡಲಾಗುತ್ತಿದೆ ಎಂದು ಕಾನೂನು ಕ್ರಮಕ್ಕೆ ನಟ ಜಗ್ಗೇಶ್ ಮುಂದಾಗಿದ್ದಾರೆ.
ತಮ್ಮ ಹೇಳಿಕೆಯನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗುತ್ತಿದೆ. ತಮಗೆ ಬೆದರಿಕೆ ಹಾಕಿದ್ದಾರೆ ಎಂದು ತಮ್ಮ ವಿರುದ್ಧ ಮಾತನಾಡುತ್ತಿರುವವರ ಮೇಲೆ ಸಂಸದ ಜಗ್ಗೇಶ್ ಬೆಂಗಳೂರು ಉತ್ತರ ವಿಭಾಗದ ಡಿಸಿಪಿಗೆ ದೂರು ನೀಡಿ ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದೆ. ಆನೇಕಲ್‌ನ ನಾರಾಯಣಸ್ವಾಮಿ ಎಂಬುವರು ಎ1 ಆರೋಪಿ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ನಟ ಜಗ್ಗೇಶ್ ಕೊಟ್ಟಿರುವ ಲಿಖಿತ ದೂರಿನಲ್ಲಿ, "ಅಪಾರ್ಟ್‌ಮೆಂಟ್‌ನಲ್ಲಿ ರಂಗನಾಯಕ ಎಂಬ ಕನ್ನಡ ಚಿತ್ರದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಕಾರ್ಯಕ್ರಮ ಇತ್ತು. ಈ ಹಿಂದೆ ಹುಲಿ ಉಗುರಿನ ಬಗ್ಗೆ ಆದ ಘಟನೆಯನ್ನು ಮಾಧ್ಯಮದಲ್ಲಿ ತೋರಿಸಿದ್ದ ಬಗ್ಗೆ ಹಾಗೂ ಯಾರೊ ಒಬ್ಬ ಕಿತ್ತೋದವನು (ಗ್ರಾಮೀಣ ಭಾಷೆ) ಸಿಕ್ಕಿದ ಕಾರಣ ಅಂದರೆ ಈ ಹುಲಿ ಉಗುರಿನ ಘಟನೆಯಲ್ಲಿ ನೂರಾರು ಮಂದಿ ಸಮಸ್ಯೆ ಅನುಭವಿಸಿದ್ದಾರೆ ಎನ್ನುವ ಅರ್ಥದಲ್ಲಿ ಹಾಸ್ಯವಾಗಿ ಮಾಧ್ಯಮ ಮಿತ್ರರ ಜೊತೆ ಮಾತನಾಡಿದ್ದೆನು. ಆದರೆ ಒಂದು ಕೆಟ್ಟ ಪ್ರಚಾರದ ಉದ್ದೇಶದಿಂದ ನನ್ನ ಸಂಪೂರ್ಣ ವಿಚಾರ ತಿರುಚಿ ಜಾತಿ ನಿಂದನೆ, ವ್ಯಕ್ತಿ ನಿಂದನೆ ಎಂದು ಪ್ರಚಾರ ಪಡೆದು ನನ್ನ ತೇಜೋವಧೆಗೆ ಕೆಲ ಕಿಡಿಗೇಡಿಗಳು ಯತ್ನಿಸಿದ್ದಾರೆ" ಎಂದಿದ್ದಾರೆ.
"ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣದ ಕೆಲ ಪ್ರಚಾರ ಪ್ರಿಯರು ಇಂಥ ವಿಷಯಕ್ಕಾಗಿ ಕಾಯುತ್ತಿರುತ್ತಾರೆ. ಅಂಥವರಿಗೆ ನನ್ನ ಹೇಳಿಕೆ ಜಾತಿ ನಿಂದನೆ ಎಲ್ಲಿದೆ. ಮನುಷ್ಯತ್ವದಲ್ಲಿ ಬಳಸುವ ಕೆಟ್ಟ ಪದಗಳೆ ಹಾಗೂ ವೈಯಕ್ತಿಕವಾಗಿ ಹಲ್ಲೆ, ಮನೆ ಮುತ್ತಿಗೆ, ಅವಾಚ್ಯ ಶಬ್ಧ ಪ್ರಯೋಗ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಒಡ್ಡಿದ್ದಾರೆ. ಯಾರ ಬಗ್ಗೆ ಅಥವಾ ಜಾತಿಯ ಬಗ್ಗೆ, ಅಥವಾ ವ್ಯಕ್ತಿಯ ಬಗ್ಗೆ ನಾನು ಮಾತಾಡಿರುವುದಿಲ್ಲ. ಬದಲಾಗಿ ನನ್ನ ವೈಯಕ್ತಿಕ ಅನುಭವ ಮಾಧ್ಯಮ ಮುಂದೆ ಹೇಳಿದ್ದೇನೆ. ಸಮಾಜದ ಸ್ವಾಸ್ತ್ಯ, ಜಾತಿ ಗಲಭೆ, ತಪ್ಪು ಸಂದೇಶ, ಹಲ್ಲೆಯ ಬೆದರಿಕೆ ಮಾಡಿರುವ ಆನೇಕಲ್ ಹೆಬ್ಬಗೋಡಿ ನಾರಾಯಣ ಸ್ವಾಮಿ ಹಾಗೂ ಆತನ ಮಾತು ಅನುಸರಿಸಿ ವಿಡಿಯೋ ಮಾಡಿದ (ಹೆಸರು ಗೊತ್ತಿಲ್ಲ, ವಿಡಿಯೋ ಸಾಕ್ಷಿಯಿದೆ) ಮತ್ತೊಬ್ಬರ ಮೇಲೆ ಕ್ರಮ ಕಾನೂನು ಕ್ರಮಕ್ಕೆ ಒತ್ತಾಯ" ಎಂದು ದೂರು ನೀಡಿದ್ದಾರೆ.












Click it and Unblock the Notifications